ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾ ಮಸೂದೆಗೆ ಶಿವಸೇನಾ ವಿರೋಧ

ಸರ್ಕಾರದ ಸುಧಾರಣಾ ಮಂತ್ರಕ್ಕೆ ವಿರೋಧ ಪಕ್ಷಗಳ ಅಡ್ಡಗಾಲು?
Last Updated 24 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ­ಯನ್ನು (ಎಫ್‌ಡಿಐ) ಈಗಿರುವ ಶೇ 26ರಿಂದ 49ಕ್ಕೆ ಏರಿಸಲು ದಾರಿ ಮಾಡಿ­ಕೊಡುವ ವಿಮಾ ಮಸೂದೆ­ಯನ್ನು ಶಿವಸೇನಾ ವಿರೋಧಿಸಿದ್ದು, ಇತರ ವಿರೋಧ ಪಕ್ಷಗಳ ಜತೆ ಕೈಜೋಡಿಸಿದೆ.
ನೌಕರರು, ರೈತರು ಹಾಗೂ ಜನಸಾಮಾನ್ಯರಿಗೆ ಅನುಕೂಲ­ವಾಗು­ವಂತೆ ಸರ್ಕಾರ ಮಸೂದೆಯಲ್ಲಿ ಸೂಕ್ತ ತಿದ್ದುಪಡಿ ತರದೇ ಇದ್ದಲ್ಲಿ ತಮ್ಮ ಪಕ್ಷ ವಿಮಾ ಮಸೂದೆಯನ್ನು ವಿರೋಧಿಸು­ತ್ತದೆ ಎಂದು ಶಿವಸೇನಾ ವಕ್ತಾರ ಹಾಗೂ ಸಂಸದ ಅರವಿಂದ್‌ ಸಾವಂತ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ವಿಮಾ ಮಸೂದೆಯನ್ನು ಒಗ್ಗಟ್ಟಿ­ನಿಂದ  ವಿರೋಧಿಸಲು ಕಾಂಗ್ರೆಸ್‌, ಜೆಡಿಯು ಹಾಗೂ ತೃಣಮೂಲ ಕಾಂಗ್ರೆಸ್‌ ನಿರ್ಧರಿಸಿವೆ.
ಆದರೆ, ಮಾಯಾವತಿ ನೇತೃತ್ವದ  ಬಹುಜನ ಸಮಾಜ ಪಕ್ಷ ಮಾತ್ರ  ವಿಮಾ ಮಸೂದೆಯನ್ನು ವಿನಾಕಾರಣ ವಿರೋಧಿಸುವುದಿಲ್ಲ ಎಂದು ಹೇಳಿದೆ. ಶಿವಸೇನಾ ಲೋಕಸಭೆಯಲ್ಲಿ 18 ಸಂಸದರನ್ನು ಹಾಗೂ ರಾಜ್ಯಸಭೆಯಲ್ಲಿ ಮೂರು ಸದಸ್ಯರನ್ನು ಹೊಂದಿದೆ.

ವಿಮಾ ಮಸೂದೆ ವಿಚಾರದಲ್ಲಿ ಪ್ರಮುಖ ಮಿತ್ರಪಕ್ಷವೇ ಸರ್ಕಾರವನ್ನು ವಿರೋಧಿಸುವುದರಿಂದ ವಿರೋಧ ಪಕ್ಷಗ­ಳಿಗೆ ಮತ್ತಷ್ಟು ಹುಯಿಲೆಬ್ಬಿಸಲು ದಾರಿ ಮಾಡಿಕೊಟ್ಟಂತಾಗುತ್ತದೆ. ಮಸೂದೆ ಅಂಗೀಕಾರಕ್ಕೆ ಜಂಟಿ ಅಧಿ­ವೇಶನ ಮಾಡಲು ನಿರ್ಧರಿಸಿದಾ­ಗಲೂ ಸರ್ಕಾ­ರದ ಬಲವನ್ನು ಇದು ಕುಗ್ಗಿಸುತ್ತದೆ. ವಿಮಾ ಮಸೂದೆ ಹೊರತಾಗಿ ವಿರೋಧ ಪಕ್ಷಗಳು ಸರಕು ಹಾಗೂ ಸೇವಾ ತೆರಿಗೆ ಮತ್ತು ಕಾರ್ಮಿಕ ಕಾಯ್ದೆ ಸುಧಾರಣೆ ಮಸೂದೆಗಳ ಅಂಗೀಕಾ­ರಕ್ಕೂ  ರಾಜ್ಯಸಭೆ­ಯಲ್ಲಿ  ಅಡ್ಡಗಾಲು ಹಾಕುವ ಸಾಧ್ಯತೆ ಇದೆ.

‘ವಿಮೆ,  ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆಗಳಿಗೆ ನಾವು ಬೇಷರತ್‌ ಬೆಂಬಲ ನೀಡುವುದಿಲ್ಲ. ಅವು­ಗಳನ್ನು ಪರಿಶೀಲಿಸಿ ಆಮೇಲೆ ನಿರ್ಧಾ­ರಕ್ಕೆ ಬರುತ್ತೇವೆ’ ಎಂದು ಕಾಂಗ್ರೆಸ್‌  ಹೇಳಿದೆ. ಇನ್ನೊಂದೆಡೆ, ಕಪ್ಪು­ಹಣದ ವಿಷಯ­ ಚರ್ಚಿಸಲು ಪ್ರಶ್ನೋ­ತ್ತರ ವೇಳೆ­ಯನ್ನು ಮಂಗಳ­ವಾರದ ಕಲಾಪ ಪಟ್ಟಿ­ಯಿಂದ ಕೈಬಿಡು­ವಂತೆ ಕೆ.ಸಿ.ತ್ಯಾಗಿ ಹಾಗೂ ಟಿಎಂಸಿ ಸಂಸದ ಡೆರೆಕ್‌್ ಒಬ್ರೇನ್‌್ ರಾಜ್ಯಸಭೆ ಅಧ್ಯಕ್ಷ ಹಮೀದ್‌ ಅನ್ಸಾರಿ ಅವರಿಗೆ ನೋಟಿಸ್‌ ನೀಡಿದ್ದಾರೆ.

ನಡೆಯದ ಕಲಾಪ
ಮುರುಳಿ ದೇವ್ರಾ ಹಾಗೂ  ಅಗಲಿದ ಸಂಸತ್ ಸದಸ್ಯರಿಗೆ ಗೌರವ ಸಲ್ಲಿಸಿದ ಬಳಿಕ ಮೊದಲ ದಿನದ ಅಧಿವೇಶ­ನವನ್ನು ಮಂಗಳ­ವಾರಕ್ಕೆ ಮುಂದೂ­ಡ­­ಲಾ­ಯಿತು.  ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಹಾಗೂ ರಾಜ್ಯಸಭಾ  ಅಧ್ಯಕ್ಷ ಹಮೀದ್ ಅನ್ಸಾರಿ ಅವರು, ಅಗಲಿದ ಸಂಸದ­ರಾದ ಕಾಂಗ್ರೆಸ್‌ನ ಮುರುಳಿ ದೇವ್ರಾ, ಬಿಜೆಡಿಯ ಹೇಮೇಂದ್ರ ಚಂದ್ರ ಸಿಂಗ್‌, ಟಿಎಂಸಿಯ ಕಪಿಲ್‌ ಕೃಷ್ಣಾ ಠಾಕೂರ್‌ ಅವರ ಗುಣಗಾನ ಮಾಡಿದರು.

ಸುಗಮ ಕಲಾಪ: ಸಹಕಾರ ಕೋರಿದ ಮೋದಿ
ನವದೆಹಲಿ (ಪಿಟಿಐ):
ಪ್ರಸಕ್ತ ಅಧಿವೇಶನದಲ್ಲಿ ಸರ್ಕಾರದ ಸುಧಾರಣಾ ಕ್ರಮಗಳನ್ನು ವಿರೋಧಿ­ಸುವ ನಿಲುವನ್ನು ವಿರೋಧ ಪಕ್ಷಗಳು ಸ್ಪಷ್ಟಪಡಿಸಿದ ನಂತರವೂ ಪ್ರಧಾನಿ ನರೇಂದ್ರ ಮೋದಿ ಅವರು ಚಳಿಗಾಲದ ಅಧಿವೇಶನ ಯಶಸ್ಸಿಗೆ ವಿರೋಧ ಪಕ್ಷಗಳು ಸಹಕಾರ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ದೇಶದ ಜನತೆ ಸರ್ಕಾರ ನಡೆಸುವ ಜವಾಬ್ದಾರಿಯನ್ನು ನಮಗೆ ವಹಿಸಿ­ದ್ದಾರೆ. ಅದೇ ರೀತಿ ಸಂಸತ್ ಭವನದಲ್ಲಿ ಕುಳಿತಿರುವ ಎಲ್ಲ ಸಂಸದರ ಮೇಲೂ ದೇಶ­ವನ್ನು ಮುನ್ನಡೆಸುವ ಗುರುತರ ಜವಾಬ್ದಾರಿ ಇದೆ’ ಎಂದು ಹೇಳಿದ್ದಾರೆ. 

ಸೋಮವಾರ ಆರಂಭವಾದ  ಚಳಿಗಾಲ ಅಧಿವೇಶನದ ಮೊದಲ ದಿನದ ಕಲಾಪದ ನಂತರ ಸಂಸತ್‌ ಭವನದ ಹೊರಗೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಜೆಟ್‌ ಅಧಿವೇಶನದಲ್ಲಿ ವಿರೋಧ ಪಕ್ಷಗಳು ನೀಡಿದ ಸಹಕಾರ ಹಾಗೂ ನಡೆದುಕೊಂಡ ರೀತಿಯನ್ನು ಮನ­ದುಂಬಿ ಶ್ಲಾಘಿಸಿದ ಮೋದಿ, ಅದೇ ಸಹಕಾರ­ವನ್ನು ಚಳಿಗಾಲ ಅಧಿವೇಶನ­ದಲ್ಲೂ ನಿರೀಕ್ಷಿಸುತ್ತಿರುವು­ದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT