ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್ ಕೊಹ್ಲಿ ನಾಯಕತ್ವದ ‘ಟೆಸ್ಟ್‌’

ಕುಮಾರ ಸಂಗಕ್ಕಾರಗೆ ವಿದಾಯದ ಪಂದ್ಯ; ಆತಿಥೇಯರಿಗೆ ಪ್ರತಿಷ್ಠೆಯ ಸರಣಿ
Last Updated 11 ಆಗಸ್ಟ್ 2015, 19:31 IST
ಅಕ್ಷರ ಗಾತ್ರ

ಗಾಲೆ: ಇಲ್ಲಿಯ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾಗಲಿರುವ ‘ಟೆಸ್ಟ್’ ಪಂದ್ಯ ಭಾರತ ತಂಡದ ನವನಾಯಕ ವಿರಾಟ್ ಕೊಹ್ಲಿಗೆ ‘ಪರೀಕ್ಷೆ’  ಆತಿಥೇಯ ಶ್ರೀಲಂಕಾಗೆ ತನ್ನ ಅನುಭವಿ ಆಟಗಾರ ಕುಮಾರ ಸಂಗಕ್ಕಾರ ಅವರಿಗೆ ಗೆಲುವಿನ ಉಡುಗೊರೆ ನೀಡಿ ಬೀಳ್ಕೊಡುವ ಗುರಿ.

ಮೂರು ಟೆಸ್ಟ್‌ಗಳ ಸರಣಿ ಆಡಲು ಬಂದಿಳಿದಿರುವ ಕೊಹ್ಲಿ ಬಳಗಕ್ಕೆ ಆತಿಥೇಯರು ಸುಲಭದ ತುತ್ತಲ್ಲ.  ಏಕೆಂದರೆ, 1993ರ ನಂತರ ಭಾರತ ತಂಡವು ದ್ವೀಪರಾಷ್ಟ್ರದಲ್ಲಿ ಯಾವುದೇ ಸರಣಿಯನ್ನೂ ಗೆದ್ದಿಲ್ಲ. ಮೊಹ್ಮದ್ ಅಜರುದ್ದೀನ್ ನಾಯಕತ್ವದ ಬಳಗವು ಆಗ 1–0ಯಿಂದ ಸರಣಿ ಜಯಿಸಿತ್ತು. 22 ವರ್ಷಗಳ ನಂತರ ಸರಣಿ ಗೆದ್ದು ಇತಿಹಾಸ ಬರೆಯುವ ಅವಕಾಶವೂ ಕೊಹ್ಲಿಗಿದೆ.

ಕಳೆದ ತಿಂಗಳು ಭಾರತ ತಂಡ ವಿರಾಟ್ ನಾಯಕತ್ವದಲ್ಲಿ   ಬಾಂಗ್ಲಾ ಎದುರು ಏಕೈಕ ಟೆಸ್ಟ್ ಆಡಿತ್ತು. ಆದರೆ, ಆ ಪಂದ್ಯ ಮಳೆಯಿಂದಾಗಿ ಅಪೂರ್ಣ ಗೊಂಡಿತ್ತು. ಇದೀಗ ಬಲಿಷ್ಠ ಶ್ರೀಲಂಕಾ ತಂಡವನ್ನು ಎದುರಿಸಲಿರು ವುದು ಕೊಹ್ಲಿ ನಾಯಕತ್ವಕ್ಕೆ ಸವಾಲಾಗಲಿದೆ. ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಕುಮಾರ ಸಂಗಕ್ಕಾರಗೆ ಇದು ಕೊನೆಯ ಟೆಸ್ಟ್‌ ಸರಣಿ.  ಅವರಿಗೆ ಜಯದ ಕಾಣಿಕೆ ನೀಡಲು ಆತಿಥೇಯ ಬಳಗ ಸಿದ್ಧವಾಗಿದೆ.

ಕಳೆದ ಡಿಸೆಂಬರ್‌–ಜನೆವರಿಯಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್  ಪ್ರವಾಸದಲ್ಲಿ ಭಾರತ ತಂಡವು ದಿಟ್ಟ ಹೋರಾಟ ಮಾಡಿತ್ತು. ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ 2013ರಲ್ಲಿ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಅವರ   ಸ್ಥಾನ ತುಂಬಬಲ್ಲ ಸಮರ್ಥ ಆಟಗಾರ ನಿರೀಕ್ಷೆಯಲ್ಲಿ ಭಾರತ ತಂಡವಿದೆ. ಕಳೆದ ಎರಡು ವರ್ಷಗಳಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಇಂಗ್ಲೆಂಡ್,ಆಸ್ಟ್ರೇಲಿಯಾಗಳಲ್ಲಿ ಟೆಸ್ಟ್‌ ಸರಣಿ ಆಡಿದೆ. 

ಯುವ ಆಟಗಾರರಾದ ಕರ್ನಾಟಕದ ಕೆ.ಎಲ್. ರಾಹುಲ್, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ,   ಶಿಖರ್ ಧವನ್ ಭರವಸೆ ಹೊಸ ಭರವಸೆ ಮೂಡಿಸಿದ್ದಾರೆ. ಗಾಯಗೊಂಡಿರುವ ಮುರಳಿ ವಿಜಯ್   ಈ ಪಂದ್ಯದಲ್ಲಿ ಆಡುತ್ತಿಲ್ಲ. ಇದರಿಂದಾಗಿ ಕೆ.ಎಲ್. ರಾಹುಲ್ ಮತ್ತು ಶಿಖರ್ ಧವನ್ ಇನಿಂಗ್ಸ್‌ ಆರಂಭಿಸಲಿದ್ದಾರೆ.

ಭಾರತದ ಮುರಳಿ ವಿಜಯ್,  ಹರಭಜನ್ ಸಿಂಗ್, ವಿರಾಟ್ ಕೊಹ್ಲಿ ಮತ್ತು ಅಶ್ವಿನ್ ಬಿಟ್ಟರೆ  ಉಳಿದ ಆಟಗಾರರಿಗೆ ಶ್ರೀಲಂಕಾದಲ್ಲಿ ಆಡಿರುವ ಅನುಭವ ಇಲ್ಲ. ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ ಮತ್ತು ನಾಯಕ ಕೊಹ್ಲಿ ಇರುವ ಬ್ಯಾಟಿಂಗ್ ಪಡೆಯ ಮೇಲೆ ನೀರಿಕ್ಷೆಯ ಭಾರ ಇದೆ. ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಮತ್ತು ಕೊಹ್ಲಿ ಹೆಚ್ಚು ರನ್‌ ಗಳಿಸುವಲ್ಲಿ ವಿಫಲರಾಗಿದ್ದರು.

ತಂಡವು ಐವರು ಬೌಲರ್‌ಗಳೊಂದಿಗೆ ಕಣಕ್ಕಿಳಿಯುವ ನಿರೀಕ್ಷೆ ಇದೆ. ಬೌಲಿಂಗ್‌ ವಿಭಾಗದ ನೇತೃತ್ವವನ್ನು   ಬಲಗೈ ಮಧ್ಯಮವೇಗಿ ಇಶಾಂತ್ ಶರ್ಮಾ  ವಹಿಸಲಿದ್ದಾರೆ. ಭುವನೇಶ್ವರ್ ಕುಮಾರ್ , ಉಮೇಶ್ ಯಾದವ್ ಮತ್ತು ವರುಣ್ ಆ್ಯರನ್ ಅವರಲ್ಲಿ ಇಬ್ಬರಿಗೆ ಅವಕಾಶ ಸಿಗಬಹುದು. ತಂಡದಲ್ಲಿ ಇರುವ ಸ್ಪಿನ್ನರ್‌ಗಳಾದ ಆರ್. ಅಶ್ವಿನ್, ಹರಭಜನ್ ಸಿಂಗ್ ಮತ್ತು ಅಮಿತ್ ಮಿಶ್ರಾ ಅವರಲ್ಲಿ ಇಬ್ಬರಿಗೆ ಸ್ಥಾನ ಲಭಿಸಬಹುದು.

ಮ್ಯಾಥ್ಯೂಸ್‌ಗೆ 50ನೇ ಪಂದ್ಯ: ಆದರೆ, ಗಾಲೆ ಮೈದಾನದಲ್ಲಿ ಉತ್ತಮ ದಾಖಲೆ ಹೊಂದಿರುವ ಶ್ರೀಲಂಕಾ ತಂಡವು ಏಂಜೆಲೊ ಮ್ಯಾಥ್ಯೂಸ್ ನಾಯಕತ್ವದಲ್ಲಿ ಕಣಕ್ಕೆ ಇಳಿಯಲಿದೆ. ಇದು ಅವರಿಗೆ 50ನೇ ಪಂದ್ಯ. ಕೊಲಂಬೊದಲ್ಲಿ ನಡೆಯಲಿರುವ ಎರಡನೆ ಟೆಸ್ಟ್ ನಂತರ ನಿವೃತ್ತರಾಗ ಲಿರುವ ಕುಮಾರ ಸಂಗಕ್ಕಾರ ಅವರಿಗೆ ಭರ್ಜರಿ ಬೀಳ್ಕೊಡುಗೆ ನೀಡುವ ಸವಾಲು ಅವರ ಮ್ಯಾಥ್ಯೂಸ್ ಬಳಗಕ್ಕೆ ಇದೆ.

ಈಚೆಗೆ ಪಾಕಿಸ್ತಾನ ತಂಡದ ಎದುರು ಟೆಸ್ಟ್, ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್ ಸರಣಿಗಳನ್ನು ಸೋತಿರುವ ಲಂಕಾ ತಂಡಕ್ಕೆ ತನ್ನ ಆತ್ಮವಿಶ್ವಾಸವನ್ನು ಮರಳಿ ಗಳಿಸಲು  ಈ ಸರಣಿಯು ವೇದಿಕೆಯಾಗಲಿದೆ. ಆಘಾತದಿಂದ ಹೊರಬಂದು ಭಾರತವನ್ನು ಹೇಗೆ ಎದುರಿಸಲಿದೆ ಎಂಬ ಕುತೂಹಲ ಈಗ ಸಿಂಹಳೀಯರ ನಾಡಿನ ಕ್ರಿಕೆಟ್‌ ಪ್ರೇಮಿಗಳಲ್ಲಿ ಮೂಡಿದೆ.

ಭಾರತವು ಇಲ್ಲಿ ಆಡಿರುವ 18 ಪಂದ್ಯಗಲ್ಲಿ ಕೇವಲ ನಾಲ್ಕರಲ್ಲಿ ಮಾತ್ರ ಗೆದ್ದಿದೆ. ಆರರಲ್ಲಿ ಸೋತು, ಉಳಿದ ಪಂದ್ಯಗಳನ್ನು ಸಮ ಮಾಡಿಕೊಂಡಿದೆ. ಗಾಲೆ ಮೈದಾನದಲ್ಲಿ ಆತಿಥೇಯ ಬಳಗವು ಆಡಿರುವ ಕಳೆದ ಮೂರು ಟೆಸ್ಟ್‌ಗಳಲ್ಲಿ ಎರಡರಲ್ಲಿ ಸೋಲನುಭವಿಸಿತ್ತು.

ಮಳೆ ಅಡ್ಡಿ ಸಾಧ್ಯತೆ: ಉಭಯ ತಂಡಗಳ ಹಣಾಹಣಿಗೆ ಮಳೆರಾಯ ಅಡ್ಡಗಾಲು ಹಾಕುವ ಸಾಧ್ಯತೆಯಿದೆ.

ತಂಡಗಳು ಇಂತಿವೆ: 
ಭಾರತ:
ವಿರಾಟ್ ಕೊಹ್ಲಿ (ನಾಯಕ),  ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್), ಕೆ.ಎಲ್. ರಾಹುಲ್, ಶಿಖರ್ ಧವನ್, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ಆರ್. ಅಶ್ವಿನ್, ಹರಭಜನ್ ಸಿಂಗ್, ಇಶಾಂತ್ ಶರ್ಮಾ, ವರುಣ್ ಆ್ಯರನ್, ಉಮೇಶ್ ಯಾದವ್

ಶ್ರೀಲಂಕಾ: ಏಂಜೆಲೊ ಮ್ಯಾಥ್ಯೂಸ್ (ನಾಯಕ), ಕೌಶಲ್ ಸಿಲ್ವಾ, ದಿಮುತ್ ಕರುಣಾರತ್ನೆ, ಕುಮಾರ ಸಂಗಕ್ಕಾರ, ಉಪುಲ್ ತರಂಗಾ, ದಿನೇಶ್ ಚಾಂಡಿಮಲ್ (ವಿಕೆಟ್‌ಕೀಪರ್), ಜೆಹಾನ್ ಮುಬಾರಕ್, ಧಮ್ಮಿಕಾ ಪ್ರಸಾದ್, ತರಿಂದು ಕೌಶಲ್, ರಂಗನಾ ಹೆರಾತ್, ನುವಾನ್ ಪ್ರದೀಪ್
*
ಮುಖ್ಯಾಂಶಗಳು
*22 ವರ್ಷಗಳಿಂದ ಲಂಕಾದಲ್ಲಿ ಸರಣಿ ಜಯಿಸದ ಭಾರತ
*ಮುರಳಿ ವಿಜಯ್ ಅಲಭ್ಯ
*ಕೆ.ಎಲ್. ರಾಹುಲ್–ಶಿಖರ್ ಧವನ್  ಅವರಿಂದ ಇನಿಂಗ್ಸ್‌ ಆರಂಭ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT