ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಲೋಮವೋ ಅನುಲೋಮವೋ

Last Updated 19 ಸೆಪ್ಟೆಂಬರ್ 2015, 19:33 IST
ಅಕ್ಷರ ಗಾತ್ರ

ಎರಡೂ ಅನಿರೀಕ್ಷಿತವೇ.
ಎರಡೂ ಆಶ್ಚರ್ಯಕರವೇ.
ನಂತರ ಮೂರನೆಯದು.

***
ಮೊದಲನೆಯದು:
ಕೋದಂಡರಾಮಪುರದಿಂದ ವರ್ಗವಾಗಿ ಈ ಕಡೆಗೆ ಬಂದು ಹದಿನೈದು ವರ್ಷಗಳಾದ ಮೇಲೆ ಮತ್ತೆ ಪುರಕ್ಕೆ ಬರುವಂತೆ ಆಹ್ವಾನ. ಅದೂ ಗುರೂಜಿ ಆನಂದ ಪಾಟೀಲರ ಎಪ್ಪತ್ತೈದನೇ ಹುಟ್ಟು ಹಬ್ಬದ ನಿಮಿತ್ತದ ಸ್ನೇಹ ಮಿಲನದ ಕೂಟಕ್ಕೆ.

ಆನಂದ ಪಾಟೀಲರನ್ನು ಹೀಗೆ, ಇಷ್ಟೇ ಎಂದು ಹೇಳುವುದು ಆವತ್ತೂ ಕಷ್ಟವಾಗಿತ್ತು, ಈವತ್ತೂ ಕೂಡ. ಜ್ಯೋತಿಷಿಯಲ್ಲ, ವಿಗ್ರಹಾರಾಧಕರಲ್ಲ, ಹೋಮ ಹವನದವರಲ್ಲ, ಪ್ರವಚನವಿಲ್ಲ, ಪ್ರಕಟಣೆಯಿಲ್ಲ. ಆದರೂ ಅಧ್ಯಾತ್ಮಶೀಲರು. ಪಾಟೀಲರ ಸುತ್ತ ಯಾವುದೇ ಸಂಸ್ಥೆಯ, ಮಠದ ಪ್ರಭಾವಳಿ ಕೂಡ ಇಲ್ಲ. ಯಾವಾಗಲೂ ಪಾಟೀಲರ ಜೊತೆಯಲ್ಲಿ ಹತ್ತಾರು ಸಮಾನಮನಸ್ಕ ಸ್ನೇಹಿತರು, ಹಿತೈಷಿಗಳು, ಅಷ್ಟೇ.

ಇಂತಹವರ ಪೈಕಿ ನಮ್ಮ ಫ್ಲಾಟಿನ ಮಾಲೀಕ ರಣಜಿತ್ ಚೌಗುಲೆ ಕೂಡ ಒಬ್ಬರು. ಚೌಗುಲೆ ಯಾವಾಗಲೂ ಪಾಟೀಲರ ಬಗ್ಗೆ ಹೇಳುತ್ತಿದ್ದುದರಿಂದ ಕುತೂಹಲ ತಡೆಯಲಾರದೆ ಅವರ ಜೊತೆ ಹೋದೆ. ನೂಲು ಮಂಚವೊಂದರ ಮೇಲೆ ಧ್ಯಾನದ ಭಂಗಿಯಲ್ಲಿ. ಅವರು ಕಣ್ಣು ಬಿಟ್ಟ ತಕ್ಷಣ ಕಾಣಲೆಂದು ನನ್ನನ್ನು ಅವರೆದುರಿಗೇ ಕೂರಿಸಿದರು. ಸುಮಾರು ನೂರು ನೂರಿಪ್ಪತ್ತು ನಿಮಿಷ ಅವರನ್ನೇ ನೋಡುತ್ತಾ ಕೂತಿದ್ದೆ. ಕಾಲಿಗೆ, ಮನಸ್ಸಿಗೆ ಜೋಮು ಹಿಡಿಯಿತು.

ಕೊನೆಗೂ ನಿಧಾನವಾಗಿ ಕಣ್ಣು ತೆರೆದರು. ರಣಜಿತ್ ಚೌಗುಲೆ ಪಾಟೀಲರ ಕಿವಿಯ ಹತ್ತಿರ ಹೋಗಿ ನನ್ನ ಬಗ್ಗೆ ಏನೋ ಹೇಳಲು ಹೊರಟರು. ಏನೂ ಬೇಡವೆನ್ನುವಂತೆ ಪಾಟೀಲರು ಕಣ್‌ಸನ್ನೆ ಮಾಡಿದರು. ‘ಏನು ಆನಂದವಾಗಿದ್ದೀರಾ’ ಎಂದು ನನ್ನನ್ನೇ ಉದ್ದೇಶಿಸಿ ಪಿಸುಮಾತಿನಲ್ಲೆಂಬಂತೆ ಕೇಳಿದರು. ಏನು ಉತ್ತರಿಸುವುದೆಂದು ತಿಳಿಯದೆ ಪೆಚ್ಚಾಗಿ ನಗುತ್ತಾ ಹೌದೆಂದೆ. ‘ಆನಂದವಾಗಿದ್ದರೆ ಮತ್ತೇಕೆ ಇಲ್ಲಿಗೆ ಬಂದಿರಿ, ಆನಂದವಾಗಿದ್ದ ಮೇಲೂ ಇನ್ನೇನು ಹುಡುಕುತ್ತಿದ್ದೀರಿ?’. ನನಗೆ ಏನು ಉತ್ತರಿಸಬೇಕೆಂದು ತಿಳಿಯಲಿಲ್ಲ. ಎಲ್ಲರೂ ಸುಮ್ಮನೆ ಕುಳಿತೆವು.

‘ಏಕೆ ನಿಮ್ಮ ಕಣ್ಣುಗಳಲ್ಲಿ ಇಷ್ಟೊಂದು ಆತುರ – ಪ್ರತೀಕ್ಷೆ. ಸೂರ್ಯನನ್ನು ನೋಡಿ. ಇಡೀ ವಿಶ್ವಕ್ಕೇ ಬೆಳಕು ಕೊಟ್ಟರೂ ಎಷ್ಟು ನಿಧಾನವಾಗಿ ಕಣ್ಣು ತೆರೀತಾನೆ, ಎಷ್ಟು ಸಾವಧಾನವಾಗಿ ಕಿರಣಗಳನ್ನು ಹರಡುತಾನೆ. ಮನುಷ್ಯರಿಗೆ ಮಾತ್ರ ಕಣ್ಣು ಬಿಟ್ಟ ತಕ್ಷಣವೇ ಎಲ್ಲವನ್ನೂ ಕಂಡುಬಿಡುವ, ಎಲ್ಲವನ್ನೂ ಹೀರಿಕೊಳ್ಳುವ ಆತುರ. ಕಣ್ಣು ತೆರೆದ ತಕ್ಷಣ ಕಣ್ಣೆದುರಿಗೆ ಇರುವುದನ್ನೆಲ್ಲ ನಾವು ನೋಡುತ್ತೇವೆಂದಲ್ಲ, ನೋಡಿದ್ದೆಲ್ಲ ನಮ್ಮದು ಆಗುವುದೂ ಇಲ್ಲ’. ಅಷ್ಟೇ ಆವತ್ತಿನ ಮಾತು. ಮತ್ತೆ ಧ್ಯಾನಕ್ಕೆ ಸರಿದುಬಿಟ್ಟರು. ಮತ್ತೆ ನಾಲ್ಕಾರು ಸಂದರ್ಭದಲ್ಲಿ ದರ್ಶನಕ್ಕೆ ಹೋದಾಗಲೂ ಹೀಗೇ ಆಯಿತು.

ಆಫೀಸಿನಲ್ಲಿ ಬಡ್ತಿಗೆ ತೊಂದರೆಯಾಗಿ ನನಗಿಂತ ಕಿರಿಯ ಶ್ರೇಣಿಯಲ್ಲಿದ್ದವರಿಗೆ ಹಿರಿಯ ಹುದ್ದೆ ಪಾರಾಗುವ ಸಾಧ್ಯತೆಯಿಂದ ನಾನು ಕಂಗಾಲಾಗಿದ್ದೆ. ಕೆಟ್ಟ ಕನಸುಗಳು ಬೀಳುತ್ತಲೇ ಇದ್ದವು. ವಿಷಮಶೀತ ಜ್ವರ ಕೂಡ ಬಂತು. ಮತ್ತೆ ಚೌಗುಲೆ ಪಾಟೀಲರ ಕಡೆ ನನ್ನನ್ನು ಕರೆದುಕೊಂಡು ಹೋದರು. ‘ಒಂದು ವೈಯುಕ್ತಿಕ ತೊಂದರೆಯಿದೆ ಹೇಳಿಕೊಳ್ಳಲಿ ಬಿಡಿ’ – ಪಾಟೀಲರನ್ನು ಒಪ್ಪಿಸಿದರು. ನಾನು ನನ್ನ ಸಮಸ್ಯೆಯ ವಿವರವನ್ನೆಲ್ಲಾ ಹೇಳಿಕೊಂಡೆ. ಹೇಳಿಕೊಳ್ಳುವುದು ಮುಗಿಯುವ ಮುನ್ನವೇ ಮತ್ತೆ ಧ್ಯಾನಕ್ಕೆ ಸರಿದುಬಿಟ್ಟರು. ಮೂರು ನಾಲ್ಕು ಗಂಟೆ ಆದಮೇಲೆ ನಿಧಾನವಾಗಿ ಕಣ್ಣು ತೆರೆದರು. ಕಣ್ಣುಗಳು ನಕ್ಕವು. ತುಟಿ ನಿಧಾನವಾಗಿ ಚಲಿಸಿತು.

ನೀವು ಹೇಳಿಕೊಂಡದ್ದು ಈ ವಿಶ್ವದಲ್ಲಿ ಒಂದು ಸಮಸ್ಯೆಯೇ ಅಲ್ಲ. ವಿಶ್ವದ ಮುಕ್ಕಾಲು ಮೂರು ವಾಸಿ ಸಮಸ್ಯೆಗಳು ಮನುಷ್ಯನೇ ಯಾವಾಗಲೂ ಕೇಂದ್ರದಲ್ಲಿರುವುದರಿಂದ, ಕೇಂದ್ರದಲ್ಲಿದ್ದೇನೆಂದು ತಿಳಿದುಕೊಂಡಿರುವುದರಿಂದ, ಕೇಂದ್ರದಲ್ಲೇ ಇರುವ ಬಯಕೆಯಿಂದ. ವಿಶ್ವಕ್ಕೆ ಕೇಂದ್ರವೂ ಇಲ್ಲ, ಸೂತ್ರವೂ ಇಲ್ಲ, ಚಲನೆ ಇದೆ. ಚಲನೆ ಮಾತ್ರ ನಿರಂತರ. ನಮ್ಮನ್ನು ಕೆಲ ಕಾಲ ಈ ಚಲನೆಯ ಭಾಗವೆಂದು ವಿಶ್ವ ಒಪ್ಪಿರುವುದೇ ಒಂದು ದೊಡ್ಡ ಸಂಗತಿ. ಇಷ್ಟನ್ನು ಒಪ್ಪಿಕೊಳ್ಳಲು, ಇದನ್ನೇ ಧ್ಯಾನಿಸಲು ಸಾಧ್ಯವೇ ನೋಡಿ.

ನಾನು ಕೋದಂಡರಾಮಪುರದಿಂದ ವರ್ಗವಾಗಿ ಈ ಕಡೆ ಬಂದಮೇಲೂ ನನ್ನನ್ನು ಕುರಿತು ಪದೇ ಪದೇ ವಿಚಾರಿಸುತ್ತಿದ್ದರಂತೆ. ಒಂದೆರಡು ಸಲ ನನ್ನ ಕನಸಿನಲ್ಲೂ ಬಂದಿದ್ದರು. ಒಂದು ದಿನ ಬೆಳಿಗ್ಗೆ ಬೆಳಿಗ್ಗೇನೆ ತುಂಬಾ ಬೇಗ ಎಚ್ಚರವಾದಾಗ ಮನೆ ಬಾಗಿಲು ತೆರೆದರೆ ಕಾಂಪೌಂಡಿನ ಲಾನ್‌ನ ಮಧ್ಯಭಾಗದಲ್ಲಿ ಕುಳಿತಿದ್ದ ಪಾಟೀಲ್ ನಿಧಾನವಾಗಿ ಎದ್ದು ಹೂಗಿಡಗಳ ಹತ್ತಿರ ಹೋಗಿ ಹೂವುಗಳನ್ನು ಮೃದುವಾಗಿ ಸವರಿ ಹೊರಟರು. ಕೋದಂಡರಾಮಪುರದ ಮಿತ್ರರಿಗೆ ಫೋನ್ ಮಾಡಿ ತಿಳಿಸಿದಾಗ ಪಾಟೀಲರು ಸುಮ್ಮನೆ ನಕ್ಕರಂತೆ. ‘ಮಾನ್ಯರು ಸ್ವಂತ ಸ್ಥಳದಲ್ಲಿ ಆನಂದವಾಗಿದ್ದಾರಂತೆ ತಾನೇ’ ಎಂದು ಬಿಡಿಸಿ ಬಿಡಿಸಿ ಕೇಳಿದರಂತೆ. ಈ ಪಾಟೀಲರ 75ನೇ ಹುಟ್ಟುಹಬ್ಬದ ಮಿಲನಕ್ಕಾಗಿಯೇ ನಾನು ಹೊರಟಿದ್ದು, ಮಿತ್ರರ ಆಹ್ವಾನದ ಮೇರೆಗೆ.

***
ಎರಡನೆಯ ಅನಿರೀಕ್ಷಿತ, ಆಶ್ಚರ್ಯ–
ದಿಲೀಪ್ ಲಂಬಾಡೆ.
ಮಿಲನದ ಕಾರ್ಯಕರ್ತರ ನಡುವೆ ಎಡೆಬಿಡದೆ ಓಡಾಡತಾ ಬೇಕು ಬೇಕೆಂದೇ ನನಗೆ ಪದೇ ಪದೇ ಎದುರಾಗ್ತಾ ಇದ್ದ. ಒಂದೆರಡು ಸಲ ನನ್ನನ್ನು ಕೆಕ್ಕರಿಸಿ ನೋಡಿದ ಹಾಗಾಯಿತು ಕೂಡ. ದೃಷ್ಟಿ ತಪ್ಪಿಸಲೆಂದು ನಾನೇ ಬೇರೆ ಕಡೆಗೆ ತಿರುಗಬೇಕಾಯಿತು. ಹಾಗೆ ತಿರುಗಿ ಸ್ವಲ್ಪ ಹೊತ್ತಾದ ಮೇಲೆ ಮತ್ತೆ ಹಿಂತಿರುಗಿ ನೋಡಿದರೆ – ಆಸಾಮಿ ಇನ್ನೂ ನನ್ನನ್ನು ಕೆಕ್ಕರಿಸಿ ನೋಡುತ್ತಲೇ ಇದ್ದ.

ದಿಲೀಪ್ ಲಂಬಾಡೆ ಆವಾಗ ನಮ್ಮ ಆಫೀಸಿನಲ್ಲಿ ಸೂಪರಿಂಟೆಂಡೆಂಟ್ ಆಗಿದ್ದರೂ ವಿಶ್ವದ ವಿದ್ಯಮಾನವೆಲ್ಲ ಅವನಿಗೆ ಬೇಕು. ಎಲ್ಲದರಲ್ಲೂ ತಲೆ – ಮೂಗು ಎರಡನ್ನೂ ಯಾವಾಗಲೂ ತೂರಿಸುತ್ತಿದ್ದ. ರಿಕ್ರಿಯೇಷನ್ ಕ್ಲಬ್‌ಗು ಅವನೇ ಉಪಾಧ್ಯಕ್ಷ. ಹೌಸಿಂಗ್ ಸೊಸೈಟಿ ಡೈರೆಕ್ಟರ್, ಎಸ್.ಸಿ., ಎಸ್.ಟಿ., ಯೂನಿಯನ್‌ನ ಸೆಕ್ರೆಟರಿ– ಹೀಗೆ. ಅವನು ಕೊಡುವ ಸಲಹೆ – ಸೂಚನೆಗಳನ್ನು ಭಾರತದ ವಿತ್ತ ಮಂತ್ರಿಯಿರಲಿ, ಪ್ರಧಾನಮಂತ್ರಿ ಕೂಡ ಜಾರಿಗೆ ತರುವುದಕ್ಕಾಗುತ್ತಿರಲಿಲ್ಲ. ಎಲ್ಲ ಸಂಗತಿ, ಎಲ್ಲ ವಿದ್ಯಮಾನಗಳು, ಎಲ್ಲ ನಾಯಕರು, ಎಲ್ಲ ಚಿಂತಕರ ಬಗ್ಗೆ ಅವನದು ತೀಕ್ಷ್ಣ ಅಭಿಪ್ರಾಯಗಳು ಇದ್ದೇ ಇರುತ್ತಿದ್ದವು.

ಯಾವಾಗಲೂ ಒಗ್ಗರಣೆ ಹಾಕಿಯೇ ಆ ಅಭಿಪ್ರಾಯಗಳನ್ನು ಚಟಪಟಗೊಳಿಸುತ್ತಾ ಹೇಳುತ್ತಿದ್ದುದು. ಪರಿಸರ ಚಳವಳಿಯ ಬಗ್ಗೆಯೋ, ದಕ್ಷಿಣ ಆಫ್ರಿಕಾಕ್ಕೆ ಹೋಗಬೇಕಾದ ಭಾರತದ ಕ್ರಿಕೆಟ್ ತಂಡದ ಬಗ್ಗೆಯೋ ನನ್ನ ವೈಯುಕ್ತಿಕ ಅನಿಸಿಕೆಯನ್ನು ಅವನ ಹತ್ತಿರ ಏಕೆ ಹಂಚಿಕೊಳ್ಳಬೇಕು? ಇದರ ಜೊತೆಗೆ ಕೋದಂಡರಾಮಪುರದ ಇತಿಹಾಸ, ಯಾತ್ರಾಸ್ಥಳ, ಧಾರ್ಮಿಕ ಕೇಂದ್ರಗಳ ಬಗ್ಗೆ ಕೂಡ ಕೊರೆತ ಇರೋದು.

ಇಷ್ಟೆಲ್ಲ ಆದಮೇಲೆ ಊರಿನಲ್ಲಿ ನಡೆಯುವ ಸಮಾರಂಭ, ಧಾರ್ಮಿಕ ಪ್ರವಚನ, ಕ್ಲಬ್ ಚುನಾವಣೆ ಬಗ್ಗೆಯೂ ಸದಾ ವೀಕ್ಷಕ ವಿವರಣೆ. ನನ್ನ ಆಪ್ತ ಸಹಾಯಕರು ಯಾವಾಗಲೂ ಎಚ್ಚರಿಸುತ್ತಿದ್ದರು. ‘ಸಾರ್, ಇದೆಲ್ಲ ನಾಟಕ. ಒಳಗಡೆ ಯಾರನ್ನು ಕಂಡರೂ ಆಗೋಲ್ಲ. ಛಾನ್ಸ್ ಕೊಟ್ಟರೆ ಪ್ರಧಾನ ಮಂತ್ರಿಗಿಂತಲೂ ತಾನೇ ಮೇಲು ಅಂತ ಹೇಳಿದರೂ ಹೇಳಿದನೇ. ನಿಮ್ಮ ಬಗ್ಗೆ ಕೂಡ ಇಲ್ಲದ್ದು ಸಲ್ಲದ್ದನ್ನೆಲ್ಲ ತಿಳಕೋತಾ ಇರತಾನೆ. ಒಟ್ಟಿನಲ್ಲಿ ನಿಮಗೆ ಹತ್ತಿರವಾಗಬೇಕು. ಹಾಗೆಂದು ಬೇರೆಯವರಿಗೆ ತೋರಿಸಿಕೊಳ್ಳಬೇಕೆನ್ನುವ ತಂತ್ರ. ತುಂಬಾ ಒಳಗೆ ಬಿಟ್ಟಕೋ ಬೇಡಿ’.

ನನ್ನ ಸ್ಥಾನಮಾನ, ಆಫೀಸಿನ ಗಾಂಭೀರ್ಯಕ್ಕನುಗುಣವಾಗುವಂತೆ, ಅಥವಾ ಇನ್ನೂ ಸ್ವಲ್ಪ ಜಾಸ್ತಿಯೇ ನಾನು ಬಿಗಿಯಾಗಿರುತ್ತಿದ್ದೆ. ಅದು ದಿಲೀಪ್ ಲಂಬಾಡೆಗೆ ಇಷ್ಟವಾಗತಿರಲಿಲ್ಲ. ಮುಖ ದಪ್ಪ ಮಾಡಿಕೊಳ್ಳುವುದರ ಮೂಲಕ, ಗೊಣಗಾಡುವುದರ ಮೂಲಕ ತನ್ನ ವ್ಯಗ್ರತೆ, ಅಸಮಾಧಾನವನ್ನು ಪ್ರಕಟಿಸಿಯೇ ಬಿಡೋನು.

ಈ ಆಸಾಮಿ ಯಾವಾಗ ಆನಂದ ಪಾಟೀಲರ ಅಂತರಂಗದ ಹತ್ತಿರ ಬಂದ? ಹೇಗೆ ಆತ್ಮೀಯನಾಗಿಬಿಟ್ಟ? ಎಷ್ಟೊಂದು ಜನರ ಪರಿಚಯ ಇದೆ ಅವನಿಗೆ. ಎಲ್ಲರ ಹತ್ತಿರವೂ ಎಷ್ಟೊಂದು ಸಲೀಸು.

ಪಾಟೀಲರ ಹುಟ್ಟುಹಬ್ಬದ ನೆನಪಿಗೆಂದು ಇಷ್ಟಪಟ್ಟವರು ನೇತ್ರದಾನದ ವಾಗ್ದಾನ ಮಾಡಬಹುದಿತ್ತು. ಆ ವಾಗ್ದಾನದ ಪತ್ರಕ್ಕೆ ಸಹಿ ಮಾಡಲು ಕ್ಯೂನಲ್ಲಿ ನಿಂತಾಗಲು, ಲಂಬಾಡೆ ನನ್ನ ಹಿಂದುಗಡೆಯೇ, ನಾಲ್ಕನೆಯವನಾಗಿಯೋ, ಐದನೆಯವನಾಗಿಯೋ ನಿಂತಿದ್ದ. ಮತ್ತೆ ಮತ್ತೆ ನನ್ನನ್ನು ಪರೀಕ್ಷಿಸುವವನಂತೆ ನನ್ನ ಚಲನವಲನವನ್ನೆಲ್ಲ ಗಮನಿಸುತ್ತಿದ್ದ.

***
ಮಿಲನ ಮುಗಿಸಿಕೊಂಡು ಊರಿಗೆ ಹಿಂತಿರುಗಿದ ಮೇಲೆ ಮೂರನೆಯ ಅನಿರೀಕ್ಷಿತ, ಮೂರನೆಯ ಆಶ್ಚರ್ಯವೆಂಬಂತೆ. ಲಂಬಾಡೆಯಿಂದ ಒಂದು ಪತ್ರ ಬಂತು.
***

ಮಾನ್ಯರೇ,
ಮಿಲನದ ಉದ್ದಕ್ಕೂ ಎಷ್ಟೊಂದು ಸಲ, ಎಷ್ಟೊಂದು ರೀತಿಯಲ್ಲಿ ದೃಷ್ಟಿಸಿ ನೋಡಿದಿರಿ ನೀವು. ಬದಲಿಗೆ ಕರೆದು ಮಾತನಾಡಿಸಬಹುದಿತ್ತು. ಕೊನೆಪಕ್ಷ ಇಷ್ಟೊಂದು ವರ್ಷಗಳ ನಂತರವಾದರೂ ನನ್ನ ಬಗ್ಗೆ ತಿಳಿಯಬಹುದಿತ್ತು. ಯಾರ ಮಾತನ್ನೂ ಕೇಳಿಸಿಕೊಳ್ಳದೆ, ಏನನ್ನೂ ತಿಳಕೊಳ್ಳದೆ ಮುಗಮ್ಮಾಗಿ ಇದ್ದುಬಿಡತೀರಿ. ನಾನು ಕಂಡಾಗಿನಿಂದಲೂ ನೀವು ಹೀಗೇ ಇದ್ದೀರಿ.

ನೀವು ಕೋದಂಡರಾಮಪುರಕ್ಕೆ ಬರುವ ಮುಂಚೆಯೇ ನಿಮ್ಮ ಬಗ್ಗೆ ನಮ್ಮವರಿಗೆಲ್ಲ ತಿಳಿದಿತ್ತು. ನಿಮ್ಮ ಬರವಣಿಗೆ – ಓದು ಬರಹದ ಸ್ವಭಾವದ ಬಗ್ಗೆ ಕೇಳಿದ ಮೇಲೆ, ಮೇಲಧಿಕಾರಿಯಾದರೇನಂತೆ, ಬಡ್ತಿ, ಭತ್ಯೆ, ಇಂಕ್ರಿಮೆಂಟ್‌ನಿಂದಾಚೆಗೂ ಮಾತನಾಡುವವರೊಬ್ಬರು – ನಮ್ಮೂರಿಗೂ ಬರುತ್ತಾರಲ್ಲ ಎಂದು ನಮ್ಮ ಯೂನಿಯನ್ ಕಮಿಟಿ ಮೀಟಿಂಗಿನಲ್ಲಿ ಬಹಳ ಸಲ ಚರ್ಚಿಸಿದ್ದೆವು.

ನಿಮ್ಮ ಯೋಗಾಭ್ಯಾಸಕ್ಕೆ ಒಬ್ಬ ಮಾಸ್ಟರನ್ನು ಗೊತ್ತು ಮಾಡಿಕೊಡಲು ನಾನು ಉತ್ಸಾಹ ತೋರಿದಾಗ, ಗೋಕುಲಪೇಟೆಯ ಮಹಾಭಾರತ ಉಪನ್ಯಾಸ ಮಾಲೆಯ ಉದ್ಘಾಟನೆಗೆ ನಿಮ್ಮನ್ನು ಕರೆಯುವಂತೆ ವೈದಿಕ ಮಂಡಳಿಯವರಿಗೆ ನಾನೇ ಸೂಚನೆ ಕಳಿಸಿದಾಗ, ನೀವು ಯಾವುದೇ ರೀತಿಯ ಪ್ರತಿಕ್ರಿಯೆ ತೋರಲಿಲ್ಲ ಮಾತ್ರವಲ್ಲ, ನನ್ನಿಂದ ಇಂತಹ ಸೂಚನೆ ಹೋಗಿರಬಹುದೆಂದು ನಿಮಗೆ ಗೊತ್ತಿದ್ದೂ ಗೊತ್ತಿಲ್ಲದಂತೆ ನಟಿಸಿದಿರಿ. ಆಫೀಸಿನ ರಾಮೋತ್ಸವದ ಸಂದರ್ಭದಲ್ಲಿ ನಾನು ವಿವರವಾಗಿ ಭಾಷಣ ಮಾಡುವಾಗ ನಿಮ್ಮ ಕಡೆ ಕೊನೆಯಪಕ್ಷ ಹತ್ತುಸಲ ನೋಡಿರಬೇಕು. ನನ್ನ ಕಡೆ ತಿರುಗಿ ಕೂಡ ನೋಡಲಿಲ್ಲ ನೀವು. ಇದನ್ನೆಲ್ಲ ನಾನು ನಿಮ್ಮನ್ನು ಮೆಚ್ಚಿಸೋಕೆ, ನಿಮ್ಮ ಗಮನ ಸೆಳೆಯೋಕೆ ಮಾಡ್ತಿದೀನಿ ಅನ್ನುವ ಅನುಮಾನ ನಿಮಗೆ. ಈ ಅನುಮಾನವನ್ನೇ ಕೊನೆಗೆ ನಂಬಿಕೆ ಕೂಡ ಮಾಡಕೊಂಡುಬಿಟ್ಟಿರಿ.

ಶ್ರೀನಿವಾಸ ಮೇಷ್ಟರು ಹೀಗಿರಲಿಲ್ಲಪ್ಪ. ಬನ್ನಿಕೊಪ್ಪದ ಸಿಲ್ಕ್ ಬೋರ್ಡ್ ಬಡಾವಣೆಯ ಹನುಮಂತು ಚಿಕ್ಕಪ್ಪನ ಮನೇನಲ್ಲೇ ಇದ್ದುಕೊಂಡೇ ನಾನು ಮಿಡ್ಲ್‌ಸ್ಕೂಲ್ ತನಕ ಓದಿದ್ದು. ಎದುರುಗಡೆ ಮನೇನೆ ಶ್ರೀನಿವಾಸ ಮೇಷ್ಟರದು. ಮಕ್ಕಳೇ ಇರಲಿಲ್ಲ ಅವರಿಗೆ. ವಿಪರೀತ ಪೂಜೆ ಪುನಸ್ಕಾರ, ಆಚಾರ, ವಿಚಾರ. ಪೂಜೆ ಮಾಡತಾಮಾಡತಾನೇ ಏನಾದರೂ ಆಫೀಸ್ ವಿಷಯ ಜ್ಞಾಪಕಕ್ಕೆ ಬಂದುಬಿಟ್ಟರೆ ಕೆಂಪು ಮುಗುಟದಲ್ಲೇ ಚಿಕ್ಕಪ್ಪನ್ನ ಕೂಗಿಕೊಂಡು ಬಂದುಬಿಡೋರು. ಮಾತು ಮುಗಿದ ಮೇಲೆ ಮತ್ತೆ ಹೋಗಿ ಪೂಜೆಗೆ ಕೂರೋರು. ಶಾರದಾ ಹೈಸ್ಕೂಲಿನಲ್ಲೂ ಅಷ್ಟೆ.

ಪ್ರತಿವರ್ಷ ಭಗವದ್ಗೀತೆಯ ಅಭಿಯಾನ. ಶಾರದಾ ಛಾಪಖಾನೆಯವರು ಮುದ್ರಿಸಿದ್ದ ಪಾಕೆಟ್ ಕನ್ನಡ ಭಗವದ್ಗೀತೆಯನ್ನು ನಮಗೆಲ್ಲ ಫ್ರೀಯಾಗಿ ಕೊಟ್ಟಿದ್ದರು. ಎಲ್ಲ ಮಕ್ಕಳಂತೆ ನಾನೂ ಕೂಡ ಪ್ರತಿದಿನ ಬೆಳಿಗ್ಗೆ ಒಂದು ಅಧ್ಯಾಯ ಓದತಾಯಿದ್ದೆ. ಸ್ಕೂಲಿನಲ್ಲಿ ಮಹಾಭಾರತ ನಾಟಕ ಮಾಡಿಸಿದಾಗ ವಿದುರನ ಪಾತ್ರ ಕೊಟ್ಟಿದ್ದರು. ರಾಮಣ್ಣ ಮೇಷ್ಟರು ಸಾನೆ ಗುರೂಜಿ ಪುಸ್ತಕ ಓದಿಸಿದ್ದರು. ಎಲ್ಲವೂ ಚೆನ್ನಾಗಿದೆ ಅನ್ನಿಸೋದು. ಎಲ್ಲರಂತೆ ಎಲ್ಲವನ್ನೂ ಬಾಯಿಪಾಠ ಮಾಡಿಕೊಂಬಿಡಬೇಕು ಅಂತ ಆಸೆಯಾಗೋದು. ಇಷ್ಟು ವರ್ಷದ ನಂತರವೂ ಭಗವದ್ಗೀತೆಯ ಬಾಯಿಪಾಠವನ್ನು ಚೂರೂ ತಪ್ಪದೆ ಒಪ್ಪಿಸಬಲ್ಲೆ.

ಮುಂದೆ ಕಾಲೇಜು ಸೇರಿದಾಗ, ಎಂ.ಎ. ಓದುವಾಗ ನಮ್ಮ ಸಂಘರ್ಷ ಸಮಿತಿಯವರ ಒಡನಾಟ ಜಾಸ್ತಿಯಾದಾಗ, ‘ಇದೆಲ್ಲ ನಮ್ಮದಲ್ಲ, ನಮಗೆ ಸೇರಿದ್ದಲ್ಲ’ ಅಂತ ಹೇಳಿಕೊಟ್ಟರು ನಿಜ. ಆದರೆ ಬಾಲ್ಯದಲ್ಲಿ ನೋಡಿದ್ದು, ಸ್ಕೂಲಿನಲ್ಲಿ ಕಲಿತದ್ದನ್ನು ಅಷ್ಟು ಸುಲಭವಾಗಿ ಮರೆಯೋಕ್ಕಾಗೋಲ್ಲ, ಬಿಡಕ್ಕೂ ಆಗೋಲ್ಲ. ಅದೂ ಅಲ್ಲದೆ ನಾವೇ ಆಗಲಿ, ಯಾರೇ ಆಗಲಿ ಯಾವ ಹಿನ್ನೆಲೆ ಆದ್ರೆ ಏನಂತೆ, ಸ್ವಂತದ್ದು ಅಂತ ಒಂದು ಮನಸ್ಸು ಪ್ರತಿಯೊಬ್ಬರಿಗೂ ಇದ್ದೇ ಇರುತ್ತಲ್ಲ. ಗೀತೆ ಬಗ್ಗೆ ಆಗಲಿ, ಭಾರತದ ಕಥೆ ಬಗ್ಗೆ ಆಗಲಿ, ಧರ್ಮದ ಬಗ್ಗೆ ಆಗಲಿ ಆಗಾಗ್ಗೆ ನನಗೆ ಬೇಕಾದ್ದನ್ನ ಓದಿಕೊಳ್ಳುತ್ತಿದ್ದೆ.

ಇಲ್ಲ ಯಾವುದಾದರೂ ಪುಸ್ತಕಗಳು, ಪತ್ರಿಕಾ ಬರಹಗಳು ತಾವೇತಾವಾಗಿ ಸಿಕ್ಕಾಗ ಗಮನಿಸುತ್ತಿದ್ದೆ, ಯೋಚನೆ ಮಾಡುತ್ತಿದ್ದೆ. ಅದಕ್ಕೇ ನೀವು ನಮ್ಮ ಕೋದಂಡರಾಮಪುರಕ್ಕೆ ವರ್ಗವಾಗಿ ಬಂದಾಗ ‘ಓ, ಇದನ್ನೆಲ್ಲ ಮಾತಾಡೋಕೆ ಒಬ್ಬರು ಸಿಗತಾರಲ್ಲ’ ಅಂದುಕೊಂಡದ್ದು. ಒಂದೇ ಕಚೇರಿಯಲ್ಲಿ ಕೆಲಸ ಮಾಡ್ತಾ ಇದ್ದದ್ದರಿಂದ, ಜೊತೆಗೆ ನಾನು ನಮ್ಮ ಯೂನಿಯನ್‌ನ ಸೆಕ್ರೆಟರಿನು ಆಗಿದ್ದರಿಂದ ಅದೆಷ್ಟೋ ಸಲ ನಿಮಗೆ ಸಮೀಪವಾಗುವ, ನಿಮ್ಮೊಡನೆ ಒಡನಾಡುವ ಅವಕಾಶಗಳು ತೆರೆಯುತ್ತಿತ್ತು – ಇಬ್ಬರಿಗೂ. ನೀವು ಮಾತ್ರ ವ್ರತ ಹಿಡಿದವರಂತೆ ಬಿಗಿಯನ್ನು ಬಿಡುತ್ತಲೇ ಇರಲಿಲ್ಲ.

ನೀವು ಮೇಲಧಿಕಾರಿ, ಮೇಲಾಗಿ ಮೇಲು ಜಾತಿಯವರು. ನಿಮ್ಮನ್ನು ಸಂಪ್ರೀತಗೊಳಿಸಲಿಕ್ಕೆ ನಾನು ಇದನ್ನೆಲ್ಲ ಕಾಲು ಕೆರೆದುಕೊಂಡು ಮಾಡ್ತಿದೀನಿ ಅಂತ. ಇಲ್ಲ, ಇಂತಹ ಸಂಗತಿಗಳಲ್ಲೆಲ್ಲ ನನಗೆ ಆಸಕ್ತಿಯೂ ಇಲ್ಲ, ಪ್ರವೇಶನೂ ಇಲ್ಲ. ಸುಮ್ಮನೆ ನಾಟಕ ಮಾಡ್ತಿದೀನಿ ಅಂತಾನೂ ಅನುಮಾನ. ಹೀಗೆಲ್ಲ ಅನುಮಾನ ಪಡುವ ಮೂಲಕವೂ ಇದೆಲ್ಲ ನಮಗೆ ಸೇರಿದ್ದಲ್ಲ, ಸೇರಬೇಕಾದ್ದಲ್ಲ, ನಮ್ಮ ಮನಸ್ಸಿಗೆ ಹೇಗಿದ್ದರೂ ಒಗ್ಗೋಲ್ಲ ಎಂದು ತಿಳಿದುಕೊಳ್ಳುವುದು ಕೂಡ ಜಾತೀಯತೆಯೇ ಅಲ್ಲವಾ?

ಆನಂದಪಾಟೀಲರ ಹತ್ತಿರ ಮಾತ್ರ ಹೀಗಾಗಲಿಲ್ಲ. ಮೊದಲ ದರ್ಶನದಲ್ಲೇ ನಿಮ್ಮ ಬಗ್ಗೆ, ನಿಮ್ಮಂತವರ ಬಗ್ಗೆ ತೋಡಿಕೊಂಡೆ. ಕೆಂಪು ಬಣ್ಣದ ಅವರ ಮುಖ ಕಪ್ಪಿಟ್ಟಿತು. ಕಣ್ಣುಗುಡ್ಡೆಗಳು ಸ್ಥಿರವಾದವು. ಮೂಗಿನ ಹೊರಳೆಯನ್ನು ದೊಡ್ಡದು ಮಾಡಿ ದೀರ್ಘವಾಗಿ ಉಸಿರು ಎಳೆದುಕೊಂಡರು. ಅವರೇ ಕರೆದರೋ, ಇಲ್ಲ ನಾನೇ ನಾನಾಗಿ ಹೋದೆನೋ ಅಂತೂ ಅವರ ಹತ್ತಿರ ಹೋದೆ. ಹೇಗೆ ಹೇಗೋ ಬೆಳೆದಿದ್ದ ಗಡ್ಡ, ಮೀಸೆ, ಕೂದಲ ಮೇಲೆಲ್ಲಾ ಕೈ ಆಡಿಸಿದರು. ನೆತ್ತಿ ನೀವಿದರು. ‘ಇದೇನಿದು ಈ ಅವತಾರ. ಈ ವಯಸ್ಸಿನಲ್ಲಿ ಎಷ್ಟು ಟ್ರಿಮ್ ಆಗಿರಬೇಕು. ಹೀಗೇಕೆ ಇದ್ದೀಯೆ? ಯಾವುದೇ ಜ್ಞಾನ, ಯಾವುದೇ ಪುಸ್ತಕ ಇಂತವರಿಗೆ ಅಂತಾನೇ ಇರೋಲ್ಲ. ಹಿಂದೂ ಇದ್ದಿಲ್ಲ, ಮುಂದೆಯೂ ಇರೋಲ್ಲ. ಮರ, ಗಿಡ, ನದಿ, ಸಮುದ್ರ, ಆಕಾಶದಂತೆ. ಅದು ಇರುತ್ತೆ. ಸುಮ್ಮನೆ ಇರುತ್ತೆ.

ಪ್ರೀತಿಸುವವರನ್ನು ಒಪ್ಪಿಕೊಳ್ಳುತ್ತೆ, ಪ್ರೀತಿಸುವವರಿಗೆ ತೆರೆಯುತ್ತೆ. ಇದು ನನ್ನದು ಮಾತ್ರ, ನಾನು ಓದುತ್ತಿರುವ, ತಿಳಕೊಂಡಿರುವ ಕ್ರಮವೇ ಸರಿ ಎನ್ನುವ ಹಮ್ಮಿನವರಿಗೆ ಯಾವತ್ತೂ ಯಾವ ಪುಸ್ತಕವೂ ತೆರೆಯೋಲ್ಲ, ಜ್ಞಾನವೂ ತಿಳಿಯೋಲ್ಲ’. ಮತ್ತೆ ಮತ್ತೆ ಅವರ ಹತ್ತಿರ ಹೋಗುತ್ತಿದ್ದೆ. ಹೋದಾಗಲೆಲ್ಲ ಧ್ಯಾನದಲ್ಲೇ ಇರೋರು. ಯಾವಾಗಲಾದರೂ ನಿಧಾನವಾಗಿ ಕಣ್ಣು ತೆರೆದಾಗ, ಕಣ್ಣು ತೆರೆದು ಸುಮ್ಮನೆ ಕುಳಿತಾಗ ಆ ಕಣ್ಣಿನ ಆಳದೊಳಕ್ಕೆ ನಾನು ಹೋಗಿ ಸೇರಿಕೊಂಡು ಅಲ್ಲೇ ಇದ್ದುಬಿಡಬೇಕು ಅಂತಲೂ ಅನ್ನಿಸೋದು. ಯಾರನ್ನೂ ಹೆಚ್ಚು ಮಾತಾಡಿಸುತ್ತಿರಲಿಲ್ಲ. ಕರೆಯಬೇಕೆನ್ನಿಸುವವರನ್ನು ಕರೆಯುತ್ತಿದ್ದರು. ಸುಮ್ಮನೆ ಮೈದಡವುತ್ತ ನೆತ್ತಿ ನೀವುತ್ತ ನೀವುತ್ತ ಮತ್ತೆ ಧ್ಯಾನಕ್ಕೆ ಜಾರಿಬಿಡೋರು.

ಒಂದು ಸಲ ಅವರ ಧ್ಯಾನ ಮಂದಿರದ ನೆಲ ಮಾಳಿಗೆಗೆ ಕೈಹಿಡಿದು ಕರೆದುಕೊಂಡು ಹೋದರು. ಗುಂಗುರ ಕೂದಲಿನ, ಬಿಡುಗಣ್ಣಿನ ಎಳೆಮುಖದ ಹುಡುಗನೊಬ್ಬನ ಫೋಟೋ ತೋರಿಸಿದರು. ‘ನನ್ನ ಮಗ ನೋಡು ಇವನು. ಮೊದಲ ಬಿ.ಎ. ಓದುತ್ತಿದ್ದ. ಮೋಟರ್ ಬೈಕ್ ಆಕ್ಸಿಡೆಂಟ್‌ನಲ್ಲಿ ಸತ್ತುಹೋದ. ಇಂತಹ ದಿನ, ಹೀಗೇ ಸಾಯುತ್ತಾನೆ ಅಂತ ನನಗೆ ಜ್ಯೋತಿಷ್ಯ ಗೊತ್ತಿದ್ದರೂ ತಪ್ಪಿಸೋಕೆ ಆಗಲಿಲ್ಲ.

ಆವತ್ತಿನಿಂದಲೇ ಓದುವುದು, ಬರೆಯುವುದು, ವಿಗ್ರಹಾರಾಧನೆ ಎಲ್ಲವನ್ನೂ ನಿಲ್ಲಿಸಿಬಿಟ್ಟೆ. ಕಾಲೇಜು ಪ್ರೊಫೆಸರ್ ಕೆಲಸಕ್ಕೆ ಕೂಡ ರಾಜೀನಾಮೆ ಕೊಟ್ಟುಬಿಟ್ಟೆ’. ಹೇಳತಾ ಹೇಳತಾ ಅವರ ಮೈ ನಡುಗತಾಯಿತ್ತು. ಇನ್ನೇನು ಕುಸಿದು ಬೀಳಬಹುದು ಅನ್ನುವ ಹೊತ್ತಿಗೆ ನನ್ನನ್ನು ಬಲವಾಗಿ ತಬ್ಬಿಕೊಂಡರು. ಮೈಯೆಲ್ಲಾ ತಣ್ಣಗಾಗಿತ್ತು. ಏದುಸಿರು ಬಿಡುತ್ತಾ ಇದ್ದರೂ ಉಸಿರಿನಲ್ಲಿ ಶಾಖ ಇರಲಿಲ್ಲ.

ಇನ್ನೊಂದು ಸಲ ಮಧ್ಯರಾತ್ರೀಲಿ ನಮ್ಮ ಮನೆಗೆ ಓಡೋಡಿ ಬಂದರು. ಮನೆಯವರಿಗೆಲ್ಲ ಆಶ್ಚರ್ಯ. ಧ್ಯಾನದ ಉದ್ದೇಶವೇನು ಎಂದು ಪ್ರಶ್ನೆ ಕೇಳಿದರು. ಏಕಾಗ್ರತೆ, ಮನಸ್ಸಿನ ಅತಿ ಚಿಂತನಾ ಪ್ರವೃತ್ತಿಯನ್ನು ತೊಡೆದು ಶೂನ್ಯದ ಆಕಾರವನ್ನು ಕಾಣುವ ಸ್ಥಿತಿಯಲ್ಲವೇ ಎಂದು ನಾನೇ ಅವರನ್ನು ಮತ್ತೆ ಪ್ರಶ್ನಿಸಿದೆ.

ತಕ್ಷಣ ಏದುಸಿರು. ಮುಖ ನಗುವನ್ನು ತುಳುಕಿಸಿತು. ನಗುವಿನಲ್ಲೊಂದು ರೀತಿಯ ಅಸಹಾಯಕತೆ. ಕತ್ತನ್ನು ಅಲ್ಲಾಡಿಸುತ್ತಲೇ ಅಲ್ಲಾಡಿಸಿದ ಕತ್ತನ್ನು ಮತ್ತೆ ಮತ್ತೆ ಅಲ್ಲಾಡಿಸುತ್ತಲೇ, ‘ತಪ್ಪು, ತಪ್ಪು, ತಪ್ಪು. ಧ್ಯಾನದ ತುದಿಯಲ್ಲಿ ಇದುವರೆಗೆ ಎಂದೆಂದೂ ಕಾಣದಿರುವ ಬಣ್ಣ, ಗೆರೆಗಳು, ವಸ್ತು, ಪ್ರದೇಶ, ಉಬ್ಬು, ತಗ್ಗು, ಮನುಷ್ಯರು, ಎಲ್ಲ ಕಾಣ್ತಾರೆ. ನಿನ್ನೆಯ ಧ್ಯಾನದ ಕೊನೆಯಲ್ಲಿ ನೋಡಿದರೆ ನೀನು ನನ್ನ ಮಗನ ಜೊತೆ ಮಾತಾಡ್ತಾ ಕುಳಿತಿದ್ದೆ, ಹುಲ್ಲುಗಾವಲಿನ ತುದಿಯಲ್ಲಿ. ನೀವಿಬ್ಬರು ಮಾತನ್ನಾಡುವುದನ್ನು ನೋಡುತ್ತ. ಹುಲ್ಲುಗಾವಲಿನ ತುದಿಯ ಕಣಿವೆಯೊಳಗೆ ಇಳಿಯುತ್ತಿದ್ದ ಸೂರ್ಯ ಕೂಡ ಸ್ವಲ್ಪ ಹೊತ್ತು ಹಾಗೇ ಇದ್ದುಬಿಟ್ಟ. ಹೇಳು, ಹೇಳು. ನನ್ನ ಮಗ ನಿನ್ನ ಹತ್ತಿರ ಏನೇನು ಹೇಳಿದ’. ನನ್ನ ಎರಡೂ ಕೈಗಳನ್ನು ಹಿಡಿದುಕೊಂಡು ಅಂಗಲಾಚಿದರು.

ನಮ್ಮ ನೆಂಟರಿಷ್ಟರು, ಯೂನಿಯನ್ ಸದಸ್ಯರು ಎಲ್ಲರನ್ನೂ ಕರೆದುಕೊಂಡು ಹೋಗಿ ಪರಿಚಯ ಮಾಡಿಕೊಟ್ಟೆ. ಒಂದೊಂದು ಸಲ ಪಾಟೀಲರು ಸ್ನೇಹಿತರನ್ನು ನೋಡೋಕೆ ಪೂನಾಗೆ ಹೋಗ್ತಾರೆ. ನನಗೂ ಕೂಡ ಪೂನಾದಲ್ಲಿ ನಮ್ಮ ಯೂನಿಯನ್ ಸೆಂಟ್ರಲ್ ಕಮಿಟಿ ಮೀಟಿಂಗ್ ಇಂತದೆಲ್ಲ ಇರುತ್ತೆ. ಕೋದಂಡರಾಮಪುರದಿಂದ ಜೊತೆಯಲ್ಲೇ ಹೋಗ್ತೀವಿ. ನನ್ನ ಮೀಟಿಂಗ್ ಬೇಗ ಮುಗಿದು ಹೋದರೆ ಅವರಿರುವ ಸ್ನೇಹಿತರ ಬಳಿ ಹೋಗ್ತೀನಿ. ಅವರ ಕೆಲಸ ಕಾರ್ಯ ಮುಗಿದರೆ ನಮ್ಮ ಯೂನಿಯನ್ ಆಫೀಸ್‌ಗೆ ಬಂದು ಅವರು ಕೂತಿರ್ತಾರೆ.

ನಿಮ್ಮ ಓದು ಬರಹದಲ್ಲಿ ಜಾತಿ ಭಾವನೆ ಇಲ್ಲದಿರಬಹುದು. ನಿಮ್ಮ ಅಭಿಪ್ರಾಯ ಕೂಡ ಒಳ್ಳೆಯದಿರಬಹುದು. ಆದರೆ ನಿಮ್ಮ ಅನುಮಾನದಲ್ಲಿ, ಕಣ್ಣಿನಲ್ಲಿ, ನೋಡುವ ಕ್ರಮದಲ್ಲಿ, ಗುಟ್ಟುಗಳನ್ನು ಕಾಪಾಡಿಕೊಳ್ಳುವ ರೀತಿಯಲ್ಲಿ ಜಾತಿಯ ಸೋಂಕು ಇರುತ್ತೆ. ಹದಿನೈದು ವರ್ಷಗಳ ನಂತರ ನೀವು ಈಗ ಕೋದಂಡರಾಮಪುರಕ್ಕೆ ಪಾಟೀಲರ ಸ್ನೇಹ ಕೂಟದ ಮಿಲನಕ್ಕೆ ಬಂದಾಗಲೂ, ನಿಮ್ಮ ಕಣ್ಣುಗಳು, ದೃಷ್ಟಿಸುವ ಕ್ರಮ ಎಲ್ಲ ಹಿಂದಿನಂತೆಯೇ ಇದ್ದವು. ಮಿಲನದಲ್ಲಿ ನೀವು ಕೂಡ ಎಲ್ಲರಂತೆ ನೇತ್ರದಾನದ ವಾಗ್ದಾನ ಮಾಡಿದಿರಿ.

ವರ್ಷಾನುಗಟ್ಟಲೆ ಒಂದೇ ರೀತಿ ಉಳಿದಿರುವ ಕಣ್ಣುಗಳನ್ನು, ಆ ಕಣ್ಣುಗಳು ನೋಡುವ ರೀತಿಯನ್ನು ನೀವು ದಾನ ಮಾಡಬಾರದಾಗಿತ್ತೆಂಬುದೇ ನನ್ನ ಖಚಿತ ಅಭಿಪ್ರಾಯ, ಈಗಲೂ. ಈ ಪತ್ರ ಬರೆಯುತ್ತಿರುವಾಗಲೂ ನನಗೆ ಒಂದೇ ಭಯ. ಪಾಟೀಲರ ಧ್ಯಾನದ ತುದಿಯಲ್ಲಿ ಕಾಣುವ ಲೋಕದಲ್ಲಿ ಮತ್ತೆ ನಿಮ್ಮ ಕಣ್ಣುಗಳು ನನಗೆ ಎದುರಾಗಿಬಿಟ್ಟರೆ! 

ಈ ಭಯವನ್ನು ಪಾಟೀಲರ ಹತ್ತಿರ ಕೂಡ ಹೇಳುವ ಹಾಗಿಲ್ಲ, ನೋಡಿ.
ನಿಮ್ಮ ವಿಶ್ವಾಸದ,
ದಿಲೀಪ್ ಲಂಬಾಡೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT