ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವರಿಸಲಾಗದ ಬಂಜೆತನ

ಅಂಕುರ 91
Last Updated 1 ಏಪ್ರಿಲ್ 2016, 19:35 IST
ಅಕ್ಷರ ಗಾತ್ರ

ಎಲ್ಲ ತಪಾಸಣೆಗಳಲ್ಲಿ ‘ನಾರ್ಮಲ್‌’ ಎಂಬ ಫಲಿತಾಂಶ ಬಂದರೂ ವಿವರಿಸಲಾಗದ ಕೆಲ ಕಾರಣಗಳಿಂದ ಬಂಜೆತನ ಎಂಬ ನಿರ್ಣಯಕ್ಕೆ ಬರಲಾಗುತ್ತದೆ. ಆದರೆ ಏನಿದು ವಿವರಿಸಲಾಗದ ಕಾರಣಗಳು? ಕೆಲವೊಮ್ಮೆ ದಂಪತಿಯಲ್ಲಿ ಫಲವಂತಿಕೆ ಇಲ್ಲವೆನ್ನುವುದೇ ಸುಳ್ಳಾಗಿರಬಹುದು. ಗರ್ಭ ಕಟ್ಟದಿರಲು ಸಕಾಲದಲ್ಲಿ ಸಂಭೋಗಿಸದೇ ಇರುವುದೂ ಕಾರಣವಾಗಿರುತ್ತದೆ. ಫಲಿತ ಕಾಲದ ಲೆಕ್ಕಾಚಾರದಲ್ಲಿ ತಪ್ಪಾಗಬಹುದು.

ಇಲ್ಲವೇ ಸಕಾಲದಲ್ಲಿ ಮಿಲನದಲ್ಲಿ ತೊಡಗಿಸಿಕೊಳ್ಳದೇ ಪ್ರತಿಸಲವೂ ವೈಫಲ್ಯದ ಭಾರ ಹೊರುತ್ತಿರಬಹುದು. ಇದಲ್ಲದೇ ಫಲವಂತಿಕೆಯ ಸಮಯದ ಬಗ್ಗೆ ಅಜ್ಞಾನ, ಅರಿವಿಲ್ಲದೇ ಇರುವುದು, ದೈಹಿಕ ಬದಲಾವಣೆಗಳನ್ನೇ ಫಲಿತ ಕಾಲವೆಂದು ತಪ್ಪಾಗಿ ನಿರ್ಧರಿಸಬಹುದು. ಇಲ್ಲವೇ ಕೆಲವೊಮ್ಮೆ ತಪಾಸಣೆಯ ಸಂದರ್ಭದಲ್ಲಿ ಮುಜುಗರದಿಂದ ಏನೂ ಹೇಳದೇ ಇರುವುದೂ ಇಂಥ ನಿರ್ಣಯಗಳಿಗೆ ಬರಲು ಕಾರಣವಾಗಬಹುದು. ಇವುಗಳಲ್ಲಿ ಹಲವು ಮಿಥ್ಯಗಳನ್ನಿಲ್ಲಿ ಪಟ್ಟಿ ಮಾಡಲಾಗಿದೆ.

ಕ್ಯಾಲೆಂಡರ್‌ ಪದ್ಧತಿ
ಗರ್ಭಧಾರಣೆಗೆ ಪ್ರಯತ್ನಿಸುವ ದಂಪತಿಗಳೆಲ್ಲ ಕ್ಯಾಲೆಂಡರ್‌ ಪದ್ಧತಿಯನ್ನು ಅನುಸರಿಸುತ್ತಾರೆ. ಕ್ಯಾಲೆಂಡರ್‌ ಪದ್ಧತಿಯೆಂದರೆ ಅಂಡಾಣು ಬಿಡುಗಡೆಯ ಸರಾಸರಿ ದಿನವನ್ನು ಸಂಭವನೀಯ ರೀತಿಯಲ್ಲಿ ಲೆಕ್ಕಾಚಾರ ಮಾಡಿ ಆ ಸಮಯದಲ್ಲಿಯೇ ಮಿಲನದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದನ್ನು ವೈಜ್ಞಾನಿಕ ಅಥವಾ ಅವೈಜ್ಞಾನಿಕ ಎಂಬ ಜಿಜ್ಞಾಸೆ ಬೇಡ. ಅದು ಸರಿ ಇರಬಹುದು. ಆದರೆ ಪ್ರತಿಯೊಬ್ಬರದ್ದೂ ಋತುಚಕ್ರದ 14ನೇ ದಿನವೇ ಅಂಡಾಣು ಬಿಡುಗಡೆಯಾಗುವುದು ಎಂಬ ಯೋಚನೆ ತಪ್ಪು.

ಒಂದು ವೇಳೆ ಋತುಚಕ್ರ ಅನಿಯಮಿತವಾಗಿದ್ದಲ್ಲಿ ಈ ದಿನವನ್ನು ಅಂದಾಜಿಸುವುದು ಇನ್ನೂ ಕಷ್ಟವಾಗುತ್ತದೆ. ಕೆಲವರಿಗೆ ಅತಿ ಬೇಗ ಎಂದರೆ ಅವರ ಋತುಚಕ್ರದ 8ನೆಯ ದಿನವೇ ಅಂಡಾಣು ಬಿಡುಗಡೆಯಾಗಬಹುದು. ಇನ್ನೂ ಕೆಲವರಿಗೆ 12 ಅಥವಾ 14, ಕೆಲವರಿಗೆ 22ನೆಯ ದಿನವೂ ಆಗಬಹುದು. ಅದು ಅವರ ಋತುಚಕ್ರ ಎಷ್ಟು ದಿನಗಳಿಗೆ ಒಮ್ಮೆ ಬರುತ್ತದೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಸರಾಸರಿ ಪದ್ಧತಿಯಲ್ಲಿ ಕೆಲವೊಮ್ಮೆ ಸಕಾಲಿಕವಾಗಿ ಅಂಡಾಣು ಮತ್ತು ವೀರ್ಯಾಣುವಿನ ಸಂಯೋಗವಾಗುವುದಿಲ್ಲ.

ಅಂಡಾಣು ಬಿಡುಗಡೆ ಊಹಿಸುವ ಕಿಟ್‌
ಕೆಲವರು ಅಂಡಾಣು ಬಿಡುಗಡೆ ಪತ್ತೆ ಮಾಡುವ ಕಿಟ್‌ ಬಳಸುತ್ತಾರೆ. ಅವನ್ನು ಓಪಿಕೆ ಎಂದು ಕರೆಯುತ್ತಾರೆ. ಅಂಡಾಣು ಬಿಡುಗಡೆಗೆ ಸಂಬಂಧಿಸಿದ ಎಲ್‌ಎಚ್‌ ಹಾರ್ಮೋನನ್ನು ಪತ್ತೆ ಮಾಡುವ ಸಾಧನ ಅದು. ಓಪಿಕೆಗಳು ಫಲವಂತಿಕೆಯ ದಿನಗಳನ್ನು ಪತ್ತೆ ಮಾಡುವ ಸಹಾಯಕ ಸಾಧನಗಳಾಗಿವೆ ಎನ್ನುವುದೇನೋ ನಿಜ. ಆದರೆ ಹಲವಾರು ಕಾರಣಗಳಿಂದಾಗಿ ಇವು ದಾರಿ ತಪ್ಪಿಸಲೂಬಹುದು. ಓಪಿಕೆ ಸಾಧನಗಳು ಎಲ್‌ಎಚ್‌ ಸ್ರವಿಸುವಿಕೆಯನ್ನು 24 ಗಂಟೆಗಳ ಮೊದಲು ಪತ್ತೆ ಹಚ್ಚಬಲ್ಲವು.

ಆದರೆ ಅಂಡಾಣು ಬಿಡುಗಡೆಯ 16ರಿಂದ 48 ಗಂಟೆಗಳಲ್ಲಿ ಎಲ್‌ಎಚ್ ಹಾರ್ಮೋನ್‌ ಸ್ರವಿಸುವಿಕೆ ಹೆಚ್ಚಾಗಿರುತ್ತದೆ. ಅಂಡಾಣುವಿನ ಆಯಸ್ಸು ಮತ್ತು ಫಲವಂತಿಕೆಯನ್ನು ಗಮನಿಸುವುದಾದಲ್ಲಿ ಅಂಡಾಣು ಬಿಡುಗಡೆಯ ಹಿಂದಿನ ದಿನ ಹಾಗೂ ಬಿಡುಗಡೆಯ ದಿನ ಮಾತ್ರ ಮಿಲನಕ್ಕೆ ಸೂಕ್ತವಾಗಿರುತ್ತದೆ. ಈ ನಿಟ್ಟಿನಲ್ಲಿ ಓಪಿಕೆ ಲೆಕ್ಕಾಚಾರ ತಪ್ಪಾಗಬಹುದು. ಅಂಡಾಣುವಿನ ಬಿಡುಗಡೆಯ ನಿರ್ದಿಷ್ಟ ಕಾಲವನ್ನು ಅಂದಾಜಿಸುವುದು ಕಷ್ಟವಾಗಿದೆ. ಕೆಲವೊಮ್ಮೆ ನಿಮ್ಮ ಓಪಿಕೆ ಸೂಚಿಸುವ ದಿನ ಅಂಡಾಣು ಬಿಡುಗಡೆ ಆಗಿರುತ್ತದೆ. ಈ ನಿಟ್ಟಿನಲ್ಲಿ ಖಚಿತವಾಗಿ ಹೇಳುವುದು ಅಸಾಧ್ಯವೆಂದೇ ಹೇಳಬಹುದು.

ಇನ್ನು ನಿಮ್ಮ ವಯಸ್ಸು 30ಕ್ಕಿಂತಲೂ ಹೆಚ್ಚಾಗಿದ್ದಲ್ಲಿ ಎಲ್‌ಎಚ್‌  ಸ್ರವಿಸುವಿಕೆ ಸಾಮಾನ್ಯವಾಗಿ ಹೆಚ್ಚಾಗಿಯೇ ಇರುತ್ತದೆ. ಓಪಿಕೆ ಮಾರ್ಕ್‌ ಮಾಡಿರುವಷ್ಟು ಸದಾ ಸ್ರಾವವಾಗುತ್ತಲಿರುತ್ತದೆ. ಇದರಿಂದಾಗಿಯೂ ಓಪಿಕೆಯಿಂದ ಮೋಸ ಹೋಗಬಹುದು. ಕೆಲವೊಮ್ಮೆ ಅಂಡಾಣು ಬಿಡುಗಡೆಯ ನಂತರ ಸ್ರವಿಸುವಿಕೆ ಹೆಚ್ಚಾಗುತ್ತದೆ. ಇನ್ನೂ ಕೆಲವೊಮ್ಮೆ ಬಿಡುಗಡೆಯ ಮೊದಲೇ ಹೆಚ್ಚಾಗಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಇನ್ನೊಂದು ಸಾಧ್ಯತೆ ಇದೆ. ಅದೆಂದರೆ ಕೆಲವು ಹೆಣ್ಣುಮಕ್ಕಳಲ್ಲಿ ಎಲ್‌ಎಚ್‌ ಸ್ರವಿಸುವಿಕೆ ಅತಿಕಡಿಮೆ ಮಟ್ಟದಲ್ಲಿರುತ್ತದೆ. ಓಪಿಕೆ ಅದನ್ನು ಗೊತ್ತು ಮಾಡಲಾಗದು. ಓಪಿಕೆಗಳನ್ನೂ ಅವಲಂಬಿಸುವುದು ತರವಲ್ಲ.

ಕ್ಲೊಮೊಫಿನ್‌ ಸಿಟ್ರೇಟ್‌ ಹೆಚ್ಚುವರಿ ಸೇವನೆ
ಸಾಮಾನ್ಯವಾಗಿ ಫಲವಂತಿಕೆಯ ಚಿಕಿತ್ಸೆ ಆರಂಭವಾದಾಗ ಕ್ಲೊಮೊಫಿನ್‌ ಸಿಟ್ರೇಟ್‌ ಸೇವಿಸಲು ಸೂಚಿಸಲಾಗುತ್ತದೆ. ಈ ಔಷಧಿಯಿಂದ ಅಂಡಾಣುಗಳ ಉತ್ಪತ್ತಿಯನ್ನು ಪ್ರಚೋದಿಸುತ್ತದೆ. ಆದರೆ ಈ ಔಷಧಿಗೆ ಕೆಲವು ಉಪಪರಿಣಾಮಗಳೂ ಇವೆ. ಅಂಡಾಣುವಿನ ಉತ್ಪತ್ತಿ ಹೆಚ್ಚಾಗಬಹುದು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ಯೋನಿದ್ರವ ಶುಷ್ಕವಾಗುತ್ತದೆ. ಇದರಿಂದ ವೀರ್ಯಾಣುವಿನ ಸುಲಭ ಚಲನೆಗೆ ಅಡೆತಡೆ ಉಂಟಾಗುತ್ತದೆ. ಅಂಡಾಣುವನ್ನು ವೀರ್ಯಾಣು ತಲುಪುವಲ್ಲಿ ಕಷ್ಟವಾಗುತ್ತದೆ.

ಹೆಚ್ಚಾಗಿ ಅಂಡಾಣುವಿನ ಬಿಡುಗಡೆ ಸಮರ್ಪಕವಾಗಿದೆಯೇ ಇಲ್ಲವೇ ಎಂಬುದನ್ನು ಅರಿಯುವ ಮುನ್ನವೇ ಕೆಲವೊಮ್ಮೆ ಈ ಔಷಧಿಯನ್ನು ಸೇವಿಸಲಾರಂಭಿಸುತ್ತಾರೆ. ವೈದ್ಯರ ಸೂಚನೆಯ ಮೇರೆಗೆ ಸೇವಿಸಿದರೂ ಕೆಲವೊಮ್ಮೆ ಅದು ತನ್ನ ಉಪಪರಿಣಾಮವನ್ನು ತೋರುತ್ತದೆ. ಅತಿ ದುಬಾರಿಯಾದ ಈ ಔಷಧಿಯೂ ಗರ್ಭಕಟ್ಟುವುದರಲ್ಲಿ ಕೆಲವೊಮ್ಮೆ ಅಡೆತಡೆಯನ್ನೇ ತಂದೊಡ್ಡುತ್ತದೆ. ಹಾಗಾದರೆ ಎರಡನೆಯ ಮಗುವಿಗೆ ಹಂಬಲಿಸುವ ತಾಯಂದಿರು ಏನು ಮಾಡಬೇಕು? ಮುಂದಿನ ವಾರ ಚರ್ಚಿಸುವ.

ಮಾಹಿತಿಗೆ ಸಂಪರ್ಕಿಸಿ: 18002084444.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT