ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದದ ಸುಳಿಯಲ್ಲಿ ಸ್ಮಾರಕಗಳು

Last Updated 15 ನವೆಂಬರ್ 2014, 19:30 IST
ಅಕ್ಷರ ಗಾತ್ರ

ರೈತರ ಮೇಲೆ ವಿಧಿಸುತ್ತಿದ್ದ ಭಾರಿ ತೆರಿಗೆ ವಿರೋಧಿಸಿ ಮಹಾತ್ಮ ಗಾಂಧೀಜಿ 1917ರಲ್ಲಿ ಬಿಹಾರದ ಚಂಪಾರಣ್‌ನಲ್ಲಿ ಮೊದಲ ಸತ್ಯಾಗ್ರಹ ನಡೆಸಿದರು. ಹಾಗಾಗಿ, ರಾಷ್ಟ್ರೀಯವಾದಿ ಚಳವಳಿಯ ಇತಿಹಾಸದಲ್ಲಿ ಈ ಜಿಲ್ಲೆಗೆ ಮಹತ್ವದ ಸ್ಥಾನ ಇದೆ.

20ನೇ ಶತಮಾನದ ಪ್ರಮುಖ ಬರಹಗಾರರಲ್ಲಿ ಒಬ್ಬರಾದ ಜಾರ್ಜ್ ಆರ್ವೆಲ್ ಹುಟ್ಟಿದ ಊರು ಕೂಡ ಇದೇ. ‘1984’, ‘ಅನಿಮಲ್ ಫಾರ್ಮ್’ನಂಥ ಕೃತಿಗಳನ್ನು ಬರೆದ ಆರ್ವೆಲ್ ಹುಟ್ಟಿದ್ದು 1903ರ ಜೂನ್ 25ರಂದು, ಚಂಪಾರಣ್ ಜಿಲ್ಲೆಯ ಕೇಂದ್ರ ಮೋತಿಹಾರಿಯಲ್ಲಿ. ಅವನ ಆಗಿನ ಹೆಸರು ಎರಿಕ್ ಅರ್ಥರ್ ಬ್ಲೇರ್. ಅವನ ತಂದೆ ರಿಚರ್ಡ್ ಬ್ಲೇರ್ ಬ್ರಿಟಿಷ್ ಸರ್ಕಾರದಲ್ಲಿ ಕಂದಾಯ ಅಧಿಕಾರಿಯಾಗಿದ್ದರು.
ಚಂಪಾರಣ್ ಇತಿಹಾಸದ ಪುಟ ಸೇರಿದ ಒಂದು ಶತಮಾನದ ನಂತರ ಆರ್ವೆಲ್ ಮತ್ತು ಗಾಂಧೀಜಿ ಬೆಂಬಲಿಗರು ಪರಸ್ಪರ ಹಣಾಹಣಿಗೆ ನಿಂತಿದ್ದಾರೆ. ಗಾಂಧೀಜಿ ನೆನಪಿನಲ್ಲಿ ಅಲ್ಲಿ ಒಂದು ಉದ್ಯಾನ ನಿರ್ಮಿಸಬೇಕು ಎಂದು ಒಂದು ಗುಂಪು ಹೇಳುತ್ತಿದೆ. ಇನ್ನೊಂದು ಗುಂಪು, ಆರ್ವೆಲ್ ಜನಿಸಿದ ಮನೆಯನ್ನು ನವೀಕರಿಸಿ ಅಲ್ಲಿ ಒಂದು ಉದ್ಯಾನ ನಿರ್ಮಿಸಬೇಕು ಎನ್ನುತ್ತಿದೆ.

ಗಾಂಧೀವಾದಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಸದಸ್ಯರು, ಆರ್ವೆಲ್ ಮನೆ ನವೀಕರಿಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ. ಏಕೆಂದರೆ, ರಾಷ್ಟ್ರಪಿತನ ನೆನಪಿನಲ್ಲಿ ಸತ್ಯಾಗ್ರಹ ಉದ್ಯಾನ ನಿರ್ಮಿಸಲು ಅವರಿಗೆ ಜಮೀನು ಕೊಡಲು ಸರ್ಕಾರ ನಿರಾಕರಿಸಿದೆ.

ಸತ್ಯಾಗ್ರಹ ಉದ್ಯಾನ ನಿರ್ಮಿಸಲು ಬಿಹಾರ ಸರ್ಕಾರ ಆರಂಭದಲ್ಲಿ ಸಮ್ಮತಿಸಿತ್ತು. ಆದರೆ ಹಾಗೆ ನಿರ್ಮಾಣ ಆಗುವ ಉದ್ಯಾನವು ಆರ್ವೆಲ್ ಜನಿಸಿದ ಮನೆಗೆ ಸೇರಿದ ಜಮೀನನ್ನೂ ಕಬಳಿಸುತ್ತದೆ ಎಂಬುದು ಗೊತ್ತಾದ ನಂತರ ತನ್ನ ಯೋಜನೆ ಕೈಬಿಟ್ಟಿತು. ಆರ್ವೆಲ್ ಹುಟ್ಟಿದ ನಿವಾಸವನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಲಾಗಿದೆ.

‘ಇಲ್ಲಿನ ವ್ಯಂಗ್ಯ ನೋಡಿ. ಗಾಂಧೀಜಿ ಬ್ರಿಟಿಷರ ವಿರುದ್ಧ ಹೋರಾಡಿದರು. ಆದರೆ ಇಲ್ಲಿರುವ ಸರ್ಕಾರ ಸತ್ಯಾಗ್ರಹ ಉದ್ಯಾನ ನಿರ್ಮಾಣದ ಕೆಲಸವನ್ನು ನಿಲ್ಲಿಸಿದೆ. ಭಾರತಕ್ಕೆ ಯಾವುದೇ ಕೊಡುಗೆ ನೀಡದ ಬ್ರಿಟಿಷ್ ವ್ಯಕ್ತಿಯೊಬ್ಬರನ್ನು ವೈಭವೀಕರಿಸಲು ಸರ್ಕಾರ ಮುಂದಾಗಿದೆ’ ಎಂದು ಅಖಿಲ ಭಾರತ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳ ಸದಸ್ಯ ರಾಜಕಿಶೋರ್ ಶರ್ಮ ಹೇಳುತ್ತಾರೆ.

‘ಆರ್ವೆಲ್ ಉದ್ಯಾನದ ಕೆಲಸಗಳನ್ನು ಸ್ಥಗಿತಗೊಳಿಸಬೇಕು, ಗಾಂಧೀಜಿಗೆ ತಾರತಮ್ಯ ಎಸಗುವುದನ್ನು ನಿಲ್ಲಿಸಬೇಕು ಎಂದು ನಾವು ಸರ್ಕಾರವನ್ನು ಕೋರಿದ್ದೇವೆ’ ಎಂದು ಅವರು ಹೇಳುತ್ತಾರೆ.

ಆದರೆ ಗಾಂಧಿವಾದಿಗಳ ಈ ವಿರೋಧ ಗಾಂಧೀಜಿಯವರೇ ವಿರೋಧಿಸಿದ್ದ ಮೂಲಭೂತವಾದ ಮತ್ತು ಜನಾಂಗೀಯ ದ್ವೇಷಕ್ಕೆ ಸಮ ಎಂದು ಆರ್ವೆಲ್ ಬೆಂಬಲಿಗರು ಹೇಳುತ್ತಾರೆ. ‘ಈ ವಿವಾದದಿಂದ ಚಂಪಾರಣ್‌ಗೆ ಕೆಟ್ಟ ಹೆಸರು ಬಂದಿದೆ. ಆರ್ವೆಲ್ ಉದ್ಯಾನ ಅಭಿವೃದ್ಧಿಪಡಿಸುವ ಕೆಲಸ ವಿರೋಧಿಸುತ್ತಿರುವವರಿಗೆ ಗಾಂಧೀಜಿ ಸರಿಯಾಗಿ ಅರ್ಥವಾಗಿದ್ದಾರಾ? ಸಾಹಿತ್ಯ ಕ್ಷೇತ್ರಕ್ಕೆ ಆರ್ವೆಲ್ ನೀಡಿದ ಕೊಡುಗೆ ಎಲ್ಲರಿಗೂ ತಿಳಿದಿದೆ. ಉದ್ಯಾನ ಅಭಿವೃದ್ಧಿ ಕಾರ್ಯ ವಿರೋಧಿಸುತ್ತಿರುವವರಿಗೆ ಗಾಂಧೀಜಿ ಬಗ್ಗೆ ಸರಿಯಾದ ತಿಳಿವಳಿಕೆ ಇದ್ದಿದ್ದರೆ, ಇಂಥ ಕೆಲಸ ಮಾಡುತ್ತಿರಲಿಲ್ಲ’ ಎಂದು ಆರ್ವೆಲ್ ಬೆಂಬಲಿಗರು ಹೇಳುತ್ತಾರೆ.

ಗಾಂಧೀಜಿ ಮತ್ತು ಆರ್ವೆಲ್ ಅನ್ಯಾಯದ ವಿರುದ್ಧ ಹೋರಾಡಿದ್ದರು. ಮೋತಿಹಾರಿಯು ಆರ್ವೆಲ್‌ನಂಥ ಬಹುದೊಡ್ಡ ಲೇಖಕನ ಹುಟ್ಟೂರು ಮತ್ತು ಗಾಂಧೀಜಿ ಸತ್ಯಾಗ್ರಹ ಆರಂಭಿಸಿದ ಸ್ಥಳ ಎಂಬ ಬಗ್ಗೆ ನಮಗೆಲ್ಲ ಹೆಮ್ಮೆಯಿದೆ ಎಂದು ಸಾಮಾಜಿಕ ಕಾರ್ಯಕರ್ತ ಆರ್.ಎನ್. ಸಿನ್ಹಾ ಹೇಳುತ್ತಾರೆ.

ಈ ಮಾತಿಗೆ ದನಿಗೂಡಿಸುವ ವಕೀಲ ವಿದ್ಯಾನಂದ ಗಿರಿ, ‘ಆರ್ವೆಲ್ ಬರೆದ ‘ಡೌನ್ ಅಂಡ್ ಔಟ್’, ‘ಬರ್ಮೀಸ್ ಡೇಸ್’ ಪುಸ್ತಕಗಳಲ್ಲಿ ದಮನಿತರ ಹಕ್ಕುಗಳ ಪರ ಧ್ವನಿ ಇದೆ. ಗಾಂಧೀಜಿ ದಲಿತರ ಪರ ನಡೆಸಿದ ಹೋರಾಟ ಮತ್ತು ಆರ್ವೆಲ್ ಬರೆದ ಈ ಪುಸ್ತಕಗಳ ಆಶಯದಲ್ಲಿ ಸಾಮ್ಯತೆ ಇದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಇತಿಹಾಸದ ಕಿಂಚಿತ್ ಅರಿವೂ ಇಲ್ಲದ ಕೆಲವು ಸ್ಥಾಪಿತ ಹಿತಾಸಕ್ತಿ ಗಳು ಇಬ್ಬರು ಮಹಾನ್ ವ್ಯಕ್ತಿಗಳನ್ನು ಅನಗತ್ಯ ವಿವಾ ದಕ್ಕೆ ಎಳೆದು ತಂದಿವೆ ಎಂದು ಗಿರಿ ಕಿಡಿಕಾರಿದರು.

ಜೀರ್ಣಾವಸ್ಥೆಯಲ್ಲಿ ಇದ್ದ ಆರ್ವೆಲ್ ಜನಿಸಿದ ಮನೆಯನ್ನು ನವೀಕರಿಸಲು ಬಿಹಾರದ ಕಲೆ ಮತ್ತು ಸಂಸ್ಕೃತಿ ಇಲಾಖೆ ಹಣ ಬಿಡುಗಡೆ ಮಾಡಿದ ಬಳಿಕ ಈ ವಿವಾದ ಶುರುವಾಯಿತು. ನವೀಕರಣ ಕಾರ್ಯಕ್ಕೆ  59 ಲಕ್ಷ ರೂಪಾಯಿ ಬಿಡುಗಡೆ ಆಗಿದೆ, ಆಗಸ್ಟ್‌ನಲ್ಲಿ ಕೆಲಸ ಆರಂಭವಾಗಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಎರಡು ಗುಂಪುಗಳು ವಿವಾದದಲ್ಲಿ ಮುಳುಗಿದ್ದ ಸಮಯದಲ್ಲಿ ಮೋತಿಹಾರಿಯಲ್ಲಿ ಒಂದು ಸಭೆ ನಡೆದಿದೆ. ಇದರಲ್ಲಿ ಮಾತನಾಡಿದ ಆರ್ವೆಲ್ ಸಂಸ್ಮರಣ ಸಮಿತಿ ಅಧ್ಯಕ್ಷ ಡಿ. ಮುಖರ್ಜಿ ಆರ್ವೆಲ್ ಸ್ಮಾರಕ ನಿರ್ಮಾಣದಿಂದ ಊರಿಗೆ ಒಳ್ಳೆಯ ಹೆಸರು ಬರುತ್ತದೆ ಎಂದು ಸಭೆಯಲ್ಲಿ ಹೇಳಿದ್ದರು. ಗಾಂಧೀಜಿ ಮತ್ತು ಆರ್ವೆಲ್‌ಗೆ ಸಮಾನ ಗೌರವ ಇದೆ. ಹಾಗಾಗಿ ಎರಡೂ ಪ್ರದೇಶಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಅಲ್ಲಿನ ರೋಟರಿ ಅಧ್ಯಕ್ಷ ಬಿ. ಪ್ರಸಾದ್ ಹೇಳುತ್ತಾರೆ.

‘ಗಾಂಧೀಜಿ ಜಾಗತಿಕ ಮಾನ್ಯತೆ ಪಡೆದ ತತ್ವಜ್ಞಾನಿ. ಸತ್ಯ ಮತ್ತು ಅಹಿಂಸೆ ಕುರಿತು ಅವರ ನಿಲುವು ವಿಶ್ವದೆಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಫ್ಯಾಸಿಸಂ, ಸಾಮ್ರಾಜ್ಯಶಾಹಿ ಹಾಗೂ ಸರ್ವಾಧಿಕಾರದ ವಿರುದ್ಧ ಆರ್ವೆಲ್ ಆಡಿದ ಮಾತುಗಳನ್ನು ಸಾಹಿತ್ಯ ಲೋಕ ಕೊಂಡಾಡಿದೆ. ಆದರೆ ಕೆಲವು ಊಳಿಗಮಾನ್ಯ ಶಕ್ತಿಗಳು ಮೋತಿಹಾರಿಗೆ ಕೆಟ್ಟ ಹೆಸರು ತರಲು ಹೊರಟಿವೆ’ ಎಂದು ಸಮಾಜ ವಿಜ್ಞಾನಿ ರಿಪುಸೂದನ ತಿವಾರಿ ಹೇಳಿದರು.

ಆರ್ವೆಲ್‌ನನ್ನು ಆತನ ತಾಯಿ ಇಡಾ 1904ರಲ್ಲಿ ಇಂಗ್ಲೆಂಡ್‌ಗೆ ಕರೆದೊಯ್ದಳು. ಎರಿಕ್ ಬ್ಲೇರ್ ಎಂಬ ಹೆಸರು ಹೊಂದಿದ್ದ ವ್ಯಕ್ತಿ ಜಾರ್ಜ್ ಆರ್ವೆಲ್ ಎಂಬ ಕಾವ್ಯನಾಮ ಇಟ್ಟುಕೊಂಡಿದ್ದು 1933ರಲ್ಲಿ. ಆರ್ವೆಲ್ ಹಲವು ವರ್ಷಗಳ ಕಾಲ ಕಡು ಬಡತನದಲ್ಲೇ ಜೀವನ ಸಾಗಿಸಿದ.

ಕೆಲವೊಮ್ಮೆ  ವಾಸಕ್ಕೆ ಮನೆಯೂ ಇರುತ್ತಿರಲಿಲ್ಲ. ನಂತರ ಶಾಲಾ ಶಿಕ್ಷಕನ ಕೆಲಸ ಹುಡುಕಿಕೊಂಡ ಆರ್ವೆಲ್ ಆರೋಗ್ಯ ಕೈಕೊಡುವವರೆಗೂ ಅದೇ ಕೆಲಸ ಮಾಡುತ್ತಿದ್ದ. ನಂತರ ಶಿಕ್ಷಕನ ಕೆಲಸ ತೊರೆದು ಹ್ಯಾಂಪ್‌ಸ್ಟೆಡ್‌ನಲ್ಲಿ ಹಳೆಯ ಪುಸ್ತಕಗಳನ್ನು ಮಾರುವ ಒಂದು ಅಂಗಡಿಯಲ್ಲಿ ಸಹಾಯಕನಾಗಿ ಸೇರಿಕೊಂಡ. 1944ರಲ್ಲಿ ‘ಅನಿಮಲ್ ಫಾರ್ಮ್’ ಕೃತಿ ಬರೆದ. ಅದು ಮಾರನೆಯ ವರ್ಷ ಪ್ರಕಟವಾಯಿತು, ಯಶಸ್ಸನ್ನೂ ಕಂಡಿತು. ಆ ಪುಸ್ತಕದ ಮಾರಾಟದಿಂದ ದೊರೆತ ಹಣದಿಂದ ಆತ ಬದುಕಿನಲ್ಲಿ ತುಸು ನೆಮ್ಮದಿ ಪಡೆದ. ಆರ್ವೆಲ್ ಅಷ್ಟು ನೆಮ್ಮದಿಯ ಜೀವನ ಕಂಡಿದ್ದು ಹರೆಯದಲ್ಲಿ ಅದೇ ಮೊದಲು.

1945ರ ನಂತರ ಆರ್ವೆಲ್, ‘ಅಬ್ಸರ್ವರ್’ ಪತ್ರಿಕೆಗೆ ಯುದ್ಧ ವರದಿಗಾರನಾಗಿ ಕೆಲಸ ಮಾಡಿದ. ನಂತರ ‘ಮ್ಯಾಂಚೆಸ್ಟರ್ ಈವನಿಂಗ್ ನ್ಯೂಸ್’ ಪತ್ರಿಕೆಗೆ ನಿಯಮಿತವಾಗಿ ಬರೆಯಲು ಆರಂಭಿಸಿದ. 1949 ರಲ್ಲಿ ಅವನ ಜನಪ್ರಿಯ ಕೃತಿ ‘1984’ ಪ್ರಕಟವಾಯಿತು. ಈ ಕಾದಂಬರಿಯನ್ನು ಆರ್ವೆಲ್ ಸ್ಕಾಟ್‌ಲ್ಯಾಂಡ್‌ನಲ್ಲಿ ಇದ್ದಾಗ ಬರೆದಿದ್ದ. 46ನೇ ವಯಸ್ಸಿನಲ್ಲಿ ಕ್ಷಯ ರೋಗ ಬಂದು ಆರ್ವೆಲ್ ತೀರಿಕೊಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT