ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದ ಸೃಷ್ಟಿಸಿದ ರಾಜನಾಥ್ ಹೇಳಿಕೆ

‘800 ವರ್ಷಗಳ ನಂತರ ಹಿಂದೂ ನಾಯಕ’
Last Updated 30 ನವೆಂಬರ್ 2015, 19:59 IST
ಅಕ್ಷರ ಗಾತ್ರ

ನವದೆಹಲಿ: ಇದುವರೆಗೆ ಹೊರಗಡೆಗೆ ಸೀಮಿತವಾಗಿದ್ದ ಅಸಹಿಷ್ಣುತೆ ಕುರಿತ ಬಿರುಸಿನ ಚರ್ಚೆಗಳು ಸೋಮವಾರ ಲೋಕಸಭೆಗೂ ಕಾಲಿಟ್ಟಿತು, ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರ ಬಗ್ಗೆ ಸಿಪಿಎಂ ಸದಸ್ಯ ಮೊಹಮದ್‌ ಸಲೀಂ ಮಾಡಿದ ಆರೋಪ ತೀವ್ರ ಕೋಲಾಹಲ ಸೃಷ್ಟಿಸಿತು. ಇದರಿಂದಾಗಿ ನಾಲ್ಕು ಸಲ ಸದನ ಕಲಾಪವನ್ನು ಮುಂದೂಡಲಾಯಿತು.

ಗೃಹ ಸಚಿವರ ವಿರುದ್ಧ ಆರೋಪ ಮಾಡಿದ ಸಲೀಂ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು. ಸಿಪಿಎಂ ಸದಸ್ಯರು ಬೇಡಿಕೆಗೆ ಕಿವಿಗೊಡಲಿಲ್ಲ. ಅಂತಿಮವಾಗಿ ಸ್ಪೀಕರ್‌ ಸುಮಿತ್ರಾ ಮಹಾಜನ್‌, ಆರೋಪವನ್ನು ದಾಖಲೆಯಿಂದ ತೆಗೆದು ಹಾಕಿ ರೂಲಿಂಗ್‌ ನೀಡಿದರು.

ಸದನ ಮಧ್ಯಾಹ್ನ 12 ಗಂಟೆಗೆ ಅಸಹಿಷ್ಣುತೆ ಕುರಿತು ಚರ್ಚೆ ಆರಂಭಿಸಿತು. ಮೊದಲಿಗೆ ಮಾತು ಆರಂಭಿಸಿದ ಸಲೀಂ, ‘ಮೋದಿ ಅವರು ಪ್ರಧಾನಿ ಆದ ಬಳಿಕ ರಾಜನಾಥ್‌ ಸಿಂಗ್‌ ಹಿಂದುತ್ವದ ಪರ ಹೇಳಿಕೆ ನೀಡಿದ್ದಾರೆ’ ಎಂಬುದಾಗಿ ನಿಯತಕಾಲಿಕವೊಂದು ಲೇಖನ ಪ್ರಕಟಿಸಿದೆ ಎಂದು ಆರೋಪಿಸಿದರು. ಆ ನಿಯತಕಾಲಿಕದಲ್ಲಿನ ಉಲ್ಲೇಖವನ್ನೂ ಓದಿದರು.

ಸಲೀಂ ಅವರು ಆರೋಪ ಮಾಡಿದ ಸಮಯದಲ್ಲಿ ಸದನದಲ್ಲಿ ಹಾಜರಿದ್ದ ರಾಜನಾಥ್‌, ‘ನಾನು ಎಲ್ಲಿ, ಯಾವಾಗ ಆರೋಪ ಮಾಡಿದ್ದೇನೆಂದು ಸ್ಪಷ್ಟಪಡಿಸಬೇಕು. ಇಲ್ಲವಾದರೆ ಕ್ಷಮೆ ಯಾಚಿಸಬೇಕು. ಈ ರೀತಿ ಹೇಳಿಕೆ ನೀಡುವವರಿಗೆ ಗೃಹ ಸಚಿವರಾಗಿ ಮುಂದುವರಿಯುವ ನೈತಿಕ ಹಕ್ಕು ಇರುವುದಿಲ್ಲ. ನಾನು ಮಾತನಾಡುವಾಗ ಪ್ರತಿ ಶಬ್ದವನ್ನು ಅಳೆದು ತೂಗುತ್ತೇನೆ’ ಎಂದರು.

‘ನನ್ನನು ಚೆನ್ನಾಗಿ ಬಲ್ಲವರು ಇಂಥ ಆರೋಪ ಮಾಡುವುದಿಲ್ಲ. ಸಲೀಂ ಮಾಡಿರುವ ಆರೋಪದಿಂದ ಮನಸಿಗೆ ನೋವಾಗಿದೆ. ನನ್ನ ಸಂಸದೀಯ ಜೀವನದಲ್ಲಿ ಯಾವಾಗಲೂ ಇಷ್ಟೊಂದು ಬೇಸರವಾಗಿರಲಿಲ್ಲ’ ಎಂದು ರಾಜನಾಥ್‌ ನುಡಿದರು. ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಂತರಿಕ ಸಭೆಯಲ್ಲಿ ಗೃಹ ಸಚಿವರು ಹೇಳಿಕೆ ನೀಡಿದ್ದಾರೆ’ ಎಂದು ಸಲೀಂ ಹೇಳಿದರು. ‘ಆ ಸಭೆಯಲ್ಲಿ ನೀವು ಇದ್ದಿರಾ?’ ಎಂದು ಬಿಜೆಪಿ ಸದಸ್ಯರು ಕೆಣಕಿದರು. ‘ಅಷ್ಟೊಂದು ನತದೃಷ್ಟ ವ್ಯಕ್ತಿ ನಾನಲ್ಲ’ ಎಂದು ಸಿಪಿಎಂ ಸದಸ್ಯರು ತಿರುಗೇಟು ಕೊಟ್ಟರು. ಗೃಹ ಸಚಿವರ ವಿರುದ್ಧ ಆರೋಪ ಮಾಡಿದ್ದಕ್ಕಾಗಿ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು.

ರಾಜ್‌ನಾಥ್ ಹೇಳಿದ್ದೇನು?
ಕಳೆದ ವರ್ಷ ಬಿಜೆಪಿ ಭಾರಿ ಬಹುಮತ ಪಡೆದು ಮೋದಿ ಅವರು ಪ್ರಧಾನಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ, ‘800 ವರ್ಷಗಳ ನಂತರ ಭಾರತಕ್ಕೆ ಹಿಂದೂ ನಾಯಕರೊಬ್ಬರು ಸಿಕ್ಕಿದ್ದಾರೆ’ ಎಂದು ರಾಜನಾಥ್‌ ಹೇಳಿದ್ದರು ಎನ್ನಲಾಗಿದೆ. ಅಸಹಿಷ್ಣುತೆ ವಿಚಾರ ಲೋಕಸಭೆಯಲ್ಲಿ ಸೋಮವಾರ ಚರ್ಚೆಗೆ ಬಂದಾಗ ಸಿಪಿಎಂನ ಮೊಹಮ್ಮದ್‌ ಸಲೀಂ ಈ ವಿಚಾರ ಪ್ರಸ್ತಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT