ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಕೋರ್ಟ್‌ಗಳಲ್ಲಿ ಹೆಚ್ಚು ಪ್ರಕರಣಗಳನ್ನು ಬಾಕಿ ಉಳಿಸಿಕೊಂಡಿರುವ ರಾಜ್ಯಗಳು

Last Updated 29 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಕಾಲಿಂಗ್‌ ಪದ್ಧತಿ ಹೋಗಲಿ
ಕೆಳಹಂತದ ನ್ಯಾಯಾಲಯಗಳಲ್ಲಿ ಹಿಯರಿಂಗ್ ದಿನ ಪ್ರಕರಣದ ಸರತಿ  ಬಂದಾಕ್ಷಣ ಕಕ್ಷಿದಾರರನ್ನು ಕೂಗಿ ಅವರನ್ನು ನ್ಯಾಯಾಧೀಶರ

ಮುಂದೆ ನಿಲ್ಲಿಸುವ ಪದ್ಧತಿ ಕೊನೆಯಾಗಬೇಕು. ನ್ಯಾಯಾಧೀಶರ ದಿನದ ಅರ್ಥಪೂರ್ಣ ಕೆಲಸವನ್ನೆಲ್ಲ ಇದೇ ನುಂಗಿ ಹಾಕುತ್ತಿದೆ. ನ್ಯಾಯಾಧೀಶರು ಕಾಲಿಂಗ್ ಪದ್ಧತಿ ಅನುಸರಿಸುತ್ತಿರುವುದರಿಂದ ಗುಮಾಸ್ತನೊಬ್ಬ ಮಾಡುವ ಕೆಲಸವನ್ನು ಮಾಡಿದಂತಾಗುತ್ತಿದೆ. ನ್ಯಾಯಾಧೀಶರು ಇಂದು ದಿನಕ್ಕೆ ಕೇವಲ 5 ತಾಸು ಕೆಲಸ ನಿರ್ವಹಿಸುತ್ತಾರೆ. ಇದು ಯಾತಕ್ಕೂ ಸಾಲದು. 

ಜೊತೆಗೆ ಸರ್ಕಾರಿ ರಜೆ ಬೇರೆ. ಇದರಿಂದಾಗಿ ಇಂದು ವಿಚಾರಣಾ ನ್ಯಾಯಾಲಯಗಳಲ್ಲಿ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇದೆ. ನ್ಯಾಯಾಧೀಶರು ಪ್ರತಿದಿನ ಬೆಳಿಗ್ಗೆ ಸೀಟಿಗೆ ಬಂದು ಕುಳಿತಾಕ್ಷಣ ‘ಕಾಲಿಂಗ್‌’ ಶುರುಮಾಡಿದರೆ ಬೆಳಗಿನ ಕಲಾಪದ ಬಹುತೇಕ ಸಮಯ ಅದರಲ್ಲೇ ಮುಗಿದು ಹೋಗುತ್ತದೆ.  ಮಧ್ಯಾಹ್ನ ಒಂದೆರಡು ಪ್ರಕರಣಗಳ ಸಾಕ್ಷಿ ವಿಚಾರಣೆ ನಡೆಸಿದರೆ ಅಲ್ಲಿಗೆ ಆ ದಿನದ ಸಮಯವೇ ಮುಗಿದು ಹೋದಂತೆ.

ನಾವು ಇನ್ನೂ 18–19ನೇ ಶತಮಾನದ ಊಳಿಗಮಾನ್ಯ ಪದ್ಧತಿಯ ವ್ಯವಸ್ಥೆಯಲ್ಲೇ ನ್ಯಾಯಾಂಗ ವ್ಯವಸ್ಥೆಯನ್ನು ಪೋಷಿಸುತ್ತಿದ್ದೇವೆ. ಅದನ್ನು ಪ್ರಗತಿಪರವಾಗಿ ಬದಲಿಸುವ ಚಿಂತನೆಯನ್ನೇ ನಡೆಸುತ್ತಿಲ್ಲ. ಏನೆಲ್ಲಾ ಬದಲಾವಣೆ ಆಗಬೇಕೋ ಅದನ್ನೆಲ್ಲ ಬರೆದಿಟ್ಟುಕೊಂಡಿದ್ದೇವೆ. ಆದರೆ ಪಾಲನೆಯಾಗುತ್ತಿಲ್ಲ. ಕ್ರಿಮಿನಲ್ ಪ್ರಕರಣಗಳನ್ನು ಲಂಬಿಸದೆ ಪ್ರಾಸಿಕ್ಯೂಷನ್‌ ಮತ್ತು ಆರೋಪಿ ಪರ ವಕೀಲರಿಗೆ ಇಂತಿಷ್ಟೇ ಸಮಯ ಎಂದು ನಿಗದಿಪಡಿಸಬೇಕು. ನಾವೆಲ್ಲಾ ಇಂಗ್ಲೆಂಡಿನ ವಸಾಹತು ಧೋರಣೆಯಲ್ಲಿ ನರಳುತ್ತಿದ್ದೇವೆ. ಇಂಗ್ಲೆಂಡ್‌ ಬದಲಾಗಿದ್ದರೂ ನಾವು ಬದಲಾಗಲು ತಯಾರಿಲ್ಲ. 
-ಬಿ.ಟಿ.ವೆಂಕಟೇಶ್‌, ರಾಜ್ಯದ ಮಾಜಿ ಪಬ್ಲಿಕ್‌ ಪ್ರಾಸಿಕ್ಯೂಟರ್‌

** *** **

ಕಠಿಣ ಪರೀಕ್ಷೆ ಲೇಸು
ಹೈಕೋರ್ಟ್‌ಗೆ ಬಡ್ತಿ ನೀಡುವ ಉದ್ದೇಶದಿಂದಲೇ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ನಡೆಸಲಾಗುವ ಪರೀಕ್ಷೆಗಳನ್ನು ಅತ್ಯಂತ ಕಠಿಣವಾಗಿ ನಡೆಸಲಾಗುತ್ತಿದೆ. ಇದು ಗುಣಮಟ್ಟದ ದೃಷ್ಟಿಯಿಂದ ಉಚಿತವೂ ಹೌದು. ಈ ಕುರಿತಂತೆ 1993ರಲ್ಲಿ ಕಾನೂನು ಆಯೋಗ ಸ್ಪಷ್ಟಪಡಿಸಿದೆ. ಜಿಲ್ಲಾ ನ್ಯಾಯಾಧೀಶರ ಸಂಖ್ಯೆಯಲ್ಲಿ ಇಂದು ಕೊರತೆಯೇನೂ ಇಲ್ಲ.ಸಾಕಷ್ಟು ಮಹತ್ವಪೂರ್ಣ ಬದಲಾವಣೆ ಮತ್ತು ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಅಧೀನ ನ್ಯಾಯಾಲಯಗಳ ಬಲವರ್ಧನೆ ಮಾಡಲಾಗುತ್ತಿದೆ. ಕೊಲಿಜಿಯಂ ವ್ಯವಸ್ಥೆ ಗಟ್ಟಿಯಾಗಿರಬೇಕಾದರೆ ಮತ್ತು ಸತ್ವಪೂರ್ಣ ನ್ಯಾಯಾಂಗ ವ್ಯವಸ್ಥೆ ಮುಂದುವರಿಯಬೇಕೆಂದರೆ ಜಿಲ್ಲಾ ನ್ಯಾಯಾಧೀಶರ ಪರೀಕ್ಷೆ ಕಠಿಣತಮವಾಗಿರುವುದೇ ಶ್ರೇಯಸ್ಕರ.
-ಕೃಷ್ಣ ಎಸ್‌. ದೀಕ್ಷಿತ್‌, ಸಹಾಯಕ ಸಾಲಿಸಿಟರ್ ಜನರಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT