ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಸಂಘಟನೆ ಪ್ರತಿಭಟನೆ: ಕರಾಳ ದಿನ ಆಚರಣೆ

Last Updated 25 ಜುಲೈ 2014, 8:55 IST
ಅಕ್ಷರ ಗಾತ್ರ

ಹೊಸಪೇಟೆ: ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಖಂಡಿಸಿ ವಿವಿಧ ಸಂಘಟನೆಗಳು ನಗರದಲ್ಲಿ ಗುರುವಾರ ‘ಕರಾಳ ದಿನ’ ಆಚರಿಸಿದವು.

ಅಂತರರಾಷ್ಟ್ರೀಯ ಮಾನವ ಹಕ್ಕು­ಗಳ ಸಂಸ್ಥೆಯ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷೆ ಕವಿತಾ ಈಶ್ವರಸಿಂಗ್‌ ನೇತೃತ್ವ­ದಲ್ಲಿ ಆಚರಿಸಲಾದ ಕರಾಳ ದಿನದ ಅಂಗವಾಗಿ ನಗರದ ಪ್ರಮುಖ ಬೀದಿ­ಗಳಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಲಾ­ಯಿತು. ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಯುವಕರು, ವಿದ್ಯಾರ್ಥಿ­ಗಳು, ಮಹಿಳೆ­ಯರು, ನಗರದ ನಾಗರಿಕರು ಕಪ್ಪುಪಟ್ಟಿ ಧರಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕವಿತಾ ಈಶ್ವರಸಿಂಗ್‌, ‘ಒಂದು ತಿಂಗಳಿಂದ ರಾಜ್ಯದಲ್ಲಿ ಮಹಿಳೆಯರ, ವಿದ್ಯಾರ್ಥಿನಿಯರ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಹಲವು ಪ್ರಕರಣಗಳು ದಾಖಲಾಗುತ್ತಿವೆ. ಇದರಿಂದ ರಾಜ್ಯದ ಜನತೆ ತಲೆ ತಗ್ಗಿಸುವಂತಾಗಿದೆ. ಇಷ್ಟೆಲ್ಲ ನಡೆದರೂ ಸರ್ಕಾರ ಮಾತ್ರ ಏನೂ ನಡೆದಿಲ್ಲವೆಂಬಂತೆ ಮೌನ ವಹಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಣ್ಣ ಸಣ್ಣ ಕೂಸುಗಳ ಮೇಲೆ, ಶಾಲಾ–ಕಾಲೇಜು ವಿದ್ಯಾರ್ಥಿಗಳ ಮೇಲೆ, ಮದುವೆಯಾದ ಮಹಿಳೆಯ ಮೇಲೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವೃದ್ಧೆಯರ ಮೇಲೂ ಅತ್ಯಾಚಾರ ನಡೆಯುತ್ತಿರುವುದು ನಾಚಿಗೇಡಿನ ಸಂಗತಿ. ಅತ್ಯಾಚಾರ­ದಂತಹ ಪ್ರಕರಣಗಳ ಕುರಿತು ರಾಜಕೀಯ ಮಾಡಬಾರದು. ಘಟನೆ­ಗಳನ್ನು ಪಕ್ಷಾತೀತವಾಗಿ ಖಂಡಿಸಬೇಕು. ಪ್ರಕರಣಗಳ ಕುರಿತು ವಸ್ತುನಿಷ್ಠ ವರದಿಗೆ ಮಾಧ್ಯಮಗಳು ಮುಂದಾಗಬೇಕು’ ಎಂದು ಒತ್ತಾಯಿಸಿದರು.

‘ಮಹಿಳಾ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಅತ್ಯಾಚಾರ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಪ್ರತ್ಯೇಕ ನ್ಯಾಯಾಲಯ ಆರಂಭಿಸಬೇಕು. ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಕಾನೂನು ತಿದ್ದುಪಡಿ ಮಾಡಬೇಕು. ಪ್ರಕರಣಗಳ ತಡೆಗೆ ಪೊಲೀಸ್‌ ಇಲಾಖೆಯನ್ನು ಸಜ್ಜುಗೊಳಿಸಬೇಕು’ ಎಂದು ಆಗ್ರಹಿಸಿದರು.

ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ, ನಗರಸಭೆ ಸದಸ್ಯ ಕೆ.ಶ್ರೀಧರ ನಾಯ್ಡು ಮಾತನಾಡಿ, ‘ಮಹಿಳೆಯರು  ಆತಂಕಕ್ಕೆ ಒಳಗಾಗ­ಬಾರದು. ತಮ್ಮ ಮೇಲೆ ನಡೆಯುವ ದೌರ್ಜನ್ಯಗಳನ್ನು ನಿರಾತಂಕವಾಗಿ ಎದುರಿಸಬೇಕು. ತಮ್ಮ ಮೇಲೆ ನಡೆಯುವ ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣಗಳನ್ನು ದಾಖಲಿ­ಸಲು ಹಿಂದೇಟು ಹಾಕಬಾರದು. ಕಾನೂನಿನ ನೆರವಿನಿಂದ ಮಹಿಳೆಯರು ಗೌರವಯುತ ಜೀವನ ನಡೆಸಬೇಕು’ ಎಂದು ಮನವಿ ಮಾಡಿದರು.

ಹೋರಾಟಗಾರ ಸುರೇಶ್ ಕುಷ್ಟಗಿ ಮಾತನಾಡಿ, ‘ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಹೆಚ್ಚಾಗಲು ಸರ್ಕಾರದ ನೀತಿಗಳೇ ಕಾರಣ. ಸರ್ಕಾರ ತನ್ನ ನೀತಿಗಳನ್ನು ಪುನರ್ ಪರಿಶೀಲನೆ ಮಾಡಿಕೊಳ್ಳಬೇಕು. ಮಹಿಳಾ ದೌರ್ಜನ್ಯ ತಡೆಗೆ ವಿಶೇಷ ಕಾನೂನು ರಚಿಸಬೇಕು’ ಎಂದು ಆಗ್ರಹಿಸಿದರು.

ನಗರಸಭೆ ಸದಸ್ಯ ರೂಪೇಶ್ ಕುಮಾರ್ ಸೇರಿದಂತೆ ವಿವಿಧ ಸಂಘಟನೆ­ಗಳ ನೂರಾರು ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.
ತರಗತಿ ಬಹಿಷ್ಕಾರ: ಈ ಮಧ್ಯೆ ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ ಘಟನೆಗಳನ್ನು ಖಂಡಿಸಿ ಎಸ್‌ಎಫ್‌ಐ ತಾಲ್ಲೂಕು ಘಟಕದ ಕಾರ್ಯಕರ್ತರು ಗುರುವಾರ ತರಗತಿ ಬಹಿಷ್ಕರಿಸಿದರು.

ಎಸ್‌ಎಫ್‌ಐ ಕಾರ್ಯಕರ್ತರು ನಗರದ ವಿವಿಧ ಶಾಲಾ–ಕಾಲೇಜುಗಳಿಗೆ ತೆರಳಿ ತರಗತಿ ಬಹಿಷ್ಕರಿಸುವಂತೆ ಮನವಿ ಮಾಡಿದರು.
ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಡೆಯಲು ಸರ್ಕಾರ ವಿಫಲವಾಗಿದೆ. ಅತ್ಯಾಚಾರ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಸರ್ಕಾರ ಮುಂದಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಎಸ್‌ಎಫ್‌ಐ ಪ್ರಮುಖ ವಸಂತ್‌ ಕಲಾಲ್‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT