ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಕ್ರಿಕೆಟ್‌ ಭಾರತ ಸಜ್ಜಾಗಿದೆಯೇ?

Last Updated 16 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಹನ್ನೊಂದನೇ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಆರಂಭಕ್ಕೆ ಇರುವುದು ಮೂರು ತಿಂಗಳುಗಳು ಮಾತ್ರ. ಈ ಪ್ರತಿಷ್ಠಿತ ಟೂರ್ನಿಯ ಟ್ರೋಫಿಯನ್ನು ಭಾರತ ತಂಡ ತನ್ನಲ್ಲೇ ಉಳಿಸಿಕೊಳ್ಳುವುದೇ ಎಂಬ ಕುತೂಹಲ ಅಭಿಮಾನಿಗಳದ್ದು.

2011ರ ಏಪ್ರಿಲ್‌ 2ರಂದು ರಾತ್ರಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ  ಮಹೇಂದ್ರ ಸಿಂಗ್‌ ದೋನಿ ಬ್ಯಾಟ್‌ನಿಂದ ಸಿಡಿದ ಸಿಕ್ಸರ್‌ಅನ್ನು ನೆನಪಿಸುವಾಗ ಕ್ರಿಕೆಟ್‌ ಪ್ರೇಮಿಗಳ ಮನಸ್ಸು ಈಗಲೂ ರೋಮಾಂಚನಗೊಳ್ಳುತ್ತದೆ.

ದೋನಿ ಅಂದು ಶ್ರೀಲಂಕಾ ತಂಡದ ನುವಾನ್‌ ಕುಲಶೇಖರ ಬೌಲ್‌ ಮಾಡಿದ್ದ 49ನೇ ಓವರ್‌ನ ಎರಡನೇ ಎಸೆತದಲ್ಲಿ ಚೆಂಡನ್ನು ಲಾಂಗ್‌ ಆನ್‌ ಕಡೆ ಸಿಕ್ಸರ್‌ಗೆ ಅಟ್ಟಿದ್ದರು. ಆ ಮೂಲಕ ಫೈನಲ್‌ನಲ್ಲಿ ಆರು ವಿಕೆಟ್‌ಗಳ ಗೆಲುವು ಪಡೆದು ಭಾರತ ವಿಶ್ವಕಪ್‌ ಟ್ರೋಫಿ ಎತ್ತಿಹಿಡಿದಿತ್ತು.
ಆ ದಿನ ದೇಶದಾದ್ಯಂತ ಸಂಭ್ರಮದ ಕಟ್ಟೆಯೊಡೆದಿತ್ತು. ಪ್ರಮುಖ ನಗರಗಳು ಆ ಸುಂದರ ರಾತ್ರಿಯಲ್ಲಿ ನಿದ್ರಿಸಲೇ ಇಲ್ಲ. ಭಾರತದ ಆಟಗಾರರು ಆನಂದಭಾಷ್ಪ ಸುರಿಸಿದ್ದರು. ಆಗ ಹಲವು ಅಭಿಮಾನಿಗಳ ಕಣ್ಣುಗಳೂ ತೇವಗೊಂಡಿದ್ದವು.

ಆ ಸುಂದರ ಕ್ಷಣದ ನೆನಪು ಕ್ರಿಕೆಟ್‌ ಪ್ರೇಮಿಗಳ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತೊಂದು ವಿಶ್ವಕಪ್‌ ಟೂರ್ನಿಯನ್ನು ಎದುರುಗೊಳ್ಳಲು ಕ್ರಿಕೆಟ್‌ ಜಗತ್ತು ಸಜ್ಜಾಗುತ್ತಿದೆ. ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್‌ನ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಹನ್ನೊಂದನೇ ವಿಶ್ವಕಪ್‌ ಟೂರ್ನಿಯ ಆರಂಭಕ್ಕೆ ಇನ್ನು ಇರುವುದು ಭರ್ತಿ 88 ದಿನಗಳು. ಎಲ್ಲ ತಂಡಗಳು ತಮ್ಮದೇ ರೀತಿಯಲ್ಲಿ ಈ ಟೂರ್ನಿಗೆ ಸಿದ್ಧಗೊಳ್ಳುತ್ತಿವೆ. ಭಾರತ ಕೂಡಾ ಹಿಂದೆ ಬಿದ್ದಿಲ್ಲ. ಸತತ ಎರಡನೇ ಬಾರಿ ಟ್ರೋಫಿ ಎತ್ತಿಹಿಡಿಯಬೇಕೆಂಬ ಲೆಕ್ಕಾಚಾರವನ್ನು ಭಾರತ ಹೊಂದಿದೆ.

ಭಾರತದ ಸಾಧ್ಯತೆ ಏನು?
ಹಾಲಿ ಚಾಂಪಿಯನ್‌ ಎಂಬ ಹಣೆಪಟ್ಟಿ ಹೊತ್ತುಕೊಂಡು ಭಾರತ ತಂಡ ಮುಂಬರುವ ವಿಶ್ವಕಪ್‌ನಲ್ಲಿ ಆಡಲಿದೆ. ಕ್ರಿಕೆಟ್‌ ಪಂಡಿತರು ಈ ಬಾರಿ ಟೂರ್ನಿಯಲ್ಲಿ ಯಾವುದೇ ತಂಡಕ್ಕೂ ಟ್ರೋಫಿ ಗೆಲ್ಲುವ ‘ಫೇವರಿಟ್‌’ ಎಂಬ ಪಟ್ಟ ನೀಡಲು ಮುಂದಾಗಿಲ್ಲ. ಪ್ರಶಸ್ತಿ ಯಾರಿಗೆ ಒಲಿಯಲಿದೆ ಎಂಬುದನ್ನು ಈಗಲೇ ಊಹಿಸುವುದು ಕಷ್ಟ.

ಭಾರತಕ್ಕೆ ಆತಿಥೇಯ ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್‌ ಅಲ್ಲದೆ ಇಂಗ್ಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ತಂಡಗಳಿಂದ ಪ್ರಬಲ ಪೈಪೋಟಿ ಎದುರಾಗುವುದರಲ್ಲಿ ಅನುಮಾನವಿಲ್ಲ. ನಾಲ್ಕು ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯ ತಂಡ ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿಲ್ಲ. ಆದರೂ ತನ್ನದೇ ನೆಲದಲ್ಲಿ ಆಡುವಾಗ ಆಸೀಸ್‌ ಅಪಾಯಕಾರಿ ಎನಿಸುವುದು ಖಚಿತ.

ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಈ ಬಾರಿಯ ವಿಶ್ವಕಪ್‌ನಲ್ಲಿ ಒಂದೇ ರೀತಿಯ ಸವಾಲು ಎದುರಿಸಲಿವೆ. ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್‌ನ ಪರಿಸ್ಥಿತಿಗೆ ಹೊಂದಿಕೊಳ್ಳುವುದೇ ಆ ಸವಾಲು. ಆದ್ದರಿಂದ ಈ ಮೂರು ತಂಡಗಳಲ್ಲಿ ಯಾರಾದರು ಟ್ರೋಫಿ ಗೆದ್ದರೆ ಅದು ಅಮೋಘ ಸಾಧನೆ ಎನಿಸಿಕೊಳ್ಳಲಿದೆ.

ಪಾಕ್‌ ತಂಡ 1992 ರಲ್ಲಿ ಆಸೀಸ್‌ ನೆಲದಲ್ಲಿ ನಡೆದಿದ್ದ ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು ಎಂಬುದನ್ನು ಮರೆಯುವಂತಿಲ್ಲ. ಆದರೆ ಅಂದು ಆಡಿದ್ದ ಪಾಕ್‌ ತಂಡವನ್ನು ಈಗಿನ ತಂಡಕ್ಕೆ ಹೋಲಿಸುವಂತಿಲ್ಲ. ಎರಡು ಬಾರಿಯ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ತಂಡ ‘ಆಂತರಿಕ ಸಮಸ್ಯೆ’ಯಿಂದ ನಲುಗಿದೆ. ವಿಂಡೀಸ್‌ ಮಂಡಳಿ ಮತ್ತು ಆಟಗಾರರ ನಡುವಿನ ಬಿಕ್ಕಟ್ಟು ಸದ್ಯದಲ್ಲಿ ಬಗೆಹರಿಯುವಂತೆ ಕಾಣುತ್ತಿಲ್ಲ. ಈ ತಂಡ ವಿಶ್ವಕಪ್‌ಗೆ ತಕ್ಕ ರೀತಿಯಲ್ಲಿ ಸಜ್ಜಾಗುವುದು ಅನುಮಾನ. "

‘ಭಾರತ ಮತ್ತು ಆಸ್ಟ್ರೇಲಿಯ ತಂಡಗಳು ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಪೈಪೋಟಿ ನಡೆಸುವುದನ್ನು ನೋಡಲು ಇಷ್ಟಪಡುತ್ತೇನೆ’ ಎಂದು ಆಸೀಸ್‌ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಕೆಲದಿನಗಳ ಹಿಂದೆ ಹೇಳಿದ್ದರು. ಈ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಬದಲಾವಣೆಯ ಗಾಳಿ
ಮಹೇಂದ್ರ ಸಿಂಗ್‌ ದೋನಿ ಈ  ಬಾರಿಯೂ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂಬುದು ಖಚಿತ. ಈ ಒಂದು ಆಂಶವನ್ನು ಹೊರತುಪಡಿಸಿದರೆ ನಾಲ್ಕು ವರ್ಷಗಳ ಹಿಂದೆ ವಾಂಖೆಡೆ ಕ್ರೀಡಾಂಗಣದಲ್ಲಿ ಟ್ರೋಫಿ ಎತ್ತಿದ ಬಳಿಕ ಭಾರತ ತಂಡದಲ್ಲಿ ಆಗಿರುವ ಬದಲಾವಣೆ ಅಪಾರ.

ಶ್ರೀಲಂಕಾ ವಿರುದ್ಧದ ಫೈನಲ್‌ ಪಂದ್ಯದ ಅಂತಿಮ ಇಲೆವೆನ್‌ನಲ್ಲಿ ಆಡಿದ್ದ ಆಟಗಾರರಲ್ಲಿ (ದೋನಿ ಹೊರತುಪಡಿಸಿ) ಈಗ ತಂಡದಲ್ಲಿ ಇರುವುದು ಕೇವಲ ಇಬ್ಬರು ಮಾತ್ರ! ವಿರಾಟ್ ಕೊಹ್ಲಿ ಮತ್ತು ಸುರೇಶ್‌ ರೈನಾ.

ಅಂದು ಫೈನಲ್‌ನಲ್ಲಿ ಆಡಿದ್ದ ಸಚಿನ್‌ ತೆಂಡೂಲ್ಕರ್‌ ನಿವೃತ್ತಿಯಾಗಿದ್ದಾರೆ. ವೀರೇಂದ್ರ ಸೆಹ್ವಾಗ್‌ ಮತ್ತು ಗೌತಮ್‌ ಗಂಭೀರ್‌ ತಂಡದಲ್ಲೇ ಇಲ್ಲ. ‘ಟೂರ್ನಿಯ ಶ್ರೇಷ್ಠ ಆಟಗಾರ’ ಎನಿಸಿದ್ದ ಯುವರಾಜ್‌ ಸಿಂಗ್‌ ಆ ಬಳಿಕ ಎದುರಿಸಿರುವ ಕಷ್ಟ ಏನೆಂಬುದು ಎಲ್ಲರಿಗೂ ತಿಳಿದಿದೆ.
ಬೌಲಿಂಗ್‌ ವಿಭಾಗದಲ್ಲಿ ಕಾಣಿಸಿಕೊಂಡಿದ್ದ  ಜಹೀರ್‌ ಖಾನ್‌, ಮುನಾಫ್‌ ಪಟೇಲ್‌, ಎಸ್‌. ಶ್ರೀಶಾಂತ್‌ ಮತ್ತು ಹರಭಜನ್‌ ಸಿಂಗ್‌ ಈಗ ಎಲ್ಲೆಲ್ಲೋ ಇದ್ದಾರೆ. ಈ ನಾಲ್ಕು ವರ್ಷಗಳ ಅವಧಿಯಲ್ಲಿ ಭಾರತ ತಂಡದಲ್ಲಿ ಇಷ್ಟೊಂದು ಬದಲಾವಣೆ ಉಂಟಾಗಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ಎಲ್ಲವೂ ಅನಿರೀಕ್ಷಿತವಾಗಿ ನಡೆದು ಹೋಗಿವೆ.

ವಿಶ್ವಕಪ್‌ ಬಳಿಕ ಭಾರತ ತಂಡ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ವಿದೇಶಿ ನೆಲದಲ್ಲಿ ಟೆಸ್ಟ್‌ ಪಂದ್ಯಗಳಲ್ಲಿ ಸಾಲು ಸಾಲು ಸೋಲುಗಳು ಎದುರಾಗಿವೆ. ಇವೆಲ್ಲದರ ನಡುವೆಯೂ ಏಕದಿನ ಕ್ರಿಕೆಟ್‌ನಲ್ಲಿ ತನ್ನ ಶಕ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನವೆಂಬರ್‌ 13ರಂದು ಬಿಡುಗಡೆಯಾಗಿದ್ದ ಐಸಿಸಿ ರ್‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿತ್ತು.

ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ ಭಾರತದ ಪ್ರದ ರ್ಶನ ಹೇಗಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಭಾರತ ವಿಶ್ವಕಪ್‌ಗೆ ಸರಿಯಾದ ರೀತಿಯಲ್ಲಿ ಸಜ್ಜಾಗುತ್ತಿದೆ ಎಂಬುದಕ್ಕೆ ಇದು ಸಾಕ್ಷಿ. ಭಾರತ ತಂಡದ ಆಟಗಾರರ ಸಾಮರ್ಥ್ಯದ ಬಗ್ಗೆ ಯಾರಿಗೂ ಅನುಮಾನವಿಲ್ಲ. ಯಾವುದೇ ತಂಡವನ್ನು ಮಣಿಸುವ ಶಕ್ತಿಯನ್ನು ಹೊಂದಿದ್ದಾರೆ. ಆದರೆ ಆಸ್ಟ್ರೇಲಿಯದ ಪರಿಸ್ಥಿತಿಗೆ ಹೊಂದಿಕೊಂಡು ಆಡುವುದು ಇಲ್ಲಿ ಮುಖ್ಯ. ಭಾರತದ ಯಶಸ್ಸು ಈ ಅಂಶದ ಮೇಲೆ ನೆಲೆನಿಂತಿದೆ.

ಕಾಂಗರೂ ನಾಡಿನ ಪಿಚ್‌ಗಳ ಮರ್ಮವನ್ನು ಅರಿತು ಆಡುವ ಬ್ಯಾಟ್ಸ್‌ಮನ್‌ಗಳು, ವೇಗ ಮತ್ತು ಸ್ವಿಂಗ್‌ ಬೌಲಿಂಗ್‌ನ ಕಲೆಯನ್ನು ಕರಗತಮಾಡಿಕೊಂಡ ಬೌಲರ್‌ಗಳು ತಂಡದಲ್ಲಿರುವುದು ಅಗತ್ಯ.

ಮುಂದಿದೆ ಆಸ್ಟ್ರೇಲಿಯ ಪ್ರವಾಸ
ಭಾರತ ಈ ತಿಂಗಳ ಕೊನೆಗೆ ಆಸ್ಟ್ರೇಲಿಯಕ್ಕೆ ತೆರಳಲಿದೆ. ಎರಡು ತಿಂಗಳ ಈ ಪ್ರವಾಸದ ವೇಳೆ ಟೆಸ್ಟ್‌ ಹಾಗೂ ತ್ರಿಕೋನ ಏಕದಿನ ಸರಣಿಯಲ್ಲಿ ಆಡಲಿದೆ. ಭಾರತ, ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ ತಂಡಗಳು ತ್ರಿಕೋನ ಏಕದಿನ ಸರಣಿಯಲ್ಲಿ ಪೈಪೋಟಿ ನಡೆಸಲಿವೆ.
ಈ ಪ್ರವಾಸ ವಿಶ್ವಕಪ್‌ಗೆ ಸಜ್ಜಾಗಲು ಭಾರತಕ್ಕೆ ಲಭಿಸಿರುವ ಅತ್ಯುತ್ತಮ ಅವಕಾಶ ಎನಿಸಿಕೊಂಡಿದೆ. ಈ ಪ್ರವಾಸದ ವೇಳೆ ಆಸೀಸ್‌ನ ಪರಿಸ್ಥಿತಿಗೆ ಹೊಂದಿಕೊಂಡು ಆಡುವ ಕಲೆಯನ್ನು ಬೆಳೆಸಿಕೊಳ್ಳಬೇಕು.

‘ಆಸೀಸ್‌ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿ ಅಗತ್ಯವಿರುವ ಆತ್ಮವಿಶ್ವಾಸ ಪಡೆದುಕೊಂಡರೆ ವಿಶ್ವಕಪ್ ಗೆಲ್ಲುವ ಅತ್ಯುತ್ತಮ ಅವಕಾಶ ಭಾರತ ತಂಡಕ್ಕಿದೆ’ ಎಂಬುದು ನ್ಯೂಜಿಲೆಂಡ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ ಸ್ಟೀಫನ್‌ ಫ್ಲೆಮಿಂಗ್‌ ಅವರ ಅಭಿಪ್ರಾಯ.
ಆಸ್ಟ್ರೇಲಿಯದಲ್ಲಿ ನಡೆಯಲಿರುವ ತ್ರಿಕೋನ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವವರು ವಿಶ್ವಕಪ್‌ಗೆ ಭಾರತ       ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯೇ ಅಧಿಕ. ಆದ್ದರಿಂದ ಈ ಪ್ರವಾಸದಲ್ಲಿ ಭಾರತದ ಆಟಗಾರರಿಂದ ಶ್ರೇಷ್ಠ ಪ್ರದರ್ಶನವನ್ನು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT