ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ವಿಶ್ವಬ್ಯಾಂಕ್'ಗೆ ಚೀನಾ ಪ್ರತ್ಯುತ್ತರ: ಅಮೆರಿಕ ವಿರೋಧ

Last Updated 15 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಸುಮಾರು ಒಂದು ವರ್ಷದಿಂದ ಚೀನಾ ತನ್ನ ಏಷ್ಯಾದ ನೆರೆ ದೇಶಗಳ ನಡುವೆ ಚಿಂತನೆಯೊಂದನ್ನು ಹರಿಯಬಿಟ್ಟಿದೆ: ಅಂತರ­ರಾಷ್ಟ್ರೀ­ಯವಾದ ಒಂದು ದೊಡ್ಡ ಬ್ಯಾಂಕ್ ಸ್ಥಾಪ­ನೆಯೇ ಆ ಚಿಂತನೆ. ಈ ಪ್ರದೇಶದಲ್ಲಿನ ಬಡ ದೇಶ­ಗಳಲ್ಲಿ ಸಾರಿಗೆ, ದೂರಸಂಪರ್ಕ ಮತ್ತು ವಿದ್ಯುತ್ ಯೋಜನೆಗಳಿಗೆ ಅತ್ಯಗತ್ಯವಾದ ಹಣಕಾಸನ್ನು ತ್ವರಿತವಾಗಿ ಒದಗಿಸುವುದು ಈ ಬ್ಯಾಂಕ್‌ನ ಉದ್ದೇಶ.

ಸುಮಾರು ₨ ೩೧ ಸಾವಿರ ಕೋಟಿ  ಮೊತ್ತದ ಆರಂಭಿಕ ಬಂಡವಾಳದಲ್ಲಿ ಬಹು­ಪಾಲನ್ನು ನೀಡಲು ಚೀನಾ ಸಿದ್ಧವಾಗಿದೆ. ಜಾಗತಿಕ ಶಕ್ತಿಯಾ­ಗುವ ನಿಟ್ಟಿನಲ್ಲಿ ಚೀನಾ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಚೀನಾದ ಟೀಕಾ­ಕಾರರು ಬಹಳ ಕಾಲದಿಂದ ಹೇಳುತ್ತಿದ್ದಾರೆ. ಹಾಗಾಗಿ ಚೀನಾದ ಈ ಉಪಕ್ರಮ ಈ ಟೀಕೆಗೆ ಉತ್ತರವೂ ಹೌದು ಎಂದು ಹೇಳಲಾಗುತ್ತಿದೆ. ಇಂತಹ ಟೀಕಾಕಾರರಲ್ಲಿ ಅತ್ಯಂತ ಸ್ಪಷ್ಟವಾದ ಧ್ವನಿಯಾದ ಅಮೆರಿಕ, ಹವಾಮಾನ ಬದಲಾ­ವಣೆ, ಶಸ್ತ್ರಾಸ್ತ್ರ ಪ್ರಸರಣ ಮುಂತಾದ ವಿಷಯ­ಗಳಲ್ಲಿ ಚೀನಾ ಸಕ್ರಿಯವಾಗಬೇಕು ಎಂದು ಹೇಳು­ತ್ತಿದೆ. ಹಾಗಾಗಿಯೇ ಚೀನಾದ ಬ್ಯಾಂಕ್ ಸ್ಥಾಪ­ನೆಯ ಪ್ರಸ್ತಾವವನ್ನು ಅಮೆರಿಕ ಮುಕ್ತ ಮನಸ್ಸಿ­ನಿಂದ ಸ್ವೀಕರಿಸಿಲ್ಲ.

ಅಷ್ಟೇ ಅಲ್ಲ, ಈ ಬ್ಯಾಂಕ್ ಸ್ಥಾಪನೆಯ ಪ್ರಸ್ತಾವದಲ್ಲಿ ಚೀನಾದ ಪಾಲುದಾರರಾಗ­ಬಹು­ದಾದ ದೇಶಗಳ ಜೊತೆ ಅಮೆರಿಕ ಸದ್ದಿಲ್ಲದೆ ಮಾತು­ಕತೆಯನ್ನೂ ನಡೆಸುತ್ತಿದೆ. ಅನಿರೀಕ್ಷಿತ ಎನ್ನಬಹುದಾದ ಬದ್ಧತೆಯೊಂದಿಗೆ ಅಮೆರಿಕದ ಅಧಿಕಾರಿಗಳು ಅಭಿವೃದ್ಧಿ ಬ್ಯಾಂಕ್‌ನ ವಿರುದ್ಧ ಪ್ರಚಾರ ನಡೆಸುತ್ತಿದ್ದಾರೆ. ಯೋಜನೆಯಿಂದ ಹಿಂದೆ ಸರಿಯುವಂತೆ ಬಲವಾದ ಒತ್ತಡವನ್ನೂ ಹೇರು­ತ್ತಿದ್ದಾರೆ ಎಂಬುದು ಅಮೆರಿಕದ ಅಧಿಕಾರಿ­ಗಳು ಮತ್ತು ಈ ಮಾತುಕತೆಯಲ್ಲಿ ಭಾಗಿಯಾಗಿ­ರುವ ದೇಶಗಳ ಪ್ರತಿನಿಧಿಗಳ ಮಾತಿನಿಂದ ಸ್ಪಷ್ಟ­ವಾಗುತ್ತಿದೆ.
ಏಷ್ಯಾದಲ್ಲಿ ಚೀನಾ ಮತ್ತು ಅಮೆರಿಕ ನಡು­ವಣ ಸ್ಪರ್ಧೆಯ ಅತ್ಯಂತ ಇತ್ತೀಚಿನ ಉದಾಹರಣೆ ಈ ವಿವಾದ. ನವೆಂಬರ್‌ನಲ್ಲಿ ನಡೆಯಲಿರುವ ಏಷ್ಯಾ ನಾಯಕರ ಶೃಂಗದಲ್ಲಿ ಬ್ಯಾಂಕ್ ಘೋಷಣೆ ಮಾಡುವ ಉದ್ದೇಶವನ್ನು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೊಂದಿದ್ದಾರೆ. ಆ ಹೊತ್ತಿಗೆ ದಕ್ಷಿಣ ಕೊರಿಯಾ ಮತ್ತು ಆಸ್ಟ್ರೇಲಿಯಾ ಕೂಡ ಬ್ಯಾಂಕ್‌ನ ಸ್ಥಾಪಕ ಸದಸ್ಯರು ಎಂಬುದನ್ನು ಪ್ರಕಟಿಸಲು ಚೀನಾ ಪ್ರಯತ್ನಿಸುತ್ತಿದೆ. ಎರಡೂ ದೇಶಗಳು ಚೀನಾದ ಪ್ರಸ್ತಾವವನ್ನು ತಿರಸ್ಕರಿಸು­ವಂತೆ ಮಾಡಲು ಅಮೆರಿಕದ ಪ್ರಯತ್ನಿಸುತ್ತಿದೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಕೂಡ ಈ ಶೃಂಗದಲ್ಲಿ ಭಾಗವಹಿಸುವ ಕಾರ್ಯಕ್ರಮ ನಿಗದಿ­ಯಾಗಿದೆ. ಹಾಗಾಗಿ ಮುಂದಿನ ವಾರಗಳಲ್ಲಿ ಚೀನಾ ಮತ್ತು ಅಮೆರಿಕದ ನಡುವಣ ವಿವಾದ ಇನ್ನೂ ತೀವ್ರಗೊಳ್ಳಲಿದೆ.

ಏಷ್ಯಾ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ ಎಂಬ ಹೆಸರಿನ ಈ ಬ್ಯಾಂಕ್‌ಗೆ ನಿಧಿ ಒದಗಿಸುವಂತೆ ಹತ್ತಕ್ಕೂ ಹೆಚ್ಚಿನ ದೇಶಗಳನ್ನು ಚೀನಾ ಕೇಳಿ­ಕೊಂಡಿದ್ದು ವಿಶ್ವಬ್ಯಾಂಕ್‌ಗೆ ಪ್ರತಿಸ್ಪರ್ಧಿಯಾಗಿ ಜಾಗತಿಕ ಮಟ್ಟದಲ್ಲಿ ಇದು ಬೆಳೆಯಬೇಕು ಎಂಬ ಆಕಾಂಕ್ಷೆಯನ್ನು ಹೊಂದಿದೆ. ಬ್ಯಾಂಕ್‌ನ ವ್ಯಾಪ್ತಿ­ಯನ್ನು ಹಿಗ್ಗಿಸುವುದಕ್ಕಾಗಿ ಕತಾರ್ ಮತ್ತು ಸೌದಿ ಅರೇಬಿಯಾ ಸೇರಿ ಪಶ್ಚಿಮ ಏಷ್ಯಾದ ಕೆಲವು ಶ್ರೀಮಂತ ದೇಶಗಳನ್ನು ಚೀನಾ ಆಹ್ವಾನಿಸಿದ್ದು ಈ ದೇಶಗಳ ಬೆಂಬಲ ಗಳಿಸಿಕೊಳ್ಳುವಲ್ಲಿ ಯಶ­ಸ್ವಿಯೂ ಆಗಿದೆ. ಆದರೆ ದಕ್ಷಿಣ ಕೊರಿಯಾ ಮತ್ತು ಆಸ್ಟ್ರೇಲಿಯಾ ದೇಶಗಳು ಈ ಬ್ಯಾಂಕ್‌­ನಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ಅಮೆರಿಕ ಯಶಸ್ವಿಯಾದರೆ, ಬ್ಯಾಂಕ್‌ನ ಸದಸ್ಯತ್ವ ಚಿಕ್ಕಪುಟ್ಟ ದೇಶಗಳಿಗಷ್ಟೇ ಸೀಮಿತವಾಗುತ್ತದೆ. ಹಾಗಾದರೆ ಚೀನಾ ಬಯಸುತ್ತಿರುವ ಪ್ರತಿಷ್ಠೆ ಮತ್ತು ಗೌರವ ಬ್ಯಾಂಕ್‌ಗೆ ಲಭ್ಯ ಆಗುವುದಿಲ್ಲ.
ಎರಡನೇ ವಿಶ್ವ ಮಹಾ ಯುದ್ಧದ ಬಳಿಕ ಸ್ಥಾಪನೆಗೊಂಡ, ಅಮೆರಿಕ ಹಾಗೂ ಜಪಾನ್ ಪ್ರಾಬಲ್ಯ ಹೊಂದಿರುವ ವಿಶ್ವ ಬ್ಯಾಂಕ್ ಮತ್ತು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ಗಳ (ಎಡಿಬಿ) ಮಹತ್ವ­ವನ್ನು ಕುಗ್ಗಿಸುವುದಕ್ಕಾಗಿ ಚೀನಾ ಉದ್ದೇಶ­ಪೂರ್ವಕವಾಗಿ ಹೊಸ ಬ್ಯಾಂಕ್ ಸ್ಥಾಪನೆಯ ಪ್ರಸ್ತಾವ ಮುಂದಿಟ್ಟಿದೆ ಎಂದು ಅಮೆರಿಕದ ಹಣಕಾಸು ಇಲಾಖೆ ಟೀಕಿಸುತ್ತಿರುವುದಾಗಿ ದಕ್ಷಿಣ ಕೊರಿಯಾ ಹಾಗೂ ಆಸ್ಟ್ರೇಲಿಯಾದ ಅಧಿಕಾರಿ­ಗಳು ಹೇಳುತ್ತಾರೆ. ಆಗ್ನೇಯ ಏಷ್ಯಾದ ದೇಶ­ಗಳನ್ನು ತನ್ನತ್ತ ಸೆಳೆದುಕೊಳ್ಳುವುದಕ್ಕೆ ಚೀನಾ ಬ್ಯಾಂಕನ್ನು ಒಂದು ರಾಜಕೀಯ ಅಸ್ತ್ರವಾಗಿಯೂ ನೋಡುತ್ತಿದೆ ಎಂಬುದು ಅಮೆರಿಕದ ಗುಮಾನಿ­ಯಾಗಿದೆ. ಚೀನಾ ತನ್ನ ಗಡಿಯ ಬಗ್ಗೆ ಮಂಡಿಸು­ತ್ತಿರುವ ಹಕ್ಕುಗಳ ಬಗ್ಗೆ ಆತಂಕಗೊಂಡಿರುವ ಈ ನೆರೆ ದೇಶಗಳಿಗೆ ಆರ್ಥಿಕ ನೆರವಿನ ಭರವಸೆಯ ಮೂಲಕ ತನ್ನ ಬಗ್ಗೆ ಉತ್ತಮ ಭಾವನೆ ಮೂಡು­ವಂತೆ ಮಾಡುವುದು ಚೀನಾದ ಕಾರ್ಯತಂತ್ರ ಎಂದು ಅಮೆರಿಕ ಹೇಳುತ್ತಿದೆ.

೨೦೨೦ರ ಹೊತ್ತಿಗೆ ಈ ಪ್ರದೇಶಕ್ಕೆ ಸುಮಾರು ₨ ೫೦ ಲಕ್ಷ ಕೋಟಿ  ಮೊತ್ತದ ಮೂಲಸೌಕರ್ಯ ಹೂಡಿಕೆ ಅಗತ್ಯ ಇದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್ ೨೦೦೯ರಲ್ಲಿ ಅಂದಾಜಿಸಿದೆ. ವಿಶ್ವ ಬ್ಯಾಂಕ್‌­ಗಾಗಲಿ, ಏಷ್ಯಾ ಅಭಿವೃದ್ಧಿ ಬ್ಯಾಂಕ್‌­ಗಾಗಲಿ ಈ ಮೊತ್ತವನ್ನು ಒಟ್ಟುಗೂಡಿಸುವುದು ಸಾಧ್ಯವಿಲ್ಲ ಎಂದು ಎರಡೂ ಬ್ಯಾಂಕ್‌ಗಳ ತಜ್ಞರು ಹೇಳುತ್ತಾರೆ.

ಕಲ್ಲಿದ್ದಲು ಆಧಾರಿತ ವಿದ್ಯುತ್ ಯೋಜನೆಗಳಿಗೆ ಎಡಿಬಿ ನೆರವು ನೀಡುವುದನ್ನು ವಿರೋಧಿಸು­ವು­ದಾಗಿ ಕಳೆದ ವರ್ಷ ಅಮೆರಿಕ ಹೇಳಿತ್ತು. ಜನರನ್ನು ಅವರ ವಸತಿ ಪ್ರದೇಶಗಳಿಂದ ಒಕ್ಕಲೆಬ್ಬಿಸುವ ಅಣೆ­ಕಟ್ಟು ನಿರ್ಮಾಣ ಯೋಜನೆಗಳಿಗೆ ನೆರವು ನೀಡು­ವುದನ್ನು ವಿರೋಧಿಸುವುದಾಗಿ ಈ ವರ್ಷದ ಆರಂಭ­ದಲ್ಲಿ ಹೇಳಿದೆ. ಏಷ್ಯಾದ ಆರ್ಥಿಕ ಅಭಿ­ವೃದ್ಧಿಗೆ ವಿದ್ಯುತ್ ಅತ್ಯಂತ ದೊಡ್ಡ ಅಗತ್ಯವಾಗಿದೆ. ಈ ಮೇಲಿನ ತೊಡಕುಗಳಿಲ್ಲದೆ ಯೋಜನೆಗಳಿಗೆ ನೆರವು ನೀಡುವ ಭರವಸೆ ನೀಡುವುದು ಚೀನಾಕ್ಕೆ ಸಾಧ್ಯವಿದೆ ಎಂದು ಎಡಿಬಿಯ ಹಿರಿಯ ಅಧಿಕಾರಿ­ಯೊಬ್ಬರು ಹೇಳುತ್ತಾರೆ. ಏಷ್ಯಾ ಅಭಿವೃದ್ಧಿ ಬ್ಯಾಂಕ್ ಎಷ್ಟೊಂದು ನಿರ್ಬಂಧಗಳಲ್ಲಿ ಮುಳುಗಿ ಹೋಗಿದೆ ಎಂದರೆ ಒಂದು ಯೋಜನೆಯ ಪ್ರಸ್ತಾವ ಸಲ್ಲಿಸಿದ ನಂತರ ಅನುಮೋದನೆ ಪಡೆ­ಯಲು ಸರಾಸರಿ ಏಳು ವರ್ಷ ತಗಲುತ್ತದೆ ಎಂದು ಅವರು ವಿವರಿಸುತ್ತಾರೆ.

ಅವರು ವಿವರಿಸುವಂತೆ ಎಡಿಬಿ ಆತಂಕಗೊಳ್ಳು­ವು­ದಕ್ಕೂ ಕಾರಣಗಳಿವೆ. ಆರಂಭಿಕ ಬಂಡವಾಳವೇ ₨ ೩೦ ಸಾವಿರ ಕೋಟಿಗೂ ಹೆಚ್ಚಿರುವುದರಿಂದ ಸ್ಥಾಪನೆಯಾದ ತಕ್ಷಣವೇ ಬ್ಯಾಂಕ್ ಪ್ರಮುಖ ಪ್ರತಿಸ್ಪರ್ಧಿಯಾಗುತ್ತದೆ. ಇಷ್ಟೇ ಮೊತ್ತವನ್ನು ಹಣ­ಕಾಸು ಸಂಸ್ಥೆಗಳು ಮತ್ತು ಖಾಸಗಿ ಬಂಡವಾಳದ ಮೂಲಕ ಸಂಗ್ರಹಿಸುವುದಾಗಿ ಚೀನಾ ಹೇಳಿದೆ. ವರ­ಮಾನ ಮತ್ತು ಸಾಲಗಳೆಲ್ಲವೂ ಸೇರಿ ಎಡಿ­ಬಿಯ ಮೊತ್ತ ಸುಮಾರು ₨ ೫೦ ಸಾವಿರ ಕೋಟಿ ರೂಪಾಯಿ.

ಚೀನಾದ ಹಿರಿಯ ಹಣಕಾಸು ಅಧಿಕಾರಿ ಜಿನ್ ಲಿಕ್ವನ್ ಅವರನ್ನು ಹೊಸ ಬ್ಯಾಂಕ್ ಮುಖ್ಯಸ್ಥರಾಗಿ ಚೀನಾ ಆಯ್ಕೆ ಮಾಡಿದೆ. ಚೀನಾದಲ್ಲಿ ಅಮೆರಿಕದ ರಾಯಭಾರಿಯಾಗಿರುವ ಮ್ಯಾಕ್ಸ್ ಬಾಕಸ್ ಅವ­ರನ್ನು ಆಗಸ್ಟ್‌ನಲ್ಲಿ ಭೇಟಿಯಾದ ಜಿನ್, ಬ್ಯಾಂಕ್‌ಗೆ ಅಮೆರಿಕದ ವಿರೋಧವನ್ನು ತಗ್ಗಿಸು­ವಂತೆ ನೇರವಾಗಿಯೇ ಹೇಳಿದ್ದಾರೆ. 

ಭರವಸೆ ನೀಡಿದಂತೆ ವಿಶ್ವಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಹೆಚ್ಚಿನ ಭಾಗವಹಿಸುವಿಕೆಗೆ ಚೀನಾಕ್ಕೆ ಅಮೆರಿಕ ಅವಕಾಶ ನೀಡದಿರುವುದೇ ಬ್ಯಾಂಕ್ ಸ್ಥಾಪನೆಯ ಹಿಂದಿನ ದೊಡ್ಡ ಪ್ರೇರಣೆ ಎಂದು ವಿಶ್ವ ಅರ್ಥಶಾಸ್ತ್ರ ಮತ್ತು ರಾಜಕೀಯ ಸಂಸ್ಥೆಯ ಸಹಾಯಕ ನಿರ್ದೇಶಕ ಹಿ ಫ್ಯಾನ್ ಹೇಳುತ್ತಾರೆ. ಈಗ ಇರುವ ಅಂತರರಾಷ್ಟ್ರೀಯ ಸಂಸ್ಥೆಗಳ ಬಗ್ಗೆ ಚೀನಾಕ್ಕೆ ಶಂಕೆ ಇದೆ. ಯಾಕೆಂದರೆ ಇವು ಯಾವುದರಲ್ಲೂ ಚೀನಾ ಸ್ಥಾಪಕ ಸದಸ್ಯ ಅಲ್ಲ, ಚೀನಾಕ್ಕೆ ಅದು ತನ್ನದು ಎಂದು ಅನಿಸುವುದೇ ಇಲ್ಲ ಎಂದು ಅವರು ವಿವರಿಸುತ್ತಾರೆ.

ಆರ್ಥಿಕ ವಿಷಯಗಳಲ್ಲಿ ಚೀನಾ ಮತ್ತು ಭದ್ರ­ತೆಯ ವಿಷಯಗಳಲ್ಲಿ ಅಮೆರಿಕದ ಮೇಲೆ ಅವ­ಲಂಬಿತವಾಗಿರುವ ಆಸ್ಟ್ರೇಲಿಯಾ, ಈತನಕ ­ಬ್ಯಾಂಕ್ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸದೇ ಇದ್ದರೂ ಬ್ಯಾಂಕ್ ಆಡಳಿತ ನಿರ್ವಹಣೆ ಬಗೆಗಿನ ತನ್ನ ಷರತ್ತುಗಳಿಗೆ ಒಪ್ಪಿಗೆ ದೊರೆತರೆ ಬೆಂಬಲ ನೀಡಲು ಸಿದ್ಧವಾಗಿದೆ.

ಜಿನ್‌ಪಿಂಗ್ ಅವರು ಜುಲೈನಲ್ಲಿ ದಕ್ಷಿಣ ಕೊರಿ­ಯಾಕ್ಕೆ ಭೇಟಿ ನೀಡಿದ್ದಾಗ ಬ್ಯಾಂಕ್‌ಗೆ ಸೇರುವಂತೆ ಅಧಿಕೃತವಾಗಿ ಆಹ್ವಾನ ನೀಡಿದ್ದರು. ಆದರೆ ಆಗ ಅದಕ್ಕೆ ಅಂತಹ ಉತ್ಸಾಹದ ಪ್ರತಿಕ್ರಿಯೆ ದೊರೆ­ಯಲಿಲ್ಲ. ಆದರೆ ಚೀನಾದೊಂದಿಗೆ ಉತ್ತಮ ಸಂಬಂಧ ಹೊಂದಿರುವ ದಕ್ಷಿಣ ಕೊರಿಯಾ ಬಹಿ­ರಂಗವಾಗಿ ಬ್ಯಾಂಕ್ ಪ್ರಸ್ತಾವವನ್ನು ಶ್ಲಾಘಿಸು­ತ್ತಿದೆ. ಬ್ಯಾಂಕ್‌ನ ಅಧ್ಯಕ್ಷರಾಗಿರುವ ಚೀನಾದ ವ್ಯಕ್ತಿಯೇ ಎಲ್ಲ ನಿರ್ಧಾರಗಳನ್ನು ಕೈಗೊಳ್ಳಬೇಕೇ ಹೊರತು ನಿರ್ದೇಶಕ ಮಂಡಳಿ ಅಲ್ಲ ಎಂಬ ಚೀನಾದ ಆಕಾಂಕ್ಷೆಯಿಂದಾಗಿ ದಕ್ಷಿಣ ಕೊರಿಯಾ ಬ್ಯಾಂಕ್ ಸೇರುವ ವಿಷಯದಲ್ಲಿ ಉತ್ಸಾಹ ತೋರುತ್ತಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮೆರಿಕದ ವಿರೋಧದ ನಡುವೆಯೂ ಆ ದೇಶದೊಂದಿಗೆ ಮಿತ್ರತ್ವ ಹೊಂದಿರುವ ಸಿಂಗಪುರ ಪ್ರಸ್ತಾವಕ್ಕೆ ಸಹಿ ಹಾಕಿದೆ. ಹೊರಗಿನ ಟೀಕಾಕಾರ­ನಾಗಿ ಇರುವ ಬದಲಿಗೆ ಒಳಗೇ ಇದ್ದುಕೊಂಡು ಬ್ಯಾಂಕನ್ನು ರೂಪಿಸಲು ಬಯಸುವುದಾಗಿ ಎರಡು ತಿಂಗಳ ಹಿಂದೆಯೇ ಪ್ರಸ್ತಾವಕ್ಕೆ ಸಹಿ ಹಾಕಿರುವ ಸಿಂಗಪುರ ಹೇಳಿದೆ.

ಇಂಟರ್‌ನ್ಯಾಷನಲ್‌ ನ್ಯೂಯಾರ್ಕ್ ಟೈಮ್ಸ್
ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT