ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಶಾಂತಿಗಾಗಿ ಉರುಳು ಸೇವೆ

Last Updated 22 ಆಗಸ್ಟ್ 2014, 6:54 IST
ಅಕ್ಷರ ಗಾತ್ರ

ಧಾರವಾಡ: ‘ದೇವರು ಒಬ್ಬನೇ ಎನ್ನುವುದು ವೇದಿಕೆಯ ಭಾಷಣವಲ್ಲ. ಸಕಲ ಧರ್ಮ ಶಾಸ್ತ್ರಗಳು ಹೇಳಿದ್ದೂ ಸಹ ಇದನ್ನೇ. ಆದರೆ, ನಮ್ಮ ಅನುಕೂಲಕ್ಕೆ ತಕ್ಕಂಥೆ ಧರ್ಮವನ್ನು, ದೇವರನ್ನು ತಿರುಚುತ್ತ ನಡೆದಿದ್ದೇವೆ. ಭೂಮಿಯ ಮೇಲಿರುವ ಮಾನವರೆಲ್ಲ ದೇವರ ಮಕ್ಕಳು. ಜಾತಿ, ಧರ್ಮಗಳ ಕಲಹಗಳು ಇನ್ನಾದರೂ ಕೊನೆಗೊಂಡು ಜಗದಲ್ಲಿ ಶಾಂತಿ ನೆಲೆಸುವಂತಾಗಬೇಕು’ ಎಂದು ಸಂತ ಶಿಶುನಾಳ ಶರೀಫರ ಗಿರಿ ಮೊಮ್ಮಗ ಹುಸೇನ ಸಾಹೇಬ್‌ ಶರೀಫ್‌ ಹೇಳಿದರು.

ನಗರದಲ್ಲಿ ಗುರುವಾರ ಜಂಬು ಲಿಂಗೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಮಾನವಕುಲದ ಏಕತೆ ಹಾಗೂ ವಿಶ್ವಶಾಂತಿಗಾಗಿ ಈಶ್ವರಪ್ಪ ತೋರಣಗಟ್ಟಿ ಆರಂಭಿಸಿದ ೧೫ ನೇ ವಾರ್ಷಿಕ ಉರುಳು ಸೇವೆ ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತ ಅಭಿವೃದ್ದಿ ಹೊಂದಬೇಕಾದ ರಾಷ್ಟ್ರವಾಗಿದ್ದು, ಸಂಪೂರ್ಣ ಸಮೃದ್ಧತೆ ಸಾಧಿಸಬೇಕಾದರೆ ಜಾತಿ ಧರ್ಮದ ಕಲಹಗಳು ಇಲ್ಲದಂತಾಗಬೇಕು. ಈ ನಿಟ್ಟಿನಲ್ಲಿ ಈಶ್ವರಪ್ಪ ತೋರಣಗಟ್ಟಿ ಕೈಕೊಂಡ ಉರುಳು ಸೇವೆ ಶ್ಲಾಘ ನೀಯ’ ಎಂದು ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬಸವಶಾಂತಿ ಮಿಶನ್‌ ಅಧ್ಯಕ್ಷ ಮಹಾದೇವ ಹೊರಟ್ಟಿ, ‘ಧರ್ಮ ಜಾತಿಯ ಹಿಂಸೆ ಗಳು ಜಗತ್ತಿನಾದ್ಯಂತ ನಡೆಯುತ್ತಿವೆ. ಜಾತಿವಾದಿಗಳ ಕೈ ಮೇಲಾಗುತ್ತಿವೆ ಇದನ್ನು ತಡೆಗಟ್ಟಲು ಪ್ರಗತಿಪರರು, ಚಿಂತಕರು ಹಾಗೂ ದೇಶಭಕ್ತರು ಒಂದಾಗಬೇಕಿದೆ’ ಎಂದರು.

ಗಾಂಧಿ ಚೌಕ್‌ ಹತ್ತಿರ ಇರುವ ದತ್ತ ಮಂದಿರದಿಂದ ಆರಂಭಗೊಂಡ ತೋರಣಗಟ್ಟಿ ಅವರ ಉರುಳು ಸೇವೆ, ಸೋಮವಾರ (೨೫) ರಂದು ಕಲಘಟಗಿಯ ತಾಲ್ಲೂಕಿನ ಎಮ್ಮೆಟ್ಟಿ ಜಂಬುಲಿಂಗೇಶ್ವರ ದೇವಸ್ಥಾನದಲ್ಲಿ ಕೊನೆಗೊಳ್ಳಲಿದೆ. ಕಲಘಟಗಿಯ ಮಾಜಿ ಶಾಸಕ ಫಾದರ್‌ ಡಾ. ಜೇಕಬ್, ಮೆಹಬೂಬ್‌ ಸುಭಾನಿ ದರ್ಗಾದ ಮೆಹಬೂಬ್‌ ಸಾಹೇಬ ಮುಜಾವರ, ಉಪ್ಪಿನ ಬೇಟಗೆರಿಯ ಹಜರತ ಶಿರಾಜ ಉಲ್ ಹಕ್ ಶ್ಯಾ ಖಾದ್ರಿ ಮಾತನಾಡಿದರು. ಕವಿ ಇಬ್ರಾಹಿಂ ಸುತಾರ, ಸಾಹಿತಿ ಮೋಹನ ನಾಗಮ್ಮನವರ ಕೆ.ಸಿ.ಸಿ ಬ್ಯಾಂಕ್‌ ಅಧ್ಯಕ್ಷ ಐ.ಎಸ್. ಪಾಟೀಲ, ಮೋದಕ ಪತ್ರಿಕೆಯ ಪ್ರೊ.ಕೃಷ್ಣ ಸಿದ್ಧಾಂತಿ, ವಿ.ಜಿ.ಕಮ್ಮಾರ, ದಾಕ್ಷಾಯಿಣಿ ಹುಬ್ಬಳ್ಳಿ, ಲಿಂಗಪ್ಪ ಕುಡುವಕ್ಕಲೀಗರ, ನರೇಂದ್ರ ಗ್ರಾ.ಪಂ.ಅಧ್ಯಕ್ಷೆ ಸುಶೀಲಾ ಪಾಟೀಲ ಸೇರಿದಂತೆ ಇತರರು ಇದ್ದರು. ಜಗದೀಶ ಮಾಸ್ತಿ ಸ್ವಾಗತಿಸಿದರು. ಎಂ.ಕೆ.ನದಾಫ್ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT