ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಸ ವೃದ್ಧಿ: ಶಿಕ್ಷಕರೇ ಮುಂದಾಗಲಿ

Last Updated 31 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಸರ್ಕಾರಿ ನೌಕರರು, ಜನಪ್ರತಿನಿಧಿಗಳು ಹಾಗೂ ನ್ಯಾಯಾಂಗ ಸಿಬ್ಬಂದಿ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ದಾಖಲಿಸುವಂತೆ ಅಲಹಾಬಾದ್ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ (ಪ್ರ.ವಾ.,ಆ. 19).

ಈ ಆದೇಶದ ಜಾರಿ ಉತ್ತರ ಪ್ರದೇಶ ಸರ್ಕಾರದ ಇಚ್ಛಾಶಕ್ತಿಯನ್ನು ಅವಲಂಬಿಸಿದೆ. ಈ ದಾವೆ  ಸುಪ್ರೀಂಕೋರ್ಟ್‌ ಮೆಟ್ಟಿಲೇರುವ ಸಾಧ್ಯತೆ ಹೆಚ್ಚಿದೆ. ಆ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌, ಅಲಹಾಬಾದ್‌ ಹೈಕೋರ್ಟ್‌ ತೀರ್ಪಿಗೆ ಕಾರಣವಾದ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಪೂರ್ಣವಿರಾಮ ಹಾಕುವ ನಿರ್ಧಾರ ಮಾಡಿ ಸಮಾನ ಶಿಕ್ಷಣದ ಅಗತ್ಯವನ್ನು ಎತ್ತಿ ಹಿಡಿಯುವುದೇ ಎಂಬುದನ್ನು ಕಾದು ನೋಡಬೇಕು.

ಆದರೆ ದೇಶದ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಖಾಸಗಿಯವರ ಪ್ರಾಬಲ್ಯ ಗಟ್ಟಿಯಾಗುತ್ತಿದ್ದು, ಇದು ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆಯ ಉಸಿರುಗಟ್ಟಿಸಿದೆ. ಇದರಿಂದ,  ಉಳ್ಳವರಿಗೆ ಖಾಸಗಿ ಶಾಲೆ; ಇಲ್ಲದವರಿಗೆ ಸರ್ಕಾರಿ ಶಾಲೆ ಎಂಬಂತಾಗಿದೆ.  ಈ ಸಂದರ್ಭದಲ್ಲಿ ಅಲಹಾಬಾದ್‌ ಹೈಕೋರ್ಟ್‌ ತೀರ್ಪು, ಹಲವಾರು ದಶಕಗಳಿಂದ ಸಮಾನ ಶಿಕ್ಷಣ, ನೆರೆ-ಹೊರೆ ಶಾಲಾ ವ್ಯವಸ್ಥೆಗಾಗಿ ಹೋರಾಡುತ್ತಾ ಬಂದಿರುವ ಸಾವಿರಾರು ಕಾರ್ಯಕರ್ತರ ಕನಸನ್ನು ಚಿಗುರೊಡೆಸಿದೆ.

ಈ ಆದೇಶವು ನಮ್ಮ ಹಿರಿಯರು ಸಾರ್ವತ್ರಿಕ ಹಾಗೂ ಸಮಾನ ಶಿಕ್ಷಣ ವ್ಯವಸ್ಥೆ ಜಾರಿಗಾಗಿ ನಡೆಸಿದ ಪ್ರಯತ್ನಗಳನ್ನು ನೆನಪಿಸುತ್ತಿದೆ. ಅವುಗಳಲ್ಲಿ ಕೆಲವು ಮುಖ್ಯ ಸಂಗತಿಗಳನ್ನು ನಾವು ತಿಳಿದುಕೊಳ್ಳುವುದು ಇಂದಿನ ತುರ್ತು.

133 ವರ್ಷಗಳ ಹಿಂದೆ, ಅಂದರೆ 1882ರಲ್ಲಿ ಮೆಕಾಲೆ ಶಿಕ್ಷಣ ನೀತಿಯಿಂದ ದೇಶಿ ಭಾಷೆಗಳಿಗೆ ಉಂಟಾದ ಪರಿಣಾಮಗಳ ಅಧ್ಯಯನ ನಡೆಸಲು ಭಾರತಕ್ಕೆ ಬಂದಿದ್ದ ಹಂಟರ್ ಕಮಿಷನ್‌ಗೆ ಜ್ಯೋತಿಬಾ ಫುಲೆ ಅವರು ಶಿಕ್ಷಣವನ್ನು ಸಾರ್ವತ್ರಿಕಗೊಳಿಸಬೇಕೆಂದು ಒಂದು ಮನವಿ ಪತ್ರ ಸಲ್ಲಿಸಿದರು ಮತ್ತು ತಮ್ಮ ಪತ್ನಿ ಸಾವಿತ್ರಿ ಬಾಯಿ ಫುಲೆ ಅವರೊಂದಿಗೆ ಕೆಲವು ಸಮಾನ ಶಾಲೆಗಳನ್ನು ಪ್ರಾರಂಭಿಸಿದರು.

1911ರಲ್ಲಿ ಗೋಪಾಲಕೃಷ್ಣ ಗೋಖಲೆ ಇಂಪೀರಿಯಲ್ ಶಾಸನಸಭೆಯಲ್ಲಿ ಒಂದು ಖಾಸಗಿ ಮಸೂದೆ ಮಂಡಿಸಿ, ಉಚಿತ ಹಾಗೂ ಕಡ್ಡಾಯ ಶಿಕ್ಷಣಕ್ಕಾಗಿ ಒತ್ತಾಯಿಸಿದರು. ಆದರೆ ಅಂದಿನ ಮಹಾರಾಜರು, ಶ್ರೀಮಂತರು, ಭೂ ಮಾಲೀಕರೆಲ್ಲರೂ ಒಂದಾಗಿ, ಇಂತಹ ಕೆಲಸಕ್ಕೆ ಇನ್ನೂ ಕಾಲ ಪಕ್ವವಾಗಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರು. ಅದರಲ್ಲೂ ಬಿಹಾರದ ಧರಭಂಗದ ಮಹಾರಾಜ 11 ಸಾವಿರ ಸಹಿಗಳನ್ನು ಸಂಗ್ರಹಿಸಿ ವಿರೋಧಿಸಿದರು.

1937ರಲ್ಲಿ ಮಹಾರಾಷ್ಟ್ರದ ವಾರ್ಧಾದಲ್ಲಿ ಜರುಗಿದ ರಾಷ್ಟ್ರೀಯ ಶಿಕ್ಷಣ ಸಮ್ಮೇಳನದಲ್ಲಿ ಮಹಾತ್ಮ ಗಾಂಧಿ, ಮೂಲ ಅಥವಾ ಪ್ರಾಥಮಿಕ ಶಿಕ್ಷಣಕ್ಕೆಂದು ಅನುದಾನ ನೀಡಿ ಕನಿಷ್ಠ ಪ್ರಾಥಮಿಕ ಶಿಕ್ಷಣವನ್ನಾದರೂ ಸಾರ್ವತ್ರಿಕಗೊಳಿಸಬೇಕೆಂದು ಆಗತಾನೇ ಚುನಾಯಿತರಾಗಿದ್ದ ಏಳು ಪ್ರಾಂತ್ಯಗಳ  ಕಾಂಗ್ರೆಸ್ ಸದಸ್ಯರಿಗೆ ಕರೆ ನೀಡಿದರು. ಈ ಸಂದರ್ಭದಲ್ಲೂ ಹಣಕಾಸಿನ ಕೊರತೆಯಿಂದ ಸಾಧ್ಯವಿಲ್ಲವೆಂದು ತಳ್ಳಿಹಾಕಲಾಯಿತು.

ನಮ್ಮ ಸಂವಿಧಾನ ರಚನಾ ಸಭೆಯಲ್ಲಿ ಬಿ.ಆರ್.ಅಂಬೇಡ್ಕರ್‌ ಅವರು ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಬೇಕೆಂಬ ವಿಷಯವನ್ನು ಪ್ರಬಲವಾಗಿ ಪ್ರತಿಪಾದಿಸಿದರು. ಆದರೆ ಸಂವಿಧಾನ ರಚನಾ ಸಭೆಯಲ್ಲಿದ್ದ ಶ್ರೀಮಂತರು, ಭೂಮಾಲೀಕರು, ರಾಜರ ಪ್ರತಿನಿಧಿಗಳು ಇದನ್ನು ವಿರೋಧಿಸಿದ್ದರಿಂದ  ಮೂಲಭೂತ ಹಕ್ಕುಗಳ ಸಮಿತಿ ‘ಸದ್ಯಕ್ಕೆ ಸಾಧ್ಯವಿಲ್ಲ’ವೆಂದು ತಳ್ಳಿಹಾಕಿತು. ಅಂಬೇಡ್ಕರ್‌ ಅವರು ಸಂವಿಧಾನ ರಚನಾ ಸಭೆಯ ನಿರ್ಧಾರಕ್ಕೆ ಅನಿವಾರ್ಯವಾಗಿ ತಲೆಬಾಗಬೇಕಾಯಿತು.

ಆದರೂ ಶಿಕ್ಷಣದ ಮಹತ್ವವನ್ನು ಅರಿತ ಅವರು, ಈಗ ಸಾಧ್ಯವಾಗದಿದ್ದರೂ ಸಂವಿಧಾನ ಜಾರಿಗೆ ಬಂದ ಹತ್ತು ವರ್ಷದೊಳಗೆ 14 ವರ್ಷದವರೆಗಿನ ಎಲ್ಲ ಮಕ್ಕಳಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಬೇಕೆಂಬ ಆಶಯ ಹೊತ್ತಿರುವ 45ನೇ ವಿಧಿಯನ್ನು ಸೇರಿಸಿದರು. ಇದರ ಪ್ರಕಾರ 1960ರಲ್ಲಿ ಇದು ಜಾರಿಯಾಗಬೇಕಿತ್ತು. ಆದರೆ ನಮ್ಮನ್ನಾಳುವವರ ಜ್ಞಾಪಕ ಶಕ್ತಿಗೆ ಮಂಕು ಬಡಿದಿತ್ತು.

ಕೆಲವು ಶಿಕ್ಷಣಾಸಕ್ತರ ಒತ್ತಾಯಕ್ಕೆ ಮಣಿದು 1964ರಲ್ಲಿ ನೇಮಿಸಿದ್ದ ಕೊಠಾರಿ ಆಯೋಗವು 1966ರಲ್ಲಿ ತನ್ನ ವರದಿಯನ್ನು 4 ಸಂಪುಟಗಳಲ್ಲಿ ಮಂಡಿಸಿ ‘ಒಂದು ದೇಶದ ಭವಿಷ್ಯವು ಅದರ ತರಗತಿಗಳಲ್ಲಿ ರೂಪುಗೊಳ್ಳುತ್ತದೆ’ ಎಂಬ ಘೋಷ ವಾಕ್ಯದೊಂದಿಗೆ ಸರ್ಕಾರ ಸಮಾನ ಶಿಕ್ಷಣ ಹಾಗೂ ನೆರೆ-ಹೊರೆ ಶಾಲಾ ವ್ಯವಸ್ಥೆಯನ್ನು ಜಾರಿ ಮಾಡಬೇಕೆಂದು ಪ್ರತಿಪಾದಿಸಿತು. ಇದರ ಜೊತೆಗೆ ಜಿ.ಡಿ.ಪಿ.ಯಲ್ಲಿ ಶೇಕಡ 6ರಷ್ಟು ಹಣವನ್ನು ಶಿಕ್ಷಣಕ್ಕೆಂದೇ ಮೀಸಲಿಡಬೇಕೆಂದು ಅಭಿಪ್ರಾಯಪಟ್ಟಿತು. ಆದರೆ ಈವರೆಗೆ ಅದು ಶೇಕಡ 3–4ನ್ನು ಮೀರಿಲ್ಲ.


1993ರಲ್ಲಿ ಉನ್ನಿಕೃಷ್ಣನ್ ವರ್ಸಸ್‌ ಆಂಧ್ರಪ್ರದೇಶ ಸರ್ಕಾರದ ದಾವೆಯಲ್ಲಿ ಸುಪ್ರೀಂಕೋರ್ಟ್‌ 45ನೇ ವಿಧಿಯನ್ನು 21ನೇ ವಿಧಿಯೊಂದಿಗೆ (ಬದುಕುವ ಹಕ್ಕು)  ‘ಭಾವೈಕ್ಯದೊಂದಿಗೆ ದೇಶ ನಿರ್ಮಾಣ’ (ಹಾರ್ಮೋನಿಯಸ್ ಕನ್‌ಸ್ಟ್ರಕ್ಷನ್) ಜೊತೆ ಹೊಂದಿಕೆ ಮಾಡಿ 21ಎ ವಿಧಿಯನ್ನು ಸೃಷ್ಟಿಸಲು ತಿಳಿಸಿ, ಮಕ್ಕಳ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಪರಿವರ್ತಿಸಿ ಆದೇಶ ನೀಡಿತು.

ಈ ಮೇಲಿನ ಐತಿಹಾಸಿಕ ಪ್ರಯತ್ನಗಳನ್ನು ನಾವು ಗಮನಿಸುವುದಾದರೆ ಇಂದಿಗೂ ಈ ಆಶಯಗಳು ಕೈಗೂಡಿಲ್ಲ. ಜೊತೆಗೆ 2009ರಲ್ಲಿ ಜಾರಿಗೆ ತಂದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಕನಿಷ್ಠ ಪ್ರಾಥಮಿಕ ಶಿಕ್ಷಣವನ್ನಾದರೂ ರಾಷ್ಟ್ರೀಕರಣ ಮಾಡಬಹುದಿತ್ತು. ಅದು ಆಗಲಿಲ್ಲ. ನೆರೆ-ಹೊರೆ ಶಾಲೆಗಳು ಮತ್ತು ಸಮಾನ ಶಿಕ್ಷಣದ ಯಾವುದೇ ಆಲೋಚನೆಗಳನ್ನೂ ಮಾಡದೇ ಹೋದದ್ದು ದುರಂತ.

ಇದಲ್ಲದೆ ಶೇಕಡ 25ರಷ್ಟು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಧಾರೆ ಎರೆದಿದ್ದು ಇಡೀ ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆಯನ್ನು ಪೂರ್ವ ಯೋಜಿತವಾಗಿಯೇ ದುರ್ಬಲಗೊಳಿಸಿದೆ. ಇಂತಹ ಸಂದರ್ಭದಲ್ಲಿ ಅಲಹಾಬಾದ್ ಹೈಕೋರ್ಟ್‌ ತೀರ್ಪನ್ನು ನಾವೆಲ್ಲರೂ ಸ್ವಾಗತಿಸಬೇಕಾದ ಅನಿವಾರ್ಯವಿದೆ. ಅದರಲ್ಲೂ ನಮ್ಮ ಶಿಕ್ಷಕ ವರ್ಗ ಈ ದೃಷ್ಟಿಯಲ್ಲಿ ಆಲೋಚನೆ ಮಾಡಿ, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ನೈತಿಕತೆ ಮೆರೆಯಬೇಕಾಗಿದೆ.

ಲಂಡನ್ನಿನ ಪ್ರತಿಷ್ಠಿತ ಹೋಟೆಲುಗಳ ಸೂಚನಾ ಫಲಕದಲ್ಲಿ ‘The Owner of this hotel eats here’ ಎಂದು ಬರೆದಿರುತ್ತದೆ. ಅದು ಹೋಟೆಲ್ ಮಾಲೀಕ ತನ್ನ ಗ್ರಾಹಕರಿಗೆ ಕೊಡುವ ವಿಶ್ವಾಸ. ಈ ವಿಶ್ವಾಸ ಹಾಗೂ ನಂಬಿಕೆಯನ್ನು ನಾವು, ಅಂದರೆ ಶಿಕ್ಷಕ ವರ್ಗ ಪೋಷಕರಿಗೆ ನೀಡಲು ಸಾಧ್ಯವಿಲ್ಲವೇ?

ಇಂತಹ ಪ್ರಯತ್ನಗಳಿಗೆ ಅಲಹಾಬಾದ್ ಹೈಕೋರ್ಟ್‌ ತೀರ್ಪು ಬೆನ್ನೆಲುಬು ಆಗಬೇಕು.  ಫುಲೆ ಅವರ ಸಮಾನ ಶಿಕ್ಷಣ, ಗೋಖಲೆ ಅವರ ಕಡ್ಡಾಯ ಶಿಕ್ಷಣ, ಗಾಂಧಿ ಅವರ ಮೂಲ ಶಿಕ್ಷಣ, ಅಂಬೇಡ್ಕರ್ ಅವರ ಹೋರಾಟದ ಶಿಕ್ಷಣ ಹಾಗೂ ಕೊಠಾರಿ ಅವರ ನೆರೆ-ಹೊರೆ ಶಾಲಾ ಶಿಕ್ಷಣ ಜಾರಿಯಾಗಲು ಈ ತೀರ್ಪು ಮೊದಲ ಮೆಟ್ಟಿಲಾಗಬೇಕು.

ಲೇಖಕ ಉಪನ್ಯಾಸಕ ಹಾಗೂ ಸಂಚಾಲಕ, ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT