ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಕ್ರಿಕೆಟ್‌ಗೆ ಯಾರು ದೊರೆ?

ಮೆಲ್ಬರ್ನ್‌ನಲ್ಲಿ ಇಂದು ಫೈನಲ್‌ l ನ್ಯೂಜಿಲೆಂಡ್‌ಗೆ ಮೊದಲ ಟ್ರೋಫಿಯ ಆಸೆ l ಕ್ಲಾರ್ಕ್‌ಗೆ ಲಭಿಸುವುದೇ ವಿಜಯದ ಉಡುಗೊರೆ
Last Updated 28 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಕ್ರಿಕೆಟ್‌ ಜಗತ್ತಿನ ದೊಡ್ಡ ಪೈಪೋಟಿ ಈಗ ಅಂತಿಮ ಹಂತ ತಲುಪಿದೆ. ಮುಂದಿನ ನಾಲ್ಕು ವರ್ಷಗಳ ಕಾಲ ಏಕದಿನ ಕ್ರಿಕೆಟ್‌ನ ಚಾಂಪಿಯನ್‌ ಯಾರು ಎಂಬುದನ್ನು ನಿರ್ಧರಿಸಲು ಭಾನುವಾರ ಮುಹೂರ್ತ ನಿಗದಿಯಾಗಿದೆ. ಈ ಪಟ್ಟ ಆಸ್ಟ್ರೇಲಿಯಾ ಅಥವಾ ನ್ಯೂಜಿಲೆಂಡ್‌ ಯಾವ ತಂಡದ ಪಾಲು ಆಗಲಿದೆ ಎಂಬುದು ಕುತೂಹಲವಾಗಿದೆ.

ಹನ್ನೊಂದನೇ ಐಸಿಸಿ ವಿಶ್ವಕಪ್‌ ಟೂರ್ನಿಗೆ ಆತಿಥ್ಯ ವಹಿಸಿರುವ ರಾಷ್ಟ್ರಗಳೇ ಫೈನಲ್‌ ತಲುಪಿರುವ ಕಾರಣ ಕುತೂಹಲ ಇಮ್ಮಡಿಗೊಂಡಿದೆ. ಮೆಲ್ಬರ್ನ್ ಕ್ರಿಕೆಟ್‌ ಅಂಗಳದಲ್ಲಿ ಒಂದು ಲಕ್ಷ ಜನ ಪಂದ್ಯ ವೀಕ್ಷಿಸಲು ಅವಕಾಶವಿದೆ. ಆದ್ದರಿಂದ ಜಗತ್ತಿನ ಕೋಟ್ಯಂತರ ಅಭಿಮಾನಗಳ ಚಿತ್ತ ಸುಂದರ ನಗರ ಮೆಲ್ಬರ್ನ್‌ನತ್ತ ನೆಟ್ಟಿದೆ.

ಮೈಕಲ್‌ ಕ್ಲಾರ್ಕ್‌ ನಾಯಕತ್ವದ ಆಸ್ಟ್ರೇಲಿಯಾ ತಂಡ ಸೆಮಿಫೈನಲ್‌ನಲ್ಲಿ 2011ರ ಚಾಂಪಿಯನ್‌ ಭಾರತವನ್ನು ಮಣಿಸಿತ್ತು. ನ್ಯೂಜಿಲೆಂಡ್‌ ನಾಲ್ಕರ ಘಟ್ಟದಲ್ಲಿ ದಕ್ಷಿಣ ಆಫ್ರಿಕಾ ಎದುರು ರೋಚಕ ಗೆಲುವು ಪಡೆದಿತ್ತು. ಕಾಂಗರೂ ನಾಡಿನ ಪಡೆ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಬ್ರೆಂಡನ್ ಮೆಕ್ಲಮ್‌ ನಾಯಕತ್ವದ ಕಿವೀಸ್‌ ಬಳಗ ನಾಲ್ಕನೇ ಸ್ಥಾನ ಹೊಂದಿದೆ.

ಏಕದಿನ ಮಾದರಿಯ ಮುಖಾಮುಖಿ ಮತ್ತು ವಿಶ್ವಕಪ್‌ ಟೂರ್ನಿಯ ಅಂಕಿಅಂಶಗಳನ್ನು ನೋಡಿದರೆ ಆಸ್ಟ್ರೇಲಿಯಾ ತಂಡವೇ ಬಲಿಷ್ಠ ಎನಿಸುತ್ತದೆ. ಉಭಯ ತಂಡಗಳು ಟೂರ್ನಿಯಲ್ಲಿ ಒಂಬತ್ತು ಸಲ ಪೈಪೋಟಿ ನಡೆಸಿದ್ದು ಆರರಲ್ಲಿ ಆಸ್ಟ್ರೇಲಿಯಾ ಗೆದ್ದಿದೆ. ನ್ಯೂಜಿಲೆಂಡ್‌ಗೆ ಜಯ ಲಭಿಸಿದ್ದು ಮೂರು ಪಂದ್ಯಗಳಲ್ಲಿ ಮಾತ್ರ. ಆದರೆ, ಹಿಂದಿನ ಅಂಕಿಅಂಶಗಳು ಫೈನಲ್‌ ಪಂದ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಭಾನುವಾರ ಚೆನ್ನಾಗಿ ಆಡುವವರಿಗಷ್ಟೇ ಚಾಂಪಿಯನ್‌ ಪಟ್ಟ ಎನ್ನುವುದು ಕಟ್ಟಿಟ್ಟ ಬುತ್ತಿ. ಕಿವೀಸ್ ತಂಡದ ನಾಯಕ ಬ್ರೆಂಡನ್ ಮೆಕ್ಲಮ್‌ ಇದೇ ಮಾತನ್ನು ಹೇಳಿದ್ದಾರೆ.

11 ವಿಶ್ವಕಪ್‌, ಮೊದಲ ಫೈನಲ್‌:  ಹನ್ನೊಂದನೇ ಬಾರಿ ವಿಶ್ವಕಪ್ ಆಡುತ್ತಿರುವ ನ್ಯೂಜಿಲೆಂಡ್ ತಂಡ ಮೊದಲ ಬಾರಿಗೆ ಫೈನಲ್‌ ತಲುಪಿದೆ. ಈ ತಂಡ ಆರು ಸಲ ಸೆಮಿಫೈನಲ್‌ಗಳಲ್ಲಿಯೇ ಸೋಲು ಕಂಡಿತ್ತು. 1975 ಮತ್ತು 1979ರ ಮೊದಲ ಎರಡೂ ಟೂರ್ನಿಗಳಲ್ಲಿ ಸೆಮಿಫೈನಲ್‌ ತಲುಪಿತ್ತು.

23 ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಪಾಕ್‌ ಎದುರು ಪರಾಭವಗೊಂಡಿತ್ತು. ಆಗ ಕಿವೀಸ್‌ ತಂಡ ಲೀಗ್ ಹಂತದಲ್ಲಿ ಆಡಿದ್ದ ಎಂಟು ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ಪಡೆದಿತ್ತು. ಲೀಗ್‌ನಲ್ಲಿ ಅಪೂರ್ವ ಆಟವಾಡಿದ್ದ ತಂಡ ನಾಕೌಟ್‌ನ ಹಂತದಲ್ಲಿ ಪದೇ ಪದೇ ನಿರಾಸೆಗೆ ಒಳಗಾಗಿತ್ತು.   ಹಿಂದಿನ ಎರಡೂ ಟೂರ್ನಿಗಳಲ್ಲಿ ನಾಲ್ಕರ ಘಟ್ಟದಲ್ಲಿ ಸೋಲು ಅನುಭವಿಸಿತ್ತು. ಆದರೆ, ಈ ಬಾರಿ ಎಲ್ಲಾ ಅಡೆತಡೆಯನ್ನೂ ದಾಟಿ ಪ್ರಶಸ್ತಿ ಘಟ್ಟಕ್ಕೆ ಲಗ್ಗೆ ಇಟ್ಟಿದೆ.

ಆಸ್ಟ್ರೇಲಿಯಾ ತಂಡ ಮೆಲ್ಬರ್ನ್‌ ಅಂಗಳದಲ್ಲಿ ಉತ್ತಮ ದಾಖಲೆಯನ್ನು ಹೊಂದಿದೆ. 2013ರಿಂದ ಇಲ್ಲಿ ಆಡಿರುವ ಆರು ಪಂದ್ಯಗಳಲ್ಲಿ ಒಂದೂ ಸೋತಿಲ್ಲ. 2012ರಲ್ಲಿ ಶ್ರೀಲಂಕಾ ಎದುರು ಒಂಬತ್ತು ರನ್‌ಗಳ ಸೋಲು ಕಂಡಿತ್ತು. ಈ ಪಂದ್ಯ ಮೈಕಲ್  ಕ್ಲಾರ್ಕ್‌ ಪಾಲಿಗೆ ಮಹತ್ವವೆನಿಸಿದೆ. ಕ್ಲಾರ್ಕ್‌ ಫೈನಲ್‌  ಬಳಿಕ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ. ಇವರು ಈ ಮಾದರಿಯಲ್ಲಿ ಒಟ್ಟು ಎಂಟು ಸಾವಿರ ರನ್ ಗಳಿಸಿದ ಸಾಧನೆ ಮಾಡಲು 93 ರನ್ ಅಗತ್ಯವಿದೆ. ಈ ಬಾರಿಯ ಟೂರ್ನಿಯಲ್ಲಿ ಹೆಚ್ಚು ವಿಕೆಟ್‌ ಪಟ್ಟಿಯಲ್ಲಿ ಟ್ರೆಂಟ್ ಬೌಲ್ಟ್‌ (21) ಮತ್ತು ಮಿಷೆಲ್‌ ಸ್ಟಾರ್ಕ್‌ (20) ಮೊದಲ ಎರಡು ಸ್ಥಾನಗಳಲ್ಲಿದ್ದು, ಅಗ್ರಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ.

ಲೀಗ್‌ ಹಂತದಲ್ಲಿ ಆರು ಮತ್ತು ನಾಕೌಟ್‌ನಲ್ಲಿ ಎರಡು  ಪಂದ್ಯಗಳಲ್ಲಿ ಗೆಲುವು ಪಡೆದಿರುವ ನ್ಯೂಜಿಲೆಂಡ್‌ ಈ ಸಲದ ವಿಶ್ವಕಪ್‌ನಲ್ಲಿ ಅಜೇಯವಾಗಿ ಪ್ರಶಸ್ತಿ ಸುತ್ತು  ಪ್ರವೇಶಿಸಿದೆ. ಅಕ್ಲಂಡ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ  ತಂಡ ಅಮೋಘ ಆಟವಾಡಿತ್ತು.

ಮಾರ್ಟಿನ್ ಗುಪ್ಟಿಲ್‌, ಬ್ರೆಂಡನ್ ಮೆಕ್ಲಮ್‌, ಕೇನ್‌ ವಿಲಿಯಮ್ಸನ್‌, ರಾಸ್ ಟೇಲರ್‌, ಕೋರಿ ಆ್ಯಂಡರ್‌ಸನ್ ಮತ್ತು ಹಿಂದಿನ ಪಂದ್ಯದ ‘ಹೀರೊ’  ಗ್ರಾಂಟ್ ಎಲಿಯಟ್‌ ಬ್ಯಾಟಿಂಗ್‌ ವಿಭಾಗದ ಬಲ ಎನಿಸಿದ್ದಾರೆ. ದಕ್ಷಿಣ ಆಫ್ರಿಕಾ ಮೂಲದ ಎಲಿಯಟ್‌ ದಕ್ಷಿಣ ಆಫ್ರಿಕಾ ಎದುರು ಅಜೇಯ 84 ರನ್ ಗಳಿಸಿದ್ದರು.

ಪಂದ್ಯದ ಕೊನೆಯ ಓವರ್‌ನ ಐದನೇ ಎಸೆತದಲ್ಲಿ ಸಿಕ್ಸರ್‌ ಸಿಡಿಸಿ ಗೆಲುವಿನ ರೂವಾರಿ ಎನಿಸಿದ್ದರು. ಗುಪ್ಟಿಲ್‌ ಲೀಗ್‌ ಪಂದ್ಯದಲ್ಲಿ ವಿಂಡೀಸ್‌ ಎದುರು ದ್ವಿಶತಕ ಸಿಡಿಸಿದ್ದರು. ಈ ತಂಡ ಹಿಂದಿನ 14 ಪಂದ್ಯಗಳಲ್ಲಿ ಒಂದರಲ್ಲಿ ಅ್ಲಷ್ಟೇ ಸೋತಿದೆ.

ಚೊಚ್ಚಲ ಟ್ರೋಫಿಯ ಮೇಲೆ ಕಣ್ಣು ಇಟ್ಟಿರುವ ಕಿವೀಸ್‌ ಪಡೆ ಬೌಲಿಂಗ್‌ನಲ್ಲಿಯೂ ಬಲಿಷ್ಠವಾಗಿದೆ. ಟಿಮ್‌ ಸೌಥಿ, ಟ್ರೆಂಟ್ ಬೌಲ್ಟ್‌, ಮ್ಯಾಟ್‌ ಹೆನ್ರಿ, ಎಡಗೈ ಸ್ಪಿನ್ನರ್‌ ಡೇನಿಯಲ್‌ ವೆಟೋರಿ ಅವರ ಮೇಲೆ ಮಹತ್ವದ ಜವಾಬ್ದಾರಿಯಿದೆ. ‘ನ್ಯೂಜಿಲೆಂಡ್‌ ಗೆಲುವಿನಲ್ಲಿ ವೆಟೋರಿ ಪಾತ್ರ ಮುಖ್ಯವಾಗಿದೆ’ ಎಂದು ಮಹೇಂದ್ರ ಸಿಂಗ್‌ ದೋನಿ ಹೇಳಿದ ಮಾತಿನಲ್ಲಿಯೂ ಸತ್ಯವಿದೆ.

36 ವರ್ಷದ ವೆಟೋರಿ 294 ಏಕದಿನ ಪಂದ್ಯಗಳಿಂದ 305 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಈ ಸಲದ ವಿಶ್ವಕಪ್‌ನಲ್ಲಿ ಎಂಟು ಪಂದ್ಯಗಳಿಂದ 15 ವಿಕೆಟ್‌ ಕಬಳಿಸಿದ್ದಾರೆ. ಮೆಲ್ಬರ್ನ್‌ ಅಂಗಳ ಬೌನ್ಸಿ ಪಿಚ್ ಆಗಿದೆ. ಜೊತೆಗೆ  ಬ್ಯಾಟ್ಸ್‌ಮನ್‌ ಸ್ನೇಹಿ ಎನಿಸಿದೆ. ಆದ್ದರಿಂದ ಬೌಲರ್‌ಗಳ ಜವಾಬ್ದಾರಿ ಹೆಚ್ಚಿದೆ.
ಏಳನೇ ಫೈನಲ್‌: ಹೆಚ್ಚು ಬಾರಿ ಟ್ರೋಫಿ ಗೆದ್ದ ದಾಖಲೆ ಹೊಂದಿರುವ ಆಸ್ಟ್ರೇಲಿಯಾಕ್ಕೆ ಇದು ಏಳನೇ ಫೈನಲ್‌ ಆಗಿದೆ.

ಕಾಂಗರೂಗಳ ನಾಡಿನ ಪಡೆ ಎರಡು ಸಲ ಪ್ರಶಸ್ತಿ ಸುತ್ತಿನಲ್ಲಿ ನಿರಾಸೆ ಕಂಡಿದೆ. 1975ರ ಚೊಚ್ಚಲ ಟೂರ್ನಿಯಲ್ಲಿ ವೆಸ್ಟ್‌ ಇಂಡೀಸ್‌ ಎದುರು ಸೋಲು ಕಂಡಿತ್ತು. 1996ರ ಟೂರ್ನಿಯಲ್ಲಿ ಶ್ರೀಲಂಕಾದ ವಿರುದ್ಧ ಪರಾಭವಗೊಂಡಿತ್ತು. ಇನ್ನುಳಿದ ನಾಲ್ಕು ಫೈನಲ್‌ಗಳಲ್ಲಿ ಚಾಂಪಿಯನ್ ಆಗಿದೆ. ಹ್ಯಾಟ್ರಿಕ್‌ ಪ್ರಶಸ್ತಿ ಏಕೈಕ ತಂಡ ಎನ್ನುವ ಕೀರ್ತಿಯೂ ಈ ತಂಡಕ್ಕಿದೆ.

ಆಸ್ಟ್ರೇಲಿಯಾ ಲೀಗ್‌ ಹಂತದಲ್ಲಿ ಆಡಿದ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಪಡೆದಿದೆ. ನ್ಯೂಜಿಲೆಂಡ್‌ ಎದುರು ಒಂದು ವಿಕೆಟ್‌ನಿಂದ ಸೋಲು ಕಂಡಿತ್ತು. ಆ ಸೋಲಿಗೆ ತಿರುಗೇಟು ನೀಡಲು ಕಾಯುತ್ತಿದೆ. ಬಾಂಗ್ಲಾ ಎದುರಿನ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಶ್ರೇಷ್ಠ ಆಟಗಾರರನ್ನು ಹೊಂದಿರುವ ಆತಿಥೇಯರು ಐದನೇ ಮತ್ತು ತವರಿನಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಹೆಗ್ಗುರಿ ಹೊಂದಿದ್ದಾರೆ.

ಸ್ಟೀವನ್‌ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಡೇವಿಡ್‌ ವಾರ್ನರ್‌, ಆ್ಯರನ್‌ ಫಿಂಚ್‌ ಮತ್ತು ಶೇನ್‌ ವಾಟ್ಸನ್‌ ಅವರನ್ನು ಹೊಂದಿರುವ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ. ಕ್ಲಾರ್ಕ್‌ ಒಟ್ಟು 244 ಏಕದಿನ ಆಡಿ 7907 ರನ್‌ ಕಲೆ ಹಾಕಿದ್ದಾರೆ. ಈ ಸಲದ ವಿಶ್ವಕಪ್‌ನಲ್ಲಿ ಆರು ಪಂದ್ಯ ಆಡಿ  144 ರನ್ ಮಾತ್ರ ಗಳಿಸಿದ್ದಾರೆ. ಇವರು ತಮ್ಮ ಕೊನೆಯ ಏಕದಿನ ಪಂದ್ಯದಲ್ಲಿ ತಂಡಕ್ಕೆ ಹೇಗೆ ಆಸರೆಯಾಗುತ್ತಾರೋ ಕಾದು ನೋಡಬೇಕಿದೆ. ಸೆಮಿಫೈನಲ್‌ನಲ್ಲಿ ಸ್ಮಿತ್‌ ಶತಕ ಬಾರಿಸಿದ್ದರು. ಫಿಂಚ್‌ 81 ರನ್ ಗಳಿಸಿ ಗಟ್ಟಿ ಬುನಾದಿ ಹಾಕಲು ಕಾರಣರಾಗಿದ್ದರು.

ಶ್ರೇಷ್ಠ ವೇಗದ ಬೌಲರ್‌ಗಳನ್ನು ಹೊಂದಿರುವ ಆತಿಥೇಯರು ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಆದಷ್ಟು ಬೇಗನೆ ಕಟ್ಟಿ ಹಾಕುವುದು ಅಗತ್ಯವಿದೆ. ಮಿಷೆಲ್‌ ಸ್ಟಾರ್ಕ್‌, ಜೋಶ್ ಹ್ಯಾಜಲ್‌ವುಡ್‌, ಮಿಷೆಲ್‌ ಜಾನ್ಸನ್‌, ಜೇಮ್ಸ್ ಫಾಕ್ನರ್‌   ಬೌಲಿಂಗ್‌ ಶಕ್ತಿಯಾಗಿದ್ದಾರೆ. ವಿಶ್ವದ ಎರಡು ಶ್ರೇಷ್ಠ ತಂಡಗಳು ಕ್ರಿಕೆಟ್‌ನ ದೊಡ್ಡ ಟೂರ್ನಿ ವಿಶ್ವಕಪ್‌ನಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿವೆ. ಹೀಗಾಗಿ ಭಾನುವಾರ ವಿಶ್ವ ಕ್ರಿಕೆಟ್‌ ಪಾಲಿಗೆ ಸ್ಮರಣೀಯ ದಿನ ಎನಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT