ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷಯದ ಆಳಕ್ಕಿಳಿದು ಓದಿದರೆ ಐಐಟಿ ದಾರಿ ಸುಲಭ

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ನ ‘ಮ್ಯಾಥಮ್ಯಾಜಿಕ್‌’ ಗಣಿತಶಾಸ್ತ್ರ ಕಾರ್ಯಾಗಾರದಲ್ಲಿ ಶಿಕ್ಷಣ ತಜ್ಞ ಆನಂದ್‌ ಕುಮಾರ್‌ ಅಭಿಮತ
Last Updated 25 ಏಪ್ರಿಲ್ 2015, 20:27 IST
ಅಕ್ಷರ ಗಾತ್ರ

ಬೆಂಗಳೂರು: ‘ಮೂಲ ವಿಷಯಗಳನ್ನು ಆಳಕ್ಕಿಳಿದು ಓದುವುದರ ಜೊತೆಗೆ ಹೆಚ್ಚು ಸೂಕ್ಷ್ಮವಾಗಿ ಆಲೋಚಿಸುವವರು ನಾವಾದರೆ ಐಐಟಿಯಲ್ಲಿ ಸುಲಭವಾಗಿ ಸ್ಥಾನ ಗಿಟ್ಟಿಸಬಹುದು’ ಎಂದು ಶಿಕ್ಷಣ ತಜ್ಞ ಹಾಗೂ ಗಣಿತ ವಿದ್ವಾಂಸ ಆನಂದ್‌ ಕುಮಾರ್‌ ಹೇಳಿದರು.

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಹಾಗೂ ರೇವಾ ಯೂನಿವರ್ಸಿಟಿ ಜಂಟಿಯಾಗಿ ನಗರದ ಶಿಕ್ಷಕರ ಸದನದಲ್ಲಿ ಶನಿವಾರ ಆಯೋಜಿಸಿದ್ದ ‘ಮ್ಯಾಥಮ್ಯಾಜಿಕ್‌’ ಗಣಿತಶಾಸ್ತ್ರದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.

‘ಐಐಟಿಯಲ್ಲಿ ಹೊಸ ವಿಚಾರಗಳಿಗೆ ಹೆಚ್ಚಿನ ಒತ್ತು ಕೊಡಲಾಗುತ್ತದೆ. ನಾವು ಶಾಲಾ ಹಂತದಲ್ಲಿದ್ದಾಗಲೇ ಗಣಿತ ಸೇರಿದಂತೆ ಇತರ ವಿಷಯಗಳನ್ನು ಆಳಕ್ಕಿಳಿದು ಓದಿದರೆ ಮುಂದಿನ ದಾರಿ ಸುಲಭವಾಗಿ ಕ್ರಮಿಸಬಹುದು’ ಎಂದೂ ಹೇಳಿದರು.

‘ಒಂದು ನಿರ್ದಿಷ್ಟ ಗುರಿಯನ್ನು ಇಟ್ಟುಕೊಳ್ಳಿ. ಅದಕ್ಕಾಗಿ ಈಗಿನಿಂದಲೇ ಹೆಚ್ಚೆಚ್ಚು ಓದಲು ಶುರುಮಾಡಿ’ ಎಂದು ಐಐಟಿಗೆ ಸಂಬಂಧಿಸಿದಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಸಂಕ್ಷಿಪ್ತವಾಗಿ ಉತ್ತರಿಸಿದರು.

‘ಭವಿಷ್ಯದಲ್ಲಿ ಒಳ್ಳೆಯ ಶಿಕ್ಷಕನಾಗಬೇಕು ಎಂಬ ಇಚ್ಛೆಯಿದ್ದರೆ ನಮ್ಮ ಸಂಸ್ಥೆಗೆ ಬಂದು ತರಬೇತಿ ಪಡೆಯಬಹುದು’ ಎಂದು ಎಂಜಿನಿಯರಿಂಗ್‌ ಶಿಕ್ಷಕರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಮಕ್ಕಳು ಗಳಿಸುವ ಅಂಕಗಳನ್ನು ಆಧರಿಸಿ ಅನೇಕ ಜನ ಶಿಕ್ಷಕರು ಅವರ ಜೊತೆಗೆ ಭಿನ್ನವಾಗಿ ವರ್ತಿಸುತ್ತಾರೆ ಎಂಬುದು ನಿಜ. ಆದರೆ, ಎಲ್ಲ ಶಿಕ್ಷಕರು ಒಂದೇ ರೀತಿ ಇರುವುದಿಲ್ಲ. ಒಂದುವೇಳೆ ಅಂತಹ ಸ್ಥಿತಿ ಇದ್ದರೂ ನಾವು ನಮ್ಮ ಪ್ರಯತ್ನ ಮುಂದುವರೆಸಬೇಕು’ ಎಂದು ಸಲಹೆ ಮಾಡಿದರು.

‘ಗಣಿತ ವಿಷಯವನ್ನು ಪ್ರೀತಿಸಿದರೆ ಅದು ನಮ್ಮ ಜೀವನದಲ್ಲಿ ದೊಡ್ಡ ಚಮತ್ಕಾರ ಉಂಟು ಮಾಡುತ್ತದೆ. ಆದರೆ, ಮೊದಲು ನನಗೆ ಗಣಿತ ಇಷ್ಟವಿದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿದು ಮುನ್ನಡೆಯಬೇಕು’ ಎಂದು ಕಿವಿಮಾತು ಹೇಳಿದರು.

‘ಗಣಿತ ವಿಷಯದ ಸಮಸ್ಯೆ  ಬಗೆಹರಿಸಲು ಕೆಲವರು ಬಹಳ ಪರದಾಡುತ್ತಾರೆ. ಆದರೆ, ಇದರಲ್ಲಿ ಪರದಾಡುವಂತಹದ್ದು ಏನೂ ಇಲ್ಲ. ಕಠಿಣ ಪರಿಶ್ರಮದಿಂದ ಅದರ ಮೇಲೆ ಹಿಡಿತ ಸಾಧಿಸಬಹುದು’ ಎಂದು ವಿಶ್ವಾಸ ಮೂಡಿಸಿದರು.

ದಿ ಪ್ರಿಂಟರ್‌್ಸ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್‌. ತಿಲಕ್‌ ಕುಮಾರ್‌ ಅವರು ಆನಂದ್‌ ಕುಮಾರ್‌ ಅವರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು.

ರೇವಾ ಯೂನಿವರ್ಸಿಟಿ ರಿಜಿಸ್ಟ್ರಾರ್‌ ಎಂ. ಧನಂಜಯ್‌, ಯೋಜನಾ ನಿರ್ದೇಶಕ ಡಾ. ಎನ್‌. ರಮೇಶ್‌, ಯುನೈಟೆಡ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಶನ್ಸ್‌ನ ಮೋನಾ ಗುಲಾಟಿ ಪುರಿ, ಗಿರಿಧರ್‌ ಗುಲಾಟಿ, ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ಅಖಿಲ ಭಾರತ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಆಲಿವರ್‌ ಲೆಸ್ಲಿ ವೇದಿಕೆ ಮೇಲೆ ಉಪಸ್ಥಿತರಿದ್ದರು.  ವಿದ್ಯಾರ್ಥಿಗಳಿಂದ ಇಡೀ ಸಭಾಂಗಣ ಕಿಕ್ಕಿರಿದು ತುಂಬಿತ್ತು.

ಭವಿಷ್ಯದ ಯೋಜನೆಗಳು...
‘ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಹತ್ತನೇ ತರಗತಿ, ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ‘ಸೂಪರ್‌ 30’ಗೆ ಆಯ್ಕೆ ಮಾಡುವ ಯೋಜನೆ ಇದೆ. ಇದನ್ನು ಶೀಘ್ರದಲ್ಲೇ ಜಾರಿಗೆ ತರುತ್ತೇನೆ’ ಎಂದು ಆನಂದ್‌ ಕುಮಾರ್‌ ಹೇಳಿದರು.
‘ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ ಆಧರಿಸಿ ಮೂವರಿಗೆ ವಿದೇಶ ಪ್ರವಾಸ, ಹತ್ತು ಮಂದಿಗೆ ಭಾರತದಲ್ಲಿ ಶೈಕ್ಷಣಿಕ ಪ್ರವಾಸ ಹಾಗೂ 50 ಜನರಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು’ ಎಂದು ಅವರು ತಿಳಿಸಿದರು.

‘ಹೆಚ್ಚಿನ ಜನರಿಗೆ ತಲುಪಲು ಶೀಘ್ರದಲ್ಲೇ ಆನ್‌ಲೈನ್‌ ತರಗತಿ ಶುರು ಮಾಡಲಾಗುವುದು. ಇದಕ್ಕಾಗಿ ಕೇವಲ ಒಂದು ರೂಪಾಯಿ ಶುಲ್ಕ ವಿಧಿಸಲಾಗುವುದು. ಇದರಿಂದ ಸಂಗ್ರಹವಾದ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಲಾಗುವುದು’ ಎಂದೂ ಅವರು
ಹೇಳಿದರು.
*
‘ಆರಕ್ಷಣ್‌’ ಚಿತ್ರಕ್ಕೆ ಆನಂದ್‌ ಸ್ಫೂರ್ತಿ
ಹಿಂದಿ ಚಿತ್ರರಂಗದ ಹೆಸರಾಂತ ನಿರ್ದೇಶಕ ಪ್ರಕಾಶ್‌ ಝಾ ಅವರು ‘ಆರಕ್ಷಣ್‌’ ಚಿತ್ರ ನಿರ್ಮಿಸಲು ಆನಂದ್‌ ಕುಮಾರ್‌ ಅವರೇ ಸ್ಫೂರ್ತಿ. ಆನಂದ್‌ ಅವರು ಪಟ್ನಾದಲ್ಲಿ ಬಡ ಪ್ರತಿಭಾವಂತ ಮಕ್ಕಳಿಗೆ ಉಚಿತವಾಗಿ ಗಣಿತದ ಪಾಠ ಹೇಳಿಕೊಡುತ್ತಿದ್ದರು. ಇದಕ್ಕಾಗಿ ಅವರಿಗೆ  ಬೆದರಿಕೆ ಬಂದಿತ್ತು.  ಒಂದೆರಡು ಬಾರಿ ಅವರ ಮೇಲೆ ಹಲ್ಲೆ ಯತ್ನವೂ ನಡೆದಿತ್ತು. ಬಳಿಕ ಇದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಈ ವಿಷಯ ತಿಳಿದು ಪ್ರಕಾಶ್‌ ಝಾ ಅವರು ‘ಆರಕ್ಷಣ್‌’ ಚಿತ್ರ ನಿರ್ಮಿಸಿದ್ದರು.

ಚಿತ್ರದಲ್ಲಿ ಶಿಕ್ಷಕನ (ಆನಂದ್‌) ಪಾತ್ರದಲ್ಲಿ ಬಾಲಿವುಡ್‌ನ ಹೆಸರಾಂತ ನಟ ಅಮಿತಾಭ್‌ ಬಚ್ಚನ್‌ ಕಾಣಿಸಿಕೊಂಡಿದ್ದರು.
ಚಿತ್ರ ನಿರ್ಮಾಣಕ್ಕೂ ಮುನ್ನ ಸ್ವತಃ ಅಮಿತಾಭ್‌ ಅವರು ಆನಂದ್‌ ಕುಮಾರ್‌ ಅವರ ಬಳಿ ಹೋಗಿ ಅವರು ಹೇಗೆ ಪಾಠ ಹೇಳಿಕೊಡುತ್ತಾರೆ ಎನ್ನುವುದನ್ನು ತಿಳಿದುಕೊಂಡು ಬಂದಿದ್ದರು.

ದೇಶದ ವಿವಿಧ ಕಡೆ ನಡೆದ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಆನಂದ್‌ ಕುಮಾರ್‌ ಅವರನ್ನು ಆಹ್ವಾನಿಸಲಾಗಿತ್ತು.  ಈ ವಿಷಯವನ್ನು ಸ್ವತಃ ಆನಂದ್‌ ಕುಮಾರ್‌ ಅವರೇ ವಿದ್ಯಾರ್ಥಿಗಳ ಜೊತೆಗೆ ಹಂಚಿಕೊಂಡರು. ಈ ಕುರಿತ ವಿಡಿಯೊ ಕೂಡ ತೋರಿಸಿದರು. ಅವರ ಕೆಲಸಕ್ಕೆ ಆರಂಭದಲ್ಲಿ ಯಾವ ರೀತಿ ಮಾಫಿಯಾದಿಂದ ತೊಡಕು ಉಂಟಾಯಿತು ಎಂದು ಹೇಳುವಾಗ ಈ ಸಂಗತಿಯನ್ನು ವಿವರಿಸಿದರು. ಆಗ ಅಲ್ಲಿದ್ದವರೆಲ್ಲರು ಕ್ಷಣಕಾಲ ಚಕಿತರಾದರು.

ಈ ಚಿತ್ರ 2011ರಲ್ಲಿ ತೆರೆಗೆ ಬಂದಿತ್ತು. ಶಿಕ್ಷಣ ಕ್ಷೇತ್ರವನ್ನು ಮಾಫಿಯಾ ಜಗತ್ತು ಹೇಗೆ ನಿಯಂತ್ರಿಸುತ್ತಿದೆ ಎನ್ನುವುದು ಹಾಗೂ ಮೀಸಲಾತಿ ವಿವಾದ ಚಿತ್ರದ ಕಥಾವಸ್ತು ಆಗಿತ್ತು.
*

ಸಣ್ಣ  ಸಣ್ಣ ಸಂಗತಿಗಳನ್ನು ಬಹಳ ವೈಜ್ಞಾನಿಕವಾಗಿ ಸರಳ ರೀತಿಯಲ್ಲಿ ತಿಳಿಸಿಕೊಟ್ಟಿದ್ದಾರೆ. ಇದರಿಂದ ಬಹಳ ಪ್ರಯೋಜನವಾಗಲಿದೆ.
- ಬಿಂದು,
ದ್ವಿತೀಯ ಪಿಯುಸಿ ವಿದ್ಯಾರ್ಥಿನಿ

*
ಇದು ಎಂತಹವರಲ್ಲೂ  ಸ್ಫೂರ್ತಿ ತುಂಬುತ್ತದೆ. ಗಣಿತದ  ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುವ ವಿಧಾನ ಹೇಳಿಕೊಟ್ಟಿದ್ದಾರೆ.
- ಯಶ್‌,
ಹತ್ತನೇ ತರಗತಿ ವಿದ್ಯಾರ್ಥಿ

*
ಆನಂದ್‌ ಕುಮಾರ್‌  ಉಪಯುಕ್ತ ಮಾಹಿತಿ ಕೊಟ್ಟಿದ್ದಾರೆ. ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಕಾರ್ಯ ಶ್ಲಾಘನಾರ್ಹ.
- ದರ್ಶನ್‌,
ಎಂಜಿನಿಯರಿಂಗ್ ಆಕಾಂಕ್ಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT