ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ್ಣು ಔದಾರ್ಯದ ಕೆಲವು ಪ್ರಸಂಗಗಳು...

Last Updated 26 ಜುಲೈ 2014, 19:30 IST
ಅಕ್ಷರ ಗಾತ್ರ

ನಮ್ಮ ಕನ್ನಡ ಚಿತ್ರರಂಗ ಆಗಿನ್ನೂ ಮದ್ರಾಸ್‌ನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡು ನೆಲೆಯೂರುತ್ತಿತ್ತು. ನಾನು ಮುಂಬೈನಲ್ಲಿ ಇದ್ದಾಗ ಅಲ್ಲಿನ ನಿರ್ದೇಶಕರ ಸಂಘದ ಸದಸ್ಯನಾಗಿದ್ದೆ. ಅಲ್ಲಿನ ಸದಸ್ಯರು, ನಿರ್ದೇಶಕರಿಗೆ ಬೇಕಾದ ಅನೇಕ ಅನುಕೂಲಗಳನ್ನು ಆ ಸಂಘದ ಮೂಲಕ ಕಲ್ಪಿಸಿದ್ದರು. ನಿವೇಶನ, ಅನಾರೋಗ್ಯದಿಂದ ಬಳಲುತ್ತಿದ್ದವರು ಅಥವಾ ವೃದ್ಧಾಪ್ಯದ ಸಮಸ್ಯೆ ಎದುರಿಸುತ್ತಿದ್ದ ನಿರ್ದೇಶಕರಿಗೆ ಸಹಾಯ ಮಾಡುವುದು ಮೊದಲಾದ ಗಮನಾರ್ಹ ಕೆಲಸಗಳನ್ನು ಸಂಘ ಅಲ್ಲಿ ಮಾಡಿತ್ತು. ಅದರಿಂದ ಸ್ಫೂರ್ತಿ ಪಡೆದ ನನಗೆ, ನಮ್ಮಲ್ಲೂ ಅಂಥದ್ದೊಂದು ನಿರ್ದೇಶಕರ ಸಂಘ ಹುಟ್ಟಬೇಕು ಎಂಬ ಬಯಕೆ ಮೂಡಿತ್ತು.

ಬೆಂಗಳೂರಿನ ಬಹುತೇಕ ನಿರ್ದೇಶಕರು ಸೇರುವ ಸಂದರ್ಭ ಒದಗಿಬಂತು. ಆಗ ಅಲ್ಲಿ ನಾನು, ಮುಂಬೈನ ನಿರ್ದೇಶಕರ ಸಂಘದ ಬಗೆಗೆ ಪ್ರಸ್ತಾಪಿಸಿದೆ. ಗಿರೀಶ ಕಾಸರವಳ್ಳಿ, ಶಿವರಾಮ್, ಸೋಮಶೇಖರ, ರವಿ, ಕಾಶಿನಾಥ ಮೊದಲಾದ ನಿರ್ದೇಶಕರು ಅಲ್ಲಿ ಇದ್ದರು. ಆ ಮಾತಿನ ಫಲಶ್ರುತಿಯಾಗಿ ಎಲ್ಲರೂ ಸೇರಿ ನಿರ್ದೇಶಕರ ಸಂಘ ಕಟ್ಟಿದ್ದಾಯಿತು. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂತ ಎನಿಸಿದ್ದ ಪುಟ್ಟಣ್ಣ ಕಣಗಾಲ್ ಅದರ ಸ್ಥಾಪಕ ಅಧ್ಯಕ್ಷ. ಲಕ್ಷ್ಮೀನಾರಾಯಣ ಉಪಾಧ್ಯಕ್ಷ. ನಾನು ಹಾಗೂ ರವಿ (ಕೆ.ಎಸ್‌.ಎಲ್‌. ಸ್ವಾಮಿ) ಕಾರ್ಯದರ್ಶಿಗಳಾಗಿ ಆಯ್ಕೆಯಾದೆವು.

ಸಂಘದ ಪದಾಧಿಕಾರಿಗಳ ಆಯ್ಕೆ ನಡೆದ ಆ ದಿನ ವಿಷ್ಣುವನ್ನು ಕೂಡ ಅಲ್ಲಿಗೆ ಕರೆದಿದ್ದೆ. ಯಾವುದೇ ನಟರು ಅಲ್ಲಿ ಇರದೇ ಇದ್ದುದರಿಂದ ವಿಷ್ಣು ಉಪಸ್ಥಿತಿ ಕೆಲವು ನಿರ್ದೇಶಕರಿಗೆ ಕಿರಿಕಿರಿ ಉಂಟುಮಾಡಿತ್ತು. ವಿಷ್ಣು, ನನ್ನ ಪ್ರೀತಿಯ ಒತ್ತಾಯಕ್ಕೆ ಕಟ್ಟುಬಿದ್ದಷ್ಟೇ ಆ ದಿನದ ಸಭೆಯಲ್ಲಿ ಹಾಜರಿದ್ದುದು. ಸಂಘಕ್ಕೆ ಅಗತ್ಯವಿದ್ದ ಹಣದ ವ್ಯವಸ್ಥೆ ಹೇಗೆ, ಕಚೇರಿ ಎಲ್ಲಿ ಮಾಡುವುದು, ಸದಸ್ಯತ್ವದ ಶುಲ್ಕ ಎಷ್ಟು ನಿಗದಿ ಮಾಡಬೇಕು ಇತ್ಯಾದಿ ವಿಷಯಗಳು ಮೊದಲ ಸಭೆಯಲ್ಲಿ ಚರ್ಚಿತವಾದವು.

ಅಲ್ಲೇ ಇದ್ದ ವಿಷ್ಣು ನನ್ನ ಕೈಗೆ ಒಂದು ಕವರ್ ಕಳುಹಿಸಿಕೊಟ್ಟ. ಅದನ್ನು ತೆರೆದು ನೋಡಿದರೆ, ಐದು ಸಾವಿರ ರೂಪಾಯಿ ಇತ್ತು. ನಮ್ಮ ನಿರ್ದೇಶಕರ ಸಂಘಕ್ಕೆ ಅದು ಅವನ ಕೊಡುಗೆ. ೧೯೮೦ರಲ್ಲಿ ಐದು ಸಾವಿರ ರೂಪಾಯಿ ಸಣ್ಣ ಮೊತ್ತ ಆಗಿರಲಿಲ್ಲ. ಅಲ್ಲಿ ಇದ್ದ ಕೆಲವು ನಿರ್ದೇಶಕರು ವಿಷ್ಣು ಹಣ ಕೊಟ್ಟಿದ್ದನ್ನು ವಿರೋಧಿಸಿದರು. ನಾನು, ರವಿ ಮತ್ತು ಶಿವರಾಮು ಅದನ್ನು ಸಮರ್ಥಿಸಿಕೊಂಡು, ತಪ್ಪೇನೂ ಇಲ್ಲ ಎಂದು ವಾದಿಸಿದೆವು. ಕೊನೆಗೆ ಪುಟ್ಟಣ್ಣನವರು ಸಮ್ಮತಿ ಸೂಚಿಸಿದರು. ನಟ, ನಿರ್ದೇಶಕರ ನಡುವೆ ಶೀತಲ ಸಮರ ಇದ್ದಿದ್ದೇ. ಆದರೆ, ವಿಷ್ಣುವನ್ನು ಯಾವ ನಿರ್ದೇಶಕರೂ ದ್ವೇಷಿಸುತ್ತಾ ಇರಲಿಲ್ಲ.

ಮುಂದೆ ನಾವು ನಿರ್ದೇಶಕರ ಸಂಘದಿಂದ ಪ್ರತಿವರ್ಷ ಒಂದು ಕಾರ್ಯಕ್ರಮ ಆಯೋಜಿಸಿ, ಅರ್ಹರಿಗೆ ಪ್ರಶಸ್ತಿ ಕೊಡಮಾಡುವ ಪರಿಪಾಠ ಪ್ರಾರಂಭಿಸಿದೆವು. ಚಿತ್ರರಂಗದ ಪ್ರತಿಷ್ಠಿತ ವ್ಯಕ್ತಿಗಳು ತಮ್ಮ ತಂದೆ-, ತಾಯಿ ಅಥವಾ ಬಂಧುಗಳ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡಬಹುದಿತ್ತು. ರಾಜ್‌ಕುಮಾರ್ ತಮ್ಮ ತಂದೆಯ ಹೆಸರಿನಲ್ಲಿ ಪ್ರಶಸ್ತಿ ಕೊಡಲು ಮುಂದೆ ಬಂದರು. ಅದಕ್ಕಾಗಿ ಒಂದಿಷ್ಟು ಇಡುಗಂಟನ್ನು ಇಟ್ಟು, ಅದರಿಂದ ಬರುವ ಬಡ್ಡಿಯಲ್ಲಿ ಪ್ರಶಸ್ತಿ ನೀಡಲು ತೀರ್ಮಾನಿಸಿದೆವು.

ವಿಷ್ಣುವಿಗೂ ಈ ವಿಷಯ ತಿಳಿದು ತನ್ನ ತಂದೆ ನಾರಾಯಣರಾವ್ ಹೆಸರಿನಲ್ಲಿ ಪ್ರಶಸ್ತಿ ಕೊಡಲು ನಿರ್ಧರಿಸಿದ. ನಾರಾಯಣ ರಾವ್ ಅವರು ಚಿತ್ರಸಾಹಿತಿ, ನಟರಾಗಿ ಕೆಲಸ ಮಾಡಿದ್ದವರು. ವಿಷ್ಣು ತನ್ನ ತಂದೆಯ ಹೆಸರಿನಲ್ಲಿ ಅತ್ಯುತ್ತಮ ಚಿತ್ರಕಥೆಗಾರನಿಗೆ ಪ್ರಶಸ್ತಿ ನೀಡುವುದಾಗಿ ತಿಳಿಸಿದ. ಅಂದಿನಿಂದ ಪ್ರತಿವರ್ಷ ತಾನೇ ಮುಂದೆ ನಿಂತು, ಆ ಪ್ರಶಸ್ತಿಯನ್ನು ನೀಡುತ್ತಿದ್ದ. ಅವನು ಎಷ್ಟೋ ಜನರಿಗೆ ಮದುವೆಗೆ, ಆಸ್ಪತ್ರೆಗೆ ಖರ್ಚಿಗೆ, ವಿದ್ಯಾಭ್ಯಾಸಕ್ಕೆ ಎಂದು ಹಣ ಸಹಾಯ ಮಾಡಿದ್ದ. ಆದರೆ, ಯಾರ ಬಳಿಯೂ ಅದನ್ನು ಹೇಳಿಕೊಳ್ಳುತ್ತಿರಲಿಲ್ಲ.

ಅದೇ ಸಂದರ್ಭದಲ್ಲಿ ಪತ್ರಕರ್ತ ವಿಜಯ ಸಾರಥಿ ನನಗೂ, ವಿಷ್ಣುವಿಗೂ ಸ್ನೇಹಿತರಾಗಿದ್ದರು. ಟೀಕೆ ಮಾಡಿ ವಿಮರ್ಶೆ ಬರೆಯುತ್ತಿದ್ದ ಪತ್ರಕರ್ತರನ್ನು ಕಂಡರೆ ಚಿತ್ರರಂಗದ ಕೆಲವರು ಮುಖ ಸಿಂಡರಿಸುತ್ತಿದ್ದುದು ಸಹಜವೇ ಆಗಿತ್ತು. ನಾನು ಆಗ ಬೆಂಗಳೂರಿನ ಸದಾಶಿವನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದೆ. ಅಲ್ಲಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ವಿಜಯ ಸಾರಥಿ ಆಗ ಹವ್ಯಾಸಿ ಪತ್ರಕರ್ತನಾಗಿದ್ದ. ಒಮ್ಮೆ ಅವನು ಸಪ್ಪೆಯಾಗಿದ್ದ. ಯಾಕೆ ಎಂದು ವಿಚಾರಿಸಿದಾಗ, ಅವನಿಗೆ ೨೦ ಸಾವಿರ ರೂಪಾಯಿ ಅಗತ್ಯವಿರುವುದು ಗೊತ್ತಾಯಿತು. ನನ್ನ ಬಳಿಯೂ ತಕ್ಷಣಕ್ಕೆ ಅಷ್ಟು ಹಣ ಇರಲಿಲ್ಲ. ವಿಷ್ಣುವಿನಿಂದ ಸಾಲ ಕೊಡಿಸುವುದಾಗಿ ಹೇಳಿದೆ. ವಿಷ್ಣು ಸ್ನೇಹಿತನಾಗಿದ್ದ ಅವನು ಎಂದೂ ಹಣ ಸಹಾಯ ಕೇಳಿರಲಿಲ್ಲ.

ವಿಷ್ಣು ಏನೆಂದುಕೊಳ್ಳುತ್ತಾನೋ ಎಂದು ಅನುಮಾನಿಸಿದ. ನಾನೇ ಕೊಡಿಸುತ್ತೇನೆ. ಆದರೆ, ಹೇಳಿದ ಸಮಯಕ್ಕೆ ಸರಿಯಾಗಿ ವಾಪಸ್ ಕೊಡಬೇಕು. ಸಾಲದ ವಿಷಯದಲ್ಲಿ ವಿಷ್ಣು ಬಹಳ ಕಟ್ಟುನಿಟ್ಟು ಎಂದೆ. ವಿಷ್ಣು ೨೦ ಸಾವಿರ ರೂಪಾಯಿ ಸಾಲ ಕೊಟ್ಟು, ನನ್ನ ನಂಬಿಕೆಯನ್ನು ಉಳಿಸಿದ. ಆ ತಿಂಗಳು ಸಂಬಳ ಬಂದಮೇಲೆ ಅದನ್ನು ವಾಪಸ್ ಕೊಟ್ಟ ವಿಜಯಸಾರಥಿ ಕೂಡ ಕೊಟ್ಟ ಮಾತಿಗೆ ತಪ್ಪಲಿಲ್ಲ.

ಅಡುಗೆ ಶ್ರೀಧರ್, ಡ್ರೈವರ್ ರಾಧಾಕೃಷ್ಣ ಎಲ್ಲರೂ ದಶಕಗಟ್ಟಲೆ ವಿಷ್ಣು ಮನೆಯಲ್ಲಿ ಕೆಲಸ ಮಾಡಿದವರು. ವಿಷ್ಣು ಅವರನ್ನು ಎಷ್ಟು ಪ್ರೀತಿಯಿಂದ ನೋಡಿಕೊಂಡಿದ್ದ ಎನ್ನುವುದಕ್ಕೆ ಅವರು ಸುದೀರ್ಘ ಅವಧಿ ಕೆಲಸ ಮಾಡಿದ್ದೇ ಸಾಕ್ಷಿ.
*
ಪ್ರೇಮಲೋಕದಲ್ಲಿ ನಟಿಸಲು ಒಪ್ಪಿಸಿದ್ದು...

ನಾನು, ವಿಷ್ಣು ಸ್ನೇಹಿತರು ಎನ್ನುವುದು ಚಿತ್ರರಂಗದ ಅನೇಕರಿಗೆ ಗೊತ್ತಿತ್ತು. ವಿಷ್ಣುವಿನ ಕಿವಿಗೆ ಏನಾದರೂ ಮುಟ್ಟಿಸಬೇಕಿದ್ದರೆ ಅದನ್ನು ನನಗೆ ತಿಳಿಸುತ್ತಿದ್ದವರೇ ಹೆಚ್ಚು. ನಾನು ಅದರ ಉದ್ದೇಶ ಅರಿತುಕೊಂಡು, ವಿಷ್ಣುವಿಗೆ ಎಷ್ಟು ದಾಟಿಸಬೇಕೋ ಅಷ್ಟನ್ನೇ ದಾಟಿಸುತ್ತಿದ್ದೆ.

ಒಮ್ಮೆ ವೀರಾಸ್ವಾಮಿಯವರು ತಮ್ಮ ಮಗ ರವಿ (ರವಿಚಂದ್ರನ್) ಏನೋ ಮಾತನಾಡಬೇಕು ಎಂದು ನನ್ನನ್ನು ಕರೆದರು. ನನಗೆ ಏನು ಹೇಳುತ್ತಾರೋ ಎಂಬ ಆತಂಕ. ಅವರ ಮನೆಯ ಮೇಲೆ ಒಂದು ಸಣ್ಣ ಕೋಣೆ ಇತ್ತು. ಅಲ್ಲಿ ರವಿಚಂದ್ರನ್, ನಾನು, ವೀರಾಸ್ವಾಮಿ ಮಾತನಾಡಿದೆವು.

‘ಪ್ರೇಮಲೋಕ’ ಸಿನಿಮಾಗೆ ರವಿ ಸಿದ್ಧತೆ ಮಾಡಿಕೊಳ್ಳುತ್ತಿದ್ದ. ಅದರಲ್ಲಿ ಕನ್ನಡದ ದೊಡ್ಡ ನಟರೆಲ್ಲರಿಂದ ಸಣ್ಣ ಪಾತ್ರಗಳನ್ನು ಮಾಡಿಸುವುದು ರವಿ ಬಯಕೆಯಾಗಿತ್ತು. ಅಂಬರೀಷ್, ಪ್ರಭಾಕರ್ ಕೂಡ ನಟಿಸಲಿದ್ದರು. ವಿಷ್ಣುವನ್ನೂ ಒಂದು ಪಾತ್ರಕ್ಕೆ ಒಪ್ಪಿಸುವಂತೆ ನನ್ನನ್ನು ರವಿ ಕೇಳಿಕೊಂಡರು.

ನನಗೆ ಏನೂ ಹೇಳಲು ತೋಚಲಿಲ್ಲ. ವಿಷ್ಣುವಿಗೆ ಮೊದಲ ಚಿತ್ರದ ಅವಕಾಶ ಸಿಕ್ಕಿದ್ದರಲ್ಲಿ ವೀರಾಸ್ವಾಮಿಯವರ ಪಾತ್ರ ದೊಡ್ಡದಿತ್ತು. ಆಮೇಲೆ ‘ಗಂಧದಗುಡಿ’ಯಲ್ಲಿ ಆದ ವಿವಾದ ಇನ್ನೂ ಮನದಿಂದ ಮರೆಯಾಗಿರಲಿಲ್ಲ. ಒಂದು ವೇಳೆ ವಿಷ್ಣು ನಿರಾಕರಿಸಿದರೆ, ಅದನ್ನು ವೀರಾಸ್ವಾಮಿಯವರಲ್ಲಿ ಹೇಳುವುದು ಹೇಗೆ ಎನ್ನುವುದು ನನ್ನ ಚಿಂತೆ. ‘ಗಂಧದ ಗುಡಿ’ ಸಿನಿಮಾ ವಿವಾದ ವಿಷ್ಣುವಿನ ಮೇಲೆ ಯಾವ ಪರಿಣಾಮ ಬೀರಿತ್ತು ಎನ್ನುವುದೂ ನನಗೆ ಗೊತ್ತಿತ್ತು. ಅವನಿಗೆ ವೀರಾಸ್ವಾಮಿಯವರ ಸಿನಿಮಾದಲ್ಲಿ ಸಣ್ಣ ಪಾತ್ರವೊಂದರಲ್ಲಿ ನಟಿಸುವಂತೆ ಹೇಳುವುದೂ ನನಗೆ ಸುಲಭವಾಗಿರಲಿಲ್ಲ.

ಅದೊಂದು ರೀತಿ ಧರ್ಮಸಂಕಟ. ವಿಷ್ಣು ‘ಕೃಷ್ಣ ನೀ ಬೇಗನೆ ಬಾರೊ’ ಸಿನಿಮಾ ಚಿತ್ರೀಕರಣದಲ್ಲಿ ನಿರತನಾಗಿದ್ದ ಸಂದರ್ಭ ಅದು. ಊಟಕ್ಕೆ ಬರುವಂತೆ ಕರೆದ. ಆ ಸಮಯವನ್ನು ವಿಷಯ ತಿಳಿಸಲು ಉಪಯೋಗಿಸಿಕೊಳ್ಳುವುದು ಒಳ್ಳೆಯದೆಂದು ನಿಶ್ಚಯಿಸಿ ರವಿಚಂದ್ರನ್‌ ಅವರನ್ನೂ ಕರೆದೆ. ರವಿಚಂದ್ರನ್‌ ಬಂದದ್ದನ್ನು ನೋಡಿ ವಿಷ್ಣು ಸಂತೋಷಪಟ್ಟ. ಅಪ್ಪಿಕೊಂಡು, ವೀರಾಸ್ವಾಮಿಯವರ ಆರೋಗ್ಯ ವಿಚಾರಿಸಿಕೊಂಡ. ಸ್ವಲ್ಪ ಹೊತ್ತಿನ ನಂತರ ರವಿ ‘ಪ್ರೇಮಲೋಕ’ ಚಿತ್ರದ ಸಣ್ಣ ಪಾತ್ರದ ಪ್ರಸ್ತಾಪ ಮುಂದಿಟ್ಟರು. ಎರಡನೇ ಯೋಚನೆಯೇ ಇಲ್ಲದೆ ವಿಷ್ಣು, ‘ಸರಿ ಮಾಡೋಣ. ನಿಮ್ಮದು ನಮ್ಮ ಕಂಪೆನಿ ಇದ್ದಂತೆ. ನನಗೆ ಅವಕಾಶ ಕೊಟ್ಟ ಮಾತೃಸಂಸ್ಥೆ ಅದು’ ಎಂದಾಗ ನನಗೆ ಸಂತೋಷ. ರವಿಗೂ ಖುಷಿ. ಅಭಿನಯಿಸುವ ಖಾತರಿ ನೀಡಿ, ರವಿಚಂದ್ರನ್‌ ಅವರನ್ನು ಅಲ್ಲಿಂದ ಬೀಳ್ಕೊಟ್ಟೆವು.

ಆ ದಿನ ಸಂಜೆ ವೀರಾಸ್ವಾಮಿಯವರನ್ನು ನೋಡಿಕೊಂಡು ಬರೋಣ ಎಂದು ವಿಷ್ಣು ನನ್ನನ್ನೂ ಕರೆದುಕೊಂಡು ಹೊರಟ. ಮಾರ್ಗಮಧ್ಯೆ ನಾನು ಆ ವಿಷಯದಲ್ಲಿ ಧರ್ಮಸಂಕಟಕ್ಕೆ ಒಳಗಾಗಿದ್ದ ಪ್ರಸಂಗವನ್ನು ಅವನಲ್ಲಿ ಹೇಳಿಕೊಂಡೆ.

ವೀರಾಸ್ವಾಮಿಯವರನ್ನು ಭೇಟಿ ಮಾಡಿದ ವಿಷ್ಣು, ‘ಪ್ರೇಮಲೋಕ’ ಸಿನಿಮಾ ಸಿದ್ಧತೆಗಳ ಬಗೆಗೆ ತಿಳಿದುಕೊಂಡ. ‘ಆ ಸಿನಿಮಾದಲ್ಲಿ ನಾನು ನಟಿಸಲು ಬಾಬು ಕೈಲಿ ಹೇಳಿ ಕಳಿಸಬೇಕಿತ್ತೆ. ನನಗೇ ಒಂದು ಮಾತು ಹೇಳಿದ್ದರೆ ನಾನೇ ಬರುತ್ತಾ ಇದ್ದೆನಲ್ಲ’ ಎಂದಾಗ ವೀರಾಸ್ವಾಮಿಯವರಿಗೂ ಖುಷಿಯಾಯಿತು.

ಹಳೆಯ ಕಹಿಯನ್ನೆಲ್ಲಾ ಮರೆತು ವೀರಾಸ್ವಾಮಿಯವರ ಕಂಪೆನಿಯನ್ನು ಮಾತೃಸಂಸ್ಥೆ ಎಂದು ವಿಷ್ಣು ಕರೆದದ್ದು ಅವನ ಹೃದಯ ಶ್ರೀಮಂತಿಕೆಗೆ ಇನ್ನೊಂದು ಉದಾಹರಣೆ. ಇಂದಿಗೂ ಆ ಸಿನಿಮಾದಲ್ಲಿ ವಿಷ್ಣು ಅಭಿನಯಿಸಲು ದೊಡ್ಡ ಮನಸ್ಸು ಮಾಡಿದ್ದನ್ನು ನಾನು, ರವಿ ನೆನಪಿಸಿಕೊಳ್ಳುತ್ತಿರುತ್ತೇವೆ. ಇದಾದ ನಂತರ ರವಿ, ವಿಷ್ಣು ಪರಸ್ಪರ ಸಿನಿಮಾಗಳನ್ನು ನೋಡಿ ಮೆಚ್ಚುಗೆ ಹಂಚಿಕೊಳ್ಳುವುದು ನಡೆದೇ ಇತ್ತು. ‘ಶಾಂತಿ ಕ್ರಾಂತಿ’ ಸಿನಿಮಾ ನೋಡಿ, ‘ರವಿ ಕನ್ನಡ ಚಿತ್ರರಂಗಕ್ಕೆ ಅದ್ಭುತ ಕೊಡುಗೆ ನೀಡಬಲ್ಲ ನಿರ್ದೇಶಕ’ ಎಂದು ವಿಷ್ಣು ಹೊಗಳಿದ್ದ.

‘‘ವೀರಾಸ್ವಾಮಿಯವರನ್ನು ಭೇಟಿ ಮಾಡಿದ ಆ ದಿನ ಮರಳುವಾಗ, ಕಾರಿನಲ್ಲಿ ವಿಷ್ಣು ಹಳೆಯ ನೆನಪುಗಳಿಗೆ ಜಾರಿಕೊಂಡ. ವೀರಾಸ್ವಾಮಿಯವರು ‘ನಾಗರಹಾವು’ ಚಿತ್ರದ ರಾಮಾಚಾರಿ ಪಾತ್ರವನ್ನು ಕೊಡದೇ ಹೋಗಿದ್ದರೆ ಇವತ್ತು ನಾನು ಯಾರೋ? ಎಂದ. ಋಣ, ಋಣಭಾರ ದೊಡ್ಡದು’’ ಎಂದು ಭಾವುಕನಾಗಿ ಮಾತನಾಡಿದ. ವೀರಾಸ್ವಾಮಿ, ಪುಟ್ಟಣ್ಣ ಇಬ್ಬರ ಮೇಲೂ ಅವನಿಗೆ ಅಪಾರ ಗೌರವ ಇತ್ತು.

ಮುಂದಿನ ವಾರ: ಪುಟ್ಟಣ್ಣ ಕಣಗಾಲ್
ಅವರಿಗೆ ಹೃದಯಾಘಾತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT