ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಸ್ಮೃತಿಯ ಮುಗಿಲಲ್ಲಿ ಹೊಳೆದ ಕಲೆಯ ಮಿಂಚು

Last Updated 3 ಮೇ 2016, 19:30 IST
ಅಕ್ಷರ ಗಾತ್ರ

ರಂಗಭೂಮಿ ಚರಿತ್ರೆಯಲ್ಲಿ ಹೀಗೂ ನಾಟಕ ಮಾಡಬಹುದು ಎಂಬ ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟ ಮಲಯಾಳಿ ನಾಟಕ ‘ಚರಿತ್ರಪುಸ್ತಕತಿಲೆಕ್ಕು ಒರೇಡು’.ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರವು ಗುರುನಾನಕ ಭವನದಲ್ಲಿ ಆಯೋಜಿಸಿದ 10 ದಿನಗಳ ‘ದಕ್ಷಿಣ ಭಾರತ ರಂಗೋತ್ಸವ’ದಲ್ಲಿ ಎಪ್ರಿಲ್ 29ರಂದು ಪ್ರದರ್ಶನಗೊಂಡ ಈ ನಾಟಕ ನೋಡುಗರಲ್ಲಿ ವಿಸ್ಮಯ ಮೂಡಿಸಿತು.

ಟಿ.ವಿ.ಕೋಚುಬಾವ ಅವರ ‘ಉಪನ್ಯಾಸಂ’ ಕಥೆಯನ್ನು ಜೇಮ್ಸ್ ಎಲಿಯಾರವರು ರಂಗರೂಪಗೊಳಿಸಿದ್ದು, ಜೋಸ್ ಕೋಶಿಯವರು ತಮ್ಮ ‘ದಿ ಇನ್ವಿಸಿಬಲ್ ಲೈಟಿಂಗ್ ಸಲ್ಯೂಶನ್ಸ್ (ತ್ರಿಶೂರ್)’ ತಂಡಕ್ಕೆ ಈ ಮಲಯಾಳಿ ಭಾಷೆಯ ನಾಟಕವನ್ನು ನಿರ್ದೇಶಿಸಿದ್ದಾರೆ.

ಕಳೆದ ಕಾಲು ಶತಮಾನದಿಂದ ಮಲಯಾಳಿ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಹೊಸ ಬಗೆಯ ರಂಗಸಾಧ್ಯತೆಗಳನ್ನು ಆವಿಷ್ಕರಿಸಿ, ವಿಭಿನ್ನ ರಂಗಪರಿಭಾಷೆಯನ್ನು ಅನ್ವೇಷಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿರುವ ಕೇರಳ ರಾಜ್ಯದ ತ್ರಿಶೂರಿನ ‘ದಿ ಇನ್ವಿಸಿಬಲ್ ಲೈಟಿಂಗ್ ಸಲ್ಯೂಶನ್ಸ್’ ರಂಗತಂಡವು ‘ಚರಿತ್ರಪುಸ್ತಕತಿಲೆಕ್ಕು ಒರೇಡು’ ನಾಟಕದ ಮೂಲಕ ಪರ್ಯಾಯ ರಂಗಪರಿಭಾವಗಳ ಅರ್ಥಪೂರ್ಣ ಸಾಧ್ಯತೆಗಳನ್ನು ಅನಾವರಣಗೊಳಿಸಿದೆ.

ಇಡೀ ನಾಟಕ ಪ್ರೇಕ್ಷಕರನ್ನು ಅರ್ಧ ಶತಮಾನದ ಹಿಂದಿನ ಕಾಲಕ್ಕೆ ಕರೆದುಕೊಂಡು ಹೋಗಿ ಭಾಷೆಯ ಅರಿವಿಲ್ಲದವರಿಗೂ ರಂಗಾನುಭವವನ್ನು ಕೊಡುವಲ್ಲಿ ಸಫಲವಾಯಿತು.

ಈಗಿನ ಹೊಸ ತಲೆಮಾರಿನವರಿಗೆ ಗೊತ್ತೇ ಇಲ್ಲದ, ಪ್ರಸ್ತುತ ಐವತ್ತಕ್ಕೂ ಹೆಚ್ಚು ವಯಸ್ಸಾಗಿರುವ ತಲೆಮಾರಿನವರು ಮರೆಯಲು ಸಾಧ್ಯವೇ ಇಲ್ಲದ ಅಲೆಮಾರಿ ಪ್ರದರ್ಶಕರ ಸಾಹಸ ಕಲೆ ಸೈಕಲ್ ಸರ್ಕಸ್.

ಅದನ್ನು ಮಲಯಾಳಂನಲ್ಲಿ ‘ಸೈಕಲ್ ಯಜ್ಞಂ’ ಎಂದು ಕರೆಯುತ್ತಾರೆ. ಸೈಕಲ್ ಕೌಶಲಗಳ ಮೂಲಕ ವೈವಿಧ್ಯಪೂರ್ಣವಾಗಿ ಗ್ರಾಮೀಣ ಜನರನ್ನು ಮನರಂಜಿಸುವ ಸೈಕಲ್ ಸಾಹಸ ಕಲೆ ಆಗ ತುಂಬಾ ಜನಪ್ರಿಯವಾಗಿತ್ತು. ಒಬ್ಬ ಕಲಾವಿದ ನೆಲಕ್ಕೆ ಕಾಲೂರದೇ ನಿಗದಿತ ವೃತ್ತದಲ್ಲಿ ಬ್ರೇಕಿಲ್ಲದ ಸೈಕಲ್ಲನ್ನು ವಾರಗಳ ಕಾಲ ನಿರಂತರವಾಗಿ ಓಡಿಸುತ್ತಾ, ಅನೇಕಾನೇಕ ಸರ್ಕಸ್‌ಗಳನ್ನು ಮಾಡುತ್ತಿದ್ದ. ಜೊತೆಗಾರರು ವಿವಿಧ ಸಾಹಸ, ನೃತ್ಯ, ಮ್ಯಾಜಿಕ್, ಹಾಸ್ಯಗಳನ್ನು ಮಾಡುತ್ತಾ ಜನರನ್ನು ರಂಜಿಸಿ ಊರಿನವರು ಇಷ್ಟಪಟ್ಟು ಕೊಟ್ಟಷ್ಟು ಕಾಣಿಕೆಯಲ್ಲಿ ಬದುಕು ಸಾಗಿಸುತ್ತಿದ್ದರು.

ಮನರಂಜನೆಯ ಮಾಧ್ಯಮಗಳು ಬದಲಾದ ಹಾಗೆ ಈ ಸೈಕಲ್ ಯಜ್ಞ ಕಲೆಯೂ ಕಾಲಗರ್ಭಕ್ಕೆ ಸೇರಿಹೋಯಿತು. ಈ ಕಲೆಯನ್ನೇ ನಂಬಿ ಬದುಕುತ್ತಿದ್ದ ಅದೆಷ್ಟೋ ಕಲಾವಿದರ ಬದುಕು ಅತಂತ್ರವಾಯಿತು. ಈ ಎಲ್ಲಾ ಘಟನೆಗಳನ್ನು ‘ಚರಿತ್ರಪುಸ್ತಕತಿಲೆಕ್ಕು ಒರೇಡು’ ನಾಟಕದಲ್ಲಿ ಬಲು ಮಾರ್ಮಿಕವಾಗಿ ತೋರಿಸಲಾಗಿದೆ.

ಕಲಾಪ್ರಕಾರವೊಂದು ಸೃಜಿಸುವ ವಿನೋದಾವಳಿಗಳ ಮೂಲಕ ಕಲೆಯನ್ನೇ ನಂಬಿ ಬದುಕಿದವರ ದುರಂತವನ್ನು ಕಟ್ಟಿಕೊಡುವ ಈ ನಾಟಕವು ನೋಡುಗರನ್ನು ರಂಜಿಸುತ್ತಲೇ ಕಲಾವಿದರ ಅವಸಾನದ ಚಿತ್ರಣಕ್ಕೆ ಪ್ರೇಕ್ಷಕರು ಮರುಗುವಂತೆ ಮಾಡಿದೆ. ನಾಟಕದ ವಸ್ತುವಿಗಿಂತಲೂ ಅದನ್ನು ನಿರೂಪಿಸಿ ತೋರಿಸಿದ ರೀತಿ ನಿಜಕ್ಕೂ ಅದ್ಭುತವೆನಿಸುವಂತಿದೆ.

ನಾಟಕದಾದ್ಯಂತ ಬಳಸಿದ ರಂಗತಂತ್ರಗಳಂತೂ ದೃಶ್ಯದಿಂದ ದೃಶ್ಯಕ್ಕೆ ಕುತೂಹಲವನ್ನು ಹೆಚ್ಚಿಸುವಂತೆ ಮೂಡಿಬಂದಿದೆ. ಇಡೀ ರಂಗತಂಡದ ಪೂರ್ವಸಿದ್ಧತೆ ಹಾಗೂ ಕಲಾವಿದರುಗಳ ರಂಗಬದ್ಧತೆ ನಾಟಕದಾದ್ಯಂತ ಪ್ರತಿಫಲಿಸಿದೆ.

ನಾಟಕರಂಗ ತನ್ನ ರೂಢಿಗತ ಚೌಕಟ್ಟನ್ನು ಬಿಟ್ಟು ಹೊಸ ಸಾಧ್ಯತೆಗಳನ್ನು ಅಳವಡಿಸಿಕೊಳ್ಳಬೇಕಾದ ಸಂಕ್ರಮಣದ ಕಾಲಘಟ್ಟದಲ್ಲಿ ಈ ಮಲಯಾಳಿ ನಾಟಕ ಮಾದರಿಯಂತಿದೆ.

ನಿರ್ದೇಶಕನ ತಂತ್ರಗಾರಿಕೆ ಹಾಗೂ ಕಲಾವಿದರ ಸಾಮರ್ಥ್ಯ ಇವೆರಡೂ ಹದವಾಗಿ ಸಮ್ಮಿಶ್ರಣಗೊಂಡು ನಿಜವಾದ ನಾಟಕವಾಗಿ ಪ್ರದರ್ಶನಗೊಂಡಿದೆ. ಈ ನಾಟಕದಲ್ಲಿ ನಾಯಕ, ನಾಯಕಿ, ಖಳನಾಯಕ ಎನ್ನುವ ನಿರ್ದಿಷ್ಟ ಪಾತ್ರಗಳೇ ಇಲ್ಲ. ಯಾವ ಪಾತ್ರವೂ ಮುಖ್ಯವಲ್ಲ, ಅಮುಖ್ಯವೂ ಅಲ್ಲ.

ಎಲ್ಲಾ ನಟರಿಗೂ ತಮ್ಮ ಪ್ರತಿಭೆ ಸಾಬೀತುಪಡಿಸುವ ಅವಕಾಶ ಸಿಕ್ಕಿದೆ. ಹೀಗಾಗಿ ನಾಟಕವು ನೋಡುಗರ ಅನುಭವಕ್ಕೆ ದಕ್ಕಿದೆ. ನಿರ್ದೇಶಕ ಹಾಗೂ ಕಲಾವಿದರ ಕ್ರಿಯಾಶೀಲ ಕೊಡುಗೆಯಿಂದಾಗಿ ಈ ಮಲಯಾಳಿ ನಾಟಕ ಯಶಸ್ವಿಯಾಗಿದೆ.

ನಾಟಕದಲ್ಲಿ ಮನರಂಜನೆಯ ಅಂಶಗಳು ಹೇರಳವಾಗಿವೆ. ಮಾತಲ್ಲಿರುವ ಪಂಚ್‌ಗಳು, ಅದನ್ನು ಹೇಳುವ ನಟರ ಟೈಮಿಂಗ್ ಹಾಗೂ ಕಲಾವಿದರ ದೇಹಭಾಷೆ ಅಚ್ಚರಿ ಹುಟ್ಟಿಸುವಷ್ಟು ಸೊಗಸಾಗಿ ಮೂಡಿಬಂದಿವೆ. ಸಾಮಾನ್ಯರಂತೆ ಕಾಣುವ ನಟರ ಅಸಾಮಾನ್ಯ ನಟನಾ ಕೌಶಲ ನೋಡುಗರ ಮನಸೂರೆಗೊಂಡಿದ್ದಂತೂ ಸುಳ್ಳಲ್ಲ.

ಯಾವ ದೃಶ್ಯವೂ ಮೆಲೋಡ್ರಾಮಾ ಎನ್ನಿಸದೆ, ಯಾರ ಅಭಿನಯವೂ ಕೃತಕವೆಂದು ತೋರದೆ ಚರಿತ್ರೆಯ ಪುಟದ ಘಟನೆಗಳು ನೈಜ ನಟನೆಯ ಮೂಲಕ ನಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತವೆ.

ಭರತಮುನಿಯ ನಾಟ್ಯಶಾಸ್ತ್ರದ ಅಭಿನಯ ಪ್ರಕಾರಗಳಾದ ಆಂಗಿಕ, ವಾಚಿಕ, ಆಹಾರ್‍ಯ, ಸಾತ್ವಿಕ ಈ ಎಲ್ಲಾ ವಿಭಾಗಗಳನ್ನೂ ಕಲಾವಿದರು ಸಮರ್ಥವಾಗಿ ನಿರ್ವಹಿಸಿ ನಾಟಕವನ್ನು ಹೃದ್ಯಗೊಳಿಸಿದ್ದಾರೆ. ಈ ಮೂಲಕ ಮಲಯಾಳಿ ರಂಗಭೂಮಿಯನ್ನು ಸಮೃದ್ಧಗೊಳಿಸಿದ್ದಾರೆ.

ಕಲಾವಿದರ ನಟನೆಗೆ ಪೂರಕವಾಗಿ ಬೆಳಕು ಹಾಗೂ ಸಂಗೀತಗಳು ಸ್ಪಂದಿಸಿ ದೃಶ್ಯಕ್ಕೆ ಅಗತ್ಯವಾದ ಮೂಡ್ ಸೃಷ್ಟಿಸುವಲ್ಲಿ ಬಹುದೊಡ್ಡ ಕೊಡುಗೆ ನೀಡಿದವು. ಸ್ವತಃ ರಂಗಬೆಳಕಿನ ವಿನ್ಯಾಸಕರಾಗಿ ಹೆಸರು ಮಾಡಿದ ಜೋಸ್ ಕೋಶಿರವರು ಈ ನಾಟಕದಲ್ಲಿ ಮಾಡಿದ ಬೆಳಕಿನ ಬಣ್ಣಗಳ ಸಂಯೋಜನೆ ಬೆಳಕಿನ ವಿನ್ಯಾಸಕಾರರಿಗೆ ಮಾದರಿಯಾಗುವಂತಿದೆ. ಮಂದ ಬೆಳಕಿನಲ್ಲೂ ದೃಶ್ಯಗಳು ಮೂಡುವ ಪರಿಯನ್ನು ನೋಡಿಯೇ ಸವಿಯಬೇಕು.

ಇಷ್ಟೆಲ್ಲಾ ಚೆಂದದ ನಾಟಕವನ್ನು ಕಟ್ಟಿಕೊಟ್ಟ ನಿರ್ದೇಶಕರು ಅದ್ಯಾಕೋ ಕೊನೆಕೊನೆಗೆ ಅನಗತ್ಯವಾಗಿ ಎಳೆದು ಒಂದಿಷ್ಟು ಬೋರ್ ಹೊಡೆಸಿದ್ದಾರೆ. ಮೊಟ್ಟೆ, ಕೋಳಿ ವ್ಯಾಪಾರದ ದೃಶ್ಯ ತೆಗೆದಿದ್ದರೂ ನಾಟಕಕ್ಕೇನೂ ಹಾನಿಯಾಗುತ್ತಿರಲಿಲ್ಲ.

ಜೋಕರ್ ವೇಷಧಾರಿಗಳ ಮಾತುಗಳು ಅತಿಯಾಗಿ ಏಕತಾನತೆಯನ್ನುಂಟು ಮಾಡಿದವು. ನಾಟಕದ ವೇಗಕ್ಕೆ ಅಡ್ಡಿಯಾಗುವಂತಹ ಆರಂಭದ ಅನಗತ್ಯ ದೃಶ್ಯಗಳನ್ನು ಎಡಿಟ್ ಮಾಡಿದ್ದರೆ ಚರಿತ್ರಪುಸ್ತಕ... ನಾಟಕವು ರಂಗಚರಿತ್ರೆಯಲ್ಲಿ ಹೊಸ ದಾಖಲೆಯನ್ನು ಬರೆಯಬಹುದಾಗಿದೆ.

ಸಾಕಷ್ಟು ರಂಜಿಸುವ ಈ ನಾಟಕವು ತನ್ನ ಕೊನೆಯ ದೃಶ್ಯದಲ್ಲಿ ಹುಟ್ಟಿಸುವ ವಿಷಾದದ ಅಲೆ ಪ್ರೇಕ್ಷಕರ ಮನಸ್ಸನ್ನು ಕಾಡದೇ ಇರದು.  ಆಧುನಿಕ ಮನರಂಜನಾ ಮಾಧ್ಯಮದ ದಾಳಿಯನ್ನು ಎದುರಿಸಲು ಈ  ಅಲೆಮಾರಿ  ಕಲಾವಿದರು ಶಕ್ತಿ ಮೀರಿ ಪ್ರಯತ್ನಿಸುತ್ತಾರೆ. ತಮ್ಮ ಕಲೆಯಿಂದ ವಿಮುಖರಾದ ಜನರನ್ನು ಸೆಳೆದುಕೊಳ್ಳಲು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ.

ಬದುಕಿಗಾಗಿ ಕಲೆಯನ್ನು ಉಳಿಸಿಕೊಳ್ಳಲು ತಮ್ಮ ಸಾಮರ್ಥ್ಯವನ್ನು ಮೀರಿ ಭೂಮಿಯೊಳಗೆ ಎರಡು ಗಂಟೆಯ ಬದಲಾಗಿ ಆರುಗಂಟೆ ಭೂಗತವಾಗುವ ಸಾಹಸಕ್ಕೆ ಇಳಿದ ಕಲಾವಿದನೊಬ್ಬ ಅಸುನೀಗುತ್ತಾನೆ.  ಆತನ ಸಾವಿನೊಂದಿಗೆ ಅಲೆಮಾರಿ ಕಲೆಯೊಂದು ಕಾಲವಶವಾಗುತ್ತದೆ.

 ತಮ್ಮ ಬದುಕಿನ ಸಂಕೇತವಾದ ಸೈಕಲ್ಲಿಗೆ ಬೆಂಕಿ ಹಚ್ಚಿ, ಸತ್ತವನ ಶವ ಹೊತ್ತು ಸಾಗುವ  ಕಲಾವಿದರ ಮೂಕವೇದನೆ ನೋಡುಗರ ಕಣ್ಣಲ್ಲಿ ನೀರಾಗುತ್ತದೆ. ವಿಷಾದ ಎಲ್ಲರೆದೆಯಲ್ಲಿ ಮಡುಗಟ್ಟುತ್ತದೆ. ವಿನೋದದ ಮೂಲಕ ವಿಷಾದವನ್ನು ಹೇಳುವ ತನ್ನ ಆಶಯದಲ್ಲಿ ಈ ವಿಶಿಷ್ಟ ರಂಗಪ್ರಯೋಗ ಯಶಸ್ವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT