ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಸಾ ನಿರಾಕರಣೆ: ಬರೀ ವದಂತಿ

ಇಂಪೀರಿಯಲ್ ಕಾಲೇಜಿನ ಕುಲಪತಿ ಪ್ರೊ.ಜೇಮ್ಸ್‌ ಸ್ಟರ್ಲಿಂಗ್‌ ಅನಿಸಿಕೆ
Last Updated 7 ಅಕ್ಟೋಬರ್ 2015, 20:15 IST
ಅಕ್ಷರ ಗಾತ್ರ

ಲಂಡನ್‌ : ‘ಭಾರತೀಯ ವಿದ್ಯಾರ್ಥಿಗಳಿಗೆ ವೀಸಾ ನಿರಾಕರಿಸಲಾಗುತ್ತಿದೆ ಎಂಬುದು ನಿಜವಲ್ಲ. ಅದು ಕೇವಲ ವದಂತಿ’ ಎಂದು ಇಲ್ಲಿನ ಪ್ರತಿಷ್ಠಿತ ಇಂಪೀರಿಯಲ್‌ ಕಾಲೇಜಿನ ಪ್ರೊವೊಸ್ಟ್‌ (ಕುಲಪತಿ) ಪ್ರೊ.ಜೇಮ್ಸ್‌ ಸ್ಟರ್ಲಿಂಗ್‌ ತಿಳಿಸಿದರು.

ಭಾರತದಿಂದ ಭೇಟಿ ನೀಡಿರುವ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ, ವೀಸಾ ತಡೆಯುವುದರಲ್ಲಿ ತಮಗೆ ಖಂಡಿತ ಆಸಕ್ತಿಯಿಲ್ಲ ಎಂದು ಬ್ರಿಟನ್‌ ಪ್ರಧಾನಿ ಡೇವಿಡ್‌ ಕ್ಯಾಮರೂನ್‌ ಅವರು ಸ್ಪಷ್ಟಪಡಿಸಿರುವುದನ್ನು ನೆನಪಿಸಿದರು.

‘14 ಮಂದಿ ನೊಬೆಲ್‌ ಪ್ರಶಸ್ತಿ ಪುರಸ್ಕೃತರನ್ನು ಸೃಷ್ಟಿಸಿರುವ ಇಂಪೀರಿಯಲ್‌ ಕಾಲೇಜಿನಲ್ಲಿ ಒಟ್ಟು 126 ದೇಶಗಳ 14,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದು ಭಾರತದ 250 ವಿದ್ಯಾರ್ಥಿಗಳೂ ಇಲ್ಲಿ ಓದುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಎಂಜಿನಿಯರಿಂಗ್‌, ವಿಜ್ಞಾನ ಮತ್ತು ವೈದ್ಯಕೀಯ ವಿಭಾಗಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಇಲ್ಲಿ ಕೊಡಲಾಗುತ್ತಿದ್ದು ಗುಣಮಟ್ಟವನ್ನು ಆಧರಿಸಿಯೇ ಸರ್ಕಾರ ತಕ್ಕಮಟ್ಟಿನ ಅನುದಾನ ನೀಡುತ್ತಿದೆ. ಈ ಸಾರಿ ಕೆಲವು ವಿಷಯಗಳಲ್ಲಿ ನಮ್ಮ ಕಾಲೇಜಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಮಾಡಿರುವ ಸಂಶೋಧನೆ ಆಕ್ಸ್‌ಫರ್ಡ್‌ ಹಾಗೂ ಕೇಂಬ್ರಿಜ್‌ ವಿಶ್ವವಿದ್ಯಾಲಯಗಳಿಗಿಂತ ಉತ್ತಮವಾಗಿದೆ. ಪ್ರತಿ ಐದು ವರ್ಷಕ್ಕೆ ಒಮ್ಮೆ ಇಂಥ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಆಗುವ ಸಂಶೋಧನೆಯ ಗುಣಮಟ್ಟ ಗಮನಿಸಿ ಅವುಗಳಿಗೆ ಅನುದಾನ ಕೊಡುವ ಕುರಿತು ಸರ್ಕಾರ ತೀರ್ಮಾನಿಸುತ್ತದೆ’ ಎಂದು ಅವರು ತಿಳಿಸಿದರು.

‘ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಂತ್ರಜ್ಞಾನ ಬಳಕೆಗೆ ಒತ್ತು ಕೊಡುತ್ತಿದ್ದರೂ (ಡಿಜಿಟಲ್‌ ಇಂಡಿಯಾ) ತಮ್ಮ ಕಾಲೇಜಿನ ವತಿಯಿಂದ ಭಾರತದಲ್ಲಿ ದೂರಶಿಕ್ಷಣ ಜಾರಿಗೊಳಿಸಲು ಉದ್ದೇಶಿಸಿಲ್ಲ. ಏಕೆಂದರೆ ಬೇರೆ ಬೇರೆ ದೇಶಗಳಿಂದ ಇಲ್ಲಿಗೇ ಬಂದು ವಿದ್ಯಾರ್ಥಿಗಳು ಓದಬೇಕು ಎಂಬುದು ತಮ್ಮ ಸಂಸ್ಥೆಯ ಉದ್ದೇಶ. ಹೀಗೆ ಬೇರೆ ಬೇರೆ ದೇಶಗಳ ವಿದ್ಯಾರ್ಥಿಗಳು ಒಂದು ಕಡೆ ಸೇರಿ ವ್ಯಾಸಂಗ ಮಾಡುವುದರಿಂದ ಆಗುವ ಲಾಭಗಳು ಅನೇಕ. ಇಲ್ಲಿನ ಬಹುಪಾಲು ಶಿಕ್ಷಣ ಪ್ರಯೋಗ ಆಧಾರಿತವಾಗಿದೆ ಮತ್ತು ಅದು ಶಿಕ್ಷಕರ ಜೊತೆಗಿನ ಮುಖಾಮುಖಿ ಬಯಸುತ್ತದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಭಾರತದಿಂದ ಬರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದಂಥ ಕೆಲವು ಯೋಜನೆಗಳು ಇವೆ. ಜೊತೆಗೆ ಹಳೆಯ ವಿದ್ಯಾರ್ಥಿಗಳ ಕೊಡುಗೆಯಿಂದಲೂ ಕೆಲವು ವಿದ್ಯಾರ್ಥಿಗಳ ಶುಲ್ಕ ಭರಿಸುವ ವ್ಯವಸ್ಥೆ ಇದೆ’ ಎಂದು ಸ್ಟರ್ಲಿಂಗ್‌ ಹೇಳಿದರು. ಭಾರತದ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡ್‌ಮೆಂಟಲ್‌ ಸ್ಟಡೀಸ್‌ ಹಾಗೂ ಪಂಜಾಬ್‌ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ತಮ್ಮ ಕಾಲೇಜು ಕೆಲವು ಸಂಶೋಧನೆಗಳನ್ನು ಕೈಗೆತ್ತಿಕೊಂಡಿದೆ ಎಂದು ಅವರು ತಿಳಿಸಿದರು.

ಇದೇ ಕಾಲೇಜಿನ ಬಿಜಿನೆಸ್‌ ಸ್ಕೂಲಿನ ಡೀನ್‌ ಪ್ರೊ.ಆನಂದಲಿಂಗ್‌ ಅವರು, ‘ಶಿಕ್ಷಣ ಕ್ಷೇತ್ರದಲ್ಲಿ ಭಾರತವು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕೊಡಬೇಕಿತ್ತು, ಯುಪಿಎ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಕಪಿಲ್‌ ಸಿಬಲ್‌ ಅವರ ಜೊತೆಗೆ ನಾನು  ಹಿಂದೆ ಈ ಕುರಿತು ಚರ್ಚೆ ಮಾಡಿದ್ದೆ’ ಎಂದು  ಹೇಳಿದರು. ‘ಸಿಬಲ್‌ ಅವರು ಹೇಳಿದಂತೆ ಭಾರತದಲ್ಲಿ ಇನ್ನೂ ಮೂರು ಸಾವಿರ ವಿಶ್ವವಿದ್ಯಾಲಗಳ ಅಗತ್ಯವಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಭಾರತದಲ್ಲಿ ಒಟ್ಟು ಶಿಕ್ಷಣ ವ್ಯವಸ್ಥೆ ಎಂಬುದೇ ಸಮಾಜದಲ್ಲಿ ಉಳ್ಳವರು ಮತ್ತು ಇಲ್ಲದವರ ನಡುವೆ ದೊಡ್ಡ ಕಂದರವನ್ನು ಸೃಷ್ಟಿಸಿದೆ ಎಂಬ ಕುರಿತು ಪ್ರಸ್ತಾಪಿಸಿದ್ದಕ್ಕೆ ಉತ್ತರಿಸಿದ ಅವರು, ‘ಎಲ್ಲರಿಗೂ ಉನ್ನತ ಶಿಕ್ಷಣ ಲಭ್ಯವಾಗದೇ ಇರಬಹುದು, ಆದರೆ, ಕೌಶಲ ಹೆಚ್ಚಿಸುವ ಶಿಕ್ಷಣ ಎಲ್ಲರಿಗೂ ಸಿಗುವಂತೆ ಆಗಬೇಕು. ಅದರಿಂದ ಜೀವನೋಪಾಯಕ್ಕೆ ದಾರಿಯಾಗುತ್ತದೆ. ‘ಭಾರತದಲ್ಲಿಯೇ ತಯಾರಿಸಿ’   ಕುರಿತು ಮಾತನಾಡುತ್ತಿರುವ ಭಾರತ ಈ ದಿಸೆಯಲ್ಲಿ ಯೋಚಿಸಬೇಕು’ ಎಂದು ಅವರು ಸೂಚಿಸಿದರು.

‘ಬಿಜಿನೆಸ್‌ ಸ್ಕೂಲಿನಲ್ಲಿ ಗಾಂಧಿ ಅಧ್ಯಯನ ಕೇಂದ್ರವನ್ನು ಆರಂಭಿಸಲಾಗಿದ್ದು ಅಲ್ಲಿ  ಭಾರತೀಯ ಸಂದರ್ಭಕ್ಕೆ ಹೊಂದುವ ಸಮಾಜದ ಕೆಳಹಂತದ ವರ್ಗಗಳಿಗೆ ಹಾಗೂ ಮಹಿಳೆಯರಿಗೆ ನೆರವಾಗುವ ಆವಿಷ್ಕಾರಗಳ ಬಗೆಗೆ ಅಧ್ಯಯನ ನಡೆಯುತ್ತಿದೆ’ ಎಂದು ಕೇಂದ್ರದ ಸಂಶೋಧನ ನಿರ್ದೇಶಕರಾದ ಪ್ರೊ.ಕಲ್ಯಾಣ ತಲ್ಲೂರಿ ತಿಳಿಸಿದರು. ತಲ್ಲೂರಿ ಅವರು ವಿಮಾನದ ಪ್ರತಿ ಟಿಕೆಟ್‌ ಅನ್ನು ಹೇಗೆ ಲಾಭಕರವಾಗಿ ಮಾರಬಹುದು ಎಂದು ಸೂಚಿಸಿ ಹೆಸರು ಮಾಡಿದವರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT