ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿ ಶಿಕ್ಷಣದಲ್ಲಿ ಕನ್ನಡ...

Last Updated 10 ಫೆಬ್ರುವರಿ 2016, 19:48 IST
ಅಕ್ಷರ ಗಾತ್ರ

ವೃತ್ತಿ ಶಿಕ್ಷಣದಲ್ಲಿ ಕನ್ನಡ ಪಠ್ಯವನ್ನು ಅಳವಡಿಸುವ ಕುರಿತು ಪ್ರಕಟಗೊಳ್ಳುತ್ತಿರುವ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ನಾನು ಈ ಸ್ಪಷ್ಟ ಮಾಹಿತಿಯೊಂದನ್ನು ಕೊಡುತ್ತಿದ್ದೇನೆ. ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಕೊಟ್ಟ ವರದಿಯಲ್ಲಿ 15 ಶಿಫಾರಸುಗಳಿದ್ದು, 8ನೇ ಶಿಫಾರಸು ವೃತ್ತಿ ಶಿಕ್ಷಣದಲ್ಲಿ ಕನ್ನಡ ಕುರಿತಂತೆ ಇದೆ.

ಈ ಶಿಫಾರಸು ಕೃಷಿ ಮತ್ತು ಕಾನೂನು ವಿಶ್ವವಿದ್ಯಾಲಯಗಳ ವೃತ್ತಿಪರ ಕೋರ್ಸುಗಳನ್ನು ಪ್ರಸ್ತಾಪಿಸಿಲ್ಲವೆಂದೂ ಪ್ರತ್ಯೇಕ ಪಠ್ಯದ ಬಗ್ಗೆ ಸೂಚಿಸಿಲ್ಲವೆಂದೂ ಹೇಳಲಾಗುತ್ತಿದೆ. ಅಂದು ನೀಡಿದ ಶಿಫಾರಸಿನ ಮೊದಲ ಕೆಲವು ಪುಟಗಳಲ್ಲಿ ಕನ್ನಡ ಪಠ್ಯ ಅಳವಡಿಸಬೇಕಾದ ಅಗತ್ಯಕ್ಕೆ ತಾಂತ್ರಿಕ ಸಮರ್ಥನೆ ನೀಡಿ, ಕೊನೆಯಲ್ಲಿ ಮುಂದಿನಂತೆ ಮಾಡಿದ ಶಿಫಾರಸಿನ ವಿವರಗಳನ್ನು ಅಕ್ಷರಕ್ಷರ ಯಥಾವತ್ತಾಗಿ ಕೊಡುತ್ತಿದ್ದೇನೆ:

ಅ) ಬಿ.ಸಿ.ಎ., ಬಿ.ಬಿ.ಎಂ., ಬಿ.ಎಚ್‌.ಎಂ. ಮುಂತಾದ ಎಲ್ಲ ಪದವಿ ತರಗತಿಗಳಲ್ಲಿ, ಉಳಿದ ಪದವಿ ತರಗತಿಗಳಂತೆಯೇ ಕನ್ನಡವೂ ಪಠ್ಯಕ್ರಮದ ಭಾಗವಾಗಬೇಕು. ಈ ಮೂಲಕ ಪದವಿ ತರಗತಿಗಳ ಪಠ್ಯಕ್ರಮದಲ್ಲಿ ಏಕರೂಪತೆಯನ್ನು ಸಾಧಿಸಬೇಕು.

ಆ) ಎಲ್‌.ಎಲ್‌.ಬಿ., ಐ.ಟಿ.ಐ., ನರ್ಸಿಂಗ್‌ ಶಾಲೆ ಮತ್ತು ಪಾಲಿಟೆಕ್ನಿಕ್‌ಗಳಲ್ಲಿ ಕನ್ನಡವನ್ನು ಒಂದು ಭಾಷಾ ವಿಷಯವಾಗಿ ಕಲಿಸಬೇಕು. ಅಲ್ಲದೆ ಈ ಕೋರ್ಸುಗಳಲ್ಲಿ ಕನ್ನಡ ಮಾಧ್ಯಮಕ್ಕೆ ಅವಕಾಶ ಕಲ್ಪಿಸಬೇಕು.

ಇ) ಬಿ.ಇಡಿ., ಟಿ.ಸಿ.ಎಚ್‌.ಗಳಲ್ಲಿ ಕನ್ನಡ ಕಡ್ಡಾಯ ಭಾಷೆಯಾಗಿರಬೇಕು. ಉಳಿದ ವಿಷಯಗಳಿಗೆ ಸಮಾನವಾಗಿರುವಂತೆ ಅಂಕಗಳನ್ನು ನಿಗದಿ ಮಾಡಬೇಕು.

ಈ) ವಿದೇಶಿ ವಿದ್ಯಾರ್ಥಿಗಳಿಗೆ ಜರ್ಮನಿ, ಜಪಾನ್‌, ರಷ್ಯಾ ಮುಂತಾದ ದೇಶಗಳಲ್ಲಿ ಆಯಾ ದೇಶದ ಭಾಷೆಯನ್ನು ಕಲಿಸುವ ಮಾದರಿಯಲ್ಲಿ ನಮ್ಮ ರಾಜ್ಯದ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಶಿಕ್ಷಣದ (ಬಿ.ಇ., ಎಂ.ಬಿ.ಬಿ.ಎಸ್‌., ಬಿ.ಡಿ.ಎಸ್‌., ಇತ್ಯಾದಿ) ಮೊದಲೆರಡು ಸೆಮಿಸ್ಟರ್‌ಗಳಲ್ಲಿ ಹೊರರಾಜ್ಯದ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವುದನ್ನು ಪಠ್ಯಕ್ರಮದ ಭಾಗವಾಗಿಸಬೇಕು. ಅಸಮತೋಲನದ ನಿವಾರಣೆಗಾಗಿ ಅದೇ ಅವಧಿಯಲ್ಲಿ ಕನ್ನಡ ವಿದ್ಯಾರ್ಥಿಗಳಿಗೆ ಸೂಕ್ತ ಪಠ್ಯಕ್ರಮದೊಂದಿಗೆ ಕನ್ನಡವನ್ನು ಬೋಧಿಸಬೇಕು.

ಉ) ಕೃಷಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಮಾಧ್ಯಮದ ತರಗತಿಗಳು ನಡೆಯುವಂತೆ ಸೂಕ್ತ ವ್ಯವಸ್ಥೆ ಮಾಡಬೇಕು. ಅನುವಾದ ಕಾರ್ಯವನ್ನು ಒಳಗೊಂಡಂತೆ ಒಟ್ಟು ಕನ್ನಡಪರ ಕ್ರಿಯೆಗಾಗಿ ಎಲ್ಲ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ವಿಭಾಗ ಇರಬೇಕು.

ಊ) ಬಡ ಕನ್ನಡಿಗರ ಅನುಕೂಲಕ್ಕಾಗಿ ಮತ್ತು ಶಿಕ್ಷಣ ನೀತಿಯನ್ನು ಜನಮುಖಿಗೊಳಿಸುವ ಉದ್ದೇಶಕ್ಕಾಗಿ ವೃತ್ತಿಪರ ಪದವಿ ಕೋರ್ಸುಗಳನ್ನು ಆದ್ಯತೆಯ ಮೇಲೆ ಸರ್ಕಾರಿ ಕಾಲೇಜುಗಳಿಗೆ ಕೊಡಬೇಕು.

ಮೇಲಿನ ಶಿಫಾರಸುಗಳಲ್ಲಿ ಕಾನೂನು ಮತ್ತು ಕೃಷಿ ಸಂಬಂಧಿ ಕೋರ್ಸುಗಳು ಇವೆಯೊ ಇಲ್ಲವೊ ಮತ್ತು ಪ್ರತ್ಯೇಕ ಕೋರ್ಸುಗಳಿಗೆ ಪ್ರತ್ಯೇಕ ಪಠ್ಯಕ್ರಮ ಇರಬೇಕೆಂಬುದು ಸ್ವಯಂ ವೇದ್ಯವೊ ಅಲ್ಲವೊ ಎಂಬ ಅಂಶವು ಯಾರಿಗಿಲ್ಲದಿದ್ದರೂ ಸಾಮಾನ್ಯ ಕನ್ನಡಿಗರಿಗೆ ಅರ್ಥವಾಗುತ್ತದೆ.

ವಾಸ್ತವವಾಗಿ ತಾಂತ್ರಿಕ ಹಾಗೂ ವೈದ್ಯಕೀಯ ವಿಶ್ವವಿದ್ಯಾಲಯಗಳು ಈ ಬಗ್ಗೆ ಆರಂಭಿಕ ಆಸಕ್ತಿ ತೋರಿಸಿ ಸಿಂಡಿಕೇಟ್‌ಗಳಲ್ಲಿ ನಿರ್ಣಯ ಮಾಡಿ ಪಠ್ಯ ಅಳವಡಿಕೆ (2002) ಮತ್ತು ಪರೀಕ್ಷೆ ಕಡ್ಡಾಯ ಕುರಿತು (2007) ಸುತ್ತೋಲೆ ಹೊರಡಿಸಿದರೂ ಅನುಷ್ಠಾನ ಮಾತ್ರ ಅರೆಬರೆಯಾಯಿತು. ಇದು ವಸ್ತುಸ್ಥಿತಿ. ಈಗ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಅನುಷ್ಠಾನಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದೆಂದು ಆಶಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT