ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧರು, ಬುದ್ಧಿಮಾಂದ್ಯರ ಸೇವೆಗೆ ಸದಾ ಸಿದ್ಧ ‘ಪೆಪ್ಪರ್‌’

Last Updated 3 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಮುಂದಿನದೇನಿದ್ದರೂ ಯಂತ್ರಮಾನವರ ಕಾಲ. ಈಗಾಗಲೇ ಸಾಕಷ್ಟು ಬಿನ್ನ ಶೈಲಿಯ ರೋಬೊಗಳ ಅಭಿವೃದ್ಧಿಯಾಗಿದೆ. ಅದರಲ್ಲಿ ಒಂದು ಈ ‘ಪೆಪ್ಪರ್‌’. ಇದರ ವೈಶಿಷ್ಟ್ಯ ಏನೆಂದರೆ ಥೇಟ್‌ ಸ್ಮಾರ್ಟ್‌ಕಾರ್ಡ್‌ ಕಾರ್ಯಶೈಲಿ. ಯಾವುದೇ ಹೊಸ ತಂತ್ರಾಂಶವನ್ನು ಅಳವಡಿಸಿದರೂ ಅದಕ್ಕೆ ತಕ್ಕಂತೆಯೇ ಕಾರ್ಯನಿರ್ವಹಿಸುತ್ತದೆ ಈ ಪೆಪ್ಪರ್. ಡಿಮೆನ್ಷಿಯಾ ಯೋಜನಾ ತಂಡದ ತಂತ್ರಾಂಶ ಅಳವಡಿಸಿದರೆ ಈ  ಯಂತ್ರಮಾನವ ಬುದ್ಧಿಮಾಂದ್ಯ ರೋಗಿಗಳ ನಿಗಾ ವಹಿಸಲು ಸಜ್ಜಾಗುತ್ತದೆ. ರೋಗಿಗಳ ಯೋಗ ಕ್ಷೇಮ ವಿಚಾರಿಸಿಕೊಳ್ಳಲು ನರ್ಸ್ ಆಗಿ ಬದಲಾಗುತ್ತದೆ!

ದಶಕದ ಹಿಂದಿನ ಮಾತು. ಲ್ಯಾಂಡ್‌ಲೈನ್‌ಗಳಿಂದ ಜನರು ಆಗಷ್ಟೇ ಮೊಬೈಲ್‌ಗಳತ್ತ ಹೊರಳಿಕೊಳ್ಳುತ್ತಿದ್ದರು. ಮೊಬೈಲ್ ಎಂದರೆ ‘ಸಿಡಿಎಂಎ’ ತಂತ್ರಾಂಶ ಆಧರಿಸಿದ ಮೊಬೈಲ್‌ಗಳಷ್ಟೇ ಎನ್ನುವಂತಹ ಸಮಯವದು!

ಆದರೆ ಇದೀಗ ತಂತ್ರಜ್ಞಾನದ ವೇಗ ಎಲ್ಲವನ್ನೂ ಸುಲಭ ಹಾಗೂ ಸರಳಗೊಳಿಸಿದೆ. ಬೇಕಾದ  ಮೊಬೈಲ್‌ ಖರೀದಿಸಿ ತಮಗಿಷ್ಟವಾದ ಸಿಮ್‌ ಹಾಕಿಕೊಳ್ಳುವ, ಬೇಡ ಎನಿಸಿದಾಗ ಬದಲಾಯಿಸುವ, ಅದೇ ಸಂಖ್ಯೆಯನ್ನೂ ಉಳಿಸಿಕೊಳ್ಳುವ ಅನುಕೂಲ ಮತ್ತು ಆಯ್ಕೆಯ ಸ್ವಾತಂತ್ರ್ಯವೂ ಲಭ್ಯವಾಗಿದೆ.

ಇಂತಹದ್ದೇ ತಂತ್ರಜ್ಞಾನ ಕ್ರಾಂತಿ ಇದೀಗ ರೋಬೊಟಿಕ್ಸ್ ಕ್ಷೇತ್ರಕ್ಕೂ ಕಾಲಿಟ್ಟಿದೆ. ತಂತ್ರಜ್ಞಾನ ಅನುಷ್ಠಾನದ ದಿನಗಳು ದಿನಗಳು ದೂರವೇನೂ ಇಲ್ಲ.

ಹೌದು, ಜಪಾನಿನ ಖ್ಯಾತ ಟೆಲಿಕಾಂ ಕಂಪೆನಿ ಸಾಫ್ಟ್‌ಬ್ಯಾಂಕ್‌, ತಾನು  ಅಭಿವೃದ್ಧಿ ಪಡಿಸಿರುವ ಮಾನವ ಆಕಾರ ಉಳ್ಳ ರೋಬೊ (ಯಂತ್ರಮಾನವ) ‘ಪೆಪ್ಪರ್‌’ಗಾಗಿ ಅಪ್ಲಿಕೇಷನ್‌ಗಳ ಸ್ಪರ್ಧೆಯೊಂದನ್ನು ಆಯೋಜಿಸಿತ್ತು. ಗೇಮ್ಸ್‌, ಕ್ವಿಜ್‌ಗಳು, ಬುದ್ಧಿಮಾಂದ್ಯ ವ್ಯಕ್ತಿಗಳ ನಿಗಾವಹಿಸಬಲ್ಲದ್ದೂ ಸೇರಿದಂತೆ 100ಕ್ಕೂ ಅಧಿಕ ತಂತ್ರಾಂಶಗಳು  ಅಲ್ಲಿದ್ದವು.

ಯಾರೀ ಪೆಪ್ಪರ್?

ರೂಪದಲ್ಲಿ ಮಾನವ ಆಕೃತಿಯನ್ನೇ  ಹೋಲುವ ರೋಬೊ ಈ ಪೆಪ್ಪರ್. ಜಪಾನಿನ ಟೆಲಿಕಾಂ ಕಂಪೆನಿ ಸಾಫ್ಟ್‌ಬ್ಯಾಂಕ್‌ ಈ ಯಂತ್ರಮಾನವನನ್ನು ಅಭಿವೃದ್ಧಿಪಡಿಸಿದೆ.

121 ಸೆಂಟಿ ಮೀಟರ್ ಎತ್ತರವಿರುವ ಪೆಪ್ಪರ್‌, ಕೃತಕ ಬುದ್ಧಿಮತ್ತೆ ಹೊಂದಿದೆ. 

ಅಂತರ್ಜಾಲದೊಂದಿಗೆ ಸಂಪರ್ಕ ಬೆಸೆದುಕೊಂಡಿದೆ. ಮನುಷ್ಯರ ದನಿಯನ್ನು ಗುರುತಿಸಿ, ಅವರೊಂದಿಗೆ ಚುಟುಕು ಸಂಭಾಷಣೆ ನಡೆಸಬಲ್ಲಷ್ಟು ಚತುರನೂ ಆಗಿದೆ.

ತನ್ನ ವಿಡಿಯೊ ಕ್ಯಾಮೆರಾ ಕಂಗಳ ಮೂಲಕ  ಮನುಷ್ಯರ ಆಂಗಿಕ ಭಾಷೆ , ಚಲನೆ ಹಾಗೂ ಮುಖಭಾವ ಗ್ರಹಿಸಿ ಅದಕ್ಕೆ ತಕ್ಕಂತೆ ಸ್ಪಂದಿಸಬಲ್ಲ ಕಿಲಾಡಿ ಈ ಪೆಪ್ಪರ್‌!

ವಿಶೇಷವೆಂದರೆ ಒಂದೊಂದು  ತಂತ್ರಾಂಶವನ್ನು ಅಳವಡಿಸಿದಾಗಲೂ ಅದಕ್ಕೆ ಅನುಗುಣವಾಗಿ ‘ಪೆಪ್ಪರ್’ ಕಾರ್ಯನಿರ್ವಹಿಸುತಿತ್ತು. ಸಬಿಡಾನ್ ಯೋಜನಾ ತಂಡದ ಮ್ಯೂಸಿಕ್‌ ಕ್ವಿಜ್‌ ತಂತ್ರಾಂಶ ಅಳವಡಿಸಿದರೆ ಈ ಪೆಪ್ಪರ್, ಅದರಂತೆಯೇ ಕಾರ್ಯನಿರ್ವಹಿಸುತ್ತಿತ್ತು. ಮತ್ತೊಂದು ತಂತ್ರಾಂಶ ಹಾಕಿದರೆ ಅದರ ನಿರ್ದೇಶನದಂತೆಯೂ ನಡೆದುಕೊಳ್ಳುತ್ತಿತ್ತು.  ಡಿಮೆನ್ಷಿಯಾ ಯೋಜನಾ ತಂಡದ ತಂತ್ರಾಂಶ ಅಳವಡಿಸಿದರೆ ಈ ‘ಪೆಪ್ಪರ್‌’, ಬುದ್ಧಿಮಾಂದ್ಯ ರೋಗಿಗಳ ನಿಗಾ ವಹಿಸುವುದರ ಜತೆಗೆ ಅವರ ಯೋಗ ಕ್ಷೇಮ ವಿಚಾರಿಸಿಕೊಳ್ಳಲು ನರ್ಸ್ ಆಗಿ ಬದಲಾಗುತ್ತಿತ್ತು!

ಸ್ಪರ್ಧೆಯಲ್ಲಿ ಅಂತಿಮವಾಗಿ ಡಿಮೆನ್ಷಿಯಾ (ಬುದ್ಧಿಮಾಂದ್ಯ) ಯೋಜನಾ ತಂಡವು ಮೊದಲ ಬಹುಮಾನ ಗೆದ್ದು 10 ಲಕ್ಷ ಯೆನ್ (ಸುಮಾರು ರೂ52 ಲಕ್ಷ) ಬಾಚಿತು.

ಡಿಮೆನ್ಷಿಯಾ ಯೋಜನಾ ತಂಡವು ಅಭಿವೃದ್ಧಿ ಪಡಿಸಿರುವ ತಂತ್ರಾಂಶದ ಸಹಾಯದಿಂದ ಪೆಪ್ಪರ್‌, ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ ವ್ಯಕ್ತಿಯೊಂದಿಗೆ ಸರಳ ಸಂವಹನ  ನಡೆಸುವುದು, ಅವರನ್ನು ಎಚ್ಚರಿಸುವುದು ಅಥವಾ ಔಷಧವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುವ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

ಅಷ್ಟೇ ಅಲ್ಲ, ರೋಗಿಗಳು ತೆಗೆದುಕೊಂಡ ಮಾತ್ರೆಗಳ ಸಂಖ್ಯೆಯನ್ನು ಅಂತರ್ಜಾಲ ಸಂಪರ್ಕದ ಮೂಲಕ ವೈದ್ಯರಿಗೆ ಮಾಹಿತಿ ನೀಡುವ ಕಾರ್ಯವೂ ಪೆಪ್ಪರ್‌ಗೆ ಈ ತಂತ್ರಾಂಶದಿಂದ ಸಾಧ್ಯವಾಗಲಿದೆ ಎಂಬುದು ತಂತ್ರಜ್ಞರ ವಿಶ್ವಾಸ.

ರೋಗಿಗಳಿಗೆ ಇ–ಮೇಲ್‌ ಬಂದರೆ  ಆ ಬಗ್ಗೆ ಅವರ ಗಮನ ಸೆಳೆಯುವ,  ಕುಟುಂಬಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ರೋಗಿಗಳು ಸರಿಯಾಗಿ ನೀಡುವರೆ ಎಂಬುದನ್ನು ಪರೀಕ್ಷಿಸುವ ಕೆಲಸವನ್ನೂ ಈ ಯಂತ್ರಮಾನವ ಮಾಡಲಿದೆ. ಮೊಮ್ಮಕ್ಕಳು ಎಷ್ಟು? ನೋಡಲು ಹೇಗಿದ್ದಾರೆ? ಮೊದಲಾದ ಪ್ರಶ್ನೆಗಳನ್ನೂ ಪೆಪ್ಪರ್ ಕೇಳಿ ಮಾಹಿತಿ ಪಡೆದುಕೊಳ್ಳುತ್ತದೆಯಂತೆ.

ಆಪ್ತರಂತೆ ಅಲ್ಲದಿದ್ದರೂ ನರ್ಸ್‌ಗಳಂತೆ ಆರೈಕೆ ಮಾಡಬಲ್ಲ, ‘ಸಾಮಾಜಿಕ ಜತೆಗಾರ’ನಾಗಬಲ್ಲ ಭರವಸೆ ಮೂಡಿಸಿದೆ ಪೆಪ್ಪರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT