ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಬ್ಲೇ ಕ್ರೀಡಾಂಗಣದಲ್ಲಿ ಮೋದಿ ಭಾಷಣಕ್ಕೆ ಸಿದ್ಧತೆ

ಶ್ರೀಮಂತ ದಾನಿಗಳಿಂದ ದೇಣಿಗೆ * ವೀಸಾ ಸಮಸ್ಯೆ ಚರ್ಚೆ ಉದ್ದೇಶ * ಗುಜರಾತಿಗಳೇ ಹೆಚ್ಚು
Last Updated 6 ಅಕ್ಟೋಬರ್ 2015, 20:10 IST
ಅಕ್ಷರ ಗಾತ್ರ

ಲಂಡನ್‌: ಮುಂದಿನ ತಿಂಗಳು ಇಲ್ಲಿಗೆ ಬರಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯನ್ನು ‘ಯಶಸ್ವಿಗೊಳಿಸಲು’ ಇಲ್ಲಿನ ಭಾರತೀಯ ಹೈಕಮಿಷನ್‌ ಎಲ್ಲ ಸಿದ್ಧತೆ ಮಾಡಿಕೊಂಡಿದೆ.

ಈ ಕುರಿತು ಹೈಕಮಿಷನ್‌ ಕಚೇರಿ ಆವರಣದಲ್ಲಿ ಭಾರತ ಮೂಲದ ಸುಮಾರು 450ಕ್ಕೂ ಹೆಚ್ಚು ಸಂಘಟನೆಗಳ ಪ್ರತಿನಿಧಿಗಳ ಸಭೆ ನಡೆಯಿತು ಮತ್ತು ಮೋದಿ ಅವರು ನವೆಂಬರ್‌ 11ರಿಂದ 13ರ ವರೆಗೆ ಲಂಡನ್‌ಗೆ ಭೇಟಿ ನೀಡಲಿದ್ದಾರೆ ಎಂದು ಗೊತ್ತಾಗಿದೆ.

ಇಲ್ಲಿನ ಪ್ರಸಿದ್ಧ ವೆಂಬ್ಲೇ ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಮೋದಿ ಅವರು ಭಾರತ ಮೂಲದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಅಲ್ಲಿ ಸುಮಾರು 70 ಸಾವಿರ ಜನ ಸೇರಲಿದ್ದು ಪ್ರತಿಯೊಬ್ಬರಿಗೂ ತಮ್ಮ ಗುರುತನ್ನು ಸಾಬೀತು ಮಾಡಲು ಪಾಸ್‌ಪೋರ್ಟ್‌ ಹಾಗೂ ಪ್ರವೇಶ ಪತ್ರ ತರಲು ಸೂಚಿಸಲಾಗಿದೆ ಎಂದು ಗುಜರಾತಿಗಳೇ ಜಾಸ್ತಿ ಇರುವ ಭಾರತೀಯ ಸಂಘಟನೆಗಳ ಒಕ್ಕೂಟದ ಪ್ರತಿನಿಧಿಗಳು ಇಲ್ಲಿಗೆ ಭೇಟಿ ನೀಡಿರುವ ಭಾರತದ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಮೋದಿ ಅವರ ಭೇಟಿಯನ್ನು ಯಶಸ್ವಿಗೊಳಿಸಲು ಇಲ್ಲಿನ ಶ್ರೀಮಂತ ಭಾರತೀಯರು ಕೊಡುಗೈ ದೇಣಿಗೆ ಮಾಡಲೂ ಮುಂದೆ ಬಂದಿದ್ದಾರೆ. ಆದರೆ, ಎಷ್ಟು ಹಣ ಸಂಗ್ರಹವಾಗಿದೆ ಅಥವಾ ಆಗಲಿದೆ ಎಂಬ ಕುರಿತು ಅವರು ಈಗಲೇ ಮಾಹಿತಿ ನೀಡುವುದು ಕಷ್ಟ. ಏಕೆಂದರೆ ಇನ್ನೂ ದೇಣಿಗೆ ಸಂಗ್ರಹವಾಗಬೇಕು‘ ಎಂದರು.

ಇಲ್ಲಿ ವಾಸವಾಗಿರುವ ಭಾರತೀಯರಿಗೆ ಬ್ರಿಟನ್‌ ಸರ್ಕಾರದ ಜೊತೆಗೆ ಹೇಳಿಕೊಳ್ಳಬೇಕಾದಂಥ ತೀವ್ರವಾದ ಆಕ್ಷೇಪಗಳು ಇಲ್ಲದೇ ಇದ್ದರೂ ಈಚಿನ ವರ್ಷಗಳಲ್ಲಿ ಅದು ಅನುಸರಿಸುತ್ತಿರುವ ಕಟ್ಟುನಿಟ್ಟಿನ ವೀಸಾ ನೀತಿಯ ಬಗ್ಗೆ ಅಸಮಾಧಾನ ಇದೆ. ಅದನ್ನು ಗುಜರಾತ್‌ ಪಾಟೇದಾರ ಸಮುದಾಯ ಸಂಘಟನೆಯ ಅಧ್ಯಕ್ಷ ವಯೋವೃದ್ಧ ತಾರಾ ಮುಖರ್ಜಿಯವರು ಮುಚ್ಚಿ ಇಟ್ಟುಕೊಳ್ಳಲಿಲ್ಲ.

‘ಕಾಲಕ್ರಮೇಣ ಬ್ರಿಟನ್‌ನಲ್ಲಿ ಭಾರತೀಯ ಸಮುದಾಯದವರಿಗೆ ಉನ್ನತ ಹುದ್ದೆಗಳಲ್ಲಿ ಪ್ರಾತಿನಿಧ್ಯ ಕಡಿಮೆ ಆಗುತ್ತಿರುವ’ ಕುರಿತೂ ಅವರು ಅತೃಪ್ತಿ ವ್ಯಕ್ತಪಡಿಸಿದರು.

‘ಸಂಸತ್ತಿನಲ್ಲಿ ಪ್ರಾತಿನಿಧ್ಯ ಇದ್ದರೂ ನ್ಯಾಯಾಂಗದಂಥ ಇತರ ಅನೇಕ ಕ್ಷೇತ್ರಗಳಲ್ಲಿ ಇದು ಕಡಿಮೆ ಆಗುತ್ತಿದೆ. ಭಾರತೀಯರಿಗೆ ಕಡಿಮೆ ಆಗುತ್ತಿರುವ ಪ್ರಾತಿನಿಧ್ಯ ಹಾಗೂ ವಿದ್ಯಾರ್ಥಿಗಳಿಗೆ ನಿರಾಕರಿಸಲಾಗುತ್ತಿರುವ ವೀಸಾ ಸಮಸ್ಯೆ ಕುರಿತು ಪ್ರಧಾನಿ ಮೋದಿ ಅವರ ಭೇಟಿ ಸಮಯದಲ್ಲಿ ಚರ್ಚೆ ಮಾಡಲಾಗುವುದು’ ಎಂದು ಅವರು ತಿಳಿಸಿದರು.

‘ಮೋದಿ ಅವರು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಒಂದು ಸಾರಿ ಲಂಡನ್‌ಗೆ ಭೇಟಿ ಕೊಟ್ಟುದನ್ನು ನೆನಪು ಇಟ್ಟುಕೊಂಡಿರುವ’ ಇಲ್ಲಿನ ಗುಜರಾತ್‌ ಸಮುದಾಯ, ‘ಮುಖ್ಯಮಂತ್ರಿಯಾಗಿಯೂ ಅವರು ಎರಡು ಸಾರಿ ಇಲ್ಲಿಗೆ ಬಂದಿದ್ದರು’ ಎಂದು ನೆನಪಿಸಿ ಕೊಳ್ಳುತ್ತಿದೆ.

‘ಇದು ಅವರು ನಾಲ್ಕನೇ ಭೇಟಿ ಯಾಗಿದ್ದು, ಪ್ರಧಾನಿಯಾಗಿ ಬರುತ್ತಿ ರುವುದು ನಮ್ಮ ಸಮುದಾಯಕ್ಕೆ ಹೆಮ್ಮೆ’ ಎಂದು ಮುಖರ್ಜಿ  ಹೇಳಿದರು. ಆದರೆ, ಸ್ವಾಗತ ಸಮಿತಿಯಲ್ಲಿ ಯಾರೂ ಅಲ್ಪಸಂಖ್ಯಾತರು ಇಲ್ಲವಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಲು ಅವರು ತಡವರಿಸಿದರು. ‘ಇಂದು ಅವರೆಲ್ಲ ಬಂದಿಲ್ಲ. ನಿನ್ನೆಯ ಸಭೆಯಲ್ಲಿ ಇದ್ದರು’ ಎಂದು ಹೇಳಿದರು.

ಅನಿವಾಸಿ ಭಾರತೀಯರಾಗಿ ನೀವು ಪ್ರಧಾನಿಯಿಂದ ಏನು ನಿರೀಕ್ಷೆ ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ಭಾರತದಲ್ಲಿ ಬಂಡವಾಳ ಹೂಡಿಕೆಗೆ ಸೂಕ್ತ ವಾತಾವರಣ ನಿರ್ಮಿಸಬೇಕು ಹಾಗೂ ಕೆಳಹಂತದಲ್ಲಿನ ಭ್ರಷ್ಟಾಚಾರವನ್ನು ನಿವಾರಿಸಬೇಕು ಎಂದು ಕೋರಿಕೊಳ್ಳುತ್ತೇವೆ’ ಎಂದು ಅವರು ಹೇಳಿದರು.

‘ಗುಜರಾತ್ ರಾಜ್ಯದ ಅಹ್ಮದಾಬಾದ್‌ನಲ್ಲಿ ಕೆಳಹಂತದಲ್ಲಿ ಭ್ರಷ್ಟಾಚಾರ ಇನ್ನೂ ಹಾಗೆಯೇ ಇದೆ’ ಎಂದೂ ಅವರು ಒಪ್ಪಿಕೊಂಡರು.

‘ಬಂಡವಾಳ ಹೂಡಿಕೆ: ಬಳಕೆಯಾಗದ ಸಾಧ್ಯತೆ ’
ಲಂಡನ್‌:
ಭಾರತ ಮತ್ತು ಬ್ರಿಟನ್‌ ನಡುವೆ ಶತಮಾನಗಳ ಸಂಬಂಧ ಇದ್ದರೂ ವ್ಯಾಪಾರ ಮತ್ತು ಬಂಡವಾಳ ಹೂಡಿಕೆ ವಿಚಾರದಲ್ಲಿ ಎರಡೂ ದೇಶಗಳು ತಮ್ಮ ಸಾಧ್ಯತೆಯನ್ನು ಇನ್ನೂ ಬಳಸಿಕೊಳ್ಳಬೇಕಾಗಿದೆ ಬಹಳ ಎಂದು ಭಾರತದ ಹೈಕಮಿಷನರ್‌ ರಂಜನ್‌ ಮಥಾಯಿ ಇಲ್ಲಿ ಅಭಿಪ್ರಾಯಪಟ್ಟರು.

ಹೈಕಮಿಷನ್‌ ಕಚೇರಿಯ ಗಾಂಧಿ ಸಭಾಂಗಣದಲ್ಲಿ ಮಾತನಾಡಿದ ಅವರು, ಲಂಡನ್‌ಗೆ ಪ್ರಧಾನಿಯ ಭೇಟಿ ಕುರಿತು ಯಾವುದೇ ಸುಳಿವು ನೀಡಲಿಲ್ಲ. ಹೈಕಮಿಷನ್‌ ಆವರಣದಲ್ಲಿ ನಡೆದ ಭಾರತದ ಸಂಘಟನೆಗಳ ಸಭೆಯ ಕುರಿತೂ ಅವರು ಏನನ್ನೂ ಹೇಳಲಿಲ್ಲ.

‘ಭಾರತದಲ್ಲಿ ಬಂಡವಾಳ ಹೂಡಿಕೆಯಲ್ಲಿ ಬ್ರಿಟನ್‌ ದೇಶ ಮೂರನೇ ಸ್ಥಾನದಲ್ಲಿ ಇದ್ದರೂ ಸಿಂಗಪುರಕ್ಕಿಂತ ಕೆಳಗಿನ ಸ್ಥಾನದಲ್ಲಿ ಇದೆ’ ಎಂದು ಅವರು ತಿಳಿಸಿದರು. ‘ಬ್ರಿಟನ್‌ನಲ್ಲಿ ಭಾರತೀಯ ಸಮುದಾಯದವರು ತಯಾರಿಕಾ ವಲಯದಲ್ಲಿ ಭಾರಿ ಹೂಡಿಕೆ ಮಾಡಿದ್ದು ಟಾಟಾದವರು ಅತಿದೊಡ್ಡ ಹೂಡಿಕೆದಾರರು’ ಎಂದು ಮಾಹಿತಿ ನೀಡಿದರು.

‘ಬ್ರಿಟನ್‌ನಲ್ಲಿ ಹೂಡಿಕೆಗೆ ಭಾರತೀಯರಿಗೆ ಭಾಷೆ, ವಾತಾವರಣ ಮತ್ತು ಕಾನೂನಿನ ಅನುಕೂಲತೆಗಳು ಇರುವುದು ವಿಶೇಷ. ಈ ಎರಡೂ ದೇಶಗಳ ನಡುವಿನ ಸಂಬಂಧ ಬಹಳ ಹಳೆಯದು’ ಎಂದು ಅವರು ಮೆಲುಕು ಹಾಕಿದರು.

‘ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಭಾರತ ಹಾಗೂ ಬ್ರಿಟನ್‌ ದೇಶಗಳು ಜೊತೆಯಾಗಿ ಹೆಜ್ಜೆ ಹಾಕಲು ಅವಕಾಶ ಇದೆ. 1950–60 ರ ದಶಕದಲ್ಲಿ ಭಾರತೀಯರು ಬಹಳ ದೊಡ್ಡ ಪ್ರಮಾಣದಲ್ಲಿ ಇಲ್ಲಿಗೆ ಬಂದರು. ಈಗ ವೃತ್ತಿಪರರು ಬರುತ್ತಿದ್ದಾರೆ. ಆದರೆ, ಬ್ರಿಟನ್‌ ಸರ್ಕಾರ ಈಗ ಎದುರಿಸುತ್ತಿರುವ ಕಟ್ಟು ನಿಟ್ಟಿನ ವೀಸಾ ನೀತಿಯ ಕಾರಣವಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವುದು ನಿಜ’ ಎಂದು ಅವರು ಹೇಳಿದರು.

‘ಭಾರತೀಯ ಸಮುದಾಯದವರು ಇಲ್ಲಿನ ಜನಜೀವನದಲ್ಲಿ  ಒಂದಾಗಿ ಹೋಗಿದ್ದಾರೆ. ಹೀಗಾಗಿ ಈ ದೇಶದ ಸರ್ಕಾರದ ಜೊತೆಗೆ ಅವರ ಸಂಬಂಧ ಚೆನ್ನಾಗಿದೆ’ ಎಂದರು.

ಭವಿಷ್ಯದ ಕಡೆಗೆ ನೆಟ್ಟ ಬ್ರಿಟನ್ ದೃಷ್ಟಿ
‘ಭಾರತವನ್ನು ಇನ್ನೂರು ವರ್ಷಗಳ ಕಾಲ ವಸಾಹತುವಾಗಿ ಇಟ್ಟುಕೊಂಡ ಕಾರಣಕ್ಕಾಗಿ ಬ್ರಿಟನ್‌ ಸರ್ಕಾರ ಭಾರತದ ಕ್ಷಮೆ ಕೇಳುವ ಪ್ರಶ್ನೆ ಉದ್ಭವಿಸುವುದಿಲ್ಲ. ಹಳೆಯದನ್ನು ಬಿಟ್ಟು ಹೊಸ ಸಂಬಂಧಗಳ ಸುಧಾರಣೆ ಕಡೆಗೆ ಗಮನ ಹರಿಸುವುದು ನಮ್ಮ ಗುರಿ’ ಎಂದು ಬ್ರಿಟನ್‌ನ ವಿದೇಶಾಂಗ ಮತ್ತು ಕಾಮನ್‌ವೆಲ್ತ್‌ ಕಚೇರಿಯ ವಕ್ತಾರರೊಬ್ಬರು ತಿಳಿಸಿದರು.

ಈ ಪ್ರಸ್ತಾಪ ಮುಂದಿಟ್ಟು ಭಾರಿ ಬೆಂಬಲ ಹಾಗೂ ಮೆಚ್ಚುಗೆ ಗಳಿಸಿದ್ದ ಭಾರತದ ವಿದೇಶಾಂಗ ಖಾತೆ ಮಾಜಿ ರಾಜ್ಯ ಸಚಿವ ಶಶಿ ತರೂರ್‌ ಅವರ ಆಗ್ರಹ ಕುರಿತು ಮಾಧ್ಯಮ ಪ್ರತಿನಿಧಿಯೊಬ್ಬರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ‘ಈಗ ಇರುವವರನ್ನು ಹಳೆಯ ಇತಿಹಾಸಕ್ಕೆ ಹೊಣೆ ಮಾಡಲು ಆಗದು’ ಎಂದು ಅವರು ತಿಳಿಸಿದರು.

‘2010ರಿಂದ ಕೇವಲ ಮೂರು ವರ್ಷಗಳಲ್ಲಿ ಬ್ರಿಟನ್‌ ಪ್ರಧಾನಿ ಡೇವಿಡ್‌ ಕ್ಯಾಮರೂನ್‌ ಅವರು ಮೂರು ಸಾರಿ ಭಾರತಕ್ಕೆ ಭೇಟಿ ಕೊಟ್ಟಿದ್ದಾರೆ. ಭಾರತ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಅತಿದೊಡ್ಡ ಆರ್ಥಿಕ ಮಾರುಕಟ್ಟೆ. ಅದರ ಜೊತೆಗೆ ವಾಣಿಜ್ಯ ವಹಿವಾಟು ವರ್ಧನೆ, ಹವಾಮಾನ ಬದಲಾವಣೆ ತಂದು ಒಡ್ಡಿರುವ ಆತಂಕ ಕುರಿತು ಚರ್ಚಿಸಲು ತಮ್ಮ ದೇಶ ಕಾತರವಾಗಿದೆ’ ಎಂದು ಅವರು ಹೇಳಿದರು.

‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೂ ಕಾಯಂ ಸ್ಥಾನ ಇರಬೇಕು ಎಂಬ ಬೇಡಿಕೆಗೆ ತಮ್ಮ ದೇಶದ ಬೆಂಬಲ ಇದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT