ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಸೀಟು ವಂಚನೆ: ಬಂಧನ

Last Updated 30 ಏಪ್ರಿಲ್ 2016, 19:36 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿಷ್ಠಿತ ಕಾಲೇಜುಗಳಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ಹೊರ ರಾಜ್ಯದ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ಕೋಲ್ಕತ್ತಾ ಮೂಲದ ಅಜಿತೇಶ್ ಮೊಂಡಲ್ (35) ಸದಾಶಿವನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಈ ಸಂಬಂಧ ವಂಚನೆಗೊಳಗಾದ ಮೀನಾಕ್ಷಿ ಬೋರಾ ಗೋಯಲ್ ಎಂಬ ಒಡಿಶಾದ ವಿದ್ಯಾರ್ಥಿನಿ ದೂರು ಕೊಟ್ಟಿದ್ದರು. ಪ್ರಕರಣದಲ್ಲಿ ಅಜಿತೇಶ್‌ನ ಪತ್ನಿ ಪಿಂಕಿ ಪಾಲ್‌ ಕೈಲಾಸಿಂಗ್, ಅವರ ಕಚೇರಿ ನೌಕರರಾದ ಕೈಲಾಶ್‌ ಸಿಂಗ್, ರಾವಲ್‌ಸಿಂಗ್ ಮತ್ತು ಶಿವ ಕೂಡ ಆರೋಪಿಗಳು. ಬಂಧನ ಭೀತಿಯಿಂದ ಪಿಂಕಿ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

‘ಪತ್ನಿ ಪಿಂಕಿ ಜತೆ ಸುಬ್ರಹ್ಮಣ್ಯ ನಗರದಲ್ಲಿ ನೆಲೆಸಿದ್ದ ಅಜಿತೇಶ್‌, ನ್ಯೂ ಬಿಇಎಲ್ ರಸ್ತೆಯಲ್ಲಿ ‘ಮೊಂಡಲ್ ಹೈಯರ್ ಎಜುಕೇಷನ್ ಕೌನ್ಸೆಲಿಂಗ್ ಸೆಂಟರ್’ ಹೆಸರಿನ ಕಚೇರಿ ನಡೆಸುತ್ತಿದ್ದ. ಅಲ್ಲಿ ಕೈಲಾಶ್, ರಾವಲ್ ಹಾಗೂ ಶಿವ ಅವರನ್ನು ಕೆಲಸಕ್ಕಿಟ್ಟುಕೊಂಡಿದ್ದ.’

‘ವೈದ್ಯಕೀಯ ಸೀಟು ಅರಸಿ ನಗರಕ್ಕೆ ಬರುವ ಹೊರ ರಾಜ್ಯದ ವಿದ್ಯಾರ್ಥಿಗಳನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು, ಸೀಟು ಕೊಡಿಸುವುದಾಗಿ ನಂಬಿಸಿ, ವಂಚನೆ ಮಾಡುತ್ತಿದ್ದರು.’

₹ 30 ಲಕ್ಷಕ್ಕೆ ಬೇಡಿಕೆ: ಬೆಂಗಳೂರಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ಇಚ್ಛೆ ಹೊಂದಿದ್ದ ಬೋರಾ ಹಾಗೂ ಅವರ ಸ್ನೇಹಿತೆ, ಪ್ರವೇಶ ಪ್ರಕ್ರಿಯೆ ಬಗ್ಗೆ ವಿಚಾರಿಸಿಕೊಂಡು ಹೋಗಲು ಕಳೆದ ಜೂನ್‌ನಲ್ಲಿ ನಗರಕ್ಕೆ ಬಂದಿದ್ದರು. ಆಗ ಕಾಲೇಜುವೊಂದರ ಬಳಿ ಈ ವಿದ್ಯಾರ್ಥಿನಿಯರನ್ನು ಭೇಟಿ ಮಾಡಿದ್ದ ಆರೋಪಿಗಳು, ‘ನಮಗೆ ಪ್ರತಿಷ್ಠಿತ ಕಾಲೇಜುಗಳ ಮಾಲೀಕರ ಪರಿಚಯವಿದೆ. ₹ 30 ಲಕ್ಷ ಕೊಟ್ಟರೆ, ಸೀಟು ಕೊಡಿಸುತ್ತೇವೆ’ ಎಂದು ನಂಬಿಸಿದ್ದರು.

ಈ ವಿಷಯವನ್ನು ವಿದ್ಯಾರ್ಥಿನಿಯರು ತಮ್ಮ ಪೋಷಕರಿಗೆ ತಿಳಿಸಿದ್ದರು. 2 ದಿನಗಳ ಬಳಿಕ ನಗರಕ್ಕೆ ಬಂದ ಪೋಷಕರು, ಸೀದಾ ಮೊಂಡಲ್‌ನ ಕಚೇರಿಗೆ ತೆರಳಿ ಸೀಟಿನ ಬಗ್ಗೆ ಮಾತುಕತೆ ನಡೆಸಿದ್ದರು. ಕೊನೆಗೆ ₹17.8 ಲಕ್ಷಕ್ಕೆ ಒಪ್ಪಂದವಾಗಿ, ಕಚೇರಿಯಲ್ಲೇ ಹಣ ಕೊಟ್ಟಿದ್ದರು.

ಹ ಣ ಕೈಸೇರಿದ ಬಳಿಕ ಮೊಂಡಲ್, ‘ಸೆಪ್ಟೆಂಬರ್‌ನಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗುತ್ತದೆ. ಆಗ ನನ್ನನ್ನು ಸಂಪರ್ಕಿಸಿ’ ಎಂದು ಹೇಳಿದ್ದ. ಅದರಂತೆ ವಿದ್ಯಾರ್ಥಿನಿಯರು ಹಾಗೂ ಪೋಷಕರು ಸೆಪ್ಟಂಬರ್‌ನಲ್ಲಿ ಕಚೇರಿ ದೂರವಾಣಿಗೆ ಕರೆ ಮಾಡಿದಾಗ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ.

ಮೊಂಡಲ್, ಆತನ ಪತ್ನಿ ಹಾಗೂ ಇತರೆ ನೌಕರರ ಮೊಬೈಲ್‌ಗಳೂ ಸ್ವಿಚ್ ಆಫ್‌ ಆಗಿದ್ದವು. ಇದರಿಂದ ಅನುಮಾನಗೊಂಡ ಅವರು, ಡಿಸೆಂಬರ್‌ ತಿಂಗಳಲ್ಲಿ ನಗರಕ್ಕೆ ಬಂದು ಸದಾಶಿವನಗರ ಠಾಣೆಗೆ ದೂರು ಕೊಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

‘ಪ್ರಕರಣ ದಾಖಲಾದ ಬಳಿಕ ಆರೋಪಿಗಳು ಕೋಲ್ಕತ್ತಾಗೆ ಹೋಗಿ ತಲೆಮರೆಸಿಕೊಂಡಿದ್ದರು. ಅವರ ಮೊಬೈಲ್ ಕರೆಗಳ ವಿವರಗಳ ಮೇಲೆ ನಿರಂತರ ನಿಗಾ ಇಡಲಾಗಿತ್ತು. ಪ್ರಮುಖ ಆರೋಪಿ ಮೊಂಡಲ್, ಕೆಲಸದ ನಿಮಿತ್ತ ಏ.24ರಂದು ಬೆಂಗಳೂರಿಗೆ ಬರುತ್ತಿರುವ ವಿಷಯ ತಿಳಿಯಿತು. ಈ ಸುಳಿವು ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು. ಆತನಿಂದ ₹ 5.5 ಲಕ್ಷ ಜಪ್ತಿ ಮಾಡಲಾಗಿದೆ’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

ಎಚ್ಚರವಿರಲಿ
‘ಸೀಟು ಕೊಡಿಸುವುದಾಗಿ ವಂಚನೆ ಮಾಡುವ ದೊಡ್ಡ ಜಾಲವೇ ನಗರದಲ್ಲಿದೆ. ಈ ಬಗ್ಗೆ ವಿದ್ಯಾರ್ಥಿಗಳು, ಪೋಷಕರು ಎಚ್ಚರ ವಹಿಸಬೇಕು. ಮಧ್ಯವರ್ತಿಗಳ ಮೂಲಕ ಸೀಟು ಪಡೆಯುವುದನ್ನು ಬಿಟ್ಟು, ನೇರವಾಗಿ ಕಾಲೇಜು ಆಡಳಿತ ಮಂಡಳಿಯನ್ನೇ ಸಂಪರ್ಕಿಸಬೇಕು’ ಎಂದು ಸಿಸಿಬಿ ಅಧಿಕಾರಿಗಳು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT