ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಧನದಾಹ: ಗರ್ಭಕೋಶಕ್ಕೆ ಕತ್ತರಿ

30 ತಿಂಗಳಲ್ಲಿ 2,258 ಶಸ್ತ್ರಚಿಕಿತ್ಸೆ: ವರದಿ ನೀಡಿದ್ದರೂ ಕ್ರಮ ಕೈಗೊಳ್ಳದ ಸರ್ಕಾರ
Last Updated 28 ಜೂನ್ 2016, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ವೈದ್ಯರು ಧನದಾಹದಿಂದ  ಸಾವಿರಾರು ಮಹಿಳೆಯರ ಗರ್ಭಕೋಶಗಳನ್ನು ತೆಗೆದು ಹಾಕಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಆಯೋಗ ರಚಿಸಿದ್ದ ತನಿಖಾ ಸಮಿತಿಗಳು ವರದಿ ನೀಡಿದ್ದರೂ ಇನ್ನೂ ಯಾವುದೇ ಕ್ರಮವಾಗಿಲ್ಲ.

‘ಗಂಭೀರ ಸ್ವರೂಪದ ಕಾಯಿಲೆ ಇಲ್ಲದಿದ್ದರೂ ವೈದ್ಯರು ಹಣಕ್ಕಾಗಿ ಅಮಾಯಕ ಮಹಿಳೆಯರಿಗೆ ಶಸ್ತ್ರಚಿಕಿತ್ಸೆ ನಡೆಸಿ ಅವರು ಗರ್ಭಕೋಶಗಳನ್ನು ತೆಗೆದುಹಾಕಿದ್ದಾರೆ’ ಎಂದು ಕರ್ನಾಟಕ ಜನಾರೋಗ್ಯ ಚಳವಳಿ ತೀವ್ರ ಹೋರಾಟ ನಡೆಸಿತ್ತು. ‘ಸತ್ಯಶೋಧನಾ ಸಮಿತಿ’ ರಚಿಸಿ ಜಿಲ್ಲಾ ಆಡಳಿತಕ್ಕೆ ವರದಿಯನ್ನೂ ನೀಡಿತ್ತು. ಇದರ ಆಧಾರದ ಮೇಲೆ ಈ ಎರಡು ಸಮಿತಿ ರಚನೆಯಾಗಿದ್ದವು.

ಡಾ.ಎ.ರಾಮಚಂದ್ರ ಭೈರಿ ನೇತೃತ್ವದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಜ್ಞರ ಸಮಿತಿಯು ‘30 ತಿಂಗಳಲ್ಲಿ ಕಲಬುರ್ಗಿ ನಗರದ 25 ಆಸ್ಪತ್ರೆಗಳಲ್ಲಿ 2,258 ಗರ್ಭಕೋಶ ಶಸ್ತ್ರಚಿಕಿತ್ಸೆಗಳು ನಡೆದಿವೆ. ತಾವು ಭೇಟಿ ನೀಡಿದ ಆಸ್ಪತ್ರೆಗಳು ಕಾನೂನು, ವೈದ್ಯವೃತ್ತಿಯ ನೈತಿಕತೆಯನ್ನೆಲ್ಲ ಗಾಳಿಗೆ ತೂರಿವೆ. ದಾಖಲೆಗಳನ್ನೂ ಇಟ್ಟಿಲ್ಲ’ ಎಂದು 2015ರ ಅಕ್ಟೋಬರ್‌ 10ರಂದು ವರದಿ ನೀಡಿದೆ.

ರಾಜ್ಯ ಮಹಿಳಾ ಆಯೋಗವು ಕಲಬುರ್ಗಿಯ ಹೋರಾಟಗಾರ್ತಿ ಕೆ.ನೀಲಾ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯೂ ‘ಧನದಾಹಕ್ಕೆ ಬಡ–ಅಮಾಯಕ ಶ್ರಮಿಕ ವರ್ಗದ ಮಹಿಳೆಯರ ಗರ್ಭಕೋಶಗಳಿಗೆ ಕತ್ತರಿ ಹಾಕಲಾಗಿದೆ. ತಪ್ಪಿತಸ್ಥರ ವಿರುದ್ಧ ತಕ್ಷಣವೇ ತನಿಖೆ ಆರಂಭಿಸಬೇಕು’ ಎಂದು ಶಿಫಾರಸು ಮಾಡಿದೆ.

ಶ್ರಮಿಕ ವರ್ಗದ ಮಹಿಳೆಯರಿಗೇ ಗಾಳ: ‘ತಾಂಡಾದ ಹೆಣ್ಣುಮಕ್ಕಳು ಶ್ರಮ ಜೀವಿಗಳು. ಕಠಿಣ ಕೆಲಸ ಮಾಡುತ್ತಾರೆ. ಹೀಗಾಗಿ ಅವರಲ್ಲಿ ಹೊಟ್ಟೆನೋವಿ ನಂತಹ ಸಮಸ್ಯೆ ಸಾಮಾನ್ಯ. ಅಂತಹವರು ಹೆಚ್ಚಾಗಿ ಗರ್ಭಕೋಶ ದಂಧೆಗೆ ಬಲಿಯಾಗಿದ್ದಾರೆ’ ಎನ್ನುತ್ತಾರೆ ಕೆ.ನೀಲಾ.

30 ತಿಂಗಳಲ್ಲಿ 2,258 ಶಸ್ತ್ರಚಿಕಿತ್ಸೆ: ಕರ್ನಾಟಕ ಜನಾಂದೋಲನ ಚಳವಳಿ ಹೆಸರಿಸಿದ್ದ ಕಲಬುರ್ಗಿ ನಗರದ 38 ಆಸ್ಪತ್ರೆಗಳಿಗೂ ಆರೋಗ್ಯ ಇಲಾಖೆಯ ತಜ್ಞರ ಸಮಿತಿಯವರು ನಮೂನೆ ಕಳಿಸಿ, ಅದನ್ನು ಭರ್ತಿ ಮಾಡಿ ಕಳಿಸುವಂತೆ ಸೂಚಿಸಿದ್ದರು. ಕೇವಲ 25 ಆಸ್ಪತ್ರೆಗಳು ಮಾತ್ರ ಮಾಹಿತಿ ನೀಡಿದ್ದು, ಸಮಿತಿ ರಚನೆಯಾಗುವ ಮುಂಚಿನ 30 ತಿಂಗಳ ಅವಧಿಯಲ್ಲಿ 2,258 ಗರ್ಭಕೋಶ ಶಸ್ತ್ರಚಿಕಿತ್ಸೆ ಆಗಿದೆ ಎಂದು ಆ ವರದಿ ಹೇಳಿದೆ.

ಶಿಕ್ಷೆ ಏನು?: ‘ನಿಯಮ ಉಲ್ಲಂಘಿಸಿರುವ ಬಗ್ಗೆ ಮಾತ್ರ ಈ ವರದಿಯಲ್ಲಿ ಉಲ್ಲೇಖವಿದೆ. ತಪ್ಪು ಮಾಡಿದ ವೈದ್ಯರಿಗೆ ಶಿಕ್ಷೆ ವಿಧಿಸುವ, ಅನ್ಯಾಯಕ್ಕೊಳಗಾದ ಮಹಿಳೆಯರಿಗೆ ಪರಿಹಾರ ಕಲ್ಪಿಸುವ, ಶಸ್ತ್ರ ಚಿಕಿತ್ಸೆಗೊಳಗಾದವರು ಎದುರಿಸುತ್ತಿರುವ ಅಡ್ಡ ಪರಿಣಾಮ, ಸತ್ತವರ ಬಗ್ಗೆ ವರದಿಯಲ್ಲಿ ಯಾವುದೇ ಉಲ್ಲೇಖ ಇಲ್ಲ.

ಅನಗತ್ಯವಾಗಿ ಗರ್ಭಕೋಶ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಎಂದು ಸರ್ಕಾರದ ತಜ್ಞ ವೈದ್ಯರ ಸಮಿತಿಯೇ ಒಪ್ಪಿಕೊಂಡಿದೆ. ಹೀಗಿದ್ದರೂ ಸರ್ಕಾರ ತಪ್ಪಿತಸ್ಥರನ್ನು ಶಿಕ್ಷಿಸಲು ಮುಂದಾಗದಿರುವುದು ಸೋಜಿಗ ತಂದಿದೆ’ ಎನ್ನುತ್ತಾರೆ ಈ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿರುವ ಕರ್ನಾಟಕ ಜನಾರೋಗ್ಯ ಚಳವಳಿಯ ಜಿಲ್ಲಾ ಘಟಕದ ಸಂಚಾಲಕಿ ಟೀನಾ ಝೇವಿಯರ್‌.

ಬೆಳಕಿಗೆ ಬಂದ ಬಗೆ: ‘ಕರ್ನಾಟಕ ಜನಾಂದೋಲನ ಚಳವಳಿ ಸಾರ್ವಜನಿಕ ಆರೋಗ್ಯ ವಿಷಯದಲ್ಲಿ ಕೆಲಸ ಮಾಡುತ್ತಿದೆ. ಆಳಂದ ತಾಲ್ಲೂಕಿನ ಮಟಕಿ ತಾಂಡಾದಲ್ಲಿ ಮಹಿಳೆಯರೊಂದಿಗೆ ಸಮಾಲೋಚನೆ ನಡೆಸುತ್ತಿದ್ದ ವೇಳೆ ಈ ಆಘಾತಕಾರಿ ಅಂಶ ಬೆಳಕಿಗೆ ಬಂತು. ಅಂದಾಜು 200 ಮನೆಗಳು ಇರುವ ಈ ತಾಂಡಾದಲ್ಲಿ 55 ಮಹಿಳೆಯರು ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ’ ಎನ್ನುತ್ತಾರೆ ಚಳವಳಿಯ ಜಿಲ್ಲಾ ಸಂಚಾಲಕಿ ಟೀನಾ.

‘ಗ್ರಾಮೀಣ ಪ್ರದೇಶದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸರಿ ಇಲ್ಲ. ಹಾಗಾಗಿ ಅವರೆಲ್ಲ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಗರ್ಭಪಾತ, ಗರ್ಭಕೋಶ ಶಸ್ತ್ರಚಿಕಿತ್ಸೆ, ಲಿಂಗ ಪತ್ತೆಗಾಗಿ ಕಲಬುರ್ಗಿಯಲ್ಲಿಯ ಕೆಲ ಆಸ್ಪತ್ರೆಗಳಿಗೆ ಗ್ರಾಮೀಣ ಪ್ರದೇಶದ ರೋಗಿಗಳನ್ನು ಕರೆತರುವ ಏಜೆಂಟರೂ ಇದ್ದಾರೆ. ಹಾಗೇ ಬಿಟ್ಟರೆ ಕ್ಯಾನ್ಸರ್‌ ಆಗುತ್ತದೆ ಎಂಬ ಭಯ ಹುಟ್ಟಿಸಿ ಅವರ ಗರ್ಭಕೋಶ ತೆಗೆಯಲಾಗುತ್ತಿದೆ’ ಎನ್ನುತ್ತಾರೆ ಅವರು.

ಅಡ್ಡ ಪರಿಣಾಮ ಅಧಿಕ: ‘22 ವರ್ಷಕ್ಕೇ ಗರ್ಭಕೋಶ ಕಳೆದುಕೊಂಡವರು ಇದ್ದಾರೆ. ಅವರು 50 ವರ್ಷ ವಯಸ್ಸಾದವರಂತೆ ಶಕ್ತಿ ಹೀನರಾಗಿದ್ದಾರೆ. ಕ್ಯಾಲ್ಸಿಯಂ ಅಂಶದ ಕೊರತೆಯಾಗಿ ಮೂಳೆ ರೋಗಕ್ಕೆ ತುತ್ತಾಗುತ್ತಿದ್ದಾರೆ. ಹಾರ್ಮೋನ್‌ ಉತ್ಪತ್ತಿಯಾಗಲ್ಲ.  ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ’ ಎನ್ನುತ್ತಾರೆ ಅನ್ಯಾಯಕ್ಕೊಳಗಾದ ಮಹಿಳೆಯೊಬ್ಬರು.

ಕತ್ತರಿಸಿ ತಿಪ್ಪೆಗೆ ಎಸೆಯುತ್ತಾರೆ!: ಕಲಬುರ್ಗಿ ಜಿಲ್ಲೆಯಲ್ಲಿ ಅಂಗಾಂಗ ಕಸಿ ಮಾಡುವ ಯಾವುದೇ ವ್ಯವಸ್ಥೆ ಇಲ್ಲ. ಇಷ್ಟೊಂದು ಮಹಿಳೆಯರಿಂದ ಗರ್ಭ ಕೋಶವನ್ನು ಬೇರೆಯವರಿಗೆ ಅಳವಡಿ ಸಲು ಸಾಧ್ಯವಿಲ್ಲ. ಗರ್ಭಕೋಶ ಕತ್ತರಿಸಿ ಅದನ್ನು ತಿಪ್ಪೆಗೆ ಎಸೆಯುತ್ತಾರೆ ಅಷ್ಟೇ. ಅಂಗಾಂಗ ಮಾರಾಟ ಅಥವಾ ಕಳ್ಳ ಸಾಗಣೆಯ ದಂಧೆ ಇಲ್ಲಿಲ್ಲ. ಧನದಾಹವೇ ಗರ್ಭಕೋಶಕ್ಕೆ ಕತ್ತರಿ ಬೀಳಲು ಕಾರಣ ಎನ್ನುತ್ತಾರೆ ಕೆ.ನೀಲಾ ಮತ್ತು ಟೀನಾ ಅವರು.

ಶೀಘ್ರವೇ ಬಯಲಿಗೆಳೆಯುವೆ: ‘ಒಂದು ಜಿಲ್ಲೆಯಲ್ಲಿ 600 ಲಂಬಾಣಿ ಮಹಿಳೆಯರ ಗರ್ಭಕೋಶ ತೆಗೆಯಲಾಗಿದೆ. ಶೀಘ್ರವೇ ಅಲ್ಲಿಗೆ ಭೇಟಿ ನೀಡಿ ಅದನ್ನು ಬಯಲಿಗೆಳೆಯುತ್ತೇನೆ’ ಎನ್ನುತ್ತಾರೆ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಲಜಾ ನಾಯಕ್‌ ಅವರು.

ಒಂದು ಶಸ್ತ್ರಚಿಕಿತ್ಸೆಗೆ ₹30 ಸಾವಿರ
‘ಒಬ್ಬ ಮಹಿಳೆಯ ಗರ್ಭಕೋಶ ಶಸ್ತ್ರ ಚಿಕಿತ್ಸೆ ಮಾಡಿದರೆ ಆಸ್ಪತ್ರೆಯವರು ₹25 ಸಾವಿರದಿಂದ ₹30 ಸಾವಿರ ವರೆಗೆ ಹಣ ಪಡೆಯುತ್ತಾರೆ. ಗರ್ಭಕೋಶ ಶಸ್ತ್ರ ಚಿಕಿತ್ಸೆ ನಡೆಸುವುದು ವೈದ್ಯರಿಗೆ ಅಷ್ಟೊಂದು ಕ್ಲಿಷ್ಟಕರವಲ್ಲ. ಏಜೆಂಟರಿಗೆ ₹1ಸಾವಿರದಿಂದ ₹1,500 ವರೆಗೆ ಕೊಡಲಾಗುತ್ತದೆ. ಆಸ್ಪತ್ರೆಗೆ ಕನಿಷ್ಠ ₹20 ಸಾವಿರ ವರೆಗೆ ಉಳಿಯುತ್ತದೆ. ದಿನಕ್ಕೆ ನಾಲ್ಕೈದು ಇಂತಹ ಶಸ್ತ್ರಚಿಕಿತ್ಸೆ ನಡೆಸಿ ₹1 ಲಕ್ಷದವರೆಗೂ ಗಳಿಸಿದವರು ಇದ್ದಾರೆ’ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಒಲ್ಲದ ವೈದ್ಯರೊಬ್ಬರು.

ನಾಲ್ಕು ಆಸ್ಪತ್ರೆಗಳಿಗೆ ನೋಟಿಸ್‌
ಡಾ.ಭೈರಿ ನೇತೃತ್ವದ ಸಮಿತಿ ತನಿಖೆ ನಡೆಸಿದಾಗ ಕಲಬುರ್ಗಿ ನಗರದ ನಾಲ್ಕು ಆಸ್ಪತ್ರೆಗಳು ಕೆಪಿಎಂಇ, ಪಿಸಿಪಿಎನ್‌ಡಿಟಿ ಕಾಯ್ದೆ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಕಲಬುರ್ಗಿಯ ಗಿರೀಶ ನೂಲಾ ಸರ್ಜಿಕಲ್‌ ಅಂಡ್‌ ಮೆಟರ್ನಿಟಿ ಹಾಸ್ಪಿಟಲ್‌, ಬಸವ ಹಾಸ್ಪಿಟಲ್‌, ಎಲ್.ಎಂ. ಕೇರ್‌ ಮೆಟರ್ನಿಟಿ ಅಂಡ್‌ ಜನರಲ್‌ ಹಾಸ್ಪಿಟಲ್‌, ಡಾ.ಸುಧಾ ಮೆಮೋರಿಯಲ್‌ ಸ್ಮೃತಿ ಮೆಟರ್ನಿಟಿ ಅಂಡ್‌ ಸರ್ಜಿಕಲ್‌ ನರ್ಸಿಂಗ್‌ ಹೋಮ್‌ಗಳಿಗೆ ಸರ್ಕಾರದ ನಿರ್ದೇಶನದಂತೆ ಜೂನ್‌ 21ರಂದು ಷೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ. ನಿಗದಿತ 15 ದಿನಗಳಲ್ಲಿ ಉತ್ತರ ನೀಡದಿದ್ದರೆ ಸರ್ಕಾರವೇ ಕ್ರಮ ಕೈಗೊಳ್ಳಲಿದೆ.
ಡಾ.ಮಹಮ್ಮದ್‌ ಅನ್ಸಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ

***
ಮಹಿಳಾ ಆಯೋಗಕ್ಕೆ ವರದಿ ಸಲ್ಲಿಸಿದ್ದೇವೆ. ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದವರಿಗೂ ಸಹ ಗರ್ಭಕೋಶ ತೆಗೆದ ಉದಾಹರಣೆ ಇದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
-ಕೆ.ನೀಲಾ, ಮಹಿಳಾ ಆಯೋಗ ನೇಮಿಸಿದ್ದ ತನಿಖಾ ಸಮಿತಿ ಮುಖ್ಯಸ್ಥೆ

***
ಗರ್ಭಕೋಶ ಕಳೆದುಕೊಂಡವರಲ್ಲಿ ಏಳು ಮಹಿಳೆಯರು ತಮ್ಮ ವೈದ್ಯಕೀಯ ದಾಖಲೆಗಳ ಸಮೇತ ಜಿಲ್ಲಾಧಿಕಾರಿಗೆ ದೂರು ನೀಡಿದ್ದರೂ ಕ್ರಮವಾಗಿಲ್ಲ. ಇನ್ನೊಂದು ವಾರದಲ್ಲಿ ಹೈಕೋರ್ಟ್‌ ನಲ್ಲಿ ರಿಟ್‌ ಅರ್ಜಿ ದಾಖಲಿಸುತ್ತೇವೆ.
-ಟೀನಾ ಝೇವಿಯರ್‌, ಜಿಲ್ಲಾ ಸಂಚಾಲಕಿ, ಕರ್ನಾಟಕ ಜನಾರೋಗ್ಯ ಚಳವಳಿ

***
ರಾಜಸ್ತಾನ, ಛತ್ತೀಸ್‌ಗಡ, ಬಿಹಾರದಲ್ಲಿ ಈ ದಂಧೆ ವ್ಯಾಪಕವಾಗಿದೆ. ರಾಜ ಸ್ತಾನದ ‘ಪ್ರಾಯಾಸ್‌’ ಸ್ವಯಂ ಸೇವಾ ಸಂಸ್ಥೆಯ ಡಾ.ನರೇಂದ್ರ ಗುಪ್ತಾ ಅವರು ಸುಪ್ರೀಂನಲ್ಲಿ  ಅರ್ಜಿ ದಾಖಲಿಸಿದ್ದಾರೆ.
-ಅಖಿಲಾ ವಾಸನ್‌ ,
ಸಹ ಸಂಚಾಲಕಿ, ಕರ್ನಾಟಕ ಜನಾಂದೋಲನ ಚಳವಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT