ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಣು ತಲೆ, ವಿಕ್ರಂ ಪೌಡರ್!

Last Updated 5 ಮೇ 2016, 19:30 IST
ಅಕ್ಷರ ಗಾತ್ರ

‘ತಲೆ ಬಾಚ್ಕೊಳ್ಳಿ ಪೌಡರ್‌ ಹಾಕ್ಕೊಳ್ಳಿ, ದುನಿಯಾ ತುಂಬಾ ಕಾಸ್ಟ್ಲಿ...’ ಎಂಬುದು ‘ದುನಿಯಾ’ ಚಿತ್ರದ ಜನಪ್ರಿಯ ಸಂಭಾಷಣೆ. ಈ ಸಂಭಾಷಣೆಯ ಸಾಲನ್ನೇ ಸ್ಫೂರ್ತಿಯನ್ನಾಗಿಸಿಕೊಂಡಿರುವ ನಿರ್ದೇಶಕ ವೇಣುಗೋಪಾಲ್‌ ಅವರಿಗೆ ಸಂಭಾಷಣೆಗೆ ದೊರೆತ ಜನಪ್ರಿಯತೆ ಸಿನಿಮಾಕ್ಕೂ ದೊರಕಲಿದೆ ಎನ್ನುವ ನಂಬಿಕೆಯಿದೆ.

ಇಂದು (ಮೇ 6ರ ಶುಕ್ರವಾರ) ತೆರೆಕಾಣುತ್ತಿರುವ ‘ತಲೆ ಬಾಚ್ಕೊಳ್ಳಿ ಪೌಡರ್‌ ಹಾಕ್ಕೊಳ್ಳಿ’ ಚಿತ್ರದ ಶೀರ್ಷಿಕೆಯನ್ನು ಕೇವಲ ಜನಪ್ರಿಯತೆಯ ಕಾರಣಕ್ಕೆ ಇರಿಸಲಾಗಿಲ್ಲ, ಚಿತ್ರದ ಕಥೆಗೂ ಅದಕ್ಕೂ ಸಂಬಂಧವಿದೆ. ಚಿತ್ರಕ್ಕೆ ಹೊಂದಿಕೆಯಾಗುತ್ತದೆ ಎಂಬ ಕಾರಣಕ್ಕೆ ಅದನ್ನು ಆಯ್ಕೆ ಮಾಡಿಕೊಂಡಿರುವುದು ಎಂದು ವಿವರಣೆ ನೀಡುತ್ತಾರೆ ವೇಣುಗೋಪಾಲ್‌.

‘ಅವನಂದ್ರೆ ಅವನೆ’, ‘ಸೈಲೆನ್ಸ್‌’ ಮತ್ತು ‘ಜೈಹಿಂದ್‌’ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ವೇಣುಗೋಪಾಲ್ ಅವರಿಗೆ ಇದು ನಾಲ್ಕನೇ ಸಿನಿಮಾ. ಹಿಂದಿನ ಸಿನಿಮಾಗಳಲ್ಲಿ ದೊರಕದ ಗೆಲುವು ‘ತಲೆ ಬಾಚ್ಕೊಳ್ಳಿ...’ಯಲ್ಲಿ ಸಿಗುವ ನಿರೀಕ್ಷೆ ಅವರಲ್ಲಿದೆ.

ಇದು ಪರಿಪೂರ್ಣ ಮನರಂಜನೆಯ ಚಿತ್ರ. ನಗಿಸುವುದಷ್ಟೇ ಚಿತ್ರದ ಗುರಿ. ಇಲ್ಲಿ ದ್ವಂದ್ವಾರ್ಥದ ಮಾತುಗಳಿಲ್ಲ. ಸದಭಿರುಚಿಯ ಸಂಭಾಷಣೆಗಳಿಂದಲೇ ನಗಿಸುವ ಪ್ರಯತ್ನ ಮಾಡಲಾಗಿದೆ. ಚಿತ್ರಕ್ಕೆ ಕಥೆಯೇ ನಿಜವಾದ ಹೀರೊ. ಹಾಸ್ಯ ಸಿನಿಮಾ ಎಂಬ ಕಾರಣಕ್ಕೆ ಅನಗತ್ಯ ಸನ್ನಿವೇಶಗಳನ್ನು ತುರುಕಿಲ್ಲ. ಅತಿರೇಕಗಳೂ ಇಲ್ಲ. ಸಂದೇಶ ನೀಡಬೇಕೆಂಬ ಉಮೇದು ಸಹ ಇಲ್ಲ. ಈ ಕಾರಣಕ್ಕಾಗಿ ಸಿನಿಮಾ ವಿಭಿನ್ನವಾಗಿದೆ.

ಕಥೆಯೇ ಹಾಸ್ಯವನ್ನು ಬೇಡುತ್ತದೆ ಮತ್ತು ಅದನ್ನು ಪೂರೈಸುತ್ತದೆ. ಅದಕ್ಕೆ ತಕ್ಕಂತೆ ಶೋಭರಾಜ್‌, ಬುಲೆಟ್‌ ಪ್ರಕಾಶ್‌, ಬಿರಾದಾರ್‌ ಮುಂತಾದ ಹೆಸರಾಂತ ಹಾಸ್ಯ ಕಲಾವಿದರ ಬಳಗವೂ ಇದೆ ಎಂದು ಹೇಳುತ್ತಾರೆ.

ವಿಕ್ರಂ ಆರ್ಯ ಚಿತ್ರಕ್ಕೆ ಬಂಡವಾಳ ಹೂಡುವುದರ ಜತೆ, ನಾಯಕರಾಗಿಯೂ ಕಾಣಿಸಿಕೊಂಡಿದ್ದಾರೆ. ಇದು ಅವರಿಗೆ ಮೊದಲ ಚಿತ್ರ. ವಿಕ್ರಂ ಅವರಿಗೆ ಇಲ್ಲಿ ಇಬ್ಬರು ನಾಯಕಿಯರು. ಅವರಲ್ಲಿ ನಿಖಿತಾ ತುಕ್ರಾಲ್‌ ಅವರದು ಪ್ರಮುಖ ಪಾತ್ರ. ಹಾಸ್ಯ ನಟ ಚಿಕ್ಕಣ್ಣ ಅವರು ಮತ್ತೊಬ್ಬ ನಾಯಕ. ಆದರೆ ಅವರಿಗೆ ನಾಯಕಿಯಿಲ್ಲ. ಆದರೂ ಚಿಕ್ಕಣ್ಣ ಬೀಚ್‌ನಲ್ಲಿ ಹಾಡಿ ಕುಣಿಯುತ್ತಾರೆ. ಮೊದಲರ್ಧ ಒಂದು ರೀತಿಯಲ್ಲಿ ಸಾಗಿದರೆ, ದ್ವಿತೀಯಾರ್ಧದಲ್ಲಿ ಚಿತ್ರದ ಸ್ವರೂಪ ಬದಲಾಗುತ್ತದೆ. ಇಲ್ಲಿ 15 ನಿಮಿಷ ಸಿನಿಮಾದೊಳಗೊಂದು ಸಿನಿಮಾವಿದೆ. ಈ ಸನ್ನಿವೇಶವೇ ಇದೇ ಶೀರ್ಷಿಕೆ ಇರಿಸಲು ಪ್ರೇರಣೆ ಎಂದು ವೇಣುಗೋಪಾಲ್ ಹೇಳುತ್ತಾರೆ.

ವಿಕ್ರಂ ಆರ್ಯ ಅವರು ನಿಖಿತಾ ಅವರ ಅಭಿಮಾನಿ. ಹೀಗಾಗಿ ತಮ್ಮ ಸಿನಿಮಾಕ್ಕೆ ಅವರೇ ನಾಯಕಿಯಾಗಬೇಕೆಂದು ಅವರು ಪಟ್ಟು ಹಿಡಿದಿದ್ದರಂತೆ. ಕಥೆ ಇಷ್ಟವಾಗಿದ್ದರಿಂದ ನಿಖಿತಾ ಕೂಡ ಒಪ್ಪಿಕೊಂಡರು. ತಾರಾ ನಾಯಕರೊಂದಿಗೆ ತೆರೆ ಹಂಚಿಕೊಂಡಿದ್ದ ನಿಖಿತಾ, ಹೊಸಬರ ಚಿತ್ರ ಒಪ್ಪಿಕೊಂಡಿರುವುದು ಆಶ್ಚರ್ಯವೆನಿಸಿದರೂ, ಅದಕ್ಕೆ ಕಥೆಯೇ ಕಾರಣ ಎನ್ನುವುದು ವೇಣುಗೋಪಾಲ್ ಅವರ ನಂಬಿಕೆ.

ನಾಯಕನಿಗೆ ಗೆಳೆಯನಾಗಿ ಕಾಣಿಸಿಕೊಂಡಿರುವ ಚಿಕ್ಕಣ್ಣ ನಗಿಸುವ ಕೆಲಸದ ಜೊತೆಗೆ ನಾಯಕ ವಿಕ್ರಂ ಆರ್ಯ ಅವರಿಗೆ ಅಲ್ಲಲ್ಲಿ ಅಭಿನಯದ ಪಾಠವನ್ನೂ ಹೇಳಿಕೊಟ್ಟಿದ್ದಾರೆ.

ಇಲ್ಲಿ ಐದು ವಿಭಿನ್ನ ಹಾದಿಯ ಆದರೆ, ಒಂದಕ್ಕೊಂದು ಬೆಸೆದ ಪಾತ್ರಗಳಿವೆ. ಪ್ರತಿ ಪಾತ್ರಕ್ಕೂ ಪ್ರತ್ಯೇಕ ಕ್ಲೈಮ್ಯಾಕ್ಸ್‌ಗಳಿವೆ. ಒಟ್ಟಾರೆ ಚಿತ್ರ ಮನಸಿಗೆ ಖುಷಿ ಮತ್ತು ನೆಮ್ಮದಿ ನೀಡುವಂತಿದೆ ಎನ್ನುವ ವೇಣುಗೋಪಾಲ್‌, ಪ್ರೇಕ್ಷಕರಿಗೆ ಬೇಸರ ಮೂಡಿಸುವುದಿಲ್ಲ ಎಂಬ ಭರವಸೆ ನೀಡುತ್ತಾರೆ. ಸುಮಾರು 100–150  ಚಿತ್ರಮಂದಿರಗಳಲ್ಲಿ ಸಿನಿಮಾ ತೆರಕಾಣುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT