ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದಿಕೆ ಹಂಚಿಕೊಂಡ ಶರದ್–ಮುಲಾಯಂ

ಮತ್ತೆ ಗರಿಗೆದರಿದ ಎಸ್.ಪಿ–ಜೆಡಿಯು ಮೈತ್ರಿ ಮಾತು
Last Updated 8 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಲಖನೌ (ಪಿಟಿಐ): ಸಂಯುಕ್ತ ಜನತಾ­ದಳದ (ಜೆಡಿಯು) ಅಧ್ಯಕ್ಷ ಶರದ್‌ ಯಾದವ್‌ ಅವರು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಅವರೊಂದಿಗೆ ಬುಧವಾರ ಇಲ್ಲಿ ವೇದಿಕೆ ಹಂಚಿಕೊಳ್ಳುವ ಮೂಲಕ ಎರಡೂ ಪಕ್ಷಗಳ ಮೈತ್ರಿ ಕುರಿತ ಊಹಾ­ಪೋಹಗಳು ಗರಿಗೆದರುವಂತೆ ಮಾಡಿದರು.

ಇಲ್ಲಿನ ಜನೇಶ್ವರ್‌ ಮಿಶ್ರಾ ಪಾರ್ಕ್‌­ನಲ್ಲಿ ಸಮಾಜವಾದಿ ಪಕ್ಷದ  ಮೂರು ದಿನಗಳ ರಾಷ್ಟ್ರೀಯ ಸಮಾ­ವೇಶದ ಉದ್ಘಾಟನಾ ಸಮಾ­ರಂಭದಲ್ಲಿ ಪಾಲ್ಗೊಂಡ ಶರದ್‌ ಯಾದವ್‌, ‘ದೇಶ ಸಂಕಷ್ಟದಲ್ಲಿ ಸಿಲುಕಿದಾಗಲೆಲ್ಲ ಸಮಾಜ­ವಾದಿ­ಗಳು  ಒಗ್ಗಟ್ಟು ಪ್ರದರ್ಶಿಸಿದ್ದಾರೆ’ ಎಂದರು.

ಮುಲಾಯಂ ಸಿಂಗ್‌ ಜತೆಗಿನ ಆತ್ಮೀಯ ನಂಟಿನ ಬಗ್ಗೆ ಪ್ರಸ್ತಾಪಿಸಿದ ಶರದ್‌, ‘ನಾವು ರಕ್ತ ಸಂಬಂಧಿಗಳಲ್ಲ. ಆದರೆ ನಮ್ಮ ನಡುವೆ ಸೈದ್ಧಾಂತಿಕ ಸಂಬಂಧ­ವಿದೆ. ಬೇರೆ ಬೇರೆ ಪಕ್ಷಗಳಲ್ಲಿ­ದ್ದರೂ ನಾವು ಯಾವಾಗಲೂ ಒಳ್ಳೆಯ ಸ್ನೇಹಿತರಾಗಿದ್ದೇವೆ. ಇದೇ ಕಾರಣದಿಂದ  ಮುಲಾಯಂ ಅವರ ಆಹ್ವಾನದ ಮೇರೆಗೆ ಸಮಾಜವಾದಿ ಪಕ್ಷದ ಸಮಾ­ವೇಶದಲ್ಲಿ ಪಾಲ್ಗೊಂಡಿದ್ದೇನೆ’ ಎಂದರು.

ಸಮಾವೇಶದ ನಂತರ ಸುದ್ದಿಗಾರ­ರೊಂದಿಗೆ ಅವರು ಮಾತನಾಡಿ, ‘ಬಹಳ ಕಾಲದಿಂದ ನಾವು ಜೊತೆಗಿದ್ದೇವೆ. ಪ್ರಸ್ತುತ ಸನ್ನಿವೇಶ ಸಂವಿಧಾನಕ್ಕೆ ಭಾರಿ ಹೊಡೆತ ನೀಡುವಂತಿದೆ. ಹಾಗಾಗಿ ನಾವು ಅದನ್ನು ರಕ್ಷಿಸಬೇಕಿದೆ’ ಎಂದು ಅವರು ಹೇಳಿದರು.

ಉಭಯ ಪಕ್ಷಗಳ ನಡುವೆ ಮೈತ್ರಿಯ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸಲು ಶರದ್‌ ಯಾದವ್‌ ನಿರಾಕರಿಸಿದರು. ಆದರೆ ಇತ್ತೀಚೆ­ಗಷ್ಟೇ ‘ಹೊಸ ರಾಜಕೀಯ ಸವಾಲನ್ನು ಎದುರಿಸಲು ಹಳೆಯ ಜನತಾ ಪರಿವಾರದಿಂದ ದೂರವಾದ­ವರ­ನ್ನೆಲ್ಲ ಒಗ್ಗೂಡಿಸಬೇಕು’ ಎಂದು ಅವರು ಹೇಳಿದ್ದನ್ನು ಸ್ಮರಿಸ­ಬಹುದು.

ಒಂದು ಕಾಲದಲ್ಲಿ ಜನತಾ ಪರಿವಾರದಲ್ಲಿದ್ದ ಸಂಯುಕ್ತ ಜನತಾ ದಳ ಮತ್ತು ರಾಷ್ಟ್ರೀಯ ಜನತಾ ದಳ ಬಿಹಾರದಲ್ಲಿ ಈಗಾಗಲೇ ಕೈಜೋಡಿಸಿವೆ. ಕೇರಳದಲ್ಲಿ ಮಾಜಿ ಕೇಂದ್ರ ಸಚಿವ ಎಂ.ಪಿ.ವೀರೇಂದ್ರ ಕುಮಾರ್‌ ನೇತೃತ್ವದ ಸಮಾಜವಾದಿ ಜನತಾ (ಪ್ರಜಾಸತ್ತಾ­ತ್ಮಕ) ಪಾರ್ಟಿ ಸಂಯುಕ್ತ ಜನತಾ ದಳ­ದೊಂದಿಗೆ ಸೇರ್ಪಡೆಗೊಳ್ಳುವ ತೀರ್ಮಾನ­ವನ್ನು  ಕಳೆದ ತಿಂಗಳು ಪ್ರಕಟಿಸಿತ್ತು.

‘ಸರ್ಕಾರದಲ್ಲಿರುವವರು ಕಡಿಮೆ ಮಾತನಾಡಿ ಕೆಲಸ ಮಾಡಬೇಕು. ಆದರೆ ಕೇಂದ್ರ ಸರ್ಕಾರ ಕನಸುಗಳನ್ನು ಬಿಕರಿ ಮಾಡುತ್ತಿದೆ’ ಎಂದು, ಪ್ರಧಾನಿ ನರೇಂದ್ರ ಮೋದಿ ಹೆಸರು ಪ್ರಸ್ತಾಪಿಸದೆಯೇ ಶರದ್‌ ಯಾದವ್‌ ಟೀಕಿಸಿದರು.

ಮೋದಿ ಅವರ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಪ್ರಸ್ತಾಪಿಸಿ, ‘ಒಂದು ದಿನ ಪೊರಕೆ ಹಿಡಿದು ಗುಡಿಸಿದರೆ ರಸ್ತೆ ಸ್ವಚ್ಛವಾಗುತ್ತದೆಯೇ’ ಎಂದು ವ್ಯಂಗ್ಯವಾಡಿದರು.

ಅಧ್ಯಕ್ಷರಾಗಿ ಮುಲಾಯಂ ಆಯ್ಕೆ
ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಸತತ ಒಂಬತ್ತನೇ ಅವಧಿಗೆ ಮುಲಾಯಂ ಸಿಂಗ್‌ ಯಾದವ್‌ ಆಯ್ಕೆಯಾಗಿದ್ದಾರೆ. ಪಕ್ಷದ ಮೂರು ದಿನಗಳ ರಾಷ್ಟ್ರೀಯ ಸಮಾವೇಶದಲ್ಲಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಮಾಡಲಾಗಿದೆ. ‘ಮುಲಾಯಂ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅವರು ಮುಂದಿನ ಮೂರು ವರ್ಷಗಳ ಅವಧಿಗೆ ಪಕ್ಷದ ಅಧ್ಯಕ್ಷರಾಗಿರಲಿದ್ದಾರೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್‌ ಗೋಪಾಲ್‌ ಯಾದವ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT