ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಶ್ಯೆಯಾಗಿ ನಿಮ್ಮ ಮಕ್ಕಳನ್ನು ಕಲ್ಪಿಸಿಕೊಳ್ಳಿ

ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಕಿಡಿ
Last Updated 22 ಸೆಪ್ಟೆಂಬರ್ 2014, 20:07 IST
ಅಕ್ಷರ ಗಾತ್ರ

ಬೆಂಗಳೂರು: ‘ವೇಶ್ಯಾವಾಟಿಕೆಯನ್ನು  ಕಾನೂನು ಬದ್ಧಗೊಳಿಸುವಂತೆ ಹೇಳಿಕೆ ನೀಡುವವರು  ವೇಶ್ಯಾವೃತ್ತಿಯಲ್ಲಿ ತಮ್ಮ ಕುಟುಂಬದ ಹೆಣ್ಣುಮಕ್ಕಳನ್ನು ಕಲ್ಪಿಸಿಕೊಂಡು ಮಾತನಾಡಲಿ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಮಾರ್ಮಿಕವಾಗಿ ನುಡಿದರು.

ನಗರದಲ್ಲಿ ಸೋಮವಾರ ಸ್ವಾಭಿಮಾನಿ ಕರ್ನಾಟಕ ವೇದಿಕೆ ಮತ್ತು ಕರ್ನಾಟಕ ಸಹೃದಯ ಲೇಖಕಿಯರ ಪರಿಷತ್ತು ಜಂಟಿ­ಯಾಗಿ ಆಯೋಜಿಸಿದ್ದ ‘ಮಹಿಳೆಯರ ಮೇಲೆ ದೌರ್ಜನ್ಯ’ ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ‘ಮೊದಲೇ ಮೌಲ್ಯಗಳು ಅಧಃಪತನಗೊಳ್ಳುತ್ತ, ಸಾಂಸ್ಕೃತಿಕವಾಗಿ ದಿವಾಳಿಯಾಗುತ್ತಿರುವ ಸಮಾಜದಲ್ಲಿ ವೇಶ್ಯಾವಾಟಿಕೆಯಂತಹ ಪಿಡುಗನ್ನು ಕಾನೂನುಬದ್ಧಗೊಳಿಸುವ ಚಿಂತನೆಗಳು ನಡೆಯುತ್ತಿರುವುದು ವಿಪರ್ಯಾಸದ ಸಂಗತಿ.

ಬರೀ ಭಾಷಣದ ಶೂರರಿಂದ ಇಂದಿನ ಯುವಜನತೆ ಬೇಸತ್ತಿದ್ದಾರೆ. ಅತ್ಯಾಚಾರದ ಘಟನೆಗಳು ಹೆಚ್ಚುತ್ತಿದ್ದರೂ ಯಾವೊಬ್ಬ ಸಾಹಿತಿ, ಮಠಾಧೀಶರು ಈ ಕುರಿತಂತೆ ಚಕಾರ ಎತ್ತುತ್ತಿಲ್ಲ. ಇದು ನಮ್ಮ ಮಾನಸಿಕ ದಿವಾಳಿತನ ತೋರಿಸುತ್ತದೆ’ ಎಂದು ಹೇಳಿದರು.
‘ಜಾಗತೀಕರಣದ ನಂತರದ ದಿನಗಳಲ್ಲಿ ಹೆಣ್ಣನ್ನು ಭೋಗದ ವಸ್ತುವನ್ನಾಗಿ ನೋಡುವ ಮನೋಭಾವ ಮನೆಯಿಂದ ಮೊದಲು ಮಾಡಿ ಇಂದು ಎಲ್ಲೆಡೆ ಸಾಂಕ್ರಾಮಿಕ ಕಾಯಿಲೆ­ಯಂತೆ ಹಬ್ಬುತ್ತಿದೆ.

ಶೇ 90 ಹೆಣ್ಣುಮಕ್ಕಳು ತಮ್ಮ ಮೇಲಿನ ದೌರ್ಜನ್ಯದ ಬಗ್ಗೆ ಬಾಯಿಬಿಡದೇ ನಲುಗಿ ಹೋಗುತ್ತಿದ್ದಾರೆ. ಈ ಸನ್ನಿವೇಶದಲ್ಲಿ ವೇಶ್ಯಾವೃತ್ತಿ ಪರ ವಾದಿಸುವವರು ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದು ತಿಳಿಸಿದರು. ಹಿರಿಯ ವಿಮರ್ಶಕ ಡಾ.ಕೆ.ಮರುಳಸಿದ್ದಪ್ಪ ಮಾತನಾಡಿ, ‘ಪೊಲೀಸ್‌ ಇಲಾಖೆಯಲ್ಲಿ ಮೂರನೇ ಒಂದು ಭಾಗ ಮಹಿಳೆಯರಿಗೆ ಮೀಸಲಾತಿ ನೀಡುವಂತೆ ಮಹಿಳಾ ಆಯೋಗ ಸರ್ಕಾರದ ಮೇಲೆ ಒತ್ತಡ ಹಾಕಬೇಕು.

ಮಹಿಳೆಯರ ಮೇಲಾಗುವ ದೌರ್ಜನ್ಯಗಳ ಕುರಿತಂತೆ ಅಧ್ಯಯನ ನಡೆಸಲು ಸಮಿತಿ ರಚಿಸಬೇಕು. ಮಹಿಳಾ ಸಮುದಾಯ ಒಟ್ಟಾಗಿ ಶೋಷಣೆ ವಿರುದ್ಧ ಧ್ವನಿ ಎತ್ತಬೇಕು. ಸಮಾಜದಲ್ಲಿ ಮಹಿಳೆಯರಿಗೆ ಧೈರ್ಯ, ಭರವಸೆ ಮತ್ತು ಶಕ್ತಿ ತುಂಬುವ ಕೆಲಸಗಳು ನಡೆಯಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT