ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕ ತಳಹದಿಯಿಲ್ಲದ ಶಾಸ್ತ್ರ ಒಪ್ಪಬಾರದು

ರಾಜ್ಯ ಮಾನಸಿಕ ಆರೋಗ್ಯ ಕಾರ್ಯಪಡೆ ಅಧ್ಯಕ್ಷ ಡಾ.ಅಶೋಕ್‌ ಪೈ ಸಲಹೆ
Last Updated 1 ಮೇ 2016, 19:54 IST
ಅಕ್ಷರ ಗಾತ್ರ

ಮೈಸೂರು: ‘ಯಾವುದೇ ಶಾಸ್ತ್ರವು ವೈಜ್ಞಾನಿಕ ತಳಹದಿಯ ಮೇಲೆ ರೂಪುಗೊಂಡಿದ್ದರೆ ಮಾತ್ರ ಅದು, ಮಾನವಪರವಾಗಿರುತ್ತದೆ. ವೈಜ್ಞಾನಿಕವಲ್ಲದ ಯಾವ ಶಾಸ್ತ್ರವನ್ನೂ ಒಪ್ಪಿಕೊಳ್ಳಬಾರದು’ ಎಂದು ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಕಾರ್ಯಪಡೆ ಅಧ್ಯಕ್ಷ ಡಾ.ಅಶೋಕ್‌ ಪೈ ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ಸಂಸ್ಥೆ, ಪ್ರೊ.ಕೆ. ವೆಂಕಟಗಿರಿಗೌಡ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕವು ರಾಣಿ ಬಹದ್ದೂರ್‌ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ.ಎಸ್‌.ಪಿ. ಯೋಗಣ್ಣ ಅವರ ‘ಸಮಗ್ರ ಆರೋಗ್ಯದರ್ಶನ’ ಕೃತಿ ಕುರಿತ ವಿಚಾರಸಂಕಿರಣದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.

ಮೂಢನಂಬಿಕೆ ವೈದ್ಯಕೀಯ ಲೋಕಕ್ಕೆ ದೊಡ್ಡ ಅಡಚಣೆಯಾಗಿದೆ. ಕಾಯಿಲೆಯ ಬಗ್ಗೆ ತಿಳಿದುಕೊಳ್ಳುವ, ವೈದ್ಯರು ನೀಡುವ ಸಲಹೆಗಳನ್ನು ಸಂಪೂರ್ಣವಾಗಿ ಪರಿಪಾಲಿಸುವ ಮನಸ್ಥಿತಿ ರೋಗಿಗಳಲ್ಲಿ ಬೆಳೆಯಬೇಕು ಎಂದರು.

ಕೆಲವು ಉದಾಹರಣೆಗಳ ಸಮೇತ ವಿವರಣೆ ನೀಡಿದ ಪೈ, ‘ಶಿವಮೊಗ್ಗದಲ್ಲಿದ್ದ ‘ಬೆತ್ತಲೆ ಸೇವೆ’ ಪ್ರಕರಣವನ್ನು ವರದಿ ಮಾಡಲು ಹೋಗಿದ್ದ ತಂಡಕ್ಕೆ ಅಲ್ಲಿನ ಸ್ಥಳೀಯರು ಥಳಿಸಿದ್ದರು. ಅಲ್ಲಿ, ಬುದ್ಧಿಮಾತು ಹೇಳುವುದು ಕೆಲವೊಮ್ಮೆ ಮೂರ್ಖತನವಾಗಿ ಬಿಡುತ್ತದೆ. ಹಾಗೆಂದು, ನಾಗರಿಕರನ್ನು ವೈಚಾರಿಕತೆಯ ಕಡೆಗೆ ಹೊರಳುವಂತೆ ಮಾಡುವ ಪ್ರಯತ್ನಗಳನ್ನು ಬಿಟ್ಟುಬಿಡಬಾರದು. ವಿರೋಧದ ನಡುವೆಯೂ ಹೋರಾಟದ ಪ್ರಯತ್ನ ನಡೆಯುತ್ತಲೇ ಇರಬೇಕು’ ಎಂದು ಹೇಳಿದರು.

ಚಿತ್ರನಟಿಯೊಬ್ಬರು ವಿಜ್ಞಾನವನ್ನು ತಿರಸ್ಕರಿಸಿ, ಮೂಢನಂಬಿಕೆಯನ್ನು ಬಲವಾಗಿ ಪ್ರತಿಪಾದಿಸುತ್ತ, ಚಾರ್ಲ್ಸ್‌ ಡಾರ್ವಿನ್‌ನ ‘ಜೀವವಿಕಾಸ ಸಿದ್ಧಾಂತ’ವನ್ನು ಅಲ್ಲಗಳೆದಿದ್ದರು. ‘ಮಂಗನಿಂದ ಮಾನವ’ ಎಂಬ ಪರಿಕಲ್ಪನೆ ಸುಳ್ಳು ಎಂದಿದ್ದ ಆ ನಟಿ, ‘ನಮ್ಮ ಮನೆಯ ಆವರಣದಲ್ಲಿರುವ ಮರದಲ್ಲಿ ಅನೇಕ ವರ್ಷಗಳಿಂದ ಮಂಗಗಳಿವೆ. ಒಂದು ಮಂಗವೂ ಮನುಷ್ಯನಾಗಿ ರೂಪಾಂತರವಾಗಿದ್ದನ್ನು ನಾನು ನೋಡಿಯೇ ಇಲ್ಲ. ಈ ಸಿದ್ಧಾಂತಗಳೆಲ್ಲಾ ಶುದ್ಧ ಸುಳ್ಳು’ ಎಂದಿದ್ದರು. ಈ ರೀತಿಯ ವಾದಗಳನ್ನು ಮಂಡಿಸುವವರಿಗೆ ಏನು ಹೇಳಬೇಕು ಎಂದು ಅವರು ಪ್ರಶ್ನಿಸಿದರು.

ವೈದ್ಯಕೀಯ ಲೋಕದ ಹೊಸ ಆವಿಷ್ಕಾರಗಳನ್ನು ನಾಗರಿಕರಿಗೆ ಪರಿಣಾಮಕಾರಿಯಾಗಿ ತಿಳಿಸಬಲ್ಲ ಶಕ್ತಿ ಇರುವುದು ವೈದ್ಯರಿಗೆ ಮಾತ್ರ. ಹಾಗಾಗಿ, ವೈದ್ಯರು ಬರವಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಮಾತನಾಡಿ, ‘ನಮಗಿಂದು ಸರಳತೆ ಮಂತ್ರವಾಗಬೇಕಿದೆ. ಭೂತಾನ್‌ ಮಾದರಿಯಾಗಬೇಕಿದೆ. ಭೂತಾನ್‌ ಈಗ ವಿಶ್ವದ ಏಕೈಕ ಪರಿಪೂರ್ಣ ಕಾರ್ಬನ್‌ ಮುಕ್ತ ರಾಷ್ಟ್ರ ಎಂದು ಖ್ಯಾತಿ ಗಳಿಸಿದೆ. ಇದಕ್ಕೆ ಮುಖ್ಯ ಕಾರಣ, ಅಲ್ಲಿನ ಸರಳ ಜೀವನ. ಭಾರತದಲ್ಲೂ ಸರಳತೆಯತ್ತ ಹೆಜ್ಜೆ ಹಾಕುವ ಮನಸ್ಥಿತಿ ಬೆಳೆಯಬೇಕಿದೆ’ ಎಂದರು.

ವಿಚಾರ ಸಂಕಿರಣ ಉದ್ಘಾಟಿಸಿದ ಲೇಖಕ ಎಸ್‌.ಆರ್‌. ವಿಜಯಶಂಕರ್‌ ಮಾತನಾಡಿ, ‘ವೈದ್ಯರಿಗೆ ಮುಖ್ಯವಾಗಿ ಸಂವಹನ ಕಲೆ ಹಾಗೂ ಬರವಣಿಗೆಯ ಶೈಲಿಯ ಕೊರತೆ ಇದೆ. ಇದನ್ನು ರೂಢಿಸಿಕೊಂಡರೆ ಸಾಹಿತ್ಯಲೋಕಕ್ಕೆ ಒಳ್ಳೆಯ ಕಾಣಿಕೆ ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಡಾ.ಮಳಲಿ ವಸಂತಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ.ಸಿಪಿಕೆ, ಪ್ರೊ.ಕೆ. ವೆಂಕಟಗಿರಿಗೌಡ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪರಿಷತ್ ಅಧ್ಯಕ್ಷೆ ಸಾವಿತ್ರಿ ವೆಂಕಟಗಿರಿಗೌಡ, ಕಾರ್ಯದರ್ಶಿ ಎನ್.ಸಿ. ತಮ್ಮಣ್ಣಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ  ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT