ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕ ಮನೋಭಾವ ಬೆಳೆಯಬೇಕಿದೆ: ಪ್ರೊ.ಯು.ಆರ್‌.ರಾವ್‌

Last Updated 22 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು:‘ಮೊರಾರ್ಜಿ ದೇಸಾಯಿ ಅವರು ಉಪಗ್ರಹ ಉಡಾವಣೆಗೆ ಸಂಬಂಧಿಸಿದ ಕಾರ್ಯಕ್ರಮಯೊಂದಕ್ಕೆ ಬಂದಿದ್ದರು. ಭಾಷಣ ಕೂಡ ಬರೆದುಕೊಟ್ಟಿದ್ದೆವು. ಅದನ್ನು ಬದಿಗಿರಿಸಿದ ಅವರು ಮೊದಲು ಅಂತರಿಕ್ಷಯಾನ ಮಾಡಿದ್ದು ಹನುಮ ಎಂದುಬಿಟ್ಟರು. ವಿಜ್ಞಾನಿಗಳೆಲ್ಲಾ ಒಮ್ಮೆ ಕಕ್ಕಾಬಿಕ್ಕಿಯಾದರು. ಈ ಹನುಮ ಯಾರು ಎಂದು ಕೆಲವರು ಕುತೂಹಲದಿಂದ ಕೇಳಿದರು’
–ಈ ಘಟನೆಯನ್ನು ಮತ್ತೆ ನೆನಪಿಸಿಕೊಂಡಿದ್ದು ಖ್ಯಾತ ವಿಜ್ಞಾನಿ ಹಾಗೂ ಇಸ್ರೊ ಮಾಜಿ ಮುಖ್ಯಸ್ಥ ಪ್ರೊ.ಯು.ಆರ್‌.ರಾವ್‌.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ‘ಕರ್ನಾಟಕ ವೈಜ್ಞಾನಿಕ ಮನೋವೃತ್ತಿ ಆಂದೋಲನ’ ವೇದಿಕೆಗೆ ಚಾಲನೆ ನೀಡಿ ಮಾತನಾಡಿದರು. ‘ಒಮ್ಮೆ ಉಪಗ್ರಹ ಉಡಾವಣೆ ಮಾಡಿದ ಖುಷಿಯಲ್ಲಿದ್ದೆವು. ಈ ಕೆಲಸಕ್ಕೆ ಸಂಬಂಧಿಸಿದ ಒಂದು ರಶೀದಿ ಬೇಕಿತ್ತು. ಆದರೆ, ಮುಹೂರ್ತ ಸರಿಯಿಲ್ಲ ಎಂದು ರಿಶೀದಿ ಕೊಡಲು ಸಿಬ್ಬಂದಿ­ಯೊಬ್ಬರು ಸತಾಯಿಸಿದರು’ ಎಂದಾಗ ಸಭಾಂಗಣ­ದಲ್ಲಿ ನಗುವಿನ ಅಲೆ.

‘ವಿಜ್ಞಾನದಲ್ಲಿ ನಾವು ಎಷ್ಟೇ ಮುಂದುವರಿದಿ­ದ್ದರೂ ಜನರ ಮನೋಭಾವ ಮಾತ್ರ ಬದಲಾಗಿಲ್ಲ ಎಂಬುದನ್ನು ತಿಳಿಸಲು ಈ ಘಟನೆ ಹೇಳಿದೆ ಅಷ್ಟೆ. ನಾವು ಏನು ಮಾಡುತ್ತಿದ್ದೇವೆ ಎಂಬುದೇ ಕೆಲವ­ರಿಗೆ ಅರ್ಥ ಆಗುತ್ತಿಲ್ಲ. ‘ಮೇಲೆ ಹೋಗಿ ಕೆಳಗೆ ಬರು­ತ್ತಾರೆ. ಅಷ್ಟಕ್ಕೆ ಇಷ್ಟೊಂದು ಹಣ ಖರ್ಚು ಮಾಡಬೇಕಾ?’ ಎಂದು ಕೆಲವರು ಟೀಕಿಸುತ್ತಾರೆ. ಇವರಿಗೆಲ್ಲಾ ಏನು ಹೇಳುವುದು? ಇವರ ಮನೋಭಾವ ಬದಲಾಗುವುದು ಯಾವಾಗ?’ ಎಂದು ಕಳವಳ ವ್ಯಕ್ತಪಡಿಸಿದರು.

‘ಮಂಗಳಯಾನದಂಥ ಅದ್ಭುತ ಯೋಜನೆ ಯಶಸ್ಸು ಕಂಡಿದ್ದರೂ ಬಾಯಿಗೆ ಬಂದಿದ್ದನ್ನು ಹೇಳುವ ಜ್ಯೋತಿಷಿ ಮಾತನ್ನು ಸುಲಭವಾಗಿ ನಂಬುತ್ತಾರೆ. ಆದರೆ, ವಿಜ್ಞಾನದ ಪ್ರಗತಿಯನ್ನು ಒಪ್ಪುವುದಿಲ್ಲ. ಪ್ರಮುಖವಾಗಿ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಬೇಕಿದೆ. ಅದಕ್ಕಾಗಿ ವಿಜ್ಞಾನಿಯೇ ಆಗಬೇಕಾಗಿಲ್ಲ’ ಎಂದರು.

300 ವರ್ಷಗಳಲ್ಲಿ ಸಂಪನ್ಮೂಲ ಖಾಲಿ: ‘ದೇಶದ ಜನಸಂಖ್ಯೆ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ಅದಕ್ಕೆ ಪೂರಕವಾಗಿ ಆಹಾರದ ಉತ್ಪಾದನೆ ಆಗುತ್ತಿಲ್ಲ. ಮುಂದಿನ 300 ವರ್ಷಗಳಲ್ಲಿ ಎಲ್ಲಾ ಸಂಪ­ನ್ಮೂಲಗಳು ಖಾಲಿಯಾಗಲಿವೆ. ಆಗ ಅಂತರಿಕ್ಷ ವಿಜ್ಞಾನ ನೆರವಿಗೆ ಬರಬಹುದು. ವಿವಿಧ ಗ್ರಹಗಳಲ್ಲಿ ಸಂಪನ್ಮೂಲಗಳನ್ನು ಹುಡುಕ­ಬಹುದು. ವಿಜ್ಞಾನ ಹಾಗೂ ತಂತ್ರಜ್ಞಾನದಿಂದ ಮಾತ್ರ ಸಂಪನ್ಮೂಲ ಕಂಡುಕೊಳ್ಳಲು ಸಾಧ್ಯ. ಕೇವಲ 5ರಷ್ಟು ಬ್ರಹ್ಮಾಂಡವನ್ನು ಮಾತ್ರ ನಾವು ಪತ್ತೆ ಹಚ್ಚಿದ್ದೇವೆ. ಇನ್ನೂ 95ರಷ್ಟು ಬ್ರಹ್ಮಾಂಡ ರಹಸ್ಯವಾಗಿದೆ’ ಎಂದು ತಿಳಿಸಿದರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್‌ ಅಮೀನ್‌ಮಟ್ಟು ಅವರು ಮಾತನಾಡಿದರು.

ಎಸ್ಸೆಸ್ಸೆಲ್ಸಿ ಪಾಸ್‌ ಆಗಬಹುದು...!
‘ನಾನು ಜನಿಸಿದಾಗ ತಂದೆಯವರು ಜ್ಯೋತಿಷಿ ಬಳಿ ಹೋಗಿ ಜಾತಕ ಕೇಳಿದ್ದರಂತೆ. ಆಗ ಆ ಜ್ಯೋತಿಷಿ ಮಹಾಶಯರು ‘ಈ ಹುಡುಗ ಎಸ್ಸೆಸ್ಸೆಲ್ಸಿ ಉತ್ತೀರ್ಣನಾಗಬಹುದು ಅಷ್ಟೆ’ ಎಂದಿದ್ದರಂತೆ. ಆ ಜ್ಯೋತಿಷಿಯ ಜಾತಕವನ್ನು ಮೀರಿ ಬೆಳೆದಿದ್ದು ಬೇರೆ ವಿಚಾರ’ ಎಂದು ಕರ್ನಾಟಕ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷರೂ ಆಗಿರುವ ಪ್ರೊ.ಯು.ಆರ್‌.ರಾವ್‌ ಹೇಳಿದಾಗ ಸಭಾಂಗಣದಲ್ಲಿ  ನಗೆಯ ಹೊನಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT