ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಟಿಪಿಎಸ್‌ನಲ್ಲಿ ಕಾರ್ಮಿಕ ಸಾವು: ಕಚೇರಿ ಧ್ವಂಸ

Last Updated 28 ಜನವರಿ 2015, 9:55 IST
ಅಕ್ಷರ ಗಾತ್ರ

ರಾಯಚೂರು: ನಿರ್ಮಾಣ ಹಂತ­ದಲ್ಲಿ­ರುವ ಯರ­ಮರಸ್ ಶಾಖೋ­ತ್ಪನ್ನ ವಿದ್ಯುತ್‌ ಸ್ಥಾವರದಲ್ಲಿ(ವೈಟಿಪಿಎಸ್) ಮಂಗಳ­­ವಾರ ಬೃಹತ್ ಗಾತ್ರದ ಪೈಪ್‌ ಬಿದ್ದು ಕಾರ್ಮಿಕನೊಬ್ಬ ಮೃತಪಟ್ಟಿ­ದ್ದಾನೆ.

ಇದರಿಂದ ಆಕ್ರೋಶಗೊಂಡ ಸಾವಿ­ರಾರು ಕಾರ್ಮಿಕರು ಕಾಮಗಾರಿ ಸ್ಥಳದಲ್ಲಿದ್ದ ಕಚೇರಿ, ಪೀಠೋಪಕರಣ, ಕಂಪ್ಯೂಟರ್‌ ಸೇರಿದಂತೆ ಅಂದಾಜು ₨ 1 ಕೋಟಿ ಮೊತ್ತದ  ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ.

ಉತ್ತರ ಪ್ರದೇಶ ಮೂಲದ ಮಹೇಶ (27) ಮೃತಪಟ್ಟ ಕಾರ್ಮಿಕ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಕ್ರೇನ್‌ನಿಂದ ಪೈಪ್‌ ಇಳಿಸುತ್ತಿದ್ದಾಗ ತಂತಿ ಜಾರಿ ಅದು ಈತನ ಮೇಲೆ ಬಿದ್ದು ತೀವ್ರ­ವಾಗಿ ಗಾಯಗೊಂಡಿದ್ದ. ಕೂಡಲೇ ಸ್ಥಳೀಯ ಗುತ್ತಿಗೆದಾರ ದುರು­ಗಪ್ಪ ಎಂಬುವವರು ಆಂಬು­ಲೆನ್ಸ್ ತರಿಸಿ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸಿದರು.

‘ಸುರಕ್ಷತಾ ಕ್ರಮ ಕೈಗೊಳ್ಳದೆ ಇರು­ವುದೇ ಘಟನೆಗೆ ಕಾರಣ. ಆಸ್ಪತ್ರೆಗೆ ತರಾತುರಿಯಲ್ಲಿ ಕಳುಹಿಸಿದ್ದು ಏಕೆ?’ ಎಂದು ಕಿಡಿಕಾರಿದ ಕಾರ್ಮಿಕರು ದುರುಗಪ್ಪನ ಮೇಲೆ ಹಲ್ಲೆ ನಡೆಸಿದ್ದರು.

ಸ್ಥಳೀಯ ಗುತ್ತಿಗೆದಾರನ ಮೇಲೆ ಹಲ್ಲೆ ನಡೆಸಿದ ಸುದ್ದಿ ತಿಳಿದ ಕಾಮಗಾರಿ ಪ್ರದೇಶದ ಸಮೀಪವಿರುವ ವಡ್ಲೂರು, ಚಿಕ್ಕಸುಗೂರು ಗ್ರಾಮದ ನೂರಾರು ಜನರು ಸರಳು, ಬಡಿಗೆ ಹಿಡಿದು ವೈಟಿಪಿ­ಎಸ್ ಹಿಂಭಾಗದಿಂದ ನುಗ್ಗಲು ಯತ್ನಿಸಿ­ದರು. ಪೊಲೀಸರು ತಡೆದಾಗ ಅಲ್ಲಿದ್ದ ಕಾರ್ಮಿಕರ ಮನೆಗಳಿಗೆ ಕಲ್ಲು ತೂರಿದರು.

ಕಾಮಗಾರಿ ಸ್ಥಳದಲ್ಲಿದ್ದ ಕಾರ್ಮಿ­ಕರೂ ಸಹ ಆಕ್ರೋಶಗೊಂಡು ಪ್ರತಿಭಟನೆ ನಡೆಸುತ್ತಿದ್ದರೆ, ಅತ್ತ ಕಡೆ ಸ್ಥಳೀಯರೂ ಪ್ರತಿಭನೆ ನಡೆಸಿದರು. ಇದರಿಂದ ಕೆಲ ಹೊತ್ತು ಸ್ಥಳದಲ್ಲಿ ಉದ್ವಿಗ್ನ  ಸ್ಥಿತಿ ನಿರ್ಮಾಣಗೊಂಡಿತ್ತು.

ಕಾರ್ಮಿಕರ ಮನವಿ: ‘ಕಾಮಗಾರಿ ಸ್ಥಳದಿಂದ ಹೊರ ಹೋಗಲು ನಮಗೆ ವ್ಯವಸ್ಥೆ ಮಾಡಿ ಕೊಟ್ಟರೆ ಸಾಕು’ ಎಂದು ಕಾರ್ಮಿಕರು ಮನವಿ ಮಾಡಿದರು. ಹಿಂಭಾಗದಿಂದ ಕೆಲ ವ್ಯಾನ್‌ನಲ್ಲಿ ನೂರಾರು ಕಾರ್ಮಿಕ­ರನ್ನು ಪೊಲೀಸರು ಕಳುಹಿಸಿದರು.

ಸಾವಿರಾರು ಕಾರ್ಮಿಕರು ತಮ್ಮ ಕುಟುಂಬದೊಂದಿಗೆ ಸಾಮಾನು ಸರಂಜಾಮು ತೆಗೆದುಕೊಂಡು ಮುಖ್ಯ­ದ್ವಾ­ರದತ್ತ ಸಾಗಿದರು. ಅಂದಾಜು 2,500 ಕಾರ್ಮಿಕರು ತಮ್ಮ ಊರು ಸೇರಲು ಬಂದು ಕುಳಿತಿದ್ದರು.

ಮುಖ್ಯದ್ವಾರದ ಎದುರು ಮತ್ತೆ ಸ್ಥಳೀಯರು ಜನಪ್ರತಿಭಟನೆಗೆ ಇಳಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗರಾಜ ಅವರು, ‘5 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ’ ಎಂದು ಹೇಳಿದ ನಂತರ ಪ್ರತಿಭಟನಾಕಾರರು ಚದುರಿದರು.

ಎಎಸ್ಪಿ ಪಾಪಯ್ಯ ಅವರು ಸಾರಿಗೆ ಸಂಸ್ಥೆಯ 15 ಬಸ್‌ಗಳ ಮೂಲಕ ಕಾರ್ಮಿಕರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವ ವ್ಯವಸ್ಥೆ ಮಾಡಿದರು.

ಪೊಲೀಸ್ ಹೇಳಿಕೆ: ‘ಕಾರ್ಮಿಕರು ಸುರಕ್ಷಿತವಾಗಿ ತಮ್ಮ ಊರು ಸೇರಲು ಸೂಕ್ತ ಪ್ರದೇಶಕ್ಕೆ ಸಾಗಿಸಲಾಗುತ್ತಿದೆ. ಸಮೀಪದ ರೈಲು ನಿಲ್ದಾಣ, ಪಕ್ಕದ ರಾಜ್ಯಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಎಎಸ್ಪಿ ಪಾಪಯ್ಯ ಹೇಳಿದರು.

‘ಊರಿಗೆ ಕಳುಹಿಸುತ್ತಿದ್ದೇವೆ’
‘ಸದ್ಯ ಪರಿಸ್ಥಿತಿ ನಿಯಂತ್ರಣ ಮುಖ್ಯವಾಗಿದೆ. ಬಿಹಾರ, ಉತ್ತರ­ಪ್ರದೇಶ, ಛತ್ತೀಸಗಡ, ಪಶ್ಚಿಮ ಬಂಗಾಳದ ಕಾರ್ಮಿಕರಿದ್ದಾರೆ. ಹೀಗಾಗಿ ಈಗ ಪೊಲೀಸ್ ಭದ್ರತೆಯಲ್ಲಿ ಇಲ್ಲಿಂದ ಕಳುಹಿಸಲಾಗುತ್ತಿದೆ. ಕೆಲ ದಿನಗಳಾದ ಬಳಿಕ ಕರೆಸಿಕೊಳ್ಳುವ ಬಗ್ಗೆ ಚಿಂತನೆ ಮಾಡಲಾ­ಗುವುದು. ಕಾರ್ಮಿಕರ ಆಕ್ರೋಶಕ್ಕೆ ಕಚೇರಿ ಧ್ವಂಸಗೊಂಡಿವೆ. ಅಂದಾಜು  ₨ 1 ಕೋಟಿ ನಷ್ಟವಾಗಿದೆ’.
–ಜಿ.ನಾರಾಯಣ ಸ್ವಾಮಿ, ಮುಖ್ಯ ಎಂಜಿನಿಯರ್ (ಮೆಕಾನಿಕಲ್‌ ವಿಭಾಗ), ಕರ್ನಾಟಕ ವಿದ್ಯುತ್‌ ನಿಗಮ.

‘ಎರಡು ಪ್ರಕರಣ ದಾಖಲು’
‘ಕಾಮಗಾರಿ ಸ್ಥಳದಲ್ಲಿದ್ದ ಕಚೇರಿ ಧ್ವಂಸಕ್ಕೆ ಸಂಬಂಧಿಸಿದಂತೆ ಹಾಗೂ ಕಾರ್ಮಿಕ ಸಾವಿನ ಕುರಿತಂತೆ ಎರಡು ಪ್ರಕರಣ ದಾಖಲು ಮಾಡಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕಾರ್ಮಿಕ-ರನ್ನು ಸುರಕ್ಷತಾ ಸ್ಥಳಕ್ಕೆ ತಲುಪಿಸಲಾಗುತ್ತಿದೆ’
– ಎಂ.ಎನ್.ನಾಗರಾಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT