ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಟ್‌ಫೀಲ್ಡ್‌: ಟೆಕ್ಕಿಗಳ ಪ್ರತಿಭಟನೆಗೆ ಸಾರ್ವಜನಿಕರ ಸಾಥ್‌

ಮೂಲಸೌಕರ್ಯ ಕಲ್ಪಿಸದಿದ್ದಲ್ಲಿ ತೆರಿಗೆ ಕಟ್ಟೊಲ್ಲ: ನಾಗರಿಕರ ಸ್ಪಷ್ಟ ನುಡಿ; ಜಾಗತಿಕ ಹೂಡಿಕೆದಾರರ ಸಮಾವೇಶದಂದು ಮತ್ತೆ ರಸ್ತೆಗಿಳಿಯುವ ಎಚ್ಚರಿಕೆ
Last Updated 30 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಹದೇವಪುರ ಕ್ಷೇತ್ರದ ವೈಟ್‌ಫೀಲ್ಡ್‌ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಸೇರಿದಂತೆ ಇತರ ಮೂಲಸೌಕರ್ಯಕ್ಕೆ ಆಗ್ರಹಿಸಿ ಸಾವಿರಾರು ಐ.ಟಿ ಉದ್ಯೋಗಿಗಳು ಹಾಗೂ ನಾಗರಿಕರು ಸೋಮವಾರ ಐಟಿಪಿಎಲ್‌ ಬಳಿ ಬೃಹತ್‌ ಪ್ರತಿಭಟನೆ ನಡೆಸಿದರು.

ಹೂಡಿ ಮುಖ್ಯರಸ್ತೆ, ಕಾಡುಗೋಡಿ ಮುಖ್ಯರಸ್ತೆ, ಗ್ರಾಫೈಟ್‌ ಇಂಡಿಯಾ ಮುಖ್ಯರಸ್ತೆ, ಮಾರತ್ ಹಳ್ಳಿ ಮುಖ್ಯರಸ್ತೆ, ನಲ್ಲೂರು ಹಳ್ಳಿ ಹಾಗೂ ವೈಟ್‌ಫೀಲ್ಡ್‌ ಮುಖ್ಯರಸ್ತೆಯಲ್ಲಿ ಸಾಫ್ಟ್‌ವೇರ್‌ ಉದ್ಯೋಗಿಗಳು ಹಾಗೂ ಸ್ಥಳೀಯ  ನಿವಾಸಿಗಳು ಜತೆಗೂಡಿ ಪ್ರತಿಭಟಿಸಿದರು.

‘ಸೇವ್‌ ವೈಟ್‌ಫೀಲ್ಡ್‌’ ಎನ್ನುವ ಭಿತ್ತಿಪತ್ರಗಳನ್ನು ಹಿಡಿದು ಒಗ್ಗಟ್ಟು ಪ್ರದರ್ಶಿಸಿದರು. ಬಳಿಕ ಐಟಿಪಿಎಲ್‌ ಕಟ್ಟಡದ ಎದುರು ಜಮಾಯಿಸಿದರು. ಬಳಿಕ ಮಾನವ ಸರಪಳಿ ನಿರ್ಮಿಸಿಕೊಂಡು ಘೋಷಣೆ ಕೂಗಿದರು.

‘ಈ ಪ್ರತಿಭಟನೆ ಇವತ್ತಿಗಷ್ಟೇ ಮುಗಿಯುವುದಿಲ್ಲ, ದಿನವೂ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಪರಸ್ಪರ ವೈಟ್‌ಫಿಲ್ಡ್‌ ವ್ಯಾಪ್ತಿಯಲ್ಲಿನ ಸಮಸ್ಯೆಗಳ ಬಗ್ಗೆ ಚಿತ್ರಗಳ ಸಮೇತ ಸಂದೇಶ ರವಾನಿಸುವ ಮೂಲಕ ವಿಭಿನ್ನ ಪ್ರತಿಭಟನೆ ಆರಂಭಿಸಲಾಗುವುದು’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

‘ಬಿಬಿಎಂಪಿ ಇಡೀ ನಗರದಲ್ಲೇ ಹೆಚ್ಚು ತೆರಿಗೆ ಹಣ ವೈಟ್‌ಫೀಲ್ಡ್‌ ಪ್ರದೇಶದಿಂದ ಸಂದಾಯವಾಗುತ್ತಿದೆ. ಆದರೆ ಈ ಪ್ರದೇಶದಲ್ಲಿ ಯಾವುದೇ ಮೂಲಭೂತ ಸೌಕರ್ಯವಿಲ್ಲ. ಎಲ್ಲ ರಸ್ತೆಗಳಲ್ಲಿ ಹೊಂಡಗಳು ಬಿದ್ದಿವೆ. ಅನೇಕ ಅಪಘಾತಗಳು ಸಂಭವಿಸಿದರೂ ತಲೆಕೆಡಿಸಿಕೊಂಡಿಲ್ಲ’ ಎಂದು ದೂರಿದರು.

‘ಆದಷ್ಟು ಬೇಗ ಗುಂಡಿ ಮುಚ್ಚಿ, ರಸ್ತೆ ಡಾಂಬರೀಕರಣ ಮಾಡಬೇಕು. ಸುಸಜ್ಜಿತ ಪಾದಚಾರಿ ಮಾರ್ಗ ನಿರ್ಮಿಸಬೇಕು’ ಎಂದೂ ಒತ್ತಾಯಿಸಿದರು.

‘ನಿತ್ಯ ಕೆಲಸಕ್ಕೆ ಐಟಿಪಿಎಲ್‌ ಮುಖ್ಯರಸ್ತೆ ಮೂಲಕ ಪ್ರಯಾಣಿಸುತ್ತೇನೆ. ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ರಸ್ತೆ ತುಂಬಾ ಹೊಂಡಗಳು ಬಿದ್ದಿರುವುದರಿಂದ ಸಂಚರಿಸಲು ತೊಂದರೆಯಾಗುತ್ತಿದೆ. ವಾಹನಗಳು ಮಂದಗತಿಯಿಂದ ಚಲಿಸುವುದರಿಂದ ಕಚೇರಿಗೆ ಹೋಗಲು ಸಮಸ್ಯೆಯಾಗುತ್ತಿದೆ’ ಎಂದು ಖಾಸಗಿ ಕಂಪೆನಿಯ ಉದ್ಯೋಗಿ ಪ್ರಕಾಶ ಬಾಬು ತಿಳಿಸಿದರು.

‘ವೈಟ್‌ಫೀಲ್ಡ್‌ ಪ್ರದೇಶದಲ್ಲಿ ನಾಲ್ಕು ಹೃದಯ ಸಂಬಂಧಿ ಆಸ್ಪತ್ರೆಗಳಿವೆ. ಆದರೆ ರಸ್ತೆಗಳು ಹಾಳಾಗಿರುವುದರಿಂದ ರೋಗಿಗಳನ್ನು ತುರ್ತಾಗಿ ಆಸ್ಪತ್ರೆಗಳಿಗೆ ಸಾಗಿಸಲು ಆಗುತ್ತಿಲ್ಲ’ ಎಂದು ಶಿವಾನಿ ಎನ್ನುವವರು ತಿಳಿಸಿದರು. ‘ತುರ್ತು ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಬೇಕಾದ ಅನೇಕ ರೋಗಿಗಳು ನಡುರಸ್ತೆ ಯಲ್ಲೆ ಪ್ರಾಣ ಕಳೆದುಕೊಂಡಿರುವ ಅನೇಕ ನಿದರ್ಶನಗಳಿವೆ’ ಎಂದೂ ಹೇಳಿದರು.

31ರಂದು ಮತ್ತೆ ಪ್ರತಿಭಟನೆ?
‘ಶೀಘ್ರದಲ್ಲೆ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಕ್ರಮ ಕೈಗೊಳ್ಳದಿದ್ದಲ್ಲಿ ಬರುವ ಡಿಸೆಂಬರ್‌ 31ರಂದು ವೈಟ್‌ಫೀಲ್ಡ್‌ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಭೆ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT