ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಪರಿಣತರಿಗಿದೆ ಬೇಡಿಕೆ

ಸುಮಾರು 29 ಸಾವಿರದಷ್ಟು ವೈದ್ಯಕೀಯ ಪದವೀಧರರು ಪ್ರತಿವರ್ಷವೂ ಭಾರತದಲ್ಲಿನ ವೈದ್ಯಕೀಯ ಸೇವೆಯ ಮಾನವ ಸಂಪನ್ಮೂಲಕ್ಕೆ ಸೇರ್ಪಡೆ ಯಾಗುತ್ತಲೇ ಇದ್ದಾರೆ. ಇದು ವೈದ್ಯಕೀಯ ಶಿಕ್ಷಣದ ಗುಣಮಟ್ಟದಲ್ಲಿ ಮಹತ್ತರ ಬದಲಾವಣೆ ತರಬೇಕಿದೆ.

ವೈದ್ಯಕೀಯ ಶಿಕ್ಷಣ ಮತ್ತು ಅಭಿವೃದ್ಧಿಯ ನಡುವಿನ ಸಂಬಂಧವೇನು?                                                                                  ಯಾವುದೇ ದೇಶ, ಸಮಾಜದ ಸಮಗ್ರವಾದ ಅಭಿವೃದ್ಧಿಯ  ಸೂಚಕಗಳೆಂದರೆ,  ಆರೋಗ್ಯ ಮತ್ತು ಶಿಕ್ಷಣವೇ ಆಗಿದೆ. ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೇವೆ ಇದ್ದರೆ ಮಾತ್ರ  ಆ ದೇಶ, ಸಮಾಜ ಸಮಗ್ರ ಅಭಿವೃದ್ಧಿ ಹೊಂದಿದೆ ಎಂದೇ ಅರ್ಥ. ಅಂದರೆ, ಅಭಿವೃದ್ಧಿಗೂ ಮತ್ತು ಈ ಎರಡೂ ವಿಷಯಗಳಿಗೂ ನೇರವಾದ ಸಂಬಂಧವಿದೆ ಎಂದೇ ಹೇಳಬಹುದು.

ವೈದ್ಯಕೀಯ ಶಿಕ್ಷಣದಲ್ಲಿ ಆರೋಗ್ಯ ಮತ್ತು ಶಿಕ್ಷಣ ಎರಡೂ ಒಳಗೊಂಡಿವೆ. ಹಾಗಾಗಿಯೇ ವೈದ್ಯಕೀಯ ಕ್ಷೇತ್ರದ ಮಾನವ ಸಂಪನ್ಮೂಲ ಉತ್ತಮ ತರಬೇತಿ ಪಡೆದಿರಬೇಕು. ರೋಗ ಬಾರದಂತೆ ಮುನ್ನೆಚ್ಚರಿಕೆ ಕ್ರಮ, ಪಿಡುಗುಗಳ ಕಾಣಿಸಿಕೊಂಡಾಗ ಉತ್ತೇಜನಕಾರಿ ನಡೆ ಹಾಗೂ ಗುಣಪಡಿಸುವ ಚಿಕಿತ್ಸೆ, ಸಂಶೋಧನೆ, ತಂತ್ರಜ್ಞಾನಗಳ ಬಳಕೆ ಇವೆಲ್ಲವೂ ಮಹತ್ತರ ಪಾತ್ರ ವಹಿಸುತ್ತವೆ.
 
ಆಧುನಿಕ ಚಿಕಿತ್ಸಾ ಪದ್ಧತಿಯ ವೈದ್ಯಕೀಯ ಕಾಲೇಜು ಆರಂಭಗೊಂಡಿದ್ದು ಯಾವಾಗ?
ಚೆನ್ನೈನಲ್ಲಿ ಆಗಿನ ಮದ್ರಾಸ್ ಮಹಾನಗರದಲ್ಲಿ 1835ರಲ್ಲಿ ದೇಶದ ಮೊದಲ ಆಧುನಿಕ ಚಿಕಿತ್ಸಾ ಪದ್ಧತಿಯ ವೈದ್ಯಕೀಯ ಕಾಲೇಜು ಆರಂಭವಾಯಿತು. 1840ರಲ್ಲಿ ಗೋವಾದಲ್ಲಿ ಒಂದು ವೈದ್ಯ ಕಾಲೇಜು, ಆನಂತರದಲ್ಲಿ ಕೋಲ್ಕತ್ತ ಮತ್ತು ಮುಂಬೈನಲ್ಲಿಯೂ ವೈದ್ಯಕೀಯ ಕಾಲೇಜುಗಳು ಆರಂಭಗೊಂಡವು. ಆಗಿನಿಂದಲೂ ಭಾರತದಲ್ಲಿನ ವೈದ್ಯಕೀಯ ಶಿಕ್ಷಣ ಸ್ಥಿರವಾದ ಬೆಳವಣಿಗೆಯನ್ನು ಕಾಣುತ್ತ ಬಂದಿದೆ.

ಜಗತ್ತಿನಾದ್ಯಂತ ಇರುವ ವೈದ್ಯಕೀಯ ಶಿಕ್ಷಣ ಕಾಲೇಜುಗಳ ಸಂಖ್ಯೆ ಎಷ್ಟು? ಭಾರತದಲ್ಲಿ ಪ್ರತಿ ವರ್ಷ ಎಂಬಿಬಿಎಸ್‌ ಕೋರ್ಸ್‌ಗೆ ಸೇರುತ್ತಿರುವವರ ಸಂಖ್ಯೆ ಎಷ್ಟಿದೆ.
ಪ್ರಸ್ತುತ ವಿಶ್ವದೆಲ್ಲೆಡೆ ಒಟ್ಟು 2,248 ವೈದ್ಯಕೀಯ ಶಿಕ್ಷಣದ ಕಾಲೇಜುಗಳಿವೆ. ಇದರಲ್ಲಿ 387 ವೈದ್ಯಕೀಯ ಶಿಕ್ಷಣ ಕಾಲೇಜುಗಳು (ವಿಶ್ವದ ಶೇ 13.5ರಷ್ಟು) ಭಾರತದಲ್ಲಿಯೇ ಇವೆ. ವಾಸ್ತವವಾಗಿ ನಮ್ಮ ದೇಶ ಭಾರಿ ಸಂಖ್ಯೆಯಲ್ಲಿ ವೈದ್ಯರನ್ನು ಸಿದ್ಧಪಡಿಸುತ್ತಿದೆ. ಅತ್ಯಧಿಕ ಸಂಖ್ಯೆಯಲ್ಲಿ ವೈದ್ಯಕೀಯ ಪದವೀಧರರನ್ನು ವಿಶ್ವದ ವೈದ್ಯಕೀಯ ಕ್ಷೇತ್ರದ ಮಾನವ ಸಂಪನ್ಮೂಲಕ್ಕೆ ಸೇರಿಸುತ್ತಲೇ ಇದೆ. ಭಾರತದಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ ‘ಎಂಬಿಬಿಎಸ್’ಗೆ ವಾರ್ಷಿಕ 48ಸಾವಿರ ಮಂದಿ ಪ್ರವೇಶ ಪಡೆಯುತ್ತಾರೆ. ಇದಲ್ಲದೆ, ಸ್ನಾತಕೋತ್ತರ ವೈದ್ಯ ಪದವಿ ಮತ್ತು ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶ ಪಡೆಯುತ್ತಿರುವವರ ಒಟ್ಟು ಸಂಖ್ಯೆ 28 ಸಾವಿರಗಳಷ್ಟಿದೆ. ಇಷ್ಟೇ ಅಲ್ಲದೆ, 917 ಸೀಟುಗಳು ಮಾತ್ರ ಅತಿ ವಿಶಿಷ್ಟ ಕೋರ್ಸ್‌ಗಳಿಗೆ ಸೇರಿದ್ದಾಗಿವೆ. ಒಟ್ಟು 29 ಸಾವಿರ ಮಂದಿ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ 

ವೈದ್ಯಕೀಯ ಕ್ಷೇತ್ರದಲ್ಲಿ ಸದ್ಯಕ್ಕಿರುವ ವೃತ್ತಿನಿರತರ ಸಂಖ್ಯೆ
ಭಾರತೀಯ ವೈದ್ಯಕೀಯ ಸಮಿತಿ ನಿರ್ವಹಿಸುತ್ತಿರುವ ಭಾರತೀಯ ವೈದ್ಯಕೀಯ ರಿಜಿಸ್ಟ್ರಾರ್ ಅರ್ಥಾತ್ ಸಮಗ್ರ ನೋಂದಣಿ ದಾಖಲೆಗಳ ಪ್ರಕಾರವೇ ದೇಶದಲ್ಲಿ ಸದ್ಯ ಆಧುನಿಕ ಔಷಧ ವಿಜ್ಞಾನ ಕ್ರಮವನ್ನು ಅನುಸರಿಸುತ್ತಿರುವ, ಮಾನ್ಯತೆ ಪಡೆದ ವೈದ್ಯಕೀಯ ವಿಜ್ಞಾನ ಪದವಿ ಪಡೆದ 8ಲಕ್ಷಕ್ಕೂ ಅಧಿಕ ವೈದ್ಯಕೀಯ ಚಿಕಿತ್ಸಾ ವೃತ್ತಿ ನಿರತರು ಇದ್ದಾರೆ. ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಭಾರತದಲ್ಲಿನ ಪ್ರಗತಿಯನ್ನು ವೃತ್ತಿನಿರತರ ವಯೋಮಿತಿಯ ಪರಿಮಿತಿಯಲ್ಲಿಟ್ಟು ಅವಲೋಕಿಸಬೇಕಿದೆ. ಅದೂ, ನಿರಂತರವಾಗಿ ಹೆಚ್ಚುತ್ತಿರುವ ಜನಸಂಖ್ಯೆಯು ದೇಶಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ದೇಶದಲ್ಲಿ ಸದ್ಯ ಶೇ.52ರಷ್ಟು ಮಂದಿ 25 ವರ್ಷಕ್ಕಿಂತಲೂ ಕೆಳಗಿನವರೇ ಆಗಿದ್ದಾರೆ. ಶೆ.72ರಷ್ಟು ಜನರು 35ವರ್ಷಕ್ಕಿಂತ ಕಡಿಮೆಯವರಿದ್ದಾರೆ. ಅಂದರೆ, ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿಯೇ ಅತ್ಯಧಿಕ ಪ್ರಮಾಣದಲ್ಲಿ ಯುವಜನರಿದ್ದಾರೆ. ಅಲ್ಲದೇ ಇದೇ ಪ್ರಮಾಣದ ವಯೋಮಿತಿ ಜನಸಂಖ್ಯೆಯ ಅಂತರ ಮುಂದಿನ 25ರಿಂದ 30ವರ್ಷಗಳವರೆಗೂ ಇರುತ್ತದೆ. ಈ ಅತ್ಯಮೂಲ್ಯವಾದ ಯುವಜನ ಸಂಪತ್ತನ್ನು ಶಕ್ತಿಶಾಲಿ ಮಾನವ ಸಂಪನ್ಮೂಲ ಮತ್ತು ಬುದ್ಧಿವಂತ ಜನರ ತಂಡವಾಗಿ ಬದಲಿಸಬಹುದಾಗಿದೆ.

ಗುಣಮಟ್ಟದ ಶಿಕ್ಷಣಕ್ಕೆ ಪ್ರಥಮ ಶಿಕ್ಷಣ ಆಯೋಗದ ಶಿಫಾರಸುಗಳೇನು?
ಡಾ. ಎಸ್.ರಾಧಾಕೃಷ್ಣನ್ ಅಧ್ಯಕ್ಷತೆಯ ದೇಶದ ಪ್ರಥಮ ಶಿಕ್ಷಣ ಆಯೋಗ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಅತ್ಯಗತ್ಯ ಎಂಬುದನ್ನು ಖಚಿತಪಡಿಸಿತು. ತರಬೇತಿ, ಸಂಶೋಧನೆ ಮತ್ತು ಸಮಾಜದ ನಿರಂತರ ಅಭಿವೃದ್ಧಿಗಾಗಿ ವಿಸ್ತೃತ ಚಟುವಟಿಕೆಗಳನ್ನು ಉನ್ನತ ಶಿಕ್ಷಣ ಒದಗಿಸುವಂತಿರಬೇಕು ಎಂದು ರಾಧಾಕೃಷ್ಣನ್ ಹೇಳಿದ್ದರು.

ಈ ದೂರದೃಷ್ಟಿಯ ಚಿಂತನೆಯನ್ನೇ ದೇಶದ 11ನೇ ಪಂಚವಾರ್ಷಿಕ ಯೋಜನೆ ಪ್ರತಿಧ್ವನಿಸುತ್ತದೆ. ವೈದ್ಯಕೀಯ ಶಿಕ್ಷಣದಲ್ಲಿಯೂ ಸ್ನಾತಕೋತ್ತರ ಶಿಕ್ಷಣ ಉನ್ನತ ಶಿಕ್ಷಣವನ್ನು ರೂಪಿಸಲಾಯಿತು. 

ಗುಣಮಟ್ಟ ಕಾಯ್ದುಕೊಳ್ಳುವಲ್ಲಿಯ ಸವಾಲುಗಳೇನು?
ಉನ್ನತ ಶಿಕ್ಷಣಕ್ಕೆ ಅವಕಾಶ, ಹಂಚಿಕೆ ಮತ್ತು ಸಮಾನತೆ ಮೂರೂ ಅಂಶಗಳನ್ನು ನಿರ್ವಹಿಸಬೇಕು ಎನ್ನುವುದು ಆ ಯೋಜನೆಯ ಮೂಲ ಉದ್ದೇಶವಾಗಿತ್ತು. ಅವಕಾಶ ಹಾಗೂ ಹಂಚಿಕೆಗಳನ್ನು ಸಂವಿಧಾನದ ನಿಯಮಗಳ ಅನುಸಾರವೇ ಸರ್ಕಾರದ ಮೂಲಕ ನಿರ್ವಹಿಸಲಾಗುತ್ತದೆ. ಆದರೆ ವೈದ್ಯಕೀಯ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕಾಗಿರುವುದು ಮಾತ್ರ ಈಗಲೂ ಮಹತ್ವದ ವಿಷಯವಾಗಿಯೇ ಉಳಿದಿದೆ. ಈ ನಿಟ್ಟಿನಲ್ಲಿ ಅಗತ್ಯದ ಕ್ರಮಗಳೆಲ್ಲವನ್ನೂ ತೆಗೆದು­ಕೊಳ್ಳಬೇಕಾದ್ದು ಇಂದಿನ ತುರ್ತಾಗಿದೆ. ದೇಶದ ಸಂಸತ್ತಿನಿಂದಲೇ ರಚಿತವಾದ ಭಾರತೀಯ ವೈದ್ಯಕೀಯ ಸಮಿತಿಯು ದೇಶದ ಪ್ರಮುಖ ನಿಯಂತ್ರಣ ಸಂಸ್ಥೆಯಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳು ಜರುಗುವಂತೆ ನೋಡಿಕೊಳ್ಳಲಿವೆ.

ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ತುರ್ತಾಗಿ ಆಗಬೇಕಿರುವ ಕೆಲಸ
ಗುಣಮಟ್ಟದ ವೈದ್ಯಕೀಯ ಶಿಕ್ಷಣ ದೊರೆಯುತ್ತಿದೆ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು. ಕಾಲಕಾಲಕ್ಕೆ ವೈದ್ಯಕೀಯ ಶಿಕ್ಷಣದ ಪಠ್ಯಗಳಲ್ಲಿ ಪರಿಷ್ಕರಣೆ, ಸ್ಫಟಿಕ ಸದೃಶವಾದ ವಿಷಯಗಳ ಅಳವಡಿಕೆ, ತರಬೇತಿ ಮತ್ತು ತರಬೇತಿಗಾಗಿ ನುರಿತ ತಜ್ಞರ ಬಳಕೆ, ಆ ಮೂಲಕ ಉತ್ತಮ ಪ್ರತಿಭೆಗಳು ರೂಪುಗೊಳ್ಳುವುದು ಮೊದಲಾದ ಚಟುವಟಿಕೆಗಳೆಲ್ಲವೂ ಅತ್ಯಗತ್ಯವಾಗಿವೆ. ಇತ್ತೀಚೆಗೆ ಪರಿಚಿತವಾಗಿರುವ ಅತ್ಯಾಧುನಿಕ ಬೋಧಕ ಸಾಮಗ್ರಿಗಳು ಮತ್ತು ತಂತ್ರಜ್ಞಾನವನ್ನು ಸಮನ್ವಯಗೊಳಿಸಿದ ಅದ್ಭುತವಾದ ಬೋಧನಾ ಮಾರ್ಗ, ತರಬೇತಿ ವಿಧಾನಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ.

ಭಾರತೀಯ ವೈದ್ಯಕೀಯ ಸಮಿತಿಯ ಕಾಯ್ದೆ 1956ಸಹ ತಿದ್ದುಪಡಿ ಆಗಬೇಕಿದೆ. ಆ ಮೂಲಕ ಭಾರತೀಯ ವೈದ್ಯಕೀಯ ಸಮಿತಿಯ ಕಾರ್ಯವ್ಯಾಪ್ತಿಯನ್ನು ಸ್ಪಷ್ಟಪಡಿಸಬೇಕಿದೆ. ಅಲ್ಲದೇ, ರಾಷ್ಟ್ರೀಯ ಮಾನ್ಯತಾ ಮಂಡಳಿ ಮೂಲಕ ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಮಾನ್ಯ ಮಾಡುವುದಕ್ಕೆ ಸಂಬಂಧಿಸಿದ ಅಧಿಕಾರವನ್ನೂ ನೀಡಬೇಕಿದೆ. ದೇಶದಾದ್ಯಂತದ ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಒಂದು ಯೋಜಿತ ರೀತಿಯಲ್ಲಿ ಹಾಗೂ ವಿವಿಧ ಹಂತಗಳಲ್ಲಿ ವ್ಯವಸ್ಥಿತವಾಗಿಸಲು ರಾಷ್ಟ್ರೀಯ ಸಮಗ್ರ ನೋಟದ ಅಭಿವೃದ್ಧಿ ಯೋಜನೆಯ ಅಗತ್ಯವಿದೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮತ್ತು ಸಾಮಾನ್ಯ ಲೋಪದೋಷ ಸರಿಪಡಿಸಲು ಇತರೆ ದೇಶಗಳ ವೈದ್ಯಕೀಯ ಸಮಿತಿಗಳ ಜತೆಗೂಡಿ ಪ್ರಯತ್ನ ನಡೆಸಬೇಕಿದೆ.

ವಿಶ್ವದ ಕೇವಲ ನಾಲ್ಕು ದೇಶಗಳಷ್ಟೇ ಮುಂದಿನ ದಶಕಗಳ ಅವಧಿಯಲ್ಲಿ ಅಗತ್ಯದ ಮಾನವ ಸಂಪನ್ಮೂಲವನ್ನು ಒದಗಿಸಲು ಶಕ್ತವಾಗಲಿವೆ. ಭಾರತ, ಬ್ರೆಜಿಲ್, ರಷ್ಯಾ ಮತ್ತು ಚೀನಾದಿಂದ ಮಾತ್ರ ಪರಿಣತರನ್ನು ಸಿದ್ಧಪಡಿಸುವ ಸಾಮರ್ಥ್ಯ ಪಡೆದಿವೆ. ಭಾರತವು ವಿಶ್ವ ಆರೋಗ್ಯ ಕ್ಷೇತ್ರದ ಮಾನವ ಸಂಪನ್ಮೂಲ ವಿಚಾರದಲ್ಲಿ ಪ್ರಮುಖ ಹಾಗೂ ಮುಂಚೂಣಿಯಲ್ಲಿದೆ. ಪರಿಣತರಿಗೆ ಇರುವ ಭಾರಿ ಬೇಡಿಕೆಯ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರೆ, ದೇಶದಲ್ಲಿನ ವೈದ್ಯಕೀಯ ಶಿಕ್ಷಣ ಪದ್ಧತಿಯಲ್ಲಿ ಇನ್ನಷ್ಟು ಶಿಸ್ತು, ಸಮಗ್ರವಾಗಿ ಗುಣಮಟ್ಟದ ಸುಧಾರಣೆ ತರಬೇಕಿದೆ. ಉತ್ತಮ ವೈದ್ಯರು, ನರ್ಸ್ ಮತ್ತು ವೈದ್ಯಕೀಯ ವಿಭಾಗದ ತಾಂತ್ರಿಕ ನಿಪುಣರಿಗಾಗಿ ವಿಶ್ವದ ವಿವಿಧೆಡೆಯಿಂದ ಬರುವ ಬೇಡಿಕೆಯನ್ನು ಪೂರೈಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT