ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈನ್‌ಗೆ ಮನಸೋತ ಜನ

ಅಂತರರಾಷ್ಟ್ರೀಯ ಉತ್ಸವದಲ್ಲಿ ರುಚಿ ನೋಡವ ತವಕ
Last Updated 25 ಜುಲೈ 2014, 19:53 IST
ಅಕ್ಷರ ಗಾತ್ರ

ಬೆಂಗಳೂರು: ಇಂಪಾದ ಸಂಗೀತ­ದೊಂದಿಗೆ ವೈನ್‌ ಸವಿಯುವ ಅವಕಾಶ, ವಿವಿಧ ಬ್ರಾಂಡ್‌ನ ವೈನ್‌ಗಳು ಅಲ್ಲಿ ಬಂದವರ ಮನ ಸೆಳೆಯುತ್ತಿದ್ದವು. ಒಂದು ಸಿಪ್‌ ಆದರೂ  ಸವಿಯೋಣ ಎಂದೆ­­ಸುವಂತೆ ಕೈ ಬೀಸಿಕರೆಯುತ್ತಿದ್ದವು.

ಕೆಲವರು ಒಂದು ಸಿಪ್‌ಗೆ ತೃಪ್ತ­ರಾಗದೆ, ಇನ್ನೊಂದು ಸಿಪ್‌ ಕುಡಿದು ಸವಿ­ಯನ್ನು ಅನುಭವಿಸುತ್ತಿದ್ದರು. ಹುಡು­­ಗಿಯರು ತಾವೂ ಯಾರಿಗೂ ಕಡಿಮೆ­ಯಿಲ್ಲವೆನ್ನುವಂತೆ ವೈನ್‌ಗಳ ರುಚಿಯನ್ನು ಸವಿಯುತ್ತಿದ್ದರು.

ಕರ್ನಾಟಕ ದ್ರಾಕ್ಷಾರಸ ಮಂಡಳಿಯು ಶುಕ್ರವಾರದಿಂದ ನಗರದ ಜಯ­ಮಹಲ್‌ ಪ್ಯಾಲೇಸ್‌ ಹೋಟೆಲ್‌ ಆವರ­ಣ­ದಲ್ಲಿ ಆರಂಭಿಸಿರುವ ‘ಅಂತರ­ರಾಷ್ಟ್ರೀಯ ವೈನ್‌ ಉತ್ಸವ’ ದಲ್ಲಿ ಕಂಡುಬಂದ ಹಲವು ನೋಟಗಳಿವು.

ಮಧುಲೋಕ, ಕಿನ್‌ವಾಹ, ಫೋರ್ ಸೀಸನ್ಸ್, ಲಾ ಬೆಲಾ, ಗ್ರೋವರ್ ವೈನ್ ಯಾರ್ಡ್ಸ್, ಎಲೈಟ್, ಸುಲ ಮುಂತಾದ ವೈನ್ ಕಂಪೆನಿಗಳ ಮಳಿಗೆಗಳು ವೈನ್‌­ಪ್ರಿಯರನ್ನು ಕೈಬೀಸಿ ಕರೆಯುತ್ತಿದ್ದವು. ಒಟ್ಟು 35 ಕ್ಕೂ ಹೆಚ್ಚು ವೈನ್ ಮಳಿಗೆ­ಗಳು ತಂತಮ್ಮ ವೈನ್‌ಗಳ ಪ್ರಚಾರ ಮತ್ತು ಮಾರಾಟದ ಜತೆಗೆ ಅವನ್ನು ಉಪಯೋಗಿಸುವುದರಿಂದ ಆಗುವ ಪರಿಣಾ­ಮಗಳ ಕುರಿತು ಮಾಹಿತಿ ನೀಡು­ತ್ತಿದ್ದವು. ಇದರಿಂದ ಸಾರ್ವಜನಿಕರಿಗೆ ವೈನ್ ಬಗ್ಗೆ ಇದ್ದ ತಪ್ಪು ಭಾವನೆಗಳು ದೂರವಾದಂತೆ ಇದ್ದವು.

ವಿವಿಧ ಬಗೆಯ ರೆಡ್ ವೈನ್, ವೈಟ್ ವೈನ್, ರೋಸ್ ವೈನ್‌ಗಳ ಸವಿಯನ್ನು ಸವಿದು ಕೊಂಡುಕೊಳ್ಳುವವರ ಸಂಖ್ಯೆ ಬಹ­ಳಷ್ಟಿತ್ತು. ಹೀಗಾಗಿ, ಮಾರಾಟ ಭರದಿಂದ ಸಾಗಿತ್ತು. ವೈನ್‌ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ತೋಟ­ಗಾರಿಕೆ ಸಚಿವ ಶಾಮನೂರು ಶಿವ­ಶಂಕರಪ್ಪ, ‘ನಮ್ಮ ದೇಶಕ್ಕೆ ಮೊದಲು ವೈನ್‌ ಆಮದು ಮಾಡಿ­ಕೊಳ್ಳಲಾ­ಗುತ್ತಿತ್ತು. ಇಂದು ಬೇರೆ ದೇಶ­ಗಳಿಗೆ ರಫ್ತು ಮಾಡುವ ಮಟ್ಟಕ್ಕೆ ಉದ್ಯಮ ಬೆಳೆ­ದಿದೆ. ದೇಶದಲ್ಲಿರುವ ಬ್ರಾಂಡ್‌ ಪ್ರಸಿದ್ಧಿಗೊಳಿಸ­ಬೇಕಾಗಿದೆ’ ಎಂದರು.

‘ದ್ರಾಕ್ಷಿಯನ್ನು ಬೆಳೆಯುವ ರೈತರಿಗೆ ಹಾಗೂ ವೈನ್‌ ಉದ್ದಿಮೆದಾರರಿಗೆ ಬೇಕಾದ ಸಹಾಯ ಮತ್ತು ಸಹಕಾರ ನೀಡಲಾಗುವುದು’ ಎಂದು ಹೇಳಿದರು.
ಶಾಸಕ ಅಶೋಕ್‌ ಖೇಣಿ, ‘ಬೀದರ್‌ನಲ್ಲಿ ಭೂಮಿ, ನೀರು ಎಲ್ಲವೂ ಇದೆ. ವೈನ್‌ ಉದ್ದಿಮೆದಾರರು ಅಲ್ಲಿ ಕಂಪೆನಿ ತೆರೆಯಲು ಅವಕಾಶವಿದೆ. ಅಲ್ಲಿ ಸರಿಯಾದ ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದರು.

ಕರ್ನಾಟಕ ದ್ರಾಕ್ಷಾರಸ ಮಂಡಳಿಯ ಅಧ್ಯಕ್ಷ ಜಿ.ವಿ.ಕೃಷ್ಣರಾವ್‌, ‘ವೈನ್‌ ಮಾರಾಟಕ್ಕೆ ನೀಡುವ ಪರವಾನಗಿಯ ನಿಯಮಗಳನ್ನು ಸರಳೀಕರಣಗೊಳಿಸಿ, ವೈನ್‌ ಉದ್ಯಮಕ್ಕೆ ಪ್ರೋತ್ಸಾಹ ನೀಡಲಾಗುವುದು’ ಎಂದು ಹೇಳಿದರು.

‘ರಾಜ್ಯದಲ್ಲಿ ರೈತರು ಬೆಳೆಯುವ ದ್ರಾಕ್ಷಿಗಳನ್ನೇ ಬಳಸಿ  ವೈನ್‌ ತಯಾರಿ­ಸಲಾಗುತ್ತದೆ. ಶೇ 20 ರಷ್ಟನ್ನು ಮಾತ್ರ ಬೇರೆ ದೇಶಗಳಿಂದ ಆಮದು ಮಾಡಿ­ಕೊಳ್ಳಲಾಗುತ್ತದೆ’ ಎಂದು ಹೆರಿ­ಟೇಜ್‌ ಗ್ರೇಪ್‌ ವೈನರಿಯ ವ್ಯವಸ್ಥಾ­ಪಕ ನಿರ್ದೇ­ಶಕ ಪಿ.ಎಲ್‌.ವಿ. ರೆಡ್ಡಿ ಹೇಳಿದರು.

‘ಯಾವ ಬಣ್ಣದ ವೈನ್‌ ಸೇವಿಸುತ್ತಾರೋ ಅದೇ ಬಣ್ಣದ ಆಹಾರ ಸೇವಿಸಿದರೆ ಉತ್ತಮ. ಇಡೀ ಜಗತ್ತಿನಲ್ಲಿ ಒಟ್ಟು 5,000 ವೈನ್‌ ವಿಧಗಳಿವೆ. ಅವುಗಳಲ್ಲಿ 10 ಮಾತ್ರ ಪ್ರಸಿದ್ಧಿಯಾಗಿವೆ. ರಾಜ್ಯದಲ್ಲಿ ಒಟ್ಟು 250 ವಿಧದ ವೈನ್‌ ದೊರೆಯುತ್ತವೆ. ಯಾವುದು ಹೆಚ್ಚು ಜನರಿಗೆ ಇಷ್ಟವಾ­ಗುತ್ತದೆಯೋ ಅದೇ ಪ್ರಸಿದ್ಧವಾದ ವೈನ್‌’ ಎಂದು  ಹೇಳಿದರು.

ಲೀಟರ್‌ಗೆ ₨ 100
ನಮ್ಮಲ್ಲಿ ತಯಾರಾಗುವ ವೈನ್‌ಗೆ ಹೆಚ್ಚಿನ ಬೇಡಿಕೆಯಿದೆ. ಇಲ್ಲಿ ಲೀಟರ್‌ ವೈನ್‌ಗೆ  ₨ 100 ಮಾತ್ರ. ಉಳಿದ ದಿನಗಳಲ್ಲಿ ಒಂದು ತಿಂಗಳಿಗೆ 16 ಸಾವಿರ ಬಾಟಲಿ ಮಾರಾಟವಾಗುತ್ತದೆ.
–ಪಿ.ಎಲ್‌.ವಿ. ರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ. ಹೆರಿಟೇಜ್‌ ಗ್ರೇಪ್‌ ವೈನರಿಪ್ರೈ.ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT