ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿತ್ವ ಆವರಿಸುವ ಕಾಯಿಲೆಯ ಕಂಪನ

Last Updated 4 ಆಗಸ್ಟ್ 2015, 19:34 IST
ಅಕ್ಷರ ಗಾತ್ರ

ರೋಗ ದೈಹಿಕವಾದದ್ದು; ಬರುತ್ತದೆ, ಹೋಗುತ್ತದೆ ಎಂದೇ ವೈದ್ಯರು ಔಷಧ ಕೊಡುವುದು. ಕಾಯಿಲೆಗೆ ಶುಶ್ರೂಷೆ ಸಿಗುತ್ತದೆ. ರೋಗಿಗೆ? ಪ್ರತಿಯೊಬ್ಬ ವ್ಯಕ್ತಿಯೂ ವಿಶಿಷ್ಟ, ವಿಭಿನ್ನ. ರೋಗಕ್ಕೂ ವ್ಯಕ್ತಿತ್ವವಿದೆ. ರೋಗವನ್ನು ಬರೀ ರೋಗವೆಂದು ಪರಿಗಣಿಸಿ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಮುಖರಾಗಲು ಸಾಧ್ಯವಿಲ್ಲ.

ನೆಗಡಿ, ಜ್ವರಗಳಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗಳೂ ಸೇರಿದಂತೆ ಕ್ಷಯ, ಕ್ಯಾನ್ಸರ್‌ಗಳೂ ಬೇರೆ ಬೇರೆ ವ್ಯಕ್ತಿಗಳಲ್ಲಿ ಬೇರೆಯದೇ ಪರಿಣಾಮ ಉಂಟು ಮಾಡುತ್ತವೆ. ಹಾಗಾಗಿ ಒಬ್ಬರಿಗೆ ನೆಗಡಿ ಬಂದಾಗ ಪಡೆದ ಔಷಧಿಯೇ ಇನ್ನೊಬ್ಬರ ನೆಗಡಿಯನ್ನೂ ಗುಣಪಡಿಸುತ್ತದೆ ಎಂದು ಹೇಳಲಾಗದು.

ರೋಗ ಮುಖ್ಯವಲ್ಲ; ರೋಗಿ ಮುಖ್ಯ.
ಮನುಷ್ಯನನ್ನು ಆಂತರ್ಯದಿಂದ ಗುರುತಿಸುವಲ್ಲಿ ಔಷಧಿ ಸೋಲುತ್ತದೆ. ನಮಗೆ ಬಂದ ಕಾಯಿಲೆ ಗುರುತಿಸಿ ಚಿಕಿತ್ಸೆಗೆ ಮುಂದಾಗುವುದು ಔಷಧಿವಿಜ್ಞಾನದ ರೀತಿ. ಅದರ ಗಮನವೆಲ್ಲ ರೋಗವೇನು ಎಂಬುದರ ಕಡೆಗೆ. ಹಾಗಾಗಿ ವೈದ್ಯರ ಕೆಲಸದ ವಿಧಾನವೂ ಅದರತ್ತಲೇ ಕೇಂದ್ರಿತ.

ಶಾಂತ ಕೊಳದಲ್ಲಿ ಕಲ್ಲು ಎಸೆದರೆ ಅದು ಎಸೆದಲ್ಲೇ ಬೀಳುತ್ತದೆ. ಆದರೆ ಅದರಿಂದ ಎದ್ದ ತರಂಗಗಳು ಆಳದವರೆಗೆ, ದೂರದವರೆಗೆ ಪಸರಿಸುತ್ತವೆ. ಹೀಗೇ ವ್ಯಕ್ತಿಯೊಬ್ಬನಿಗೆ ಕಾಯಿಲೆ ಬಂದಾಗಲೂ ಕಾಯಿಲೆಯಿಂದ ಉಂಟಾದ ತರಂಗಗಳು ಇಡಿಯಾಗಿ ಅವನ ವ್ಯಕ್ತಿತ್ವವನ್ನು ಆವರಿಸಿಕೊಳ್ಳುತ್ತವೆ. ಹೀಗಾಗಿಯೇ ಎಷ್ಟೋ ಸಂದರ್ಭಗಳಲ್ಲಿ ರೋಗವು ಪುನಾ ಮರಳಿ ಬರಲು ತವಕಿಸುತ್ತಿರುತ್ತದೆ.

ಚಿಕಿತ್ಸಾ ವಿಧಾನ ಕೇವಲ ಶರೀರದ ಶುಶ್ರೂಷೆ ಮಾಡುತ್ತದೆ. ಅದರಿಂದ ಉಂಟಾದ ತರಂಗಗಳ ಗತಿ ಏನು? ಇದು ಒಂದು ರೀತಿ ಕೊಳದಲ್ಲಿ ಕಲ್ಲು ಬಿದ್ದ ಜಾಗ ಮತ್ತು ಆಗ ಎದ್ದ ನೀರಿನ ಗುಳ್ಳೆಗಳತ್ತಲೇ ನಾವು ಗಮನ ಕೇಂದ್ರೀಕರಿಸಿದಂತೆ. ಕಲ್ಲಿನಿಂದ ಮುಕ್ತವಾಗಿ ಹೊಮ್ಮಿದ ತರಂಗಗಳು ತಮ್ಮದೇ ಅಸ್ತಿತ್ವ ಪಡೆದುಕೊಳ್ಳುತ್ತವಲ್ಲ!

ರೋಗವನ್ನು ಗುಣಪಡಿಸಬಹುದು; ರೋಗಿಯನ್ನು ಗುಣಪಡಿಸಲಾಗುವುದಿಲ್ಲ.  ವೈದ್ಯರು ತಮಗೆ ಗೊತ್ತಿರುವ ಎಲ್ಲ ಉಪಾಯಗಳಿಂದ ನೋಡುತ್ತಾರೆ. ಎಲ್ಲ ಸರಿಯಾಗಿದೆ ಎಂದೇ ಅವರು ಹೇಳುವುದು. ಆದರೆ ರೋಗಿ, ‘ಇಲ್ಲ, ಎಲ್ಲ ಸರಿಯಾಗಿಲ್ಲ’ ಎನ್ನುತ್ತಾನೆ. ಇಂಥ ಪ್ರತಿಕ್ರಿಯೆ ವೈದ್ಯರಿಗೂ ಇರಿಸುಮುರಿಸು ಉಂಟು ಮಾಡುತ್ತದೆ. ಅವರ ಬಳಿ ಏನೆಲ್ಲ ತಂತ್ರಜ್ಞಾನವಿದೆಯೊ, ತಪಾಸಣೆಯ ಸಾಧನಗಳಿವೆಯೊ, ರೋಗಪತ್ತೆ ವಿಧಾನಗಳಿವೆಯೊ ಅವೆಲ್ಲವುಗಳಿಂದಲೂ ಗೊತ್ತಾಗುವುದು ಇಷ್ಟೆ; ರೋಗಿಯಲ್ಲಿ ಯಾವ ರೋಗವೂ ಇಲ್ಲ. ರೋಗವಿಲ್ಲ ಎಂದ ಕೂಡಲೇ ಅದು ಸ್ವಾಸ್ಥ್ಯವಲ್ಲ. ಸ್ವಾಸ್ಥ್ಯ ಎನ್ನುವ ಪದಕ್ಕೆ ತನ್ನದೇ ಆದ ಸಕಾರಾತ್ಮಕ ಅರ್ಥವಿದೆ. ರೋಗವಿಲ್ಲ ಎನ್ನುವುದು ನಿಷೇಧಾತ್ಮಕ ಪದ.

ಹೆಲ್ತ್‌ ಎಂಬುದಕ್ಕೆ ಪರ್ಯಾಯವಾಚಿ ಶಬ್ದ ಆರೋಗ್ಯ. ಆದರೆ ಹೆಲ್ತ್‌ ಎಂಬ ಶಬ್ದಕ್ಕೆ ಹೀಲಿಂಗ್‌ ಪದ ಮೂಲ. ವಾಸಿ ಮಾಡುವುದು ಎಂಬ ಅರ್ಥ. ಇದು ಸ್ವಾಸ್ಥ್ಯದ ಸಮನಾರ್ಥಕ ಪದವಲ್ಲ. ಸ್ವಾಸ್ಥ್ಯದ ಅರ್ಥ ರೋಗದಿಂದ ಗುಣಮುಖವಾಗುವುದಲ್ಲ. ಸ್ವಯಂನಲ್ಲಿ ಸ್ಥಿತರಾಗುವುದು ಎಂದು ಅರ್ಥ. ಯಾವುದೇ ಕಾಯಿಲೆ ಇಲ್ಲದಿರುವುದೇ ಆರೋಗ್ಯ ಎಂದುಬಿಡುತ್ತದೆ ವೈದ್ಯಕೀಯ ವಿಜ್ಞಾನ. ಕೆಲವು ರೋಗಗಳು ಶರೀರದ ಮೇಲೆ ಪ್ರಕಟಗೊಳ್ಳುತ್ತವೆ ಅಷ್ಟೆ.

ಆದರೆ ಅವು ಕೇವಲ ದೈಹಿಕ ಕಾಯಿಲೆಗಳಲ್ಲ; ಒಳಗಿನಿಂದ ಹೊರಗೆ ಹರಡಿದಂತಹವುಗಳು. ಶರೀರದ ಕಾಯಿಲೆಯ ಕಂಪನ ಅಂತರಾತ್ಮದವರೆಗೆ ಹರಡಿದಂತೆಯೇ; ಅಂತರಾತ್ಮದ ಕಾಯಿಲೆಯೂ ಶರೀರದವರೆಗೆ ಬರುತ್ತದೆ. ಇಂತಹ ಒಳಗಿನ ಕಾಯಿಲೆ ಮಾನಸಿಕ. ಮಾನಸಿಕ ಮಟ್ಟದ ರೋಗಿಗೆ ಪೊಳ್ಳು ಔಷಧದ ಅಗತ್ಯವಿದೆ; ಕೇವಲ ಭರವಸೆ ಬರಲು.

ಮಾನಸಿಕ ಕಾಯಿಲೆಗೆ ದೈಹಿಕ ಉಪಚಾರ ಮಾಡಹೋದರೆ, ವಾಸಿಯಾಗುವ ಬದಲು ಅದು ಪ್ರಕಟವಾಗಲು ಇನ್ನೊಂದು ದಾರಿ ಹುಡುಕಿಕೊಳ್ಳುತ್ತದೆ. ಮಾನಸಿಕ ಕಾಯಿಲೆಯ ಹರಡುವಿಕೆ ತಡೆಯಲು ಎಷ್ಟು ಕಡೆ ಕಟ್ಟೆ ಕಟ್ಟಲು ಹೋದರೂ ಅಷ್ಟೂ ಅನೇಕ ಹೊಸ ದಾರಿಗಳನ್ನದು ಹುಡುಕಿ ಹೊರಡುತ್ತದೆ.

ಕುರುಡುತನ ಕೂಡ ಮಾನಸಿಕ ಮಟ್ಟದ್ದಿರಬಹುದು; ಲಕ್ವ ಕೂಡ ಮಾನಸಿಕವಾಗಿರಬಹುದು. ಆಗ ವೈಜ್ಞಾನಿಕ ಚಿಕಿತ್ಸೆ ನೀಡಿ ಅದನ್ನು ಗುಣಪಡಿಸ ಲಾಗುವುದಿಲ್ಲ. ಇಂಥದೊಂದು ಕುರುಡುತನವನ್ನು ಓಶೋ ಪ್ರಸ್ತಾಪಿಸಿದ್ದಾರೆ. ಯುವತಿಯೊಬ್ಬಳು ನಿಜವಾಗಿ ಕುರುಡಾಗಿರಲಿಲ್ಲ. ಕುರುಡು ಮಾನಸಿಕವಾಗಿತ್ತು. ಹಾಗೆಂದು ಅವಳೇನು ಮೋಸ ಮಾಡುತ್ತಿರಲಿಲ್ಲ. ಬೆಂಕಿಯ ಕಡೆಗೆ ಹೋಗಲು ಬಿಟ್ಟರೆ ಹೋಗಿಬಿಡುತ್ತಿದ್ದಳು. ಗೋಡೆಗೆ ಡಿಕ್ಕಿ ಹೊಡೆಯುತ್ತ ಅಡ್ಡಾದಿಡ್ಡಿ ಓಡಾಡುತ್ತಿದ್ದಳು.

ಆದರೆ ಚಿಕಿತ್ಸಕರ ದೃಷ್ಟಿಗೆ ಮೀರಿದ ಕುರುಡುತನವಾಗಿತ್ತು ಅದು. ಓಶೋ ಬಳಿ ಯುವತಿಯನ್ನು ಕರೆದುಕೊಂಡು ಬಂದರು. ಅವರು ಅವಳೊಡನೆ ಸಮಾಲೋಚನೆ ಮಾಡುತ್ತ ಹೋದಂತೆ ಒಂದೆರಡು ದಿನಗಳ ಬಳಿಕ ಗೊತ್ತಾಯಿತು, ಅವರ ಮನೆಯಲ್ಲಿ ಅವಳ ಪ್ರೇಮಿಯನ್ನು ಭೇಟಿಯಾಗದಂತೆ ನಿರ್ಬಂಧ ಹೇರಿದ್ದರು. ತನ್ನ ಪ್ರೇಮಿಯನ್ನು ಬಿಟ್ಟು ಬೇರೆ ಯಾರನ್ನೂ ನೋಡುವ ಬಯಕೆ ಆಕೆಯಲ್ಲಿ ಉಳಿದಿರಲಿಲ್ಲ.

ಇಷ್ಟೊಂದು ಗಾಢವಾದ, ತೀವ್ರ ಸಂಕಲ್ಪ ಮಾಡಿರುವಾಗ ಅವನಲ್ಲದೆ ಬೇರೆ ಯಾರನ್ನೂ ನೋಡುವುದರಲ್ಲಿ ಅರ್ಥವಿಲ್ಲ ಎಂಬುದು ಅವಳ ಮನದಲ್ಲಿ ಆಳವಾಗಿ ಬೇರೂರಿಬಿಟ್ಟಿತ್ತು. ಆಗ ಮಾನಸಿಕ ಕುರುಡುತನ ಉಂಟಾಗಿತ್ತು. ಕಣ್ಣುಗಳು ನೋಡುವುದನ್ನು ನಿಲ್ಲಿಸಿದ್ದವು. ಕಣ್ಣುಗಳ ಎನಾಟಮಿ ನೋಡಿದರೆ ಯಾವ ದೋಷವೂ ಕಂಡುಬಂದಿರಲಿಲ್ಲ. ಏಕೆಂದರೆ ವೈಜ್ಞಾನಿಕವಾಗಿ ಸಂಪೂರ್ಣವಾಗಿ ಕಣ್ಣುಗಳು ಸರಿಯಾಗೇ ಇದ್ದವು; ಸರಿಯಾಗಿಯೇ ಕೆಲಸ ಮಾಡುತ್ತಿದ್ದವು.

ಕಣ್ಣುಗಳು ಯಾರನ್ನು ಕಾಣುವ ಹಂಬಲವಿದೆಯೊ ಅವರನ್ನು ನೋಡಲು ಬಿಡದೇ ಕಣ್ಣುಗಳ ಆತ್ಮಹತ್ಯೆ ಮಾಡಿಕೊಳ್ಳಹೋಗಿದ್ದಳು ಆಕೆ. ಆಕೆಯ ಮನೆಯವರಿಗೆ ಪ್ರೇಮಿಯನ್ನು ನೋಡಲು ಬಿಡಿ ಎಂದರಂತೆ ಓಶೋ. ಅದಕ್ಕೂ ಅವಳ ಕಣ್ಣು ಕಾಣದಿರುವುದಕ್ಕೂ ಏನು ಸಂಬಂಧ ಎಂದರು ಅವರೆಲ್ಲ. ಪ್ರಯತ್ನ ಮಾಡಿ ನೋಡಲು ಹೇಳಿದರು.

ಸರಿ, ಮನೆಯವರು ಅನುಮತಿ ನೀಡಿದರು. ಅದೊಂದು ಸಂಜೆ 5 ಗಂಟೆಗೆ ಅವಳನ್ನು ನೋಡಲು ಆಕೆಯ ಪ್ರೇಮಿ ಬರಲಿದ್ದಾನೆ ಎಂದು ಆಕೆಗೆ ಹೇಳಿದರು. ಹುಡುಗಿ ಕಾಯತೊಡಗಿದಳು. ಕಣ್ಣು ಸರಿಯಾಗಿದ್ದವು! ಆದರೆ ಇದು ಠಕ್ಕತನವಲ್ಲ. ದೇಹ ಮನಸ್ಸನ್ನು ಅನುಸರಿಸುವ ಪರಿಗೆ ಉದಾಹರಣೆ. ಹಾಗೆಂದು ಎಲ್ಲ ಕುರುಡುತನಗಳೂ ಮಾನಸಿಕ ಮಟ್ಟದ್ದಲ್ಲ.

ಇಂತಹ ಮಾನಸಿಕ ಮಟ್ಟದ ಕಾಯಿಲೆಗಳಿಗೆ ಕಾರಣ ಹುಡುಕಹೋದರೆ ಬಹಳ ಹಿಂದೆ ಹೋಗಿ ನೋಡಬೇಕಾಗುತ್ತದೆ. ಕಾಯಿಲೆಗೂ ಕಾರಣಕ್ಕೂ ನಡುವೆ ಬಹಳ ಅಂತರವಿರುತ್ತದೆ. ನಮ್ಮ ದೇಹ ಮನಸ್ಸಿಗೆ ಸಹಕಾರ ನೀಡುತ್ತದೆ. ಹಾಗಾಗಿ ಎಷ್ಟೋ ಸಲ ಕಾಯಿಲೆಗಳನ್ನು ನಾವು ಆಮಂತ್ರಿಸಿರುತ್ತೇವೆ. ಮನದ ಮೂಲೆಯಲ್ಲಿ ಇಂಥ ಸ್ಥಿತಿಯನ್ನು ನಾವು ಬಯಸಿರುತ್ತೇವೆ.

ಲಕ್ವ ಹೊಡೆದ ವ್ಯಕ್ತಿಯ ವಿಷಯಕ್ಕೆ ಬಂದರೆ ಲಕ್ವ ಅವನ ಕಾಯಿಲೆಯಲ್ಲ, ಭಾವನೆ. ಭಾಗಶಃ ಮಾನಸಿಕ ಕಾಯಿಲೆ. ಇಂಥದೇ ಲಕ್ವ ಹೊಡೆದ ವ್ಯಕ್ತಿಯ ಜೀವನದಲ್ಲಿ ನಡೆದ ಘಟನೆಯೊಂದನ್ನು ಓಶೋ ಉದಾಹರಿಸುತ್ತಾರೆ. ಎರಡು ವರ್ಷಗಳಿಂದ ಲಕ್ವ ಹೊಡೆದು ಮಲಗಿದ್ದ ವ್ಯಕ್ತಿಗೆ ಏಳಲೂ ಆಗುತ್ತಿರಲಿಲ್ಲ. ಅದೊಂದು ದಿನ ಮನೆಗೆ ಬೆಂಕಿ ಬಿತ್ತು. ಎಲ್ಲರೂ ಹೊರಗೋಡಿದರು. ಎಲ್ಲರೂ ಹೊರಗೆ ಬಂದ ಮೇಲೆ, ಅಯ್ಯೋ ಪಾಪ, ಅವನ ಗತಿ ಏನಾಯಿತೋ ಎಂದು ನೋಡುವಷ್ಟರಲ್ಲಿ, ಹಿಂದೆ ಅವನೂ ಓಡಿಬರುತ್ತಿದ್ದ. ಏಳಲೂ ಆಗದ ವ್ಯಕ್ತಿ ಓಡುವುದು ಎಂದರೇನು? ಕೇಳಿದರೆ, ಹೌದಲ್ಲವಾ, ನಂಗೆ ಲಕ್ವ ಹೊಡೆದಿದೆ ಎನ್ನುತ್ತ ಮತ್ತೆ ಬಿದ್ದುಬಿಟ್ಟ.

ವ್ಯಕ್ತಿ ಮೋಸ ಮಾಡುತ್ತಿರಲಿಲ್ಲ. ಅವನ ಕಾಯಿಲೆ ಮಾನಸಿಕ ಮಟ್ಟದಲ್ಲಿತ್ತು ಅಷ್ಟೆ. ಆದರೂ ಅವನಂಥವರಿಗೆ ನಿನ್ನ ಕಾಯಿಲೆ ಮಾನಸಿಕವಾದುದು ಎಂದು ಹೇಳಿದರೆ ಅವನಿಗದು ರುಚಿಸುವುದಿಲ್ಲ. ಏನು, ನಾನೇನು ಸುಮ್ಮಸುಮ್ಮನೆ ಕಾಯಿಲೆ ಬಂದವನಂತೆ ತೋರಿಸಿಕೊಳ್ಳುವೆನೆ ಎಂದು ಅವನಿಗೆ ಅನಿಸುತ್ತದೆ.

ಹೌದು, ಯಾರೂ ಇಲ್ಲದ ಕಾಯಿಲೆ ತೋರ್ಪಡಿಸುವುದಿಲ್ಲ. ಇಂತಹ ವ್ಯಕ್ತಿಗೆ ಕೂಡ, ಚಿಕಿತ್ಸಕರು ‘ನಿನಗೆ ಮಾನಸಿಕ ಕಾಯಿಲೆ ಬಂದಿದೆ’ ಎಂದುಬಿಟ್ಟರೆ ಅವರಿಗೆ ವ್ಯವಹರಿಸಲು ಬರುವುದಿಲ್ಲ ಎಂದೇ ಅರ್ಥ. ಏಕೆಂದರೆ ಹೀಗೆ ಹೇಳಿದರೇನು ಕಾಯಿಲೆ ವಾಸಿಯಾಗುವುದಿಲ್ಲ. ಚಿಕಿತ್ಸೆಗೆ ಇನ್ನಷ್ಟು ಅಡ್ಡಿಯಾದಂತೆ.

ಮಾನಸಿಕ ಕಾಯಿಲೆಗೆ ತನ್ನದೇ ಆದ ಮಟ್ಟವಿದೆ. ಆದರೆ ಚಿಕಿತ್ಸಕ ಇದನ್ನು ಒಪ್ಪುವುದಿಲ್ಲ.. ಕಾರಣ, ಅವನಿಗೆ ತಿಳಿದಿರುವುದೆಲ್ಲ ದೈಹಿಕ ಚಿಕಿತ್ಸೆಯ ವಿಧಾನಗಳು. ಇದು ರೋಗವಲ್ಲ ಎಂದು ಹೇಳುವ ಬದಲು ನಿಮಗೆ ಬೇರೆ ರೀತಿಯ ಚಿಕಿತ್ಸಕರ ಅಗತ್ಯವಿದೆ ಎಂದು ಹೇಳಬೇಕು. ಇಲ್ಲವೇ ಅವರೇ ಬೇರೆ ರೀತಿಯ ಚಿಕಿತ್ಸಕರಾಗಬೇಕು. ಮನಸ್ಸನ್ನೂ ದೇಹವನ್ನೂ ಚಿಕಿತ್ಸೆಗೊಳಪಡಿಸುವ ಕುರಿತು ಯೋಚಿಸುವ ಚಿಕಿತ್ಸಕರಾಗಬೇಕು. ಬುದ್ಧನಿಗೆ ಒಮ್ಮೆ ಯಾರೋ ಕೇಳಿದರು– ನೀವಾರು? ದಾರ್ಶನಿಕರೆ, ವಿಚಾರಕರೆ, ಸಂತರೆ, ಯೋಗಿಯೆ, ಯಾರು? ಬುದ್ಧನ ಉತ್ತರ ನಾನು ಕೇವಲ ಒಬ್ಬ ವೈದ್ಯ, ನಾನೊಬ್ಬ ಚಿಕಿತ್ಸಕ. ಒಳಗಿನ ಕಾಯಿಲೆಗಳ ಬಗ್ಗೆ ತಿಳಿದ ಚಿಕಿತ್ಸಕ!
*
ಓಶೋ ಹೇಳಿದ್ದು
ಆಮಂತ್ರಿಸಿಕೊಂಡ ಕಾಯಿಲೆ ಬಗ್ಗೆ ಹೇಳುತ್ತ ಓಶೋ ಇನ್ನೊಂದು ವ್ಯಕ್ತಿಯ ಕುರಿತು ಹೇಳಿದ್ದಿದೆ. ಒಬ್ಬ ಮನುಷ್ಯ ದಿವಾಳಿಯಾಗುವ ಸ್ಥಿತಿಯಲ್ಲಿದ್ದನಂತೆ. ಅವನಿಗೆ ಮಾರ್ಕೆಟ್‌ಗೆ ಹೋಗಲೂ ಭಯ;  ಹೀಗೇ ಒಂದು ದಿನ ಬಾತ್‌ರೂಮಿ ನಿಂದ ಬರುವಾಗ ಜಾರಿ ಬಿದ್ದ; ಲಕ್ವ ಹೊಡೆಯಿತು. ಎಲ್ಲ ಬಗೆಯ ಶುಶ್ರೂಷೆಗಳೂ ಶುರುವಾದವು. ವೈದ್ಯರಿಗೆ  ಲಕ್ವ ಹೊಡೆಯಲಿ ಎಂದು ಈತ ಬಯಸಿದ್ದ ಎಂಬ ಆಲೋಚನೆ ಹೇಗೆ ಬರಬೇಕು?  ಆದರೆ ಮನದ ಮೂಲೆಯಲ್ಲೆಲ್ಲೊ ಅಯ್ಯೋ,  ಅಂಗಡಿಗೆ  ಹೋಗದಂತಾದರೆ ಸಾಕಪ್ಪಾ ಎಂದು ಬಯಸಿದ್ದ.

ಜನ ತನ್ನ ಸ್ಥಿತಿಯನ್ನು ಅರಿತು ತನ್ನೊಡನೆ ವ್ಯವಹರಿಸಲಿ. ಅರ್ಥ ಮಾಡಿಕೊಂಡು ಹೌದಲ್ಲವೆ, ಹೀಗಾಗಿದೆ ಎಂಬ ಭಾವ (ಸಹ ಅನುಭೂತಿ) ತೋರಲಿ ಎಂಬ ಸುಪ್ತ ಬಯಕೆ ಅದು. ಈಗ ಮನಸ್ಸು ಅದಕ್ಕೆ ತಕ್ಕ ವ್ಯವಸ್ಥೆ ಮಾಡಿಕೊಟ್ಟಿದೆ. ಶುಶ್ರೂಷೆ ಆರಂಭವಾಗಿದೆ. ಆದರೆ ಔಷಧಿಗಳೆಲ್ಲ ಅವನಿಗೆ ಹಾನಿ ಮಾಡುವ ಸಾಧ್ಯತೆಯೇ ಹೆಚ್ಚು. ಏಕೆಂದರೆ ಲಕ್ವ ಇಲ್ಲವೇ ಇಲ್ಲ. ಇದು ಅವನು ಆಮಂತ್ರಿಸಿಕೊಂಡ ಕಾಯಿಲೆ. ಗುಣಪಡಿಸಿದರೂ ಇನ್ನಾವುದೋ ರೋಗ ಹುಟ್ಟುತ್ತದೆ. 

ಇವನೇ ಅಂಗಡಿಗೆ ಹೋಗಲು ಧೈರ್ಯ ತಂದುಕೊಳ್ಳುವವರೆಗೂ ಅವನಲ್ಲಿ ರೋಗ ಹುಟ್ಟುತ್ತಲೇ ಇರುತ್ತದೆ. ರೋಗ ಇದ್ದಾಗ ಅವನಿಗೆ ಹೇಳಲೊಂದು ನೆಪ ಸಿಗುತ್ತದಲ್ಲ... ದಿವಾಳಿಯಾಗಲು ಇದೇ ಕಾರಣ ಅಂತ! ಹೆಂಡತಿ ಕಾಳಜಿ, ಮಗ ಪ್ರೀತಿ ತೋರಿಸುತ್ತಾನೆ. ಸ್ನೇಹಿತರು, ಬಂಧುಗಳು ನೋಡಲು ಬರುತ್ತಾರೆ.

ಇಂಥ ಕಾಳಜಿ, ಪ್ರೀತಿ ಪಡೆಯುವ ಹಂಬಲದಿಂದಲೂ ರೋಗ ಬರಿಸಿ ಕೊಳ್ಳುವವರಿದ್ದಾರೆ (ಬೇಕೆಂದು ಜಾಗೃತ ಮನದಿಂದಲ್ಲ). ಅದು ಅವರಾಡುವ ನಾಟಕವಲ್ಲ. ಆದರೆ ಇಂಥ ಸಂದರ್ಭದಲ್ಲಿ ಕೂಡ ರೋಗದ ಕುರಿತು ಸಹಾನುಭೂತಿ ತೋರಿದರೆ, ಕಾಯಿಲೆಗೆ ಮತ್ತಷ್ಟು ಪ್ರೋತ್ಸಾಹ ದೊರೆತಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT