ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯವಸ್ಥೆ ವಿರುದ್ಧ ತೇಕಲಹಳ್ಳಿ ಗ್ರಾಮಸ್ಥರ ಸವಾಲು

Last Updated 23 ಏಪ್ರಿಲ್ 2014, 10:14 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ನಮ್ಮ ವ್ಯವಸ್ಥೆ ಇಷ್ಟೊಂದು ಜಡ್ಡುಗಟ್ಟಿ ಹೋಗಿದೆಯೇ ಅಥವಾ ನಾವೇ ವರ್ಷದಿಂದ ವರ್ಷಕ್ಕೆ ಇನ್ನಷ್ಟು ಹಿಂದುಳಿಯುತ್ತಿದ್ದೇವೆಯೊ ಗೊತ್ತಿಲ್ಲ’. -–ಇದು ಗೌರಿಬಿದನೂರು ತಾಲ್ಲೂಕಿನ ತೇಕಲಹಳ್ಳಿ ಗ್ರಾಮಸ್ಥ ಅಳಲು.

ಚುನಾವಣೆಯಲ್ಲಿ ಮತ ಬಹಿಷ್ಕಾರ ಹಾಕಿದರೂ ಮತ್ತು ಪ್ರತಿಭಟನೆ ನಡೆ­ಸುತ್ತೇವೆ ಎಂಬ ಎಚ್ಚರಿಕೆ ನೀಡಿದರೂ ಜಿಲ್ಲಾಡಳಿತದ ಅಧಿಕಾರಿಗಳಾಗಲಿ ಮತ್ತು ಜನಪ್ರತಿನಿಧಿಯಾಗಲಿ ಯಾರೊ­ಬ್ಬರೂ ನಮ್ಮನ್ನು ಭೇಟಿ ಮಾಡಿಲ್ಲ.

ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಜನ­ಪ್ರತಿನಿಧಿಗಳ ಬಗ್ಗೆ ಅಪನಂಬಿಕೆಗೆ ಈಡಾ­ಗಿರುವ ಅವರು, ಸಾಮಾಜಿಕ ವ್ಯವಸ್ಥೆಗೆ ಸವಾಲಾಗುತ್ತಿದ್ದಾರೆ. ವ್ಯವಸ್ಥೆ ಸರಿಯಾಗ­ಬೇಕು ಇಲ್ಲವೇ ನಮ್ಮ ಪಾಡಿಗೆ ಬದುಕಲು ಬಿಡಬೇಕು ಎಂಬ ದೋರಣೆ ಅವರಲ್ಲಿ ಮೊಳೆಯತೊಡಗಿದೆ.

‘ಮೊದಲನೇ ಸಲ ಚುನಾವಣೆೆ ಬಹಿಷ್ಕರಿಸಿದ್ದೇವೆ. ಬಹು ವರ್ಷಗಳಿಂದ ಕಾಡುತ್ತಿರುವ ಸಮಸ್ಯೆಗಳನ್ನು ಇಷ್ಟು ಕಾಲ ಸಹಿಸಿಕೊಂಡೇ ತುಂಬಾ ತಪ್ಪು ಮಾಡಿಬಿಟ್ಟೆವು. ಅದಕ್ಕೆ ಬಂದದ್ದೆಲ್ಲ ಎದುರಿಸಿಕೊಂಡೇ ಗ್ರಾಮಕ್ಕೆ ಕೆಲಸ ಮಾಡಿಸಿಕೊಳ್ಳೋಣವೆಂದೇ ಈ ಸಲ ಮತ ಚಲಾಯಿಸಲಿಲ್ಲ’ ಎಂದು ಅವರು ತಿಳಿಸಿದರು.

‘ಮನೆಗಳಲ್ಲಿ ಶೌಚಾಲಯ ಇಲ್ಲ. ಬೆಟ್ಟ, ಗುಡ್ಡ, ಕಳೆಗಿಡಗಳು ಇರುವ ಈ ಪ್ರದೇಶದಲ್ಲಿ ಬಹಿರ್ದೆಸೆಗೆ ಹೇಗೆ ಹೋಗಬೇಕು? ನಮ್ಮ ಸುರಕ್ಷತೆಯ ಜವಾಬ್ದಾರಿ ಯಾರು ಹೊರುತ್ತಾರೆ? ಪ್ರಾಣಿಗಳು ದಾಳಿ ಮಾಡಿದರೆ, ಏನು ಗತಿ? ಗುಡಿಸಲುಗಳಲ್ಲಿರುವ ನಮಗೆ ಶೌಚಾಲಯ ಕಟ್ಟಿಕೊಳ್ಳಲು ಸಾಧ್ಯವೇ’  ಎಂದು ಮಹಿಳೆಯರು ಹೇಳಿದರು.

ಅಂದಹಾಗೆ, ಈ ಎಲ್ಲ ಮಾತುಗಳಿಗೂ ಕಿವಿಯಾದವರು ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ. ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ ಅವರು, ‘ಗ್ರಾಮಸ್ಥರು ಮತ ಬಹಿಷ್ಕಾರ ಮಾಡಿದ ವಿಷಯ ತಿಳಿದು ಇಲ್ಲಿ ಬಂದಿದ್ದೇನೆ. ಗ್ರಾಮಸ್ಥರು ಹಲ­ವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಹೋರಾಟದ ಮೂಲಕವೇ ಸೌಕರ್ಯ ಪಡೆದುಕೊಳ್ಳಬೇಕಿದೆ’ ಎಂದರು. ಸಿಪಿಎಂ ಮುಖಂಡರಾದ ಬಿ.ಎನ್‌.­ಮುನಿಕೃಷ್ಣಪ್ಪ, ಸಿದ್ದಗಂಗಪ್ಪ, ರವಿಚಂದ್ರ­ರೆಡ್ಡಿ, ಅಶ್ವತ್ಥಪ್ಪ ಮತ್ತಿತರರು ಉಪ­ಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT