ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯವಹಾರ ಪ್ರಿಯೆಯ ಅಭಿರುಚಿ ವೈವಿಧ್ಯ

Last Updated 7 ಜುಲೈ 2015, 19:51 IST
ಅಕ್ಷರ ಗಾತ್ರ

ತಾಯಿ ಹೇಳಿಕೊಟ್ಟ ನೃತ್ಯ ಪ್ರೀತಿ ಉಳಿಸಿಕೊಂಡು, ಹಿರಿಯರು  ನೆಟ್ಟು ಬೆಳೆಸಿದ ಗಿಡಮರಗಳನ್ನು ಪೋಷಿಸುತ್ತಾ, ಯೋಗ, ಶಾಸ್ತ್ರಗಳ ಬಗ್ಗೆ ಅಧ್ಯಯನ ಕೈಗೊಂಡು, ಹಣಕಾಸು ವ್ಯವಹಾರ ಕ್ಷೇತ್ರದಲ್ಲೂ  ಹೆಸರು ಮಾಡಿದವರು ಮಿಮಿ ಪಾರ್ಥಸಾರಥಿ.ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ  ಮಿಮಿ ಪಾರ್ಥಸಾರಥಿ ಬಹುಮುಖ ಪ್ರತಿಭೆಯನ್ನು ಬೆಳೆಸಿಕೊಂಡವರು. ಎಂಟನೇ ವಯಸ್ಸಿಗೆ ಅಮ್ಮನ ಆಸೆಗೆ ಕಟ್ಟುಬಿದ್ದು ಭರತನಾಟ್ಯ, ಕೂಚಿಪುಡಿ ಕಲಿತು ದೇಶ ವಿದೇಶಗಳಲ್ಲಿ ಸಾಕಷ್ಟು ನೃತ್ಯ ಕಾರ್ಯಕ್ರಮ ನೀಡಿದ್ದಾರೆ.

ವ್ಯವಹಾರ ಛಾತಿ
ಸ್ವಿಟ್ಜರ್ಲೆಂಡ್‌ನ ವೆಬ್‌ಸ್ಟರ್‌ ವಿಶ್ವವಿದ್ಯಾಲಯದಲ್ಲಿ ಹಣಕಾಸು ಹಾಗೂ ಮಾರುಕಟ್ಟೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು 2005 ರಲ್ಲಿ ‘ಸಿನ್ಹಾಸಿ ಕನ್‌ಸಲ್ಟೆಂಟ್ಸ್‌’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಸುಮಾರು 16 ವರ್ಷಗಳಿಂದ ಹಣಕಾಸು ವ್ಯವಹಾರ ಕ್ಷೇತ್ರದಲ್ಲಿ ಅನುಭವ ಇದ್ದು, ಕಿರಣ್‌ ಮಜುಂದಾರ್‌, ನಟಿ ವಹೀದಾ ರೆಹಮಾನ್‌, ಬ್ರಿಟಾನಿಯಾ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಸುನಿಲ್‌ ನಾಗ್‌ ಮುಂತಾದ ಪ್ರತಿಷ್ಠಿತರಿಗೆ ಹಣಕಾಸು ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.

‘ಹಣಕಾಸು ವ್ಯವಹಾರ ತುಂಬಾ ಸಂಕೀರ್ಣವಾದ ವಿಷಯ. ಅದನ್ನು ನಿರ್ವಹಿಸಲು ಬುದ್ಧಿವಂತಿಕೆ ಹಾಗೂ ಜಾಣತನ ಬೇಕು. ನಂಬಿಕೆ, ವಿಶ್ವಾಸವೇ ಮುಖ್ಯ ಬಂಡವಾಳವಾದ ಈ ಕ್ಷೇತ್ರದಲ್ಲಿ ಶ್ರೀಮಂತರು, ವಿದ್ಯಾವಂತರೇ ನನ್ನ ಜೊತೆ ಕೈಜೋಡಿಸಿದ್ದಾರೆ. ಸುಮಾರು 300 ಕೋಟಿಯಷ್ಟು ಹಣವನ್ನು ನಿರ್ವಹಿಸುವ ಅವಕಾಶ ದಕ್ಕಿದೆ ಎಂದರೆ ಖುಷಿ ಎನಿಸುತ್ತದೆ’ ಎನ್ನುತ್ತಾರೆ ಮಿಮಿ.

ನೃತ್ಯಗಾರ್ತಿ ಮಿಮಿ
ನಾನಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಇವರು ಏನೇ ಮಾಡಿದರೂ ಮನಸ್ಸಿಟ್ಟು, ಖುಷಿಯಿಂದ ಮಾಡಬೇಕು ಎಂಬ ತತ್ವ ನಂಬಿದವರು. ‘ಎಲ್ಲರೂ ಚಿಕ್ಕಂದಿನಿಂದ ಯಾವುದಾದರೊಂದು ಕಲೆ ಕಲಿಯಲೇಬೇಕು’ ಎಂದು ಸಲಹೆ ನೀಡುವ ಅವರು, ತಮ್ಮ ಕಲಾ ಸಾಧನೆಗೆ ಅಮ್ಮನೇ ಬೆನ್ನೆಲುಬು ಎನ್ನುತ್ತಾರೆ.ಸಮರ್ಪಣಾ ಭಾವ ಹಾಗೂ ಗುರುವಿಗೆ ನೀಡುವ ಗೌರವದಿಂದಲೇ ಕಲೆ ಒಲಿಯುತ್ತದೆ ಎನ್ನುವ ಮಿಮಿ ಅವರು ಮೀನಾಕ್ಷಿ ಸುಬ್ರಹ್ಮಣ್ಯ, ಕೆ.ಜೆ.ಸರಸಾ, ಪದ್ಮಿನಿ ರಾವ್‌ ಹಾಗೂ ಭವಾನಿ ರಾಮನಾಥ್‌ ಬಳಿ ನೃತ್ಯಾಭ್ಯಾಸ ಮಾಡಿದ್ದಾರೆ. ಏನೇ ಕಲಿತರೂ  ಪರಿಪೂರ್ಣತೆ ಬೆಳೆಸಿಕೊಳ್ಳಬೇಕು ಎನ್ನುವ ಮಿಮಿ ಇಂದಿಗೂ ನೃತ್ಯ ಶಿಷ್ಯೆ ಎನ್ನುವುದು ವಿಶೇಷ.  ಭಾರತೀಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸುವ ಮನಸ್ಥಿತಿ ಇರುವ ಇವರು ಕೃಷ್ಣ ವೆಲ್‌ ಸೆಂಟರ್‌ ಪ್ರಾರಂಭಿಸಿ ನೃತ್ಯ ತರಬೇತಿ ಹಾಗೂ  ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.

ಪ್ರಾಣಿ ಪಕ್ಷಿ, ಗಿಡಮರಗಳ ಬಗ್ಗೆ ವಿಶೇಷ ಆಸಕ್ತಿ ಇರುವ ಮಿಮಿ ಕೊಡಗಿನಲ್ಲಿ 12 ಎಕರೆ ಪ್ರದೇಶದಲ್ಲಿ ಕಾಫಿ ತೋಟ ಬೆಳೆಸಿದ್ದಾರೆ. ಸದ್ಯ ಮಲ್ಲೇಶ್ವರದಲ್ಲಿ ತಾವಿರುವ ಮನೆಯ ಆವರಣದಲ್ಲಿರುವ ಬೋಧಿ ವೃಕ್ಷ ಸೇರಿದಂತೆ ಮಾವು, ಚಿಕ್ಕು ಮುಂತಾದ ಗಿಡಗಳನ್ನು ಸಲಹುತ್ತಿದ್ದಾರೆ. ಪ್ರಾಣಿಗಳ ಬಗ್ಗೆ ವಿಶೇಷ ಪ್ರೀತಿ ಬೆಳೆಸಿಕೊಂಡಿರುವ ಇವರು ಮೈಸೂರು ಪ್ರಾಣಿಸಂಗ್ರಹಾಲಯದಲ್ಲಿರುವ ಕೆಲವು ಆನೆಗಳನ್ನು ದತ್ತು ಪಡೆದಿದ್ದಾರೆ.ಕುಟುಂಬ, ನೆಚ್ಚಿಕೊಂಡ ಹಣಕಾಸು ವ್ಯವಹಾರ, ಕಲಾ ಪ್ರೀತಿಯ ಜೊತೆಜೊತೆಗೆ ಯೋಗದ ಬಗ್ಗೆಯೂ ಆಸಕ್ತಿ ಬೆಳೆಸಿಕೊಂಡಿರುವ ಮಿಮಿ, ಅಕ್ಷರ ಪವರ್‌ ಯೋಗ ಅಕಾಡೆಮಿಯಲ್ಲಿ ಯೋಗ ಶಿಕ್ಷಕಿ. ಅವರು ನಿರ್ಮಿಸಿದ ಕೃಷ್ಣ ವೆಲ್‌ ಸೆಂಟರ್‌ನಲ್ಲಿ ಅಕ್ಷರ ಪವರ್‌ ಯೋಗ ಅಕಾಡೆಮಿಯಿಂದ ಯೋಗ ತರಗತಿಗಳೂ ನಡೆಯುತ್ತವೆ.ಭಕ್ತಿ, ಆಧ್ಯಾತ್ಮದ ಬಗ್ಗೆ ವಿಶೇಷ ಒಲವಿರುವ ಮಿಮಿ ಮನಸ್ಸಿಗೆ ನೆಮ್ಮದಿ ನೀಡುವ ಭಗವದ್ಗೀತಾಭ್ಯಾಸದಲ್ಲಿ ಇತ್ತೀಚೆಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ದಯಾನಂದ ಸರಸ್ವತಿ ಪರಂಪರೆಯ ಸ್ವಾಮಿನಿ ಭಗವದ್ಗೀತೆ ಪಾಠ ಹೇಳುತ್ತಾರೆ. ಇತ್ತೀಚೆಗೆ ಭಾಗವತವನ್ನೂ ಓದಲು ಪ್ರಾರಂಭಿಸಿದ್ದಾರೆ.ಆಧುನಿಕ ವೇಗದ ಬದುಕಿನಲ್ಲಿ  ಸಮಯ ಪಾಲನೆಯಿಂದ ಎಲ್ಲ ಕೆಲಸಗಳನ್ನು ಪರಿಪೂರ್ಣವಾಗಿ ನಿಭಾಯಿಸಬಹುದು. ಅಲ್ಲದೆ ಯಶಸ್ಸಿಗೆ ಇದೂ ಒಂದು ಸುಲಭ ದಾರಿ ಎನ್ನುತ್ತಾರೆ ಮಿಮಿ. ಪುರುಷರಿಗಿಂತ ಸಾಧಿಸುವ ಛಾತಿ ಮಹಿಳೆಯರಿಗೇ ಜಾಸ್ತಿ ಎನ್ನುವ ಅವರು, ‘ಆಗಿದ್ದನ್ನು ನೆನೆದು ಕೊರಗುತ್ತಾ, ಬದುಕು ಇಷ್ಟೇ ಎಂದು ಮರುಗುವ ಮಹಿಳೆಯರೇ ನಮ್ಮ ಮಧ್ಯೆ ಜಾಸ್ತಿ. ಆದರೆ ಒಂದೇ ಸಮಯದಲ್ಲಿ ನಾನಾ ಕೆಲಸಗಳನ್ನು ನಿಭಾಯಿಸಬಲ್ಲ ತಾಕತ್ತು, ಛಾತಿ ಇರುವುದು ಹೆಂಗಳೆಯರಿಗೆ. ಗುರಿ ಬಗ್ಗೆ ಸ್ಪಷ್ಟತೆ, ನಿಭಾಯಿಸುವ ಕಲೆ ದಕ್ಕಿಸಿಕೊಳ್ಳಿ’ ಎಂದು ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT