ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರನ ಹುಂಡಿ

ಕ್ಯಾಂಪಸ್ ಕಲರವ
Last Updated 28 ಜುಲೈ 2014, 19:30 IST
ಅಕ್ಷರ ಗಾತ್ರ

ಮೊದಮೊದಲು ಅವನದ್ದು ಹುಚ್ಚತನ ಎಂದು ಗೇಲಿ ಮಾಡುತ್ತಿದ್ದವರೇ ಹೆಚ್ಚು. ತರಗತಿಯ ಕೊನೆ ಬೆಂಚಿಗೊಂದು ಹುಂಡಿ ತಂದು, ಅದಕ್ಕೊಂದು ಸರಪಳಿ ಹಾಕಿ ಬೆಂಚಿನ ಕಾಲಿಗೆ ಕಟ್ಟಿ ಇಟ್ಟಿದ್ದ ಅವನು ವಿಚಿತ್ರವಾಗಿ ನಕ್ಕಿದ್ದ. ಕಸ ಗುಡಿಸುವವರು ಅದನ್ನು ಕಂಡು, ಅಲ್ಲಾಡಿಸಿ ಅದರಲ್ಲಿ ಕವಡೆ ಕಾಸೂ ಇಲ್ಲವೆಂದು ಖಾತರಿಪಡಿಸಿಕೊಂಡು ಸುಮ್ಮನಾಗಿದ್ದರು.

ತಿಂಗಳು ಕಳೆದ ಮೇಲೆ ಆ ಹುಂಡಿಯಲ್ಲಿ ಕಾಸಿನ ಸದ್ದು ಕೇಳುತ್ತಿತ್ತು. ಕಸ ಗುಡಿಸುವವರಿಗೆ ಅದನ್ನು ಸರಿಸಿ, ತಮ್ಮ ಕಾಯಕ ಮಾಡುವುದು ಅಭ್ಯಾಸವಾಗಿತ್ತು. ಆ ಹುಂಡಿ ತರಗತಿಯ ಭಾಗವಾಗಿತ್ತು. ಹುಂಡಿಯನ್ನು ತಂದಿಟ್ಟ ಶಂಕರ ಆದಾಗಲೆಲ್ಲಾ ಅದಕ್ಕೆ ತಾನೂ ಹಣ ಹಾಕಿ, ತರಗತಿಯ ಸಹಪಾಠಿಗಳಿಗೂ ತನ್ನನ್ನು ಅನುಕರಿಸುವಂತೆ ಪುಸಲಾಯಿಸುತ್ತಿದ್ದ.

ಉಳಿದ ತರಗತಿಗಳ ವಿದ್ಯಾರ್ಥಿಗಳಿಗೂ ಹುಂಡಿ ಒಂದು ಅಚ್ಚರಿ ಎನ್ನಿಸತೊಡಗಿತು. ಹಣ ಜಮೆಯಾಗುತ್ತಾ ಬಂದಂತೆ ಅದನ್ನು ಯಾವುದಕ್ಕೆ ಉಪಯೋಗಿಸುವುದು ಎಂಬ ಚರ್ಚೆ ಗರಿಗೆದರಿತು. ಸಿನಿಮಾ, ಪಾರ್ಟಿ, ಒಂದು ದಿನದ ಪ್ರವಾಸ, ಗುರುವಂದನೆ, ವರ್ಷದ ಕೊನೆಯ ದಿನದ ಸಂಭ್ರಮಾಚರಣೆ ಹೀಗೆ ಅದನ್ನು ಬಳಸಬಹುದಾದ ದಾರಿಗಳನ್ನು ಹಲವರು ಸೂಚಿಸಿದರು. ಶಂಕರ ಮಾತ್ರ ಯಾವ ಸಲಹೆಯನ್ನೂ ಕೊಡಲಿಲ್ಲ. ‘ಕಾಲ ಬಂದಾಗ ಯೋಚಿಸಿದರೆ ಆಯಿತು’ ಎಂದು ಸುಮ್ಮನಾದ.

ವರ್ಷವೊಂದು ಕಳೆಯಿತು. ಪರೀಕ್ಷೆ ಬರೆದ ಮೇಲೆ ರಜಾ ಹೋಗುವ ಮೊದಲಾದರೂ ಹುಂಡಿ ದುಡ್ಡನ್ನು ಹೇಗಾದರೂ ಅನುಭವಿಸಬಹುದೇ ಎಂದು ಕೆಲವರು ಲೆಕ್ಕ ಹಾಕಿದರು. ಆದರೆ, ಶಂಕರ ಅದನ್ನು ಒಡೆಯಲು ಬಿಡಲಿಲ್ಲ. ರಜಾ ಕಳೆದು, ಎರಡನೇ ವರ್ಷಕ್ಕೆ ಅಡ್ಮಿಷನ್‌ ಆಗುವ ಸಮಯ. ಹುಂಡಿಯನ್ನು ಎಲ್ಲರ ಸಮ್ಮುಖದಲ್ಲಿ ಶಂಕರ ತೆಗೆದ. ಅದರಲ್ಲಿದ್ದ ಹಣವನ್ನು ಇಬ್ಬರು ಸಹಪಾಠಿಗಳಿಗೆ ಹಂಚುವುದಾಗಿ ಪ್ರಕಟಿಸಿದ. ಯಾರೊಬ್ಬರೂ ಇಲ್ಲ ಎನ್ನಲಿಲ್ಲ.

ಆ ಇಬ್ಬರಿಗೂ ಹಣದ ಅವಶ್ಯಕತೆ ಎಷ್ಟಿತ್ತು ಎನ್ನುವುದನ್ನು ಅರಿತಿದ್ದ ಶಂಕರ ವರ್ಷದುದ್ದಕ್ಕೂ ಮುಂದಿನ ವರ್ಷದ ಅವರ ಫೀಸು ತುಂಬಲು ಹಣ ಹೊಂದಿಸಲು ಹುಂಡಿಯ ದಾರಿ ಕಂಡುಕೊಂಡಿದ್ದ. ಮುಂದೆ ಶಂಕರ ಒಂದು ಪಿಗ್ಮಿ ಕಂಪೆನಿ ನಡೆಸುವ ಯೋಚನೆ ಮಾಡಿದ್ದು ಅದರ ವಿಸ್ತೃತ ರೂಪವಷ್ಟೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT