ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿ ರೂಪೇಣ...

Last Updated 13 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ನೀರುಂಡ ನೆಲದ ಭತ್ತದ ಪೈರು ತೊಡೆಯೆತ್ತರ ಬೆಳೆದಿದೆ. ನೀರಿಲ್ಲದೂರುಗಳಲ್ಲಿ ಬೆಳೆಗಳ ಸಿರಿ ಅಪರೂಪವಾಗಿದೆ. ಅಬ್ಬರಿಸಿದ ಮಳೆಗೆ ನೆಲ ತತ್ತರಿಸಿ ಬೆಳೆಗಳು ಕೈಬಿಟ್ಟಿವೆ. ಹೇಗಿದ್ದರೂ ನಿಲ್ಲದ ಅಮಾವಾಸ್ಯೆ. ಅಶ್ವಯುಜ ಮಾಸ (ಸೆಪ್ಟೆಂಬರ್‌–ಅಕ್ಟೋಬರ್‌ ತಿಂಗಳ) ಶುಕ್ಲ ಪಕ್ಷದಲ್ಲಿ ಬಂಗಾಳದಲ್ಲಿ ದುರ್ಗಾ ಪೂಜಾ ವಿಧಿ ನಡೆಯುತ್ತದೆ. ನೆರೆಯ ತಮಿಳುನಾಡಿನಲ್ಲಿ ಲಕ್ಷ್ಮಿ, ಗೌರಿ, ಸರಸ್ವತಿ ಪೂಜೆಗೆ ತಲಾ ಮೂರು ದಿನ ಮೀಸಲಂತೆ.

ನಮ್ಮ ಇತರ ಹಬ್ಬಗಳಂತೆ ನವರಾತ್ರಿಯೂ ದುಷ್ಟ ಸಂಹಾರ, ಶಿಷ್ಟ ರಕ್ಷಣೆಯನ್ನು ಮೆರೆಸುತ್ತದೆ. ಗೌರಿ, ಲಕ್ಷ್ಮಿ, ಸರಸ್ವತಿ, ದುರ್ಗೆ... ಎಲ್ಲವೂ ಒಂದೊಂದು ವಿಶಿಷ್ಟ ಗುಣಗಳೇ ಮೈವೆತ್ತ ಸ್ತ್ರೀರೂಪಗಳು. ನವರಾತ್ರಿ ಸಂದರ್ಭದಲ್ಲಿ ನಿಜಕ್ಕೂ ಆರಾಧಿಸಬೇಕಿರುವುದು ಈ ಗುಣಗಳನ್ನು ಎಂಬ ಸಂದೇಶವೇ ಅಡಕವಾಗಿರುವಂತಿದೆ.

ನಮ್ಮ ನಡುವೆಯೂ ಅದೆಷ್ಟು ಸರಸ್ವತಿಯರು ತಮ್ಮ ವಿದ್ಯೆಯ ಸದುಪಯೋಗದಲ್ಲಿ ತೊಡಗಿರುವವರು! ಆರ್ಥಿಕ ಬೆಂಬಲವಾಗಿ ನಿಂತು ಮನೆಯ ಗೃಹಲಕ್ಷ್ಮಿಯರಾಗಿರುವವರು, ಉದ್ಯೋಗಸ್ಥೆಯಲ್ಲದವರೂ ಗೌರಿ ರೂಪದಲ್ಲಿ ಕಂಗೊಳಿಸುವವರು. ಆದರೆ ಈ ಎಲ್ಲ ರೂಪಧಾರಣೆಗಳ ನಡುವೆ ತಮ್ಮತನದ ಛಾಪು ಮೂಡಿಸುವ ಜಾಣೆಯರೂ ಮರೆಯುವುದು ದುರ್ಗೆಯಂತೆ ಸಶಕ್ತವಾಗಿ ನಿಲ್ಲುವುದನ್ನು!

ಅಲ್ಪಸ್ವಲ್ಪ ತಮ್ಮ ಸೌಂದರ್ಯದತ್ತ ಗಮನಹರಿಸಲು ಆಗಿರುತ್ತದೆ. ತಲೆಯಲ್ಲಿ ಬಿಳಿಕೂದಲು ಕಂಡರೆ ಕಲರ್‌ ಮಾಡತೊಡಗುತ್ತಾರೆ. ಸಭೆ ಸಮಾರಂಭಗಳಿದ್ದರೆ ಅದಕ್ಕೂ ಮೊದಲೊಮ್ಮೆ ಪಾರ್ಲರ್‌ ಭೇಟಿಗೂ ಸಮಯ ಹೊಂದಿಸಿಕೊಳ್ಳುತ್ತಾರೆ. ಉಡುಗೆ ತೊಡುಗೆಗಳಿಗೂ ಸಾಕಷ್ಟು ಗಮನ ನೀಡುವವರು. ಆದರೆ ಆರೋಗ್ಯವಿದ್ದರೇ ಇವುಗಳಿಗೆಲ್ಲ ಅರ್ಥ ಎನ್ನುವುದನ್ನು ನಿರ್ಲಕ್ಷಿಸುತ್ತಾರೆ.

ಜಯಶ್ರೀ (55), ಬೆಳಗಿನಿಂದ ಪತಿ, ಮೂವರು ಬೆಳೆದ ಗಂಡುಮಕ್ಕಳ ಬೇಕು ಬೇಡ ಗಮನಿಸುತ್ತ ಅವರ ಹೊಟ್ಟೆ ನೆತ್ತಿ ನೋಡುತ್ತ ನಂತರ ಸಮಯ ಸರಿದಂತೆ ಸ್ನಾನ, ಪೂಜೆ, ತಿಂಡಿ ಮುಗಿಸುವಷ್ಟರಲ್ಲಿ ಸುಸ್ತಾಗುತ್ತಾರೆ. ಸ್ವಲ್ಪ ವಿರಾಮ, ನಂತರ ಮಧ್ಯಾಹ್ನದ ಅಡುಗೆ, ಸಂಜೆಯ ಚಹ, ರಾತ್ರಿಯ ಊಟಗಳ ಮಧ್ಯೆ ವಿರಮಿಸುವುದು ಟಿ.ವಿ ಎದುರೊ, ಫೋನ್‌ ಬಂದಾಗಲೊ ಕೂತಾಗ. ತುಸು ಬೆನ್ನು ನೋವೆನಿಸಿದರೆ ಅಲ್ಲೇ ಹಾಲ್‌ನಲ್ಲಿ ದಿವಾನ್‌ ಮೇಲೆ ಒಂದಷ್ಟು ನಿಮಿಷ ಅಡ್ಡಾಗಿಬಿಟ್ಟರೆ ಆಯಿತು. ವಾಕಿಂಗ್‌ಗೆ, ವ್ಯಾಯಾಮಕ್ಕೆಲ್ಲ ಸಮಯವೆಲ್ಲಿ ಎಂದು ದೃಢವಾಗಿ ನಂಬಿಕೊಂಡು ಬಂದವರು. ಈಗ ಮೈಭಾರ ಹೆಚ್ಚಿದೆ. ಹಾಗಾಗೇ ಅಂಗಾಲು ಎಳೆದಂತಾಗಿ ಉರಿಯುತ್ತದೆ, ಕಾಲು ಬಾವು ಬರುತ್ತದೆ. ಹೆಚ್ಚು ಹೊತ್ತು ನಿಲ್ಲುವಂತಿಲ್ಲ, ಕೂರುವಂತಿಲ್ಲ, ನಡೆಯುವ ಹಾಗೂ ಇಲ್ಲ. ಹಾಗೆಂದು ವೈದ್ಯರು ತಾಕೀತು ಮಾಡಿದ್ದಾರೆ.

ಮದುವೆಯಾದ ನಂತರ ಅದರಲ್ಲೂ ಮಗುವಾದ ಬಳಿಕ ಹಾರ್ಮೋನ್‌ ಬದಲಾವಣೆಯಿಂದ ದೇಹದ ಆಕಾರ ಬದಲಾಗುವುದು ಕಂಡು ಬರುತ್ತದೆ. ಆದರೆ ಈ ಎಲ್ಲ ಸಹಜ ಹಂತಗಳನ್ನು ದಾಟಿಯೂ ಮಹಿಳೆಯರು ಸದೃಢ ದೇಹ, ಸಮತೋಲನದ ಮಾನಸಿಕ ಸ್ಥಿತಿ ಕಾಯ್ದುಕೊಳ್ಳಲು ಸಾಧ್ಯವಿದೆ. ಆದರೆ ದೇಹದಲ್ಲಿ ತಕ್ಕಮಟ್ಟಿಗೆ ಕೊಬ್ಬು ಇರುವುದೂ ಅತ್ಯಗತ್ಯ. ಡಾ. ಕಿರಣ ಕುಲಕರ್ಣಿ, ಹೇಳುವಂತೆ ಪುರುಷರಿಗೆ ಶೇ 15ರಿಂದ ಶೇ 17ರಷ್ಟು ಕೊಬ್ಬು ಅಗತ್ಯ ವಿದ್ದರೆ ಮಹಿಳೆಯರ ದೇಹದಲ್ಲಿ ಶೇ 17ರಿಂದ ಶೇ 21ರಷ್ಟು ಇರಬೇಕು. ಇದು ದೈನಂದಿನ ಚಟುವಟಿಕೆಗಳನ್ನು ನಿಭಾಯಿಸಲು.

ಈ ಕೊಬ್ಬಿನ ಅಂಶ ಕಡಿಮೆಯಾದರೆ ಅವರ ಮಾಸಿಕ ಚಕ್ರದಲ್ಲಿ ಏರುಪೇರಾಗುತ್ತದೆ. ಹಾರ್ಮೋನ್‌ ಪ್ರಮಾಣದಲ್ಲೂ ಏರಿಳಿತ ವಾಗಿ ದೇಹದಲ್ಲಿ ಕ್ಯಾಲ್ಸಿಯಂ ಹೀರಿ ಕೊಳ್ಳುವಿಕೆ ಕಡಿಮೆಯಾಗುತ್ತದೆ. ಕ್ಯಾಲ್ಸಿಯಂ, ಸ್ನಾಯುಗಳ ಅಕುಂಚನ ಮತ್ತು ವಿಕಸನದಲ್ಲಿ ಮಹತ್ವದ ಕಾರ್ಯ ವಹಿಸುತ್ತದೆ. ನರಗಳ ಕಾರ್ಯದಲ್ಲಿ ಸಹಾಯ ಮಾಡುತ್ತದೆ. ರಕ್ತ ಹೆಪ್ಪುಗಟ್ಟಲೂ ಕ್ಯಾಲ್ಸಿಯಂ ಬೇಕು. ಕ್ಯಾಲ್ಸಿಯಂ ಸೂಕ್ತ ಪ್ರಮಾಣದಲ್ಲಿ ಇದ್ದಾಗ ಆಸ್ಟಿಯೋಪೋ ರೊಸಿಸ್‌ ಸಾಧ್ಯತೆ ಕಡಿಮೆ. ಸಾಮಾನ್ಯವಾಗಿ ಈ ಕ್ಯಾಲ್ಸಿಯಂ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುವುದು ಪ್ಯಾರಾ ಥೈರಾಯ್ಡ್‌ ಗ್ರಂಥಿ.

ನಮ್ಮ ದೇಹಕ್ಕೆ ದಿನವೊಂದಕ್ಕೆ 800ರಿಂದ 1200ಮಿ.ಗ್ರಾಂ ಕ್ಯಾಲ್ಸಿಯಂ ಅಗತ್ಯ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ. ಕ್ಯಾಲ್ಸಿಯಂ ಸಮೃದ್ಧವಾಗಿರುವ ಹಾಲು, ತರಕಾರಿ, ಸೀ ಫುಡ್‌ ಸೇವನೆಯಿಂದ ತಕ್ಕಮಟ್ಟಿಗೆ ಕ್ಯಾಲ್ಸಿಯಂ ಪಡೆಯಬಹುದು. ಎಲ್ಲರ ತಿಂಡಿ ಚಹ ಮುಗಿದ ಮೇಲೆ, ಮತ್ತಷ್ಟು ಮನೆಯ ಕೆಲಸ ಮುಗಿಸಿಯೇ ತಿಂಡಿ, ಊಟ ಮಾಡುವ ಅಭ್ಯಾಸವಿರುವ ಅಮ್ಮಂದಿರು ಹಸಿವಾದಾಗ ಚಹ, ಕಾಫಿ ಕುಡಿಯುವುದು ಹೆಚ್ಚು. ಕೆಫಿನ್‌ ಅಂಶವಿರುವ ಟೀ ಕಾಫಿ ದೇಹದಲ್ಲಿನ ಕ್ಯಾಲ್ಸಿಯಂನ ಜಾಗ ತುಂಬಿಬಿಡುತ್ತದೆ! 

ದೈಹಿಕ ಚಲನವಲನ ಸಾಮರ್ಥ್ಯ (ಮೋಟಾರ್ ಎಬಿಲಿಟಿ)ಗಳಿಸಿಕೊಳ್ಳಲು ಮಹಿಳೆಯರು ಸುಲಭವಾಗಿ ಅನುಸರಿಸಬಹುದಾದ ಹಲವು ವಿಧಾನಗಳಿವೆ ಎಂದು ವಿವರಿಸುತ್ತಾರೆ ಡಾ.ಕಿರಣ್‌.

ಶಕ್ತಿ: ಭಾರ ಎತ್ತುವ ವ್ಯಾಯಾಮಗಳು (ಸ್ಟ್ರೆಂತ್‌ ಟ್ರೇನಿಂಗ್‌) ಅಂದರೆ ಡಂಬೆಲ್ಸ್‌ ಮತ್ತು ಐಸೋಮೆಟ್ರಿಕ್‌ ವ್ಯಾಯಾಮ ಗಳನ್ನು ಮಾಡಬಹುದು. ತೋಳಿನ ಸ್ನಾಯುವನ್ನು ತುಸು ಹೊತ್ತು ಬಿಗಿಗೊಳಿಸಿ ಒಂದರಿಂದ ಐದು ಅಂಕಿಗಳವರೆಗೆ ಎಣಿಸಿ, ನಂತರ ನಿಧಾನವಾಗಿ ಸಡಿಲಗೊಳಿಸಿ. ಹೀಗೆ ನಮ್ಮ ದೇಹದ ಎಲ್ಲ ಸ್ನಾಯುಗಳನ್ನೂ ಬಿಗಿಗೊಳಿಸಿ, ಸಡಿಲಗೊಳಿಸಿ ಕೊಳ್ಳಬಹುದು. ಹೀಗೆ ಮಾಡುವುದರಿಂದ ಶೇ 20ರಿಂದ 25ರಷ್ಟು ಶಕ್ತಿ ಒದಗುತ್ತದೆ. ದೇಹವನ್ನು (ನಿಂತ ಭಂಗಿಯಲ್ಲಿ) ಮೇಲಿನಿಂದ ಕೆಳಗೆ ಒತ್ತಿದಂತೆ ಮಾಡುವ ವ್ಯಾಯಾಮಗಳು– ಓಟ, ಹಗ್ಗದಾಟ, ಮೆಟ್ಟಿಲು ಹತ್ತುವುದು, ನಡಿಗೆ ತುಂಬ ಸಹಾಯಕ. ಕೊಡ ತಲೆಯ ಮೇಲೆ ಹೊತ್ತು ತರುತ್ತಿದ್ದವರಿಗೆ ಇದು ಅನಾಯಾಸವಾಗಿ ಒದಗುತ್ತಿದ್ದ ವ್ಯಾಯಾಮ.

ಚೈತನ್ಯ(ಎಂಡೂರನ್ಸ್‌): ಚೈತನ್ಯ ಪಡೆದುಕೊಳ್ಳಲು ಏರೋ ಬಿಕ್ಸ್‌ ಉತ್ತಮ ವಿಧಾನ. ಆದರೆ ಇದು ಚಿಕ್ಕ ವಯಸ್ಸಿನವರಿಗೆ ಸೂಕ್ತ. ಕನಿಷ್ಠ 20 ನಿಮಿಷಗಳವರೆಗೆ ಕಡಿಮೆ ತೀವ್ರತೆಯ ವ್ಯಾಯಾಮ ಮಾಡುವುದು ಸಹಾಯಕ. ಕಡಿಮೆ ತೀವ್ರತೆ ಎಂದರೆ ವ್ಯಾಯಾಮ ಮಾಡುವಾಗ ನಮ್ಮ ಹೃದಯಬಡಿತ ಗರಿಷ್ಠ ಹೃದಯಬಡಿತದ ಗತಿಯ ಶೇ 60ರಿಂದ ಶೆ 75ರಷ್ಟು ಮಾತ್ರ ಇರಬೇಕಾಗುತ್ತದೆ. ಇದರಿಂದಾಗಿ ಕಾರ್ಡಿಯೋ ರೆಸ್ಪಿರೇಟರಿ ಚೈತನ್ಯ ಸುಧಾರಣೆಯಾಗುತ್ತದೆ. (ಗರಿಷ್ಠ ಹೃದಯಬಡಿತ ಲೆಕ್ಕ ಹಾಕುವುದು ಸುಲಭ. 220ರಲ್ಲಿ ನಮ್ಮ ವಯಸ್ಸನ್ನು ಕಳೆಯಿರಿ ಅಷ್ಟೆ; ಬಂದ ಉತ್ತರ ನಮ್ಮ ಗರಿಷ್ಠ ಹೃದಯ ಬಡಿತ ಅಂದರೆ ಎಂ.ಎಚ್‌.ಆರ್‌, ಪ್ರತಿ ನಿಮಿಷಕ್ಕೆ).

ಬಿರುಸು ನಡಿಗೆ(ಇದಂತೂ ಅತ್ಯುತ್ತಮ ವ್ಯಾಯಾಮ ವಿಧಾನ); ನಿಧಾನವಾಗಿ ಜಾಗಿಂಗ್‌ ಮಾಡುವುದು; ಸೈಕಲ್‌ ಸವಾರಿ; ಈಜು, ಚಾರಣ (10ರಿಂದ 12 ಕಿ.ಮೀ ಟ್ರೆಕಿಂಗ್‌), ಹಗ್ಗದಾಟ, ಪೈಲೇಟ್ಸ್‌ ವ್ಯಾಯಾಮ ವಿಧಾನಗಳಿಂದ ಈ ರೀತಿಯ ಚೈತನ್ಯ ಸುಧಾರಿಸಿಕೊಳ್ಳುವುದು ಸಾಧ್ಯ.

ಫ್ಲೆಕ್ಸಿಬಿಲಿಟಿ(ದೇಹ ಮಣಿಯುವ ಸಾಮರ್ಥ್ಯ): ದೇಹವನ್ನು ಹೇಗೆಂದರೆ ಹಾಗೆ ಮಣಿಸುವ ಸಾಮರ್ಥ್ಯ ಬೇಕೆಂದರೆ ದೇಹವನ್ನು ಹಿಗ್ಗಿಸುವ (ಸ್ಟ್ರೆಚಿಂಗ್‌) ವ್ಯಾಯಾಮಗಳನ್ನು ಮಾಡಬೇಕಾಗುತ್ತದೆ. ಪ್ರತಿ ಬಾರಿ ವ್ಯಾಯಾಮ ಮಾಡುವ ಮುನ್ನ ಮಾಡುವ ವಾರ್ಮ್ ಅಪ್‌ ವ್ಯಾಯಾಮಗಳು ಮತ್ತು ವ್ಯಾಯಾಮದ ನಂತರ ಮಾಡುವ ವಾರ್ಮ್‌ ಡೌನ್‌ ವ್ಯಾಯಾಮಗಳಲ್ಲಿ ಈ ರೀತಿಯ ಸ್ಟ್ರೆಚಿಂಗ್‌ ವ್ಯಾಯಾಮಗಳಿರಲೇಬೇಕು.

ಈ ರೀತಿಯ ಸಾಮರ್ಥ್ಯ ಬೆಳೆಸಿಕೊಳ್ಳದೇ ಇದ್ದಾಗ, ಗೃಹಿಣಿಯರು ಮೇಲಿನಿಂದ ಏನಾದರೂ ಅಡುಗೆಮನೆಯ ಡಬ್ಬಗಳನ್ನು ಇಳಿಸಲು ಕೈ ಚಾಚಿದಾಗ ಇಲ್ಲವೇ ಬಗ್ಗಿದಾಗ ಸ್ನಾಯು ಹಿಗ್ಗಿ, ಅಪಾಯಗಳಾಗುವ ಸಾಧ್ಯತೆ ಇರುತ್ತದೆ. (ಎಲುಬಿನಿಂದ ಎಲುಬಿಗೆ ಜೋಡಣೆಯಾಗುವ ಲಿಗಾಮೆಂಟ್‌ ಮತ್ತು ಸ್ನಾಯುವಿನಿಂದ ಎಲುಬಿಗೆ ಜೋಡಿಸುವ ಟೆಂಡನ್‌ಗೆ ಅಪಾಯವೊದಗಬಹುದಾಗಿರುತ್ತದೆ.)

ವೇಗ: ಶಕ್ತಿ, ಚೈತನ್ಯ ಮತ್ತು ಸುಲಭ ಮಣಿತದ ವ್ಯಾಯಾಮಗಳನ್ನು ಮಾಡುತ್ತ ಹೋದಂತೆ ಸಹಜವಾಗೇ ನಮ್ಮ ದೇಹ ಚಟುವಟಿಕೆಗಳು ವೇಗ ಪಡೆದುಕೊಳ್ಳುತ್ತವೆ.

ಸಹಕಾರ: ವಯಸ್ಸಾದಂತೆ ಜೋಲಿ ಹೋಗುವುದು, ದೇಹದ ಸಮತೋಲನ ತಪ್ಪುವುದು ಇದೆ. ಬಹಳ ಮಟ್ಟಿಗೆ ಇದನ್ನು ತಪ್ಪಿಸಲು ಸಾಧ್ಯ. ನೇರವಾದ ಗೆರೆಗುಂಟ ನಡೆದು ಅಭ್ಯಾಸ ಮಾಡುವುದು, ಅದೇ ಗೆರೆಯಗುಂಟ ಹಿಮ್ಮುಖ ನಡಿಗೆ ಅಭ್ಯಾಸ ಮಾಡುವುದರಿಂದ ತಕ್ಕಮಟ್ಟಿಗೆ ಪರಿಹಾರ ಸಿಗುತ್ತದೆ.

ಸ್ನಾಯು–ಮೂಳೆ ಹಂದರದ ಆರೋಗ್ಯ ಸಮಸ್ಯೆಗಳಿದ್ದಲ್ಲಿ ಹಾಗೂ ಬೊಜ್ಜು ಇರುವವರಲ್ಲಿ; ಇನ್ನಾವುದಾದರೂ ಕಾಯಿಲೆ ಇದ್ದರೆ ಈ ರೀತಿಯ ದೈಹಿಕ ಸಂತುಲನ ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ. ವಯಸ್ಸಾದಂತೆ ಸಹಜವಾಗಿ ಸವಕಳಿ ಹೊಂದುವ ಕೀಲುಗಳಿಂದಾಗಿ ಸ್ನಾಯುಗಳು ಜೋತುಬೀಳುತ್ತವೆ. ಅದರ ಪರಿಣಾಮವಾಗಿ ನಿಲುವು, ಭಂಗಿಯಲ್ಲಿ ವ್ಯತ್ಯಾಸವಾಗುತ್ತದೆ.

ಸ್ನಾಯುಬಲ ಕಡಿಮೆ ಆದಂತೆ ಕೀಲುಗಳ ಮೇಲೆ ಒತ್ತಡ ಹೆಚ್ಚು ಬೀಳುತ್ತದೆ. ಆದರೆ 60 ವರ್ಷ ಮೇಲ್ಪಟ್ಟವರೂ ಸ್ನಾಯು ಬಲ ಸುಧಾರಿಸಿಕೊಳ್ಳಬಹುದು, ನಿಯಮಿತ ವ್ಯಾಯಾಮದ ಮೂಲಕ ಅವರ ಕೀಲುನೋವು ಕಡಿಮೆ ಆಗುತ್ತದೆ. ಕೆಲವರಲ್ಲಿ ಎಲುಬು ದುರ್ಬಲವಾಗಿ ಆಸ್ಟಿಯೊ ಪೋರೊಸಿಸ್‌ ಸಮಸ್ಯೆ ಬರುತ್ತದೆ.

ದೇಹ ದೇಗುಲದ ಸ್ವಚ್ಛತೆ, ಆರೋಗ್ಯ ಕಾಯ್ದುಕೊಂಡು ಮುಖದಲ್ಲಿ ಲಕ್ಷ್ಮೀ ಕಳೆ, ಸರಸ್ವತಿಯ ಕಾಂತಿ, ಗೌರಿಯ ಸೌಮ್ಯ ಚೆಲುವು, ದುರ್ಗೆಯ ಗಾಂಭೀರ್ಯದೊಂದಿಗೆ, ಪ್ರಮಾಣ ಬದ್ಧ ಅಂಗಸೌಷ್ಟವ ಪಡೆಯಲು ಸಾಧ್ಯವಿದೆ. ತಾವು ಬಹುವಾಗಿ ಪ್ರೀತಿಸುವ ತಮ್ಮ ಕುಟುಂಬದವರಿಗಾಗಿ ಇಷ್ಟಾದರೂ ಬೇಡವೆ?

ಜೀವನಶೈಲಿ ಬದಲಾಗಲಿ
ಇದ್ದಕ್ಕಿದ್ದಂತೆ ಅತಿಯಾದ ದೇಹತೂಕ, ಅಥವಾ ತೂಕದಲ್ಲಿ ಗಣನೀಯ ಇಳಿಕೆ ಕಂಡು ಬಂದರೆ, ಮಾಸಿಕ ಚಕ್ರದಲ್ಲಿ ಏರುಪೇರಾಗುತ್ತಿದ್ದರೆ, ಸರಿಯಾದ ವಯಸ್ಸಿಗೆ ಪ್ರೌಢಾವಸ್ಥೆಗೆ ಬರದೇ ಇದ್ದ ಸಂದರ್ಭದಲ್ಲಿ ರಕ್ತ ತಪಾಸಣೆ, ವೈದ್ಯರ ಸಲಹೆ ಮೆರೆಗೆ ಹಾರ್ಮೋನ್‌ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯಬಹುದು. ಸೂಕ್ತ ಆಹಾರಕ್ರಮ, ಜೀವನಶೈಲಿ ಬದಲಾವಣೆಗೆ ಸಲಹೆ ಪಡೆದು ಆರೋಗ್ಯ ಸುಧಾರಿಸಿಕೊಳ್ಳಬಹುದು.
-ಡಾ. ಹರೀಶ್‌ ಜೋಶಿ, ಎಂಡೋಕ್ರೈನಾಲಜಿಸ್ಟ್‌, ಹುಬ್ಬಳ್ಳಿ

ವ್ಯಾಯಾಮ ಬಿಡಬೇಡಿ...
ಮಾಸಿಕ ಚಕ್ರದ ಸಮಯದಲ್ಲೂ ವ್ಯಾಯಾಮ ಬಿಡಬಾರದು. ಅದೊಂದು ನೈಸರ್ಗಿಕ ಕ್ರಿಯೆ. ಗರ್ಭಾವಸ್ಥೆಯ ಎಲ್ಲ ತಿಂಗಳುಗಳಲ್ಲೂ ಸೂಕ್ತ ವ್ಯಾಯಾಮ ಮಾಡುವುದು ಒಳ್ಳೆಯದು. ಸಹಜ ಹೆರಿಗೆಯಾದ ಒಂದೇ ವಾರದ ನಂತರ ವ್ಯಾಯಾಮ ಆರಂಭಿಸಬಹುದು. ಸಿಸೇರಿಯನ್‌ ಆದರೆ 4ರಿಂದ 6 ವಾರಗಳ ನಂತರ ವ್ಯಾಯಾಮ ಶುರು ಮಾಡಬೇಕು. ಹೆರಿಗೆಯಾದ ತಕ್ಷಣ ಗರ್ಭಕೋಶದ ಗಾತ್ರ ಶೇ 40ರಿಂದ ಶೇ50ರಷ್ಟು ಸಹಜವಾಗೇ ಕುಗ್ಗುತ್ತದೆ ವ್ಯಾಯಾಮ ಮಾಡದೆಯೆ! ಇನ್ನುಳಿದ ಶೇ 40ರಿಂದ 50ರಷ್ಟು ಗಾತ್ರ ಹೆರಿಗೆಯ ನಂತರ 4ರಿಂದ 6 ವಾರಗಳೊಳಗೇ ಕಡಿಮೆಯಾಗುವುದು.

ಇದು ವ್ಯಾಯಾಮದಿಂದ ಸಾಧ್ಯ. ಬಾಣಂತಿಯಾದರೇನಂತೆ ಹೈ ಕ್ಯಾಲೊರಿ ಆಹಾರ ಅಗತ್ಯವಿಲ್ಲ, 400ರಿಂದ 600 ಕ್ಯಾಲೊರಿ ಪೌಷ್ಟಿಕ ಆಹಾರ ಸೇವನೆ ಮಗು ಮತ್ತು ತಾಯಿ ಇಬ್ಬರಿಗೂ ಸಾಕಾಗುತ್ತದೆ. ದೈನಂದಿನ ಚಟುವಟಿಕೆಗಳಿಗೆ ಬಹುಬೇಗನೇ ಮರಳಬಹುದು ಕೂಡ.  ಆದರೆ ವಯಸ್ಸು, ಆರೋಗ್ಯ ಸ್ಥಿತಿಯನ್ನು ಅವಲಂಬಿಸಿ ವೈದ್ಯರ ಸಲಹೆಯ ಮೇರೆಗೆ ಗುಳಿಗೆ ಔಷಧದ, ಪ್ರಿಸ್ಕ್ರಿಪ್ಷನ್‌ ಜತೆಗೆ, ಆಹಾರ ಕ್ರಮದ ಮತ್ತು ವ್ಯಾಯಾಮದ ಪ್ರಿಸ್ಕ್ರಿಪ್ಷನ್‌ ಬರೆಸಿಕೊಳ್ಳಿ.
–ಡಾ. ಕಿರಣ್‌ ಕುಲಕರ್ಣಿ, ಎಲುಬು, ಕೀಲುಗಳು ಮತ್ತು ಸ್ಪೋರ್ಟ್ಸ್‌ ಮೆಡಿಸಿನ್‌ ತಜ್ಞರು, ಆಲ್‌ ಇಂಡಿಯಾ ಫುಟ್‌ಬಾಲ್‌ ಫೆಡರೇಷನ್‌ನ ರಾಷ್ಟ್ರೀಯ ತಂಡದ ವೈದ್ಯರು


ಹಲ್ಲುಗಳ ಆರೋಗ್ಯ ಕಾಯ್ದುಕೊಳ್ಳಿ
ಹಲ್ಲುಗಳೂ ಮೂಳೆಗಳೇ. ಆದರೆ ಮೂಳೆಯ ಸಾಂದ್ರತೆ ಏನೇ ಇರಲಿ ಹಲ್ಲುಗಳ ಆರೋಗ್ಯ ಬಹುಮಟ್ಟಿಗೆ ಬೆಳವಣಿಗೆಯ ಹಂತದಲ್ಲೇ ನಿರ್ಧಾರವಾಗುವುದು. ಅಗತ್ಯ ಪೋಷಕಾಂಶಗಳು ಆಹಾರದ ಮೂಲಕ ದೇಹ ಸೇರುವುದರಿಂದ ಒಟ್ಟಾರೆ ಆರೋಗ್ಯಕ್ಕೆ ಹಲ್ಲುಗಳ ಆರೋಗ್ಯ ಕಾಯ್ದುಕೊಳ್ಳುವುದು ಬಹಳ ಮುಖ್ಯ.
–ಡಾ. ಪ್ರವೀಣ್‌ ಕೆರೂರ, ಕನ್ಸಲ್ಟಂಟ್‌,ಎಸ್ತೆಟಿಕ್ಸ್‌ ಅಂಡ್‌ ಓರಲ್‌ ಇಂಪ್ಲಾಂಟಾಲಜಿ,ಇಂಪ್ಲಾಕೇರ್‌ ಡೆಂಟಲ್‌ ಇಂಪ್ಲಾಂಟ್ಸ್‌ ಅಂಡ್‌ ಲೇಸರ್‌ ಡೆಂಟಲ್‌ ಕೇರ್‌, ಧಾರವಾಡ

ಜಿಮ್‌ಗೆ ಹೋಗಲು ಭಯಪಡಬೇಕಿಲ್ಲ
ಮಹಿಳೆಯರು ಜಿಮ್‌ಗೆ ಹೋಗಲು ಭಯಪಡಬೇಕಿಲ್ಲ. ವರ್ಕೌಟ್‌ ಮಾಡುವುದರಿಂದ ಅವರು ಪುರುಷರಂತೆ ಕಾಣುವುದಿಲ್ಲ. ಅವರಲ್ಲಿ ಟೆಸ್ಟೆಸ್ಟೊರೋನ್‌ ಹಾರ್ಮೋನ್‌ ಬಹಳ ಪ್ರಮಾಣದಲ್ಲೇನೂ ಉತ್ಪನ್ನವಾಗುವುದಿಲ್ಲ. ಲಘುವಾದ ಭಾರಗಳನ್ನು ಎತ್ತುವ ವ್ಯಾಯಾಮದಲ್ಲಿ ತೊಡಗುವುದರಿಂದ ಮೂಳೆಗಳ ಸಾಂದ್ರತೆ ಹೆಚ್ಚುತ್ತದೆ; ಮತ್ತು ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯೂ ಹೆಚ್ಚುತ್ತದೆ. ಕಾರ್ಡಿಯೋವ್ಯಾಸ್ಕ್ಯುಲರ್‌ ವ್ಯಾಯಾಮಗಳು ತೂಕ ಇಳಿಕೆಯಲ್ಲೂ ಬಹಳ ಸಹಾಯಕ.
–ಮುರಳಿ, ಸೈಬರ್‌ ಜಿಮ್‌ನ ಮಾಲಕ ಮತ್ತು ತರಬೇತುದಾರ, ಮಲ್ಲೇಶ್ವರ, ಬೆಂಗಳೂರು

ಹೊಸ ಉತ್ಸಾಹ, ಶಕ್ತಿ ತುಂಬಿದೆ
ಪತಿ ಹಾಗೂ (13 ಮತ್ತು 10 ವರ್ಷದ) ಇಬ್ಬರು ಮಕ್ಕಳ ಊಟೋಪಚಾರ, ಮಕ್ಕಳ ಓದಿನತ್ತ ಗಮನ ಹರಿಸುತ್ತ ದೈನಂದಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತೇನೆ. ಒಂದು ವರ್ಷದಿಂದ ಯೋಗ ಮತ್ತು ಪ್ರಾಣಾಯಾಮ ಮಾಡುತ್ತಿರುವುದು ನನ್ನಲ್ಲಿ ಹೊಸ ಉತ್ಸಾಹ, ಶಕ್ತಿ ತುಂಬಿದೆ. ದಿನಕ್ಕೆ ಎರಡು ಗಂಟೆ ನನ್ನ ಆರೋಗ್ಯಕ್ಕೆ ಮೀಸಲು. ದೇಹದ ಫ್ಲೆಕ್ಸಿಬಿಲಿಟಿ ಮತ್ತು ದೇಹ ಮತ್ತು ಮನಸ್ಸಿನ ಸಂತುಲನ ಸಾಧ್ಯವಾಗಿದೆ. ಸ್ನಾಯು ಬಲ ಹೆಚ್ಚಿ, ಚೈತನ್ಯವೂ ಸಾಕಷ್ಟು ಹೆಚ್ಚಿದೆ. ಉತ್ತಮ ಅಂಗಸೌಷ್ಟವ, ಮುಖದ ಕಾಂತಿ ನನ್ನದಾಗಿದೆ. ಒಂದು ರೀತಿಯಲ್ಲಿ ಆಂತರಿಕ ಪರಿವರ್ತನೆ ಗಮನಕ್ಕೆ ಬಂದಿದೆ.
– ಗಾಯತ್ರಿ ಶೇಖರ್‌, ಗೃಹಿಣಿ(38)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT