ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಕೋಟಿ ಜನರಿಗೆ ಶ್ರವಣ ಸಮಸ್ಯೆ

ಇಯರ್‌ಫೋನ್‌ಗಳ ಅಸುರಕ್ಷಿತ ಬಳಕೆ
Last Updated 4 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಜಿನೀವಾ (ಪಿಟಿಐ): ವಿಶ್ವದಲ್ಲಿ ಹದಿಹರೆ­ಯದ 100 ಕೋಟಿ ಮಂದಿ ಶ್ರವಣ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಬಹಿರಂಗಪಡಿಸಿದೆ.

ಸ್ಮಾರ್ಟ್‌ಫೋನ್‌ಗಳು ಮತ್ತು ವೈಯಕ್ತಿಕ ಶ್ರವಣ ಸಾಧನಗಳ ಅಸುರಕ್ಷಿತ ಬಳಕೆ, ಕ್ರೀಡಾ ಕಾರ್ಯಕ್ರಮ, ಬಾರ್‌­ಗಳು ಹಾಗೂ ರಾತ್ರಿ ಮನರಂಜನಾ ತಾಣಗಳಲ್ಲಿ ಅಪಾಯಕಾರಿ ಮಟ್ಟದ ಶಬ್ದಗಳಿಗೆ ಒಡ್ಡಿಕೊಳ್ಳುವುದು ಇದಕ್ಕೆ ಕಾರಣ ಎಂದು ಎಚ್ಚರಿಕೆ ನೀಡಿರುವ ಡಬ್ಲ್ಯೂಎಚ್ಒ, ವೈಯಕ್ತಿಕ ಶ್ರವಣ ಸಾಧನಗಳನ್ನು ದಿನಕ್ಕೆ ಒಂದು ಗಂಟೆಗಿಂತ ಹೆಚ್ಚು ಕಾಲ ಬಳಸಬಾರದು ಎಂದು ಸಲಹೆ ನೀಡಿದೆ.

ಮಧ್ಯಮ ಮತ್ತು ಅತ್ಯಧಿಕ ಆದಾಯದ ರಾಷ್ಟ್ರ­ಗಳಿಂದ ಕಲೆಹಾಕಿದ ಅಂಕಿಅಂಶಗಳ ಅಧ್ಯಯನದ ಪ್ರಕಾರ, 12ರಿಂದ 35ರೊಳಗಿನ ವಯೋ­ಮಾನದ ಶೇ 50 ಮಂದಿ ಅಸುರಕ್ಷಿತ ಮಟ್ಟದ ಶ್ರವಣ ಸಾಧನಗಳನ್ನು ಬಳಸು­ತ್ತಾರೆ. ಸುಮಾರು ಶೇ 40 ಮಂದಿ ಮನರಂಜನಾ ತಾಣಗಳಲ್ಲಿ ಅಪಾಯ­ಕಾರಿ ಮಟ್ಟದ ಶಬ್ದ­ಗಳಿಗೆ ತೆರೆದು­ಕೊಳ್ಳು­ತ್ತಾರೆ. ದಿನದಲ್ಲಿ ಎಂಟು ಗಂಟೆ ಕಾಲ 85 ಡೆಸಿಬಲ್‌ನಷ್ಟು ಅಥವಾ 15­ನಿಮಿಷಕ್ಕೆ 100 ಡೆಸಿಬಲ್‌ನಷ್ಟು ಸಾಮರ್ಥ್ಯದ ಶಬ್ದವನ್ನು ಅಸುರಕ್ಷಿತ ಮಟ್ಟ ಎಂದು ಅದು ವಿವರಿಸಿದೆ.

‘ಬದುಕನ್ನು ಖುಷಿಯಿಂದ ಕಳೆಯಲು ತಮ್ಮದೇ ಮಾರ್ಗ­ವನ್ನು ಆಯ್ದುಕೊಳ್ಳು­ತ್ತಿದ್ದಂತೆ ಹೆಚ್ಚು ಹೆಚ್ಚು ಸಂಖ್ಯೆ­ಯಲ್ಲಿ ಯುವಜನರು ಶ್ರವಣ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಜನರು ಸಣ್ಣ ಸಣ್ಣ ನಿಯಂ­ತ್ರಣಾ ಕ್ರಮಗಳನ್ನು ಪಾಲಿಸಿ­ದರೆ ಶ್ರವಣ ಸಾಮರ್ಥ್ಯಕ್ಕೆ ಯಾವುದೇ ಅಪಾಯ ತಂದುಕೊಳ್ಳದೆ ತಮ್ಮದೇ ಆದ ರೀತಿಯಲ್ಲಿ ಬದುಕನ್ನು ಆನಂದಿಸ­ಬಹುದು’ ಎಂದು ಡಬ್ಲ್ಯೂಎಚ್ಒ ನಿರ್ದೇಶಕ ಡಾ. ಎಟಿನ್‌ ಕ್ರೂಗ್‌ ಇಲ್ಲಿ ಹೇಳಿದರು.

ಕೆಲಸದ ಸ್ಥಳದಲ್ಲಿ ಗರಿಷ್ಠ 85 ಡೆಸಿಬಲ್‌ನಷ್ಟು ಶಬ್ದವನ್ನು 8 ಗಂಟೆಗಳ ಕಾಲ ಕೇಳುವುದು ಸುರಕ್ಷಿತ ಎಂದು ಶಿಫಾರಸು ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆ ನೈಟ್‌ ಕ್ಲಬ್‌, ಬಾರ್‌ಗಳು ಮತ್ತು ಕ್ರೀಡಾ ಕಾರ್ಯ­ಕ್ರಮ­ಗಳಲ್ಲಿ ಇದಕ್ಕಿಂ­ತಲೂ ಅಧಿಕ ಪ್ರಮಾಣದ ಶಬ್ದ  ಇಟ್ಟಿರು­ತ್ತಾರೆ. ಆದರೆ 100 ಡೆಸಿಬಲ್‌ನಷ್ಟು ಶಬ್ದ­ವನ್ನು 15 ನಿಮಿಷ­ಕ್ಕಿಂತ ಹೆಚ್ಚು ಅವಧಿ ಆಲಿಸುವುದು ಸುರಕ್ಷಿತವಲ್ಲ ಎಂದು ಅದು ಹೇಳಿದೆ.

ಸದ್ದು ಕಡಿಮೆ ಇರಲಿ: ಯುವಜನರು ತಮ್ಮ ಖಾಸಗಿ ಶ್ರವಣ ಸಾಧನಗಳಲ್ಲಿ ಸದ್ದಿನ ಪ್ರಮಾಣವನ್ನು ಆದಷ್ಟು ಕಡಿಮೆ ಇಟ್ಟುಕೊಳ್ಳುವುದು, ಶಬ್ದಮಾಲಿನ್ಯ ಹೆಚ್ಚು ಇರುವ ಪ್ರದೇಶಗಳಿಗೆ ಭೇಟಿ ಕೊಡುವ ಸಂದರ್ಭದಲ್ಲಿ ಕಿವಿಗಳಿಗೆ ಇಯರ್‌ ಪ್ಲಗ್‌ ಹಾಕಿಕೊಳ್ಳುವುದು, ಈ ಸಾಧನ­ಗಳನ್ನು ಸುರಕ್ಷಿತವಾಗಿ ಧರಿಸು­ವುದು ಮತ್ತು ಸಾಧ್ಯವಾದರೆ ನಿಶ್ಶಬ್ದ (ಮ್ಯೂಟ್‌) ಮಾಡಿಕೊಳ್ಳುವ ಮೂಲಕ ಶ್ರವಣ ಸಾಮರ್ಥ್ಯವನ್ನು ಕಾಪಾಡಿಕೊಳ್ಳ­ಬಹುದು. ಶಬ್ದ ಅಧಿಕವಿರುವ ಚಟುವ­ಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅವಧಿ­ಯನ್ನು ನಿಯಂತ್ರಿಸಿ­ಕೊಳ್ಳು­ವುದು ಸೂಕ್ತ. ಅಲ್ಲದೆ ನಡುನಡುವೆ ಸಣ್ಣ ವಿರಾಮ ಪಡೆದುಕೊಂಡು ಆ ಪರಿಸರದಿಂದ ದೂರ ಹೋಗು­ವುದು ಹಾಗೂ ಖಾಸಗಿ ಶ್ರವಣ ಸಾಧನಗಳನ್ನು ದಿನಕ್ಕೆ ಒಂದೇ ಗಂಟೆಗೆ ಸೀಮಿತಗೊಳಿಸುವುದು ಒಳ್ಳೆ­ಯದು ಎಂದು ಸಂಸ್ಥೆ ಸಲಹೆ ನೀಡಿದೆ.

ಸ್ಮಾರ್ಟ್‌ಫೋನ್‌ ತಂತ್ರಾಂಶಗಳ  ನೆರವಿ­ನಿಂದ ಶಬ್ದದ ಮಟ್ಟವನ್ನು ನಿಯಂತ್ರಿ­ಸಿ­ಕೊಳ್ಳಬಹುದು. ಇದ­ಲ್ಲದೆ ಶ್ರವಣ ಸಾಮರ್ಥ್ಯದಲ್ಲಿನ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ವಹಿಸುವುದು ಹಾಗೂ ನಿಯಮಿ­ತ­ವಾಗಿ ವೈದ್ಯಕೀಯ ತಪಾಸಣೆ­ಗೊಳಗಾ­ಗು­ವುದೂ ಮುಖ್ಯ ಎಂದು ಹೇಳಿದೆ.
ಮಾರ್ಚ್‌ ಮೂರರಂದು ಅಂತರರಾಷ್ಟ್ರೀಯ ಕಿವಿ ರಕ್ಷಣಾ ದಿನದ ಅಂಗವಾಗಿ ವಿಶ್ವ ಆರೋಗ್ಯ ಸಂಸ್ಥೆಯು ‘ಶ್ರವಣವನ್ನು ಸುರಕ್ಷಿತವಾಗಿಸಿ’ ಎಂಬ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿದ್ದು ಅಸುರಕ್ಷಿತ ಮತ್ತು ಸುರಕ್ಷಿತ ಶ್ರವಣ ಕ್ರಮಗಳ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT