ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಯುತವಾಗಿ ನಡೆದ ಮತದಾನ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆ
Last Updated 13 ಫೆಬ್ರುವರಿ 2016, 20:13 IST
ಅಕ್ಷರ ಗಾತ್ರ

ಬೆಂಗಳೂರು: ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ, ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಮಂತ್ರಯಂತ್ರಗಳ ದೋಷ ಸೇರಿದಂತೆ – ಹೀಗೆ ಕೆಲ ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳ ಮತದಾನ ಶನಿವಾರ ಶಾಂತಿಯುತವಾಗಿ ನಡೆಯಿತು.

ನಗರ ಜಿಲ್ಲೆಯಲ್ಲಿ ಸರಾಸರಿ ಶೇ68.86 ರಷ್ಟು ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಸರಾಸರಿ ಶೇ 85ಕ್ಕೂ ಅಧಿಕ ಮತದಾನವಾಗಿದೆ. ಮತದಾನ  ಪ್ರಮಾಣದ ಸ್ಪಷ್ಟ ಚಿತ್ರಣ ಭಾನುವಾರ ತಿಳಿಯಲಿದೆ ಎಂದು ಚುನಾವಣಾ ಮೂಲಗಳು ತಿಳಿಸಿವೆ.

ನಗರ ಜಿಲ್ಲೆಯಲ್ಲಿ 50 ಜಿಲ್ಲಾ ಪಂಚಾಯ್ತಿ  ಮತ್ತು 90 ತಾಲ್ಲೂಕು ಪಂಚಾಯ್ತಿ ಸ್ಥಾನಗಳಿಗೆ ಮತದಾನ ನಡೆಯಿತು. ಈ ಜಿಲ್ಲೆಯಲ್ಲಿ 8,42,505 ಮತದಾರರಿದ್ದಾರೆ.

ಗ್ರಾಮಾಂತರ ಜಿಲ್ಲೆಯಲ್ಲಿ 21 ಜಿಲ್ಲಾ ಪಂಚಾಯ್ತಿ ಮತ್ತು 77 ತಾಲ್ಲೂಕು ಪಂಚಾಯ್ತಿ ಸ್ಥಾನಗಳಿಗೆ ಮತದಾನ ಜರುಗಿತು. ಈ ಜಿಲ್ಲೆಯಲ್ಲಿ 5,90,142 ಮತದಾರರಿದ್ದಾರೆ.

ಬೆಳಿಗ್ಗೆ 7 ಗಂಟೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದರೂ   ಆರಂಭದ ಕೆಲ ಗಂಟೆಗಳ ಕಾಲ ಮತದಾನ ತುಂಬಾ ಮಂದಗತಿಯಲ್ಲಿತ್ತು. ಮಧ್ಯಾಹ್ನದ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗಳತ್ತ ಸಾಗುತ್ತಿದ್ದ ದೃಶ್ಯಗಳು ಕಂಡುಬಂದವು

ಅತಿ ಸೂಕ್ಷ್ಮ ಮತಗಟ್ಟೆಗಳು ಹೆಚ್ಚಿರುವ  ಹೊಸಕೋಟೆ ತಾಲ್ಲೂಕಿನಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಮೇಶ್‌ ಬಾನೋತ್ ಅವರು ಮೊಕ್ಕಾಂ ಹೂಡಿ ಶಾಂತಿಯುತ ಮತದಾನವಾಗುವಂತೆ ನೋಡಿಕೊಂಡಿದ್ದು ವಿಶೇಷವಾಗಿತ್ತು.

ಶತಾಯುಷಿಗಳಿಂದ ಮತದಾನ: ದೇವನಹಳ್ಳಿ ತಾಲ್ಲೂಕಿನ ಕೋರಮಂಗಲದ ಗ್ರಾಮದ ಮತಗಟ್ಟೆಯಲ್ಲಿ  117 ವರ್ಷದ ಶತಾಯುಷಿ ಸ್ಕೂಲ್‌ ಮುನಿಯಪ್ಪ ಮತ ಚಲಾಯಿಸಿದರು.

ಮಂಡೂರಿನಲ್ಲಿ 100 ವರ್ಷ ವಯಸ್ಸಿನ ನಂಜಪ್ಪ ಅವರು ಕುಟುಂಬದ ಸದಸ್ಯರ ಸಹಾಯದಿಂದ ಮತದಾನದ ಹಕ್ಕು ಚಲಾಯಿಸಿದರು.

ಸೂಲಿಬೆಲೆಯ ಮತಗಟ್ಟೆಯೊಂದರಲ್ಲಿ ಮಹಿಳೆಯೊಬ್ಬರು ನವಜಾತ ಶಿಶುವಿನೊಂದಿಗೆ ಆಗಮಿಸಿ ಮತ ಚಲಾಯಿಸಿದ ದೃಶ್ಯ ಕಂಡುಬಂತು.

ಕಾರ್ಯಕರ್ತರ ಮಾತಿನ ಚಕಮಕಿ: ಬೆಂಗಳೂರು ಪೂರ್ವ ತಾಲ್ಲೂಕು ವ್ಯಾಪ್ತಿಯ ಮಹದೇವಪುರ ಕ್ಷೇತ್ರದಲ್ಲಿ ಅಲ್ಲಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ  ಮಾತಿನ ಚಕಮಕಿಯ ಘಟನೆಗಳು ನಡೆದವು.

ಬೆಂಗಳೂರು ಉತ್ತರ ತಾಲೂಕಿನ ದೊಡ್ಡಬೆಲೆಯ ಗೊಲ್ಲರಹಳ್ಳಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ  ಮಾರಾಮಾರಿ ನಡೆಯಿತು.
ರಾಜಾನುಕುಂಟೆ ಕ್ಷೇತ್ರದ ಮತಗಟ್ಟೆ ಕೇಂದ್ರದ ಪ್ರವೇಶದ್ವಾರದಲ್ಲಿ ಯಲಹಂಕದ ಚೌಡೇಶ್ವರಿ ವಾರ್ಡಿನ ಬಿಬಿಎಂಪಿ ಸದಸ್ಯೆ ಪದ್ಮಾವತಿ ಅವರ ಪತಿ ಅಮರನಾಥ್‌ ಮತ್ತು ಅವರ ಗೆಳೆಯರು ಮತದಾನ ತೆರಳುತ್ತಿದ್ದವರನ್ನು ತಡೆದು, ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡುವಂತೆ ಓಲೈಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ತಳ್ಳಾಟ ನಡೆದು ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುಂಪನ್ನು ಚದುರಿಸಿದರು.

ಮಾರಸಂದ್ರ ಗ್ರಾಮದ ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಮತದಾನದ ಕೇಂದ್ರದೊಳಗೆ ಹೋದದ್ದನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಹದ್ದಿಗಾನಹಳ್ಳಿ ಮತದಾನ ಕೇಂದ್ರದ ಬಳಿ ಮತದಾರರ ಪಟ್ಟಿಯಲ್ಲಿ ಹೆಸರಿ ಲ್ಲದವರು ನಕಲಿ ಮತದಾನ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿದರು.

ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಮಧ್ಯಪ್ರವೇಶಿಸಿದ ಪೊಲೀಸರು, ಎರಡೂ ಪಕ್ಷದವರನ್ನು ಸಮಾಧಾನಪಡಿಸಿ, ಗುರುತಿನ ಚೀಟಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಮತದಾನಕ್ಕೆ ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ನಂತರ ಮತದಾನ ಪ್ರಕ್ರಿಯೆ ಮುಂದುವರಿಯಿತು.

ಮಂಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಟ್ಟುಗೊಲ್ಲಹಳ್ಳಿ, ಜ್ಯೋತಿಪುರ ಹಾಗೂ ಮಂಡೂರಿನ ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಅನೇಕ ಹೆಸರುಗಳು ಬಿಟ್ಟು ಹೋಗಿದ್ದ ಕಾರಣ ಮತದಾನದ ಕೊನೆಯ ಗಳಿಗೆಯವರೆಗೆ ಗದ್ದಲದ ವಾತಾವರಣವಿತ್ತು.

ಮಂಡೂರು ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತದಾರರನ್ನು ಶಾಲಾ ವಾಹನಗಳಲ್ಲಿ ಕರೆತಂದು ಸರತಿ ಸಾಲಿನಲ್ಲಿ  ನಿಲ್ಲಿಸಿ ಗುರುತಿನ ಪತ್ರ ಪರಿಶೀಲಿಸಿ ಮತಗಟ್ಟೆಯೊಳಗೆ ಕಳುಹಿಸುತ್ತಿದದ್ದು ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿತು.

ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮಾತಿನ ಚಕಮಕಿ ನಡೆಸಿದರು. ಈ ಕೃತ್ಯಕ್ಕೆ ಪೋಲಿಸರು ಸಹಕರಿಸುತ್ತಿದ್ದಾರೆ ಎಂದು ಆರೋಪಿಸಿ, ಸ್ಥಳದಲ್ಲಿದ್ದ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು.

ಮತಯಂತ್ರದಲ್ಲಿ ದೋಷ: ಆನೇಕಲ್ ತಾಲ್ಲೂಕಿನ ಸರ್ಜಾಪುರದ ಮತಗಟ್ಟೆಯೊಂದರಲ್ಲಿ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡು ಮತದಾನ ಸುಮಾರು ಒಂದೂವರೆ ತಾಸು ಸ್ಥಗಿತಗೊಂಡಿತ್ತು. ಬಳಿಕ ತಹಶೀಲ್ದಾರ್ ಅವರು ಯಂತ್ರ ಬದಲಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

ನೆಲಮಂಗಲದ ಹೊನ್ನಾಗಾನಹಳ್ಳಿ ಗ್ರಾಮದ ಮತಗಟ್ಟೆಯೊಂದರಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿತ್ತು. ಯಂತ್ರ ಬದಲಿಸಿದ ನಂತರ ಮತದಾನ ಆರಂಭವಾಯಿತು.

ಕನ್ನಮಂಗಲ ಹಾಗೂ ಹೊಂಬರಹಳ್ಳಿ ಗ್ರಾಮದ ಮತಗಟ್ಟೆಗಳ ಮತಯಂತ್ರಗಳ ಮತಪತ್ರದಲ್ಲಿ ದೋಷ ಕಂಡು ಬಂದ ಕಾರಣ ಕೆಲ ಹೊತ್ತು ಮತದಾನ ಸ್ಥಗಿತಗೊಂಡಿತ್ತು.

ಪ್ರಚಾರದ ವಿರುದ್ಧ ಆಕ್ರೋಶ: ಸಿಂಗನಾಯಕನಹಳ್ಳಿ ಮತಗಟ್ಟೆ ಕೇಂದ್ರದ ಬಳಿ ಕೋನೇನ ಅಗ್ರಹಾರ ವಾರ್ಡಿನ ಬಿಬಿಎಂಪಿ ಸದಸ್ಯ ಎಂ.ಚಂದ್ರಪ್ಪ ರೆಡ್ಡಿ ಮತ್ತು ಅವರ ಬೆಂಬಲಿಗರು ಕಾಂಗ್ರೆಸ್‌ ಪರ ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ,  ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಈ ವೇಳೆ ಮಾತನಾಡಿದ ಶಾಸಕ ಎಸ್‌.ಆರ್‌.ವಿಶ್ವನಾಥ್‌, ‘ಮತದಾನಕ್ಕೆ 48 ಗಂಟೆ ಮುಂಚೆ ಹೊರಗಿನವರು ಪ್ರಚಾರದಲ್ಲಿ ಭಾಗವಹಿಸದೆ ಕ್ಷೇತ್ರ ಬಿಟ್ಟು ತೆರಳಬೇಕು ಎಂಬ ನಿಯಮವಿದೆ. ಆದರೆ, ಚಂದ್ರಪ್ಪ ರೆಡ್ಡಿ ಅವರು ಇಲ್ಲಿ ರಾಜಾರೋಷವಾಗಿ ಪ್ರಚಾರ ನಡೆಸುವ ಮೂಲಕ ಕಾನೂನನ್ನು ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡೂ ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಿ, ಹೊರಗಡೆಯಿಂದ ಬಂದಿರುವವರು ತಕ್ಷಣ ಇಲ್ಲಿಂದ ತೆರಳಬೇಕು ಎಂದು ಸೂಚಿಸಿದರು.

ರೌಡಿಗಳು ವಶಕ್ಕೆ:  ಮತದಾನದ ವೇಳೆ ಅಹಿತಕರ ಘಟನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನೆಲಮಂಗಲದ ಕುಖ್ಯಾತ ರೌಡಿ ಬಂಡೆ ಮಂಜ  ಹಾಗೂ ಆತನ ಸಹಚರರು ಸೇರಿದಂತೆ  ಜಿಲ್ಲೆಯ ವ್ಯಾಪ್ತಿಯಲ್ಲಿದ್ದ 472 ರೌಡಿಶೀಟರ್‌ಗಳನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರ ವಶಕ್ಕೆ ಪಡೆದಿದ್ದರು.

ಬದುಕಿದವರಿಗೇ ‘ಡೆತ್‌’ ಮೊಹರು!
ಮಂಡೂರು ಗ್ರಾಮದ ಮತಗಟ್ಟೆಗೆ ಮತ ಚಲಾಯಿಸಲು ಬಂದಿದ್ದ ಸಾವಿತ್ರಿ ಹಾಗೂ ಕಮಲಾ ಎನ್ನುವ ಮಹಿಳೆಯರು  ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿನ ಮೇಲೆ ‘ಡೆತ್‌’ (ಮೃತಪಟ್ಟಿದ್ದಾರೆ) ಎಂಬ ಮೊಹರು ಹಾಕಿದ್ದು ಕಂಡು ಆಘಾತಗೊಂಡರು.

ಮತಗಟ್ಟೆಯಲ್ಲಿ ಈ ಮಹಿಳೆಯರು ತಮ್ಮ ಗುರುತಿನ ಪತ್ರ ತೋರಿಸಿದರೂ ಅಧಿಕಾರಿಗಳು ಅವರಿಗೆ ಮತ ಚಲಾಯಿಸಲು ಅವಕಾಶ ನೀಡಲಿಲ್ಲ.
ಈ ಬಗ್ಗೆ ತಹಶೀಲ್ದಾರ್ ಹರೀಶ್ ನಾಯಕ್ ಅವರಿಗೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲ ಎಂದು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದರು.

‘ಈ ಬಗ್ಗೆ ತನಿಖೆಯಾಗಬೇಕು. ಕಾಂಗ್ರೆಸ್ ಮುಖಂಡರು ಬಹುತೇಕ ಎಲ್ಲಾ ಮತಗಟ್ಟೆಯಲ್ಲಿ ಅಕ್ರಮ ಮತದಾನ ಚಲಾವಣೆಗೆ ಪ್ರಯತ್ನಿಸಿದ್ದಾರೆ. ಹೀಗಾಗಿ, ಮರು ಮತದಾನ ನಡೆಯಬೇಕು’ ಎಂದು ಆಗ್ರಹಿಸಿದರು.

ಹೆಸರುಗಳು ನಾಪತ್ತೆ: ಆಕ್ರೋಶ
ಮಂಡೂರು ಗ್ರಾಮದ ಮತದಾರರ ಪಟ್ಟಿಯಲ್ಲಿ ಹದಿನೈದಕ್ಕೂ ಹೆಚ್ಚು ಜನರ ಹೆಸರುಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಕಟ್ಟುಗೊಲ್ಲಹಳ್ಳಿ ಗ್ರಾಮದ ಮತದಾರರ ಪಟ್ಟಿಯಲ್ಲಿ 35ಕ್ಕೂ ಹೆಚ್ಚು ಮತದಾರರ ಹೆಸರುಗಳು ಕಾಣೆಯಾಗಿದ್ದವು. 

‘ತಹಶೀಲ್ದಾರ್ ಹರೀಶ್‌ ನಾಯಕ್ ಅವರು ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಉದ್ದೇಶಪೂರ್ವಕವಾಗಿಯೇ ತೆಗೆದು ಹಾಕಿದ್ದಾರೆ’ ಎಂದು ಕಟ್ಟುಗೊಲ್ಲಹಳ್ಳಿಯ ಬಿಜೆಪಿ ಮುಖಂಡ ಶಿವಕುಮಾರ್ ಆರೋಪಿಸಿದರು.

‘ಈ ಹಿಂದಿನ ಮತದಾರರ ಪಟ್ಟಿಯಲ್ಲಿ ಎಲ್ಲಾ ಮತದಾರರ ಹೆಸರುಗಳಿವೆ. ಆದರೆ ಕೆಲ ವಾರಗಳ ಹಿಂದೆ ಬಿಡುಗಡೆಯಾಗಿರುವ ಹೊಸ ಪಟ್ಟಿಯಲ್ಲಿ ಗ್ರಾಮದ ಕೆಲವರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಈ ಕುರಿತ ದಾಖಲೆಗಳನ್ನು ಚುನಾವಣಾಧಿಕಾರಿ ವೆಂಕಟೇಶ ಹಾಗೂ ತಹಶೀಲ್ದಾರ್ ಹರೀಶ್‌ ನಾಯಕ್‌ ಅವರಿಗೆ ತೋರಿಸಿದರೂ ಅವರು ಮತದಾನಕ್ಕೆ ಅವಕಾಶ ನೀಡಲಿಲ್ಲ’ ಎಂದು ಶಿವಕುಮಾರ್‌ ದೂರಿದರು.

ಮಾರಾಮಾರಿ:ಗಾಯ
ದೊಡ್ಡಬೆಲೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಕೆ.ಗೊಲ್ಲಹಳ್ಳಿಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಮಾರಾಮಾರಿ ನಡೆದು ಕಾಂಗ್ರೆಸ್‌ ಕಾರ್ಯಕರ್ತ ಶಶಿ ಎಂಬುವರು ಗಾಯಗೊಂಡಿದ್ದಾರೆ.

ಉದ್ರಿಕ್ತ ಗುಂಪು ಚದುರಿಸಲು ಪೊಲೀಸರು ನಡೆಸಿದ ಲಾಠಿ ಪ್ರಹಾರದಲ್ಲಿ  ಗೌರಮ್ಮ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT