ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಖ ತಡೆಯುವ ‘ಸ್ಮಾರ್ಟ್‌ ಕಿಟಕಿ’

Last Updated 16 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಗೋಡೆಯಲ್ಲಿರುವ ಕಿಂಡಿಯೇ ಕಿಟಕಿ ಎಂಬ ಅಭಿಪ್ರಾಯ ಅಳಿದು ಶತಮಾನಗಳೇ ಸಂದಿವೆ. ಕಾಲಮಾನಕ್ಕನುಗುಣವಾಗಿ ಕಿಟಕಿಯ ಗಾತ್ರ, ಆಕಾರ, ರೂಪ– ಸ್ವರೂಪದಲ್ಲಿ ಅಪಾರ ಬದಲಾವಣೆಗಳಾಗಿವೆ. ಕಟ್ಟಿಗೆ, ಬಟ್ಟೆಗಳ ಜಾಗದಲ್ಲಿ ಗಾಜು, ಅದು ಅಭಿವೃದ್ಧಿಗೊಂಡು ಪಾರದರ್ಶಕ, ಅಪಾರದರ್ಶಕ ಗಾಜುಗಳೂ ಬಂದಿವೆ. ಆಧುನಿಕ ತಂತ್ರಜ್ಞಾನ ಅದನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ. ಅಂತೆಯೇ ಅದರ ಉಪಯೋಗಗಳೂ ಹೆಚ್ಚುತ್ತಿವೆ.

ಕೇವಲ ನೈಸರ್ಗಿಕ ಗಾಳಿ ಹಾಗೂ ಬೆಳಕಿಗೆ ಮಾರ್ಗವಾಗಿದ್ದ ಕಿಟಕಿಗಳಿಂದ ಹೆಚ್ಚಿನದನ್ನು ಪಡೆಯುವ ನಿರೀಕ್ಷೆ, ಪ್ರಯತ್ನಗಳು ಹೆಚ್ಚುತ್ತಿವೆ. ಕಿಟಕಿ ಹಾಗೂ ಸೌರಶಕ್ತಿ ವಿಷಯವನ್ನೇ ಮನದಲ್ಲಿಟ್ಟುಕೊಂಡು ಚೀನಾದ ತಂತ್ರಜ್ಞರು ‘ಸ್ಮಾರ್ಟ್‌ ಕಿಟಕಿ’ ಅಭಿವೃದ್ಧಿ ಪಡಿಸುತ್ತಿದ್ದಾರೆ.

ಅಮೆರಿಕ ರಾಸಾಯನಿಕ ಮಂಡಳಿಯ ‘ಇಂಡಸ್ಟ್ರಿಯಲ್‌ ಆ್ಯಂಡ್‌ ಎಂಜಿನಿಯರಿಂಗ್‌ ಕೆಮಿಸ್ಟ್ರಿ’ ಸಂಶೋಧನಾ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಸಂಶೋಧನಾ ಲೇಖನದ ಪ್ರಕಾರ, ಕೊಠಡಿಯ ಹೊರಗೆ ತಾಪಮಾನ ಏರುತ್ತಿದ್ದರೇ ಅದನ್ನು ತಡೆಯುವ ಮೂಲಕ ತಂಪಿನ ಕಂಪು ನೀಡುವುದೇ ‘ಸ್ಮಾರ್ಟ್‌ ಕಿಟಕಿ’ಯ ವೈಶಿಷ್ಟ್ಯ.

ಬಿಸಿಲಿನ ಶಾಖ ಹೆಚ್ಚಿದಾಗ  ಮಬ್ಬು ಆವರಿಸಿದಂತೆ  ಅಪಾರದರ್ಶಕ ಸ್ಥಿತಿಗೆ ತಿರುಗುವ ಕಿಟಕಿ, ‘ಝಳ’ವನ್ನು ತಡೆದು ಬೆಳಕನ್ನು ಪ್ರವೇಶಿಸಲು ಎಂದಿನಂತೆ ಆಸ್ಪದ ನೀಡುತ್ತದೆಯಂತೆ. ಬಿಸಿಲು ತಗ್ಗುತ್ತಿದ್ದಂತೆಯೇ ಅದು ಮತ್ತೆ ಪಾರದರ್ಶಕ ಸ್ಥಿತಿಗೆ ಬದಲಾಗುತ್ತದೆ ಎನ್ನುತ್ತಾರೆ ಸಂಶೋಧಕರು.

ಸದ್ಯಕ್ಕೆ ಜೆಲ್ ಸ್ವರೂಪದ ಪದಾರ್ಥಗಳನ್ನು  (ಹೈಡ್ರೋಜೆಲ್‌) ಬಳಸಿ ಸ್ಮಾರ್ಟ್‌ ಕಿಟಕಿ ತಯಾರಿಸಲಾಗಿದೆ. ಆದರೆ ಗಾಜಿಗೆ ಲೇಪಿಸಲಾಗಿದ್ದ ಹೈಡ್ರೋಜೆಲ್‌, ದ್ರವಪದಾರ್ಥಗಳ ಸಂಪರ್ಕಕ್ಕೆ ಬಂದಾಗ ಕೊಚ್ಚಿ ಹೋಗುತ್ತಿದೆ. ಈ ತೊಡಕು ನಿವಾರಿಸಲು ಸಂಶೋಧಕರು ಸದ್ಯಕ್ಕೆ ಹೈಡ್ರೋಜೆಲ್ಲನ್ನು ಎರಡು ಗಾಜಿನ ಫಲಕಗಳ ನಡುವೆ ಸ್ಯಾಂಡ್‌ವಿಚ್‌ನಂತೆ ಉಪಯೋಗಿಸಿ ಪ್ರಯೋಗ ನಡೆಸಿದ್ದಾರೆ.  ಆ ಪ್ರಯತ್ನದಲ್ಲಿ ಸದ್ಯ ಯಶ ಕಂಡಿದ್ದಾರೆ.

‘ವಿದ್ಯುತ್, ಅನಿಲ, ಬೆಳಕು ಮತ್ತು ಶಾಖ ಸೇರಿದಂತೆ ಬಹುಮುಖ ಕಾರ್ಯಗಳಿಗೆ ಸ್ಪಂದಿಸಬಲ್ಲ ಸ್ಮಾರ್ಟ್‌ ಕಿಟಕಿ ರೂಪಿಸಲು ಶ್ರಮಿಸಲಾಗುತ್ತಿದೆ’ ಎನ್ನುತ್ತಾರೆ ಪೂರ್ವ ಚೀನಾ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ವಿಜ್ಞಾನಿ ಕ್ಸುಹೊಂಗ್‌ ಗುವ್.
ಗುವ್‌ ಅವರು, ಕೈಮಿನಿ ಚೆನ್‌, ಯಾನ್‌ಫೆಂಗ್‌ ಗವ್  ಹಾಗೂ ಸಹೋದ್ಯೋಗಿಗಳೊಂದಿಗೆ ಸೇರಿಕೊಂಡು ಈ ಹೈಡ್ರೋಜೆಲ್ಲನ್ನು ಅಭಿವೃದ್ಧಿ ಪಡಿಸಿದ್ದಾರೆ.

ಇದು ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಆದರೆ ಹೈಡ್ರೋಜೆಲ್‌ ಭವಿಷ್ಯದಲ್ಲಿ ಉತ್ತಮ ಫಲಿತಾಂಶ ನೀಡಲಿದೆ ಎಂಬ ಗಾಢವಾದ ವಿಶ್ವಾಸ ಸಂಶೋಧಕರಲ್ಲಿದೆ. ‘ಸ್ಮಾರ್ಟ್‌ ಕಿಟಕಿ’ ಪ್ರಯೋಗ ಯಶಸ್ವಿಯಾದರೆ ನಗರ–ಪಟ್ಟಣಗಳ ಅಂತರವಿಲ್ಲದೆ ಹಲವು ಮಗ್ಗಲುಗಳಲ್ಲಿ ಗಾಜನ್ನು ಧರಿಸಿ ಮಿನುಗುತ್ತಿರುವ ಗಗನಚುಂಬಿ ಕಟ್ಟಡಗಳ ಬೃಹತ್‌ ಕಿಟಕಿ, ಬೇಸಿಗೆಯಲ್ಲಿ ‘ಭಾರ’ ಎನಿಸುವ ವಿದ್ಯುತ್‌ ಬಿಲ್ಲಿನ ಗಾತ್ರ ತಗ್ಗಿಸುವಲ್ಲಿ ಪ್ರಯೋಜನಕ್ಕೆ ಬರಬಲ್ಲವು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT