ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾರೀರ ಲೋಕದಲ್ಲಿ ಫಿಟ್‌ನೆಸ್‌ ವ್ಯಾಖ್ಯಾನ

Last Updated 24 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಫಿಟ್‌ನೆಸ್‌ ಎನ್ನುವುದು ಕೇವಲ ಕಟ್ಟುಮಸ್ತಾದ ದೇಹಕ್ಕಷ್ಟೇ ಅನ್ವಯಿಸುವ ಮಾತಲ್ಲ. ದಿನವಿಡೀ ಬಿಸಿಲಲ್ಲಿ ವಾಹನ ಸಂಚಾರ ನಿಭಾಯಿಸುವ ಟ್ರಾಫಿಕ್‌ ಪೊಲೀಸ್‌ರಿಂದ ಹಿಡಿದು ಹೊಲದಲ್ಲಿ ಮೈಮುರಿದು ದುಡಿಯುವ ರೈತನವರೆಗೆ ಎಲ್ಲ ಕ್ಷೇತ್ರಗಳೂ ಅದರದೇ ಆದ ಫಿಟ್‌ನೆಸ್‌ ಬೇಡುತ್ತವೆ. ಅದು ಕೇವಲ ದೇಹ ಅಥವಾ ಮನಸ್ಸಿಗಷ್ಟೇ ಸಂಬಂಧಿಸಿದ್ದಲ್ಲ. ಅವೆರಡೂ ಸೇರಿ ಸೃಷ್ಟಿಯಾಗುವ ಸಮಗ್ರ ಮನೋದೈಹಿಕ ವ್ಯವಸ್ಥೆಗೆ ಸಂಬಂಧಿಸಿದ್ದು. ಸಂಗೀತ ಕ್ಷೇತ್ರವೂ ಇದಕ್ಕೆ ಹೊರತಲ್ಲ. ಹಲವು ಗಂಟೆಗಳ ಕಾಲ ವೇದಿಕೆಯ ಮೇಲೆ ನಿರಂತರವಾಗಿ ಹಾಡುವ ಗಾಯಕ/ಗಾಯಕಿಯರ ಸವಾಲುಗಳು ಒಂದೆರಡಲ್ಲ. ಈ ಸವಾಲುಗಳನ್ನು ಎದುರಿಸಲು ಅವರು ತಮ್ಮದೇ ದಾರಿಯನ್ನೂ ಕಂಡುಕೊಂಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಕನ್ನಡದ ಕೆಲವು ಗಾಯಕ/ಗಾಯಕಿಯರು ತಮ್ಮ ಕ್ಷೇತ್ರಕ್ಕೆ ಅನ್ವಯಿಸುವುವಂತ ಫಿಟ್‌ನೆಸ್‌ ಅನ್ನು ವ್ಯಾಖ್ಯಾನಿಸಿದ್ದಾರೆ.

ಬಿಸಿನೀರಿನ ಔಷಧ
ದೇಹಾರೋಗ್ಯ ಚೆನ್ನಾಗಿದ್ದರೆ ಎಲ್ಲ ಕೆಲಸಗಳಲ್ಲಿಯೂ ಅದರ ಪರಿಣಾಮ ಕಂಡುಬರುತ್ತದೆ. ಸಂಗೀತಗಾರರಿಗೂ ಇದು ಅನ್ವಯಿಸುತ್ತದೆ.

ನನಗೆ ಮೊದಲು ಟಾನ್ಸಿಲ್‌ ಪ್ರಾಬ್ಲಂ ಕಾಣಿಸಿಕೊಂಡಿತ್ತು. ಆಗ ಡಾಕ್ಟರ್‌ ಬಳಿಗೆ ಹೋಗಿ ಇನ್ನು ಮುಂದೆ ಯಾವ ಪದಾರ್ಥಗಳು ನನಗೆ ನಿಷಿದ್ಧ ಎಂದು ಕೇಳಿದ್ದೆ. ಆದರೆ ಅವರು, ‘ಏನು ಬೇಕಾದರೂ ತಿನ್ನಿ. ಆದರೆ ಒಂದು ಪರಿಮಿತಿಯಲ್ಲಿ ತಿನ್ನಿ. ಅತಿಯಾಗಿ ತಿಂದರೆ ಏನೇ ಆದರೂ ಅಪಾಯ’ ಎಂದಿದ್ದರು. ನಾನು ಇಂದಿಗೂ ಅವರ ಮಾತನ್ನು ಪಾಲಿಸುತ್ತೇನೆ.

ಉಪ್ಪಿನಕಾಯಿ ನನಗಿಷ್ಟ. ರಸ್ತೆ ಬದಿ ಪಾನಿಪೂರಿ ಅಂದ್ರೂ ನನಗೆ ಇಷ್ಟ. ಅದನ್ನು ತಿನ್ನುವುದರಿಂದ ನನಗೇನೂ ತೊಂದರೆ ಆಗಿಲ್ಲ. ಆದರೆ ಎಲ್ಲವನ್ನೂ ನಾನು ಒಂದು ಪರಿಮಿತಿಯಲ್ಲಿಯೇ ತಿನ್ನುತ್ತೇನೆ. ನನ್ನ ದೇಹ ಏನನ್ನು ಎಷ್ಟು ತಿಂದು ಜೀರ್ಣಿಸಿಕೊಳ್ಳಬಲ್ಲದು, ಧ್ವನಿಯ ಬೇಕು ಬೇಡಗಳು ಏನು ಎನ್ನುವುದು ನನಗೆ ತಿಳಿದಿದೆ. ಇನ್ನು ದೀರ್ಘ ಅವಧಿಯ ಕಾರ್ಯಕ್ರಮಗಳನ್ನು ಕೊಡುವಾಗ ಹಾಡಿನ ಮಧ್ಯದ ಕಿರು ಅವಧಿಯಲ್ಲಿ ಗಂಟಲು ಹಸಿಯಾಗಿರುವಂತೇ ನೋಡಿಕೊಳ್ಳುತ್ತೇನೆ. ಅಂದರೆ ಫ್ಲಾಸ್ಕ್‌ಿನಲ್ಲಿ ಬಿಸಿ ನೀರು ತೆಗೆದುಕೊಂಡು ಹೋಗುತ್ತೇನೆ. ಹಾಡಿನ ಮಧ್ಯದಲ್ಲಿ ಬಿಸಿನೀರು ಸ್ವಲ್ಪಸ್ವಲ್ಪ ಕುಡಿಯುವುದು ಗಂಟಲಿಗೆ ಆರಾಮದಾಯಕ.

ಇನ್ನು ಸಂಗೀತಗಾರರು ಚೆನ್ನಾಗಿ ನಿದ್ದೆ ಮಾಡಬೇಕು. ನಿದ್ದೆಗೆಟ್ಟರೆ ಅದರ ಪ್ರತಿಕೂಲ ಪರಿಣಾಮ ಧ್ವನಿಯ ಮೇಲಾಗುತ್ತದೆ. ದಿನಕ್ಕೆ ಏಳು ಗಂಟೆಯಾದರೂ ನಿದ್ದೆ ಮಾಡಬೇಕು.
ಅರ್ಚನಾ ಉಡುಪ

ಹಾವಭಾವವೂ ಮುಖ್ಯ

ನನ್ನ ಪ್ರಕಾರ ಪ್ರತಿಯೊಬ್ಬರಿಗೂ ಮಾನಸಿಕ ಮತ್ತು ದೈಹಿಕ ಫಿಟ್‌ನೆಸ್‌ ಎರಡೂ ಮುಖ್ಯ. ಹಾಡುಗಾರರಿಗೂ ಇದು ಅನ್ವಯಿಸುತ್ತದೆ.

ಸಂಗೀತಗಾರ ಒಂದು ಹಾಡನ್ನು ತೆಗೆದುಕೊಂಡು ಟ್ಯೂನ್‌ ಅನ್ನು ಅಭ್ಯಸಿಸಿ, ಹಾಡುವಷ್ಟೂ ಸಮಯ ಅವನು/ಅವಳು ಪೂರ್ತಿಯಾಗಿ ಆ ಹಾಡಿನೊಂದಿಗೇ ಇರಬೇಕಾಗುತ್ತದೆ. ಮಾನಸಿಕವಾಗಿ ತುಂಬ ಏಕಾಗ್ರತೆ ಬೇಡುವ ಸಂಗತಿಯದು.

ಜತೆಗೆ ಗಂಟಲಿನ ಆರೋಗ್ಯ, ಉಸಿರು, ಉಚ್ವಾಸ ನಿಶ್ವಾಸಗಳ ಮೇಲಿನ ಹಿಡಿತ, ಶ್ವಾಸಕೋಶಗಳ ಆರೋಗ್ಯದ ಕಡೆಗೆ ಸಂಗೀತಗಾರರು ಹೆಚ್ಚು ಗಮನ ಹರಿಸಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ಎಕ್ಸರ್‌ಸೈಜ್‌ ಕೂಡ ಮಾಡುತ್ತಿರಬೇಕು.

ನಾನು ಪ್ರತಿದಿನ ಯೋಗ, ಪ್ರಾಣಾಯಾಮಗಳನ್ನು ಮಾಡುತ್ತೇನೆ. ಆಹಾರ ಸೇವನೆಯ ಬಗ್ಗೆ ಸಾಕಷ್ಟು ಎಚ್ಚರ ವಹಿಸುತ್ತೇನೆ. ಆರೋಗ್ಯಪೂರ್ಣ ಆಹಾರ ನನ್ನ ಆದ್ಯತೆ.

ಇಂದು ವೇದಿಕೆಯ ಮೇಲಿನ ಲೈವ್‌ ಪರ್ಫಾರ್ಮೆನ್ಸ್‌ಗಳಲ್ಲಿ ಸಂಗೀತಗಾರರ ದೇಹಭಾಷೆಯೂ ಮುಖ್ಯವಾಗುತ್ತದೆ. ಪ್ರೇಕ್ಷಕರ ಜತೆ ಸಂಪರ್ಕ ಸಾಧಿಸುವಾಗ ಧ್ವನಿಯ ಜತೆಗೆ ಆಂಗಿಕ ಹಾವ ಭಾವಗಳೂ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ವೇದಿಕೆಯ ಮೇಲೆ ಚೆನ್ನಾಗಿ ಕಾಣಿಸುವತ್ತಲೂ ಗಮನ ಹರಿಸಬೇಕಾಗಿದೆ.
-ಡಾ. ಶಮಿತಾ ಮಲ್ನಾಡ್‌

ಆಹಾರ ಸೇವನೆಯಲ್ಲಿ ಶಿಸ್ತು ಬೇಕು

ಸಂಗೀತ ಕ್ಷೇತ್ರಕ್ಕಷ್ಟೇ ಸಂಬಂಧಿಸಿ ಹೇಳುವುದಾದರೆ ಧ್ವನಿ ಫಿಟ್ ಆಗಿರುವುದು ಗಾಯಕ/ಗಾಯಕಿಗೆ ತುಂಬ ಮುಖ್ಯ.

ಅಷ್ಟೇ ಅಲ್ಲ, ದೈಹಿಕ, ಮಾನಸಿಕ ಸೇರಿ ಸಮಗ್ರ ಫಿಟ್‌ನೆಸ್‌ ಕೂಡ ಹಾಡುಗಾರರಿಗೆ ಮುಖ್ಯವಾಗುತ್ತದೆ. ಯಾಕೆಂದರೆ ನಾವು ತುಂಬಾ ಪ್ರಯಾಣ ಮಾಡಬೇಕಾಗುತ್ತದೆ. ಕಾರ್ಯಕ್ರಮಗಳನ್ನು ನೀಡಲು ಬೇರೆ ಬೇರೆ ಪ್ರದೇಶಗಳಿಗೆ ಹೋಗಬೇಕಾಗುತ್ತದೆ. ಇವೆಲ್ಲದಕ್ಕೂ ದೈಹಿಕವಾಗಿಯೂ ಫಿಟ್‌ ಆಗಿಬೇಕು.

ಅದರಲ್ಲಿಯೂ ಲೈವ್‌ ಪರ್ಫಾರ್ಮ್‌ ಮಾಡುವಾಗಲಂತೂ ಫಿಟ್‌ನೆಸ್‌ ತುಂಬ ಅವಶ್ಯಕ. ಮೂರ್‍್ನಾಲ್ಕು ಗಂಟೆ ನಿರಂತರವಾಗಿ ವೇದಿಕೆಯ ಮೇಲೆ ನಿಂತು ಹಾಡುವುದೆಂದರೆ ಸುಲಭದ ಮಾತಲ್ಲ.

ನಾನು ಗಾಯನವಷ್ಟೇ ಅಲ್ಲ. ನಟನೆಯಲ್ಲಿಯೂ  ತೊಡಗಿಸಿಕೊಂಡಿದ್ದೇನೆ. ಆದ್ದರಿಂದ ಎರಡು ಕ್ಷೇತ್ರಗಳಲ್ಲಿಯೂ ಫಿಟ್‌ಸೆನ್‌  ಮುಖ್ಯ. ಹಾಗಂತ ನಾನೇನೂ ತುಂಬ ತಲೆಕೆಡಿಸಿಕೊಂಡು ಜಿಮ್‌ ಗಿಮ್‌ ಅಂತೆಲ್ಲ ಹೋಗಲ್ಲ. ದಿನವೂ ಯೋಗ ಮಾಡ್ತೀನಿ. ಅದು ಚಿಕ್ಕ ವಯಸ್ಸಿನಿಂದಲೂ ಬೆಳೆದು ಬಂದ ಅಭ್ಯಾಸ. ಸಮಯ ಸಿಕ್ಕಾಗಲೆಲ್ಲ ವಾಕಿಂಗ್‌ ಹೋಗ್ತೀನಿ.

ಇನ್ನು ಧ್ವನಿ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಕೆಲವು ವೋಕಲ್‌ ಎಕ್ಸರ್‌ಸೈಜ್‌ಗಳಿವೆ. ಧ್ವನ್ಯಾಂಗಗಳನ್ನು ಸದಾ ಚೇತೋಹಾರಿ ಆಗಿರಿಸುವಂಥ ವ್ಯಾಯಾಮಗಳವು. ಎರಡು ಮೂರು ದಿನಗಳಿಗೊಮ್ಮೆ ಅರ್ಧ ಗಂಟೆ ಆ ವ್ಯಾಯಾಮಗಳನ್ನು ಮಾಡ್ತೀನಿ.
ಆಹಾರ ಸೇವನೆಯಲ್ಲಿ ಶಿಸ್ತು ಬೆಳೆಸಿಕೊಂಡರೆ ಸಹಜವಾಗಿಯೇ ಫಿಟ್‌ ಆಗಿತ್ತೇವೆ. ಹಾಡುಗಾರರಿಗೂ ಈ ಶಿಸ್ತು ಅವಶ್ಯಕ.
ನಾನು ಯಾವುದಾದರೂ ಕಾರ್ಯಕ್ರಮ ನೀಡುವ ಮುನ್ನ ಫ್ರಿಡ್ಜ್‌ನಲ್ಲಿ ಇಟ್ಟ, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನುವುದಿಲ್ಲ.
-ಎಂ. ಡಿ. ಪಲ್ಲವಿ

ಧ್ವನಿವ್ಯವಸ್ಥೆಯ ಬೇಕು - ಬೇಡಗಳ ಅರಿತುಕೊಳ್ಳಬೇಕು

ಪ್ರತಿ ಹಾಡುಗಾರರಿಗೆ ತಮ್ಮದೇ ಆದ ಧ್ವನಿವ್ಯವಸ್ಥೆ ಇರುತ್ತದೆ. ಅದಕ್ಕೆ ಅದರದೇ ಆದ ಬೇಕು–ಬೇಡಗಳೂ ಇರುತ್ತವೆ.  ಅದನ್ನು ಪರೀಕ್ಷಿಸಿ ಅವಲೋಕಿಸುವುದರ ಮೂಲಕವೇ ಆ ಧ್ವನಿವ್ಯವಸ್ಥೆಯ ಬೇಕು– ಬೇಡಗಳನ್ನು ಅರಿತುಕೊಳ್ಳಬೇಕು. ಅದನ್ನು ಆಧರಿಸಿಯೇ ಗಾಯಕ/ಗಾಯಕಿಯರು ಧ್ವನಿ ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ.

ಕೆಲವರಿಗೆ ಕೆಲವು ಪದಾರ್ಥಗಳು ಆಗುವುದಿಲ್ಲ. ಉದಾಹರಣೆಗೆ ಅನಾನಸ್‌ ಹಣ್ಣು ಆರೋಗ್ಯಕ್ಕೆ ತುಂಬ ಒಳ್ಳೆಯದು. ಆದರೆ ಕೆಲವರಿಗೆ ಆ ಹಣ್ಣನ್ನು ತಿಂದರೆ ಆಗುವುದಿಲ್ಲ. ಹಾಗೆಯೇ ಕಿತ್ತಲೆ ಕೂಡ ಪೌಷ್ಟಿಕ. ಆದರೆ ಕೆಲವರಿಗೆ ಕಿತ್ತಲೆ ಹಣ್ಣು ತಿಂದರೆ ಆಗುವುದಿಲ್ಲ. ಹೀಗೆ ಒಬ್ಬಬ್ಬರ ಧ್ವನಿ ಪ್ರಕೃತಿಗೆ ಒಂದೊಂದು ಹೊಂದುವುದಿಲ್ಲ. ಅದನ್ನು ಅವರೇ ಕಂಡುಕೊಳ್ಳಬೇಕು. ತನ್ನ ಧ್ವನಿಪ್ರಕೃತಿಗೆ ಯಾವುದು ಹೊಂದುತ್ತದೆ, ಯಾವುದು ಹೊಂದುವುದಿಲ್ಲ ಎನ್ನುವುದನ್ನು ಗಾಯಕ ಚೆನ್ನಾಗಿ ತಿಳಿದುಕೊಂಡಿರಬೇಕು.

ವೈಯಕ್ತಿಕವಾಗಿ ನಾನು ಧ್ವನಿ ರಕ್ಷಣೆಗೆ ಅಂತಲೇ ಯಾವುದೇ ವ್ಯಾಯಾಮ ಮಾಡುವುದಿಲ್ಲ. ಐಸ್‌ವಾಟರ್‌, ಎಣ್ಣೆ ಪದಾರ್ಥ ಎಲ್ಲವನ್ನೂ ತಿನ್ನುತ್ತೇನೆ. ಅದರಿಂದ ನನಗೇನೂ ತೊಂದರೆ ಆಗುವುದಿಲ್ಲ. ಕಳಪೆ ಎಣ್ಣೆ ಪದಾರ್ಥ, ಖಾರದ ಪದಾರ್ಥಗಳನ್ನು ಗಾಯಕ  ಸಾಧ್ಯವಾದಷ್ಟೂ ಕಡಿಮೆ ತಿನ್ನಬೇಕು. ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು. ಚೆನ್ನಾಗಿ ನಿದ್ದೆ ಮಾಡಬೇಕು.

ಒಬ್ಬ ಕ್ರೀಡಾಪಟು ಒಂದು ಮ್ಯಾಚ್‌ಗೆ ಮುನ್ನ ಹೇಗೆ ತನ್ನ ದೇಹವನ್ನು ಹುರಿಗೊಳಿಸಿಕೊಳ್ಳುತ್ತಾನೋ ಹಾಗೆಯೇ ಒಬ್ಬ ಗಾಯಕನೂ ಕಾರ್ಯಕ್ರಮಕ್ಕೆ ಮುನ್ನ ಸಿದ್ಧವಾಗಬೇಕಾಗುತ್ತದೆ. ಗಂಟೆಗಟ್ಟಲೆ ನಿರಂತರವಾಗಿ ಹಾಡುವುದು ಅವನ ಧ್ವನಿ ಸಾಮರ್ಥ್ಯಕ್ಕೊಂದು ಸವಾಲು.

ನಿರಂತರವಾಗಿ ಅಭ್ಯಾಸ ಮಾಡುತ್ತಿರುವುದರಿಂದ ಈ ಸಾಮರ್ಥ್ಯವನ್ನು ಗಳಿಸಿಕೊಳ್ಳಬಹುದು. ಚೆನ್ನಾಗಿ ನಿದ್ದೆ ಮಾಡಿ ಬೆಳಗಿನ ಹೊತ್ತು ಸಂಗೀತಾಭ್ಯಾಸ ಮಾಡುವುದು ಒಳ್ಳೆಯದು ಎನ್ನುತ್ತಾರೆ. ಆದರೆ ನನಗೆ ಸಂಗೀತ ಅಭ್ಯಾಸಕ್ಕೆ ಇಂಥದ್ದೇ ಸಮಯ, ಜಾಗ ಅಂತೆಲ್ಲ ಏನೂ ಇಲ್ಲ. ಮನೆ, ಕಾರು, ಸ್ಟುಡಿಯೊ, ಕೂತಲ್ಲಿ ನಿಂತಲ್ಲಿ ಎಲ್ಲೆಂದರಲ್ಲಿ ಸಂಗೀತ ಅಭ್ಯಾಸ ಮಾಡುತ್ತಿರುತ್ತೇನೆ. ಆದ್ದರಿಂದ ನನಗೆ ನಿರಂತರವಾಗಿ ಹಾಡುವುದು ಅಷ್ಟೇನೂ ಸವಾಲು ಎನಿಸುವುದಿಲ್ಲ.
-ರಾಜೇಶ್‌ ಕೃಷ್ಣನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT