ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ವಾಹನಗಳ ತಪಾಸಣೆ

Last Updated 30 ಜೂನ್ 2016, 19:33 IST
ಅಕ್ಷರ ಗಾತ್ರ

ಬೆಂಗಳೂರು: ಸುರಕ್ಷಾ ಕ್ರಮಗಳನ್ನು ಪಾಲಿಸದೇ ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳ ವಿರುದ್ಧ  ವಿಶೇಷ ಕಾರ್ಯಾಚರಣೆ ನಡೆಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.

ಇತ್ತೀಚಿಗೆ ಉಡುಪಿಯಲ್ಲಿ ನಡೆದ ಶಾಲಾ ವಾಹನ ಅಪಘಾತದ ಬಳಿಕ ವ್ಯಕ್ತವಾಗಿರುವ ಪೋಷಕರ ಆತಂಕಕ್ಕೆ ಪೂರಕವಾಗಿ ಈ ಬೆಳವಣಿಗೆ ನಡೆದಿದೆ.
ಸುರಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಗರದ ಹಲವು ಶಾಲೆಗಳಿಗೆ ಬಹು ಹಿಂದೆಯೇ ನೋಟಿಸ್‌ ನೀಡಲಾಗಿತ್ತು.  ಆದರೂ, ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ವಾಹನಗಳಲ್ಲಿ ತುಂಬುವುದು  ನಿಂತಿಲ್ಲ. ಅದು ಸಾಮಾನ್ಯ ಸಂಗತಿಯಾಗಿದೆ ಎನ್ನುತ್ತಾರೆ ಸಾರಿಗೆ ಇಲಾಖೆಯ ಅಧಿಕಾರಿಗಳು.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸಾರಿಗೆ ಇಲಾಖೆಯ ಜಂಟಿ ಆಯುಕ್ತ ನರೇಂದ್ರ ಹೋಳ್ಕರ್‌, ‘ಸುರಕ್ಷಾ ಕ್ರಮಗಳನ್ನು ಪಾಲಿಸದೇ ಮಕ್ಕಳನ್ನು  ಕಾನೂನು ಬಾಹಿರವಾಗಿ ಕರೆದೊಯ್ಯುತ್ತಿರುವ ವಾಹನಗಳನ್ನು ಇತ್ತೀಚೆಗೆ ಜಪ್ತಿ ಮಾಡಲಾಗಿತ್ತು.  ಈಗಲೂ ಅಂಥ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

‘ಸುರಕ್ಷಾ ನಿಯಮಗಳನ್ನು ಪಾಲಿಸದ ಹಾಗೂ 2013ರ ನಿಯಮಗಳನ್ವಯ ಶಾಲಾ ವಾಹನ ಸುರಕ್ಷತಾ ಸಮಿತಿ ಅಗತ್ಯ ಅನುಮೋದನೆ ಇಲ್ಲದೇ ಮಕ್ಕಳನ್ನು ಕರೆದೊಯ್ಯುವ ವಾಹನಗಳ ಕಾರ್ಯಾಚರಣೆ ಕಾನೂನು ಬಾಹಿರ. ಇಂಥ ವಾಹನಗಳ ವಿರುದ್ಧ ಶೀಘ್ರವೇ ವಿಶೇಷ ಕಾರ್ಯಾಚರಣೆ ನಡೆಸುತ್ತೇವೆ’ ಎಂದರು. ಆದರೆ, ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದರು.

ಕಾರ್ಯಾಚರಣೆ ಕಷ್ಟ?:  ‘ಕಾನೂನು ಬಾಹಿರ ವಾಹನಗಳ ಮೇಲೆ ದಿಢೀರ್ ದಾಳಿ ನಡೆಸುವುದು ಕಷ್ಟವಲ್ಲ, ಆದರೆ, ಅಪಾಯಕಾರಿ. ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳನ್ನು ನೋಡಿದ ಕೂಡಲೇ ವಾಹನಗಳ ಚಾಲಕರು, ಮಕ್ಕಳನ್ನು ರಸ್ತೆಯಲ್ಲೇ ಇಳಿಸಿ ಬಿಡುತ್ತಾರೆ. ಇಲ್ಲವೇ ವಾಹನವನ್ನು ಬಿಟ್ಟು ಹೋಗುತ್ತಾರೆ’ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಜೂನ್‌ನಲ್ಲಿ 210 ಪ್ರಕರಣ
‘ಜಾಗೃತಿ ಕಾರ್ಯ ಹಾಗೂ ವಿಶೇಷ ಕಾರ್ಯಾಚರಣೆ ಎರಡೂ ನಡೆಯುತ್ತಿದೆ. ಕಳೆದ ವರ್ಷ ಸುಮಾರು ಎರಡೂವರೆ ತಿಂಗಳಲ್ಲಿ 8,900ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದೆವು.

ಈ ವರ್ಷ ಜೂನ್‌ ತಿಂಗಳಲ್ಲಿ 210 ಪ್ರಕರಣ ದಾಖಲಿಸಿದ್ದೇವೆ’ ಎಂದು ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ನಿಯಮ ಹೇಳುವುದೇನು?

*ಶಾಲಾ ವಾಹನವು 12+1 ಸೀಟುಗಳಿಂತ ಹೆಚ್ಚಿನ ಸಾಮರ್ಥ್ಯ ಹೊಂದಿರಬಾರದು
*ಪ್ರತಿ ವಾಹನದಲ್ಲೂ ಅಟೆಂಡರ್‌ ಇರಬೇಕು
*ಪ್ರತಿ ಶಾಲೆಯೂ ಶಾಲಾ ವಾಹನ ಸುರಕ್ಷಾ ಸಮಿತಿ ರಚಿಸಬೇಕು
*12 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳಾದರೆ, ಶಾಲಾ ವಾಹನದ ಸಾಮರ್ಥ್ಯಕ್ಕಿಂತ ಒಂದೂವರೆ ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕರೆದೊಯ್ಯಲು ಅವಕಾಶವಿದೆ
*ಶಾಲಾ ಬ್ಯಾಗ್‌ಗಳನ್ನು ಇಡಲು ಅಗತ್ಯ ಸ್ಥಳಾವಕಾಶ ಕಲ್ಪಿಸಬೇಕು
*ಶಾಲಾ ವಾಹನಗಳು ಕಪ್ಪುಗಾಜು ಹೊಂದಿರಬಾರದು
*ವಾಹನದ ಎಲ್‌ಪಿಜಿ ಟ್ಯಾಂಕ್‌ ಮೇಲೆ ಮಕ್ಕಳನ್ನು ಕೂರಿಸಲು ಆಸನಗಳ ವ್ಯವಸ್ಥೆ ಮಾಡಿರಬಾರದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT