ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗೆ ಬಂದ ಹಕ್ಕಿಗಳು

Last Updated 21 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಅದೊಂದು ದಿನ ವಿಜಾಪುರ ಜಿಲ್ಲೆಯ ಹುನಗುಂದದ ಸರ್ಕಾರಿ ಶಾಲೆಗೆ ನನ್ನ ಗುರುಗಳಾದ ಎಸ್ಕೆ ಸರ್ ಅವರನ್ನು ಭೇಟಿಯಾಗಲು ಹೋಗಿದ್ದೆ. ಶಾಲೆ ಪ್ರವೇಶಿಸುತ್ತಿದ್ದಂತೆ ಎಲ್ಲಿಂದಲೋ ಪಕ್ಷಿಗಳ ನಿನಾದ ಕೇಳಿಬಂತು.

ಮೇಲೆ ನೋಡಿದಾಗ ಅರಳಿ ಮರದಲ್ಲಿ ಬಗೆಬಗೆಯ ಪಕ್ಷಿಗಳನ್ನು ಕಂಡು ನಿಬ್ಬೆರಗಾದೆ. ಹತ್ತಿರಕ್ಕೆ ಹೋಗುವಷ್ಟರಲ್ಲೇ ಮಕ್ಕಳಿಗೆ ಊಟದ ಸಮಯವಾಗಿ ಅವರ ಗಲಾಟೆ ಹೆಚ್ಚಾಯಿತು. ಗಲಾಟೆಗೆ ಹಕ್ಕಿಗಳೆಲ್ಲ ಜಾಗ ಖಾಲಿ ಮಾಡಿದವು. ಕಾದರೂ ಮತ್ತೆ ಅತ್ತ ಸುಳಿಯಲೇ ಇಲ್ಲ.

ಹೇಗಾದರೂ ಮಾಡಿ ನನ್ನ ಕ್ಯಾಮೆರಾ ಕಣ್ಣಲ್ಲಿ ಇವುಗಳನ್ನು ಸೆರೆ ಹಿಡಿದೇ ಬಿಡುವ ಪಣ ತೊಟ್ಟೆ. ಇನ್ನೊಂದು ದಿನ ನನ್ನ ಆಸೆ ಕೈಗೂಡಿತು. ಮಕ್ಕಳ ಗಲಾಟೆ ಇರದ ಸಮಯ ನೋಡಿ ಮರದ ಬಳಿ ಹೋದೆ. ಕಾಡು ಕಾಗೆ, ಕರಿತಲೆ ಗೊರವಂಕ (ಕಬ್ಬಕ್ಕಿ), ಕೆಂಪು ಕಿಬ್ಬೊಟ್ಟೆಯ ಪಿಕಳಾರ, ಕೋಗಿಲೆ, ಗೊರವಂಕ, ಕಾಜಾಣ, ರಾಮದಾಸ ಹದ್ದು, ಬಿಳಿ ಚಟಕಾ, ಕಪ್ಪು-ಬಿಳಿ ಸಿಪಿಲೆ, ಗ್ರೇಟ್ ಟಿಟ್, ಕಾಪೆರ್‌ಸ್ಮಿತ್‌ಬಾರ್‌ಬೆಟ್... ಅಬ್ಬಾ ಒಂದೇ ಎರಡೇ... ರೆಂಬೆಯಿಂದ ರೆಂಬೆಗೆ ಹಾರುತ್ತಾ ಯಾರ ಹಂಗೂ ಇಲ್ಲದೇ ಅರಳಿಮರದ ಹಣ್ಣುಗಳನ್ನು ತಿನ್ನುತ್ತಿದ್ದವು. ಎಲ್ಲವೂ ನನ್ನ ಕ್ಯಾಮೆರಾ ಒಳಹೊಕ್ಕವು.

ಅಷ್ಟರಲ್ಲಿ ಪುನಃ ಊಟದ ಸಮಯ. ಗಲಾಟೆ ಮಾಡಬೇಡಿ ಎಂದು ಹೇಳಿದರೂ ಕೇಳದೇ ಗಲಾಟೆ ಮಾಡಲಾರಂಭಿಸಿದರು ಮಕ್ಕಳು. ಅವರಲ್ಲಿ ಕೆಲವರು ಕಲ್ಲನ್ನೂ ಒಗೆದರು. ಹಕ್ಕಿಗಳೆಲ್ಲ ಪುರ್ರನೆ ಹಾರಿಹೋದವು. ಮಕ್ಕಳನ್ನು ಕರೆದು ಆ ಹಕ್ಕಿಗಳ ಫೋಟೊ ತೋರಿಸಿದೆ. ಈ ಮರದಲ್ಲಿ ಇಷ್ಟೆಲ್ಲ ಹಕ್ಕಿಗಳು ದಿನವೂ ಬರುತ್ತದೆ ಎಂಬುದು ಮಕ್ಕಳಿಗೆ ತಿಳಿದೇ ಇರಲಿಲ್ಲ. ಬಹಳ ಅಚ್ಚರಿಗೊಂಡರು. ಪರಿಸರ, ಪಕ್ಷಿಗಳ ಬಗ್ಗೆ ಒಂದಿಷ್ಟು ‘ಭಾಷಣ ಬಿಗಿದು’ ಬಂದೆ. ಅದೆಷ್ಟು ಅವರಿಗೆ ಅರ್ಥ ಆಗಿತ್ತೋ ಆಗ ನನಗೆ ತಿಳಿದಿರಲಿಲ್ಲ.

ಸ್ವಲ್ಪ ದಿನ ಬಿಟ್ಟು ಪುನಃ ಶಾಲೆಗೆ ಹೋದೆ. ನನಗೇ ಆಶ್ಚರ್ಯವಾಯಿತು.  ಕೆಲವು ಮಕ್ಕಳು ಗಲಾಟೆ ಮಾಡದೇ, ಕುಚೇಷ್ಠೆ ಮಾಡದೇ  ಮರದ ಮೇಲಿರುವ ಪಕ್ಷಿಗಳನ್ನು ನೋಡುತ್ತಿದ್ದರು. ನನ್ನ ಭಾಷಣ ಸಾರ್ಥಕ ವಾಯಿತೆಂದು ಖುಷಿ ಪಟ್ಟೆ. ನಮ್ಮ ಸುತ್ತಲಿನ ಪರಿಸರ, ಪ್ರಾಣಿ, ಪಕ್ಷಿಗಳ ಜೊತೆಗೆ ಒಡನಾಟ, ನೋಡುವ ಅಭಿರುಚಿ ಮಕ್ಕಳಿಗೂ ಬೆಳೆಸಿದರೆ ಎಷ್ಟು ಒಳಿತಲ್ಲವೇ ಎನ್ನಿಸಿತು.             

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT