ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯಲ್ಲಿ ‘ನೀತಿ ಪಾಠ’

ಬೆಳದಿಂಗಳು
Last Updated 16 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ತರಗತಿಯಲ್ಲಿ ಶಿಕ್ಷಕರು ಮಕ್ಕಳಲ್ಲೊಂದು ಪ್ರಶ್ನೆ ಕೇಳಿದರು. ‘ಜಗತ್ತಿನ ಒಳ್ಳೆಯವರೆಲ್ಲಾ ಕೆಂಪಾಗಿಯೂ, ಕೆಟ್ಟವರೆಲ್ಲರೂ ಹಸಿರಾಗಿಯೂ ಇರುವುದಾದರೆ ನೀವು ಯಾವ ಬಣ್ಣದವರಾಗಿರಲು ಬಯಸುತ್ತೀರಿ?’
ಮಕ್ಕಳು ಉತ್ತರಿಸಲಿಲ್ಲ. ಕೊನೆಗೆ ಆ ಶಿಕ್ಷಕ ಪ್ರತಿಯೊಬ್ಬರೂ ಇದಕ್ಕೆ ಉತ್ತರಿಸಲೇಬೇಕು ಎಂದು ಒತ್ತಾಯಿಸಿದಾಗ ಮೊದಲ ಬಂದ ಉತ್ತರ ಹೀಗಿತ್ತು. ‘ನಾನು ಕೆಂಪು ಮತ್ತು ಹಸಿರು ಬಣ್ಣದ ಪಟ್ಟಿಗಳಿರುವವನಾಗಿರುತ್ತೇನೆ!’

ಈ ಶಿಕ್ಷಕ ಉಳಿದ ವಿದ್ಯಾರ್ಥಿಗಳಿಂದ ಉತ್ತರ ಬಯಸಲಿಲ್ಲ. ಬಹುಶಃ ಆತನಿಗೆ ಜಗತ್ತಿನ ದೊಡ್ಡ ಸತ್ಯವೊಂದು ಅರಿವಾಗಿಬಿಟ್ಟಿತ್ತು. ಒಳಿತು ಮತ್ತು ಕೆಡುಕುಗಳು ಹೆಚ್ಚಿನವರು ಅಂದುಕೊಳ್ಳುವಂತೆ ಬಹಳ ಸರಳ ರೇಖಾತ್ಮಕವಾಗಿ ವಿಭಜಿಸಿ ಅರಿಯಲು ಸಾಧ್ಯವಿರುವ ಸಂಗತಿಗಳಲ್ಲ. ಶಿಕ್ಷಕರ ಪ್ರಶ್ನೆಗೆ ಉತ್ತರಿಸಿ ವಿದ್ಯಾರ್ಥಿ ಅದನ್ನು ತನಗೆ ಅರಿವಿಲ್ಲದೆಯೇ ಕಂಡುಕೊಂಡಿದ್ದ. ಆತನ ಉತ್ತರ ಒಳಿತು ಕೆಡುಕೆಂಬ ಮೌಲ್ಯಗಳನ್ನು ಪರಿಗಣಿಸಿಯೇ ಬಂದಿರಬೇಕೆಂದೇನೂ ಇಲ್ಲ. ಬರೇ ಕೆಂಪಾಗಿಯೋ ಹಸಿರಾಗಿಯೋ ಇರುವುದಕ್ಕಿಂತ ಹುಲಿಯಂತೆ ಎರಡೆರಡು ಬಣ್ಣಗಳ ಪಟ್ಟೆ ಉತ್ತಮ ಎಂಬ ಭಾವ ಅವನ ಮನಸ್ಸಿನಲ್ಲಿದ್ದರಲೂಬಹುದು. ಮನುಷ್ಯನ ಮೂಲಗುಣವೇ ಇದು. ಆತ ಒಳಿತು ಮತ್ತು ಕೆಡುಕುಗಳೆರಡನ್ನೂ ಏಕಕಾಲದಲ್ಲಿ ಹೊಂದಿರಬಲ್ಲ. ಅಷ್ಟಕ್ಕೂ ಈ ಒಳಿತು ಮತ್ತು ಕೆಡುಕುಗಳೆರಡೂ ಬಹಳ ಸಾಪೇಕ್ಷ.

ಪ್ರಾಚೀನ ಗ್ರೀಕರು ಮನುಷ್ಯನ ಲಕ್ಷಣಗಳನ್ನು ವಿವರಿಸಿಕೊಂಡಿರುವುದನ್ನು ಗಮನಿಸಿದರೆ ಇದು ಹೆಚ್ಚು ಚೆನ್ನಾಗಿ ಅರ್ಥವಾಗುತ್ತದೆ. ಅವರ ಮಟ್ಟಿಗೆ ಮನುಷ್ಯನೆಂದರೆ ದೇವರಿಗಿಂತ ಕೀಳು, ಆದರೆ ಪ್ರಾಣಿಗಳಿಗಿಂತ ಮೇಲು. ಆದರೆ ಅವನು ಇವರೆಡೂ ಹೌದು. ವಿರೋಧಾಭಾಸಗಳಿಂದ ತುಂಬಿದ ಈ ಹೇಳಿಕೆ ಬಹುಶಃ ಮಾನುಷಿಕ ಸ್ಥಿತಿಯ ಸರಿಯಾದ ವಿವರಣೆ ಎನಿಸುತ್ತದೆ. ದೇವರು ‘ಸಂಪೂರ್ಣ’. ಅಂದರೆ ಆದರ್ಶ ಗುಣಗಳಿರುವವನು. ಪ್ರಾಣಿ ಎಂದರೆ ಯಾವ ಆದರ್ಶ ಗುಣಗಳೂ ಇಲ್ಲದಿರುವುದು. ಮನುಷ್ಯ ಇವರೆಡರ ಮಧ್ಯೆ ಇದ್ದಾನೆ. ಅಂದರೆ ಮನುಷ್ಯ ತನ್ನ ಪ್ರಯತ್ನದಿಂದ ಸಂಪೂರ್ಣನಾಗಲೂ ಸಾಧ್ಯ. ಹಾಗೆಯೇ ತನ್ನ ಪ್ರಯತ್ನದಿಂದ ಪ್ರಾಣಿಯಾಗಲೂ ಸಾಧ್ಯ. ಆಯ್ಕೆ ಅವನ ಕೈಯಲ್ಲಿರುತ್ತದೆ. ಬಹುಶಃ ಪ್ರಾಣಿಯೊಂದಕ್ಕೆ ಇಂಥ ಆಯ್ಕೆಯಿಲ್ಲ. ಅದಕ್ಕೆ ಮುಖ್ಯ ಕಾರಣ ಮನುಷ್ಯನಿಗೆ ದತ್ತವಾಗಿರುವ ವಿವೇಚನೆಯ ಶಕ್ತಿ ಪ್ರಾಣಿಗಳಿಗಿಲ್ಲ.

‘ಮೊದಲು ಮಾನವನಾಗು’ ಎಂಬುದನ್ನು ಈ ಅರ್ಥದಲ್ಲಿಯೇ ನಾವು ಗ್ರಹಿಸಬೇಕಾಗುತ್ತದೆ. ಅಂದರೆ ಮೊದಲಿಗೆ ನಾವು ಮನುಷ್ಯ ಸ್ಥಿತಿಯ ಕುರಿತಂತೆ ಅರಿವು ಮೂಡಿಸಿಕೊಳ್ಳಬೇಕು. ಮುಂದಿನದ್ದು ದೇವರಂತೆ ಸಂಪೂರ್ಣನಾಗುವುದೇ ಅಥವಾ ಪ್ರಾಣಿಯಂತೆ ಕೇವಲ ಆಹಾರವನ್ನಷ್ಟೇ ಗಮನದಲ್ಲಿಟ್ಟುಕೊಂಡ ಬದುಕನ್ನು ಮುಂದುವರಿಸುವುದೇ ಎಂಬುದನ್ನು ನಿರ್ಧರಿಸಬಹುದು. ಈ ಮೊದಲು ಮನುಷ್ಯನಾಗುವ ಕ್ರಿಯೆ ನಮ್ಮನ್ನು ಸಂಪೂರ್ಣವಾಗಿ ಬದಲಾಯಿಸಿಬಿಡಬಹುದು. ಸಂತನೊಬ್ಬ ಕುರಿಯ ಜೊತೆ ಮಾತನಾಡಿದ ದೃಷ್ಟಾಂತ ಇದನ್ನು ಬಹಳ ಚೆನ್ನಾಗಿ ವಿವರಿಸುತ್ತದೆ.

ಒಂದು ದಿನ ಹುಲ್ಲುಗಾವಲಿನಲ್ಲಿ ಮೇಯುತ್ತಿದ್ದ ಕುರಿಯೊಂದನ್ನು ಕಂಡ ಸಂತ ಅದನ್ನು ಸೆಳೆದುಕೊಂಡು ಕಿವಿಯಲ್ಲಿ ಏನೋ ಹೇಳಿದ. ಆ ಕ್ಷಣದಿಂದ ಕುರಿ ಹುಲ್ಲು ತಿನ್ನುವುದನ್ನೇ ಬಿಟ್ಟಿತು. ನೀರನ್ನು ಕುಡಿಯುವುದನ್ನೂ ಬಿಟ್ಟು ಸದಾ ಚಿಂತಾಕ್ರಾಂತನಾಗಿರುತ್ತಿತ್ತು. ಕುರಿಗಾಹಿಗಳು ಇದಕ್ಕೇನೋ ಕಾಯಿಲೆ ಬಂದಿದೆ ಎಂದು ಭಾವಿಸಿ ಚಿಂತಿತರಾದರು. ವೈದ್ಯರು ಬಂದು ನೋಡಿದರೂ ಅದಕ್ಕೆ ಬಂದಿರುವ ಕಾಯಿಲೆ ಏನೆಂದು ತಿಳಿಯಲಿಲ್ಲ. ಕೆಲ ದಿನಗಳು ಕಳೆದ ನಂತರ ಆ ಸಂತ ಅದೇ ಹಾದಿಯಲ್ಲಿ ಬಂದ. ಕುರಿಗಾಹಿಗಳೆಲ್ಲರೂ ಆತನ ಬಳಿ ಸಾರಿ ಕುರಿಯ ವಿಚಿತ್ರ ವರ್ತನೆಯನ್ನು ವಿವರಿಸಿ, ‘ನೀವು ಬಂದು ಅದರ ಕಿವಿಯಲ್ಲಿ ಏನೋ ಮಂತ್ರ ಹೇಳಿದ ನಂತರ ಹೀಗಾಗಿದೆ. ಅದ್ಯಾವ ಮಂತ್ರ ಹೇಳಿದಿರಿ ಸ್ವಾಮಿ?’ ಎಂದು ಕೇಳಿದರು. ಆ ಸಂತ ಹೇಳಿದ ‘ಅದೊಂದು ಸಣ್ಣ ಮಂತ್ರ. ಇದನ್ನು ನೀವೂ ಅರಿಯಬೇಕು–ಸಾವು ಇದೆ’.

ಕುರಿಯಂಥ ಪ್ರಾಣಿಯನ್ನೇ ಚಿಂತೆಗೆ ಕೆಡವಿದ ಈ ಸತ್ಯ ಮನುಷ್ಯನನ್ನು ಚಿಂತೆಗೆ ಹಚ್ಚದೆ ಇದ್ದೀತೆ? ಅದರ ಪರಿಣಾಮವೇ ಮತ, ಧರ್ಮ ಮತ್ತು ತಾತ್ವಿಕತೆಗಳು. ಬದುಕಿನ ಅರ್ಥವೇನು ಎಂದು ಕಂಡುಕೊಳ್ಳುವುದಕ್ಕೆ ನಡೆದ ಲೆಕ್ಕವಿಲ್ಲದಷ್ಟು ಪ್ರಯತ್ನಗಳು. ಆದರೆ ಸಾಮಾನ್ಯ ಮನುಷ್ಯ ಈ ಸಾವಿನ ಅಸ್ತಿತ್ವದ ಬಗ್ಗೆ ಚಿಂತಿಸದೆ ತಾನು ಚಿರಂಜೀವಿಯೇನೋ ಎಂಬಂತೆ ಬದುಕು ಸಾಗಿಸುತ್ತಿರುತ್ತಾನೆ. ಇದೂ ಒಂದು ವಿರೋಧಾಭಾಸವೇ ಸರಿ. ಸಾವಿನ ಕುರಿತಷ್ಟೇ ಚಿಂತಿಸಲು ಹೊರಟರೆ ಮನುಷ್ಯನ ಬದುಕಿಗೆ ಅರ್ಥವೇ ಇರುವುದಿಲ್ಲ. ಮನುಷ್ಯನೂ ಸೇರಿದಂತೆ ಎಲ್ಲಾ ಪ್ರಾಣಿಗಳಿಗೂ ಸಾವಿನ ಅರಿವು ಒಂದಲ್ಲಾ ಒಂದು ಬಗೆಯಲ್ಲಿ ಇದ್ದರೂ ಇರುವಷ್ಟು ಕಾಲ ಬದುಕುವುದಕ್ಕೆ ಸೆಣೆಸುವ ಬುದ್ಧಿಯೂ ದತ್ತವಾಗಿದೆ. ಈ ಬದುಕಿನ ಹೋರಾಟ ಎಂಬುದು ಎಷ್ಟು ಒತ್ತಡದಿಂದ ತುಂಬಿದ್ದು ಎಂದರೆ ಇಲ್ಲಿ ಸಾವಿನ ನೆನಪೇ ಇರುವುದಿಲ್ಲ!

ಒಳಿತು ಮತ್ತು ಕೆಡುಕುಗಳೆರಡನ್ನೂ ಒಟ್ಟೊಟ್ಟಿಗೇ ಸ್ವೀಕರಿಸಿದಂತೆ ನಾವು ಸಾವು ಮತ್ತು ಬದುಕುಗಳೆರಡನ್ನೂ ಒಟ್ಟೊಟ್ಟಿಗೇ ಸ್ವೀಕರಿಸಬೇಕು. ಮಾತಿಗೆ ನಾವು ‘ಸಾವು ಅನಿವಾರ್ಯ’ ಎನ್ನುತ್ತೇವೆ. ಈ ಮಾತಿನೊಳಗೆ ಅಡಗಿರುವ ಮತ್ತೊಂದು ಸತ್ಯವನ್ನು ನಾವು ಮರೆತಿರುತ್ತೇವೆ. ‘ಅನಿವಾರ್ಯವಾದ ಸಾವಿಗೆ ಮುನ್ನ ಒಂದು ಬದುಕೂ ಅನಿವಾರ್ಯವೇ’. ಕತ್ತಲಿನ ಮೂಲಕ ಬೆಳಕು ತನ್ನ ಅನನ್ಯತೆಯನ್ನು ಕಂಡುಕೊಂಡಂತೆ ಸಾವಿನ ಮೂಲಕ ಬದುಕು ತನ್ನನ್ನು ಗುರುತಿಸಿಕೊಳ್ಳುತ್ತದೆ. ಈ ದ್ವಂದ್ವಗಳಲ್ಲಿಯೂ ನಾವು ನಮ್ಮನ್ನು ಅರಿಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT