ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ವಿರುದ್ಧ ನಗರಸಭೆ ಸದಸ್ಯರ ಆಕ್ರೋಶ

ಶಿಷ್ಟಾಚಾರ ಉಲ್ಲಂಘನೆ: ಕುಡಿಯುವ ನೀರು ಸರಬರಾಜು ಯೋಜನೆಯ ಶಂಕುಸ್ಥಾಪನೆ ಸಮಾರಂಭಕ್ಕೆ ಬಹಿಷ್ಕಾರ
Last Updated 25 ಅಕ್ಟೋಬರ್ 2014, 8:53 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದಲ್ಲಿ ಶನಿವಾರ ಆಯೋಜಿಸಿರುವ ಕುಡಿಯುವ ನೀರು ಸರಬರಾಜು ವಿತರಣಾ ಜಾಲ ಯೋಜನೆಯ ಶಂಕುಸ್ಥಾಪನೆ ಸಮಾರಂಭವನ್ನು ಬಹಿಷ್ಕರಿಸಲಾಗುವುದು ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎನ್‌. ಪ್ರಭುದೇವ್‌ ಹೇಳಿದರು.

ಕೇಂದ್ರ, ರಾಜ್ಯ ಸರ್ಕಾರ ಹಾಗೂ ನಗರಸಭೆಯ ಶೇಕಡ 10ರಷ್ಟು ಹಣಕಾಸಿನ ನೆರವಿನೊಂದಿಗೆ ₨ 33 ಕೋಟಿ ವೆಚ್ಚದಲ್ಲಿ ಈ ಯೋಜನೆ ಕೈಗೊಳ್ಳಲಾಗಿದೆ. ನಗರಸಭೆಯಲ್ಲಿ ಮಹಿಳಾ ಅಧ್ಯಕ್ಷರು, ಉಪಾಧ್ಯಕ್ಷರು ಆಡಳಿತ ನಡೆಸುತ್ತಿರುವುದರಿಂದ ಉದ್ದೇಶಪೂರಕವಾಗಿಯೇ ಶಾಸಕರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

₨ 33 ಕೋಟಿಗಳ ಕಾಮಗಾರಿ ಶಂಕುಸ್ಥಾಪನೆ ಸಮಾರಂಭಕ್ಕೆ ಸೌಜನ್ಯಕ್ಕೂ  ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ  ಸದಸ್ಯರ ಸಲಹೆ ಕೇಳಿಲ್ಲ. ಆಹ್ವಾನ ಪತ್ರಿಕೆಯಲ್ಲೂ ಶಿಷ್ಟಾಚಾರ ಉಲ್ಲಂಘಿಸಲಾಗಿದೆ. ಇದಲ್ಲದೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಅಧಿಕಾರಿಗಳಿಗೂ ಯೋಜನೆಯ ಶಂಕುಸ್ಥಾಪನೆ ವಿಚಾರ ಗಮನಕ್ಕೆ ತಂದಿಲ್ಲ. ಶಾಸಕರು ಏಕಪಕ್ಷೀಯವಾಗಿ ಸಮಾರಂಭ ಆಯೋಜಿಸುವ ಕುರಿತು ನಿರ್ಧಾರ ಕೈಗೊಂಡಿದ್ದಾರೆ. ನಗರದ ಅಭಿವೃದ್ಧಿಯಲ್ಲಿ ಸದಸ್ಯರನ್ನು ಸಹಮತಕ್ಕೆ ಪಡೆದರೆ ಮಾತ್ರ ನಾವು ಸಹಕಾರ ನೀಡಲು ಸಿದ್ಧ ಎಂದು ಅವರು ಹೇಳಿದರು.

ನಗರಸಭೆ ಅಧ್ಯಕ್ಷೆ ಶಂಶುನ್ನಿಸಾ ಮತ್ತು ಉಪಾಧ್ಯಕ್ಷೆ ಎನ್.ಮಂಜುಳ ಮಾತನಾಡಿ, ‘ನಗರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲು  ಶಾಸಕರಿಗೆ ಸಹಕಾರ ನೀಡುತ್ತೇವೆ.  ಆದರೆ, ಕಾರ್ಯಕ್ರಮಗಳಲ್ಲಿ ಶಾಸಕರು ನಮ್ಮನ್ನು ಈ ರೀತಿ ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಲ್ಲ. ನಗರಸಭೆಯಲ್ಲಿ ಅಧಿಕಾರಿಗಳು ಸಹ ನಮ್ಮ ಮಾತು ಕೇಳದಾಗಿದ್ದಾರೆ.  ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿರುವ ಅಧಿಕಾರಿಗಳನ್ನು ಉಳಿಸಲು ಶಾಸಕರು ಪ್ರಯತ್ನ ಮಾಡುತ್ತಾರೆ. ಈಗ ನಡೆಯುತ್ತಿರುವ ಶಂಕುಸ್ಥಾಪನೆ ಕಾರ್ಯಕ್ರಮ ಸಹ ಇದಕ್ಕೆ ಸಾಕ್ಷಿಯಾಗಿದೆ. ಈ ಬಗ್ಗೆ ಕೇಂದ್ರ, ರಾಜ್ಯ ಮಹಿಳಾ ಆಯೋಗ, ಮುಖ್ಯಮಂತ್ರಿಗಳಿಗೆ, ಉಸ್ತುವಾರಿ ಸಚಿವರಿಗೆ, ಪೌರಾಡಳಿತ ಸಚಿವಾಲಯ  ಮತ್ತು  ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೂ ದೂರು ನೀಡುತ್ತೇವೆ’ ಎಂದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಮತ್ತು ನಗರಸಭಾ ಸದಸ್ಯ ಆರ್. ಗೋವಿಂದರಾಜು ಮಾತನಾಡಿ, ಶಾಸಕರು ತಾಲ್ಲೂಕಿಗೆ ಬೆಂಗಳೂರಿನ ಕಸ ಬಾರದಂತೆ ತಡೆಯುವಲ್ಲಿ ವಿಫಲರಾಗಿದ್ದಾರೆ. ನಗರಸಭೆಗೆ ಸರ್ಕಾರದಿಂದ ಅನುದಾನ ತಂದಿಲ್ಲ. ಹಳೆಯ ಕಾಮಗಾರಿಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡುತ್ತಾ ಕೇವಲ ಪ್ರಚಾರ ಪ್ರಿಯರಾಗಿದ್ದಾರೆ.  ನಗರಸಭೆಯಲ್ಲಿ ನಡೆದಿರುವ ಅಕ್ರಮ ಖಾತೆ ಮತ್ತು ಆಸ್ತಿ ಒತ್ತುವರಿ ಬಗ್ಗೆ ಜೆಡಿಎಸ್ ಮತ್ತು ಕನ್ನಡ ಪಕ್ಷದ ನಗರಸಭಾ ಸದಸ್ಯರು ಲೋಕಾಯುಕ್ತರು ಸೇರಿದಂತೆ, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಶಾಸಕರು ಮಾತ್ರ ಈ ಬಗ್ಗೆ ಮೃದು ಧೋರಣೆ ತೋರಿಸುವುದರ ಜೊತೆಗೆ ಒತ್ತುವರಿದಾರರು ಬಡವರು ಎಂದು ಅಧಿಕಾರಿಗಳ ಗಮನಕ್ಕೆ ತರುತ್ತಿದ್ದಾರೆ. ಜೆಡಿಎಸ್ ಮತ್ತು ಕನ್ನಡ ಪಕ್ಷದ ವಿರುದ್ಧ ವಿನಾಕಾರಣ ಪಿತ್ತೂರಿ ಮಾಡುತ್ತಿದ್ದಾರೆ ಎಂದು ದೂರಿದರು.

ದೊಡ್ಡಬಳ್ಳಾಪುರ ನಗರಸಭೆಯಲ್ಲಿ ನಡೆದಿರುವ ಅಕ್ರಮ ಖಾತೆಗಳು ಮತ್ತು ಒತ್ತುವರಿ ಕುರಿತು ಲೋಕಾಯುಕ್ತರಿಗೆ ದೂರು ನೀಡಿದ ನಂತರವೂ ಮತ್ತೆ ಅಕ್ರಮಗಳು ನಡೆದಿವೆ. ನಗರಸಭೆ ವ್ಯಾಪ್ತಿಗೆ ಸಮೀಪವಿರುವ ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಪಾಲನಜೋಗಿಹಳ್ಳಿ ಪ್ರದೇಶದಲ್ಲಿ ಅಕ್ರಮ ಖಾತೆಗಳನ್ನು ನಗರಸಭೆಯಲ್ಲಿ ಮಾಡಲಾಗಿದೆ. ನಗರಸಭೆಯ ಗಡಿಯನ್ನು ಗುರುತಿಸುವಂತೆ ಪೌರಾಡಳಿತ ಇಲಾಖೆ ಆದೇಶ ಮಾಡಿದ್ದರೂ ಸಹ ಪೌರಾಯುಕ್ತರು ಈ ಬಗ್ಗೆ ಕ್ರಮಕೈಗೊಂಡಿಲ್ಲ. ನಗರಸಭಾ ಸ್ವತ್ತುಗಳ ಬಗ್ಗೆ ಸಹ ನಗರಸಭೆ ಅಧಿಕಾರಿಗಳಿಗೆ ಕಾಳಜಿ ಇಲ್ಲವಾಗಿದೆ ಎಂದು ಅವರು ದೂರಿದರು.

‘ಬಹಿಷ್ಕಾರ ಸರಿಯಲ್ಲ’

ನಗರಸಭೆ ವ್ಯಾಪ್ತಿಯಲ್ಲಿ ನಡೆ­ಯುವ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಗೆ ಅಧ್ಯಕ್ಷರು, ಸದ­ಸ್ಯರನ್ನು ಆಹ್ವಾನಿಸುವ ಕೆಲಸ ಪೌರಾ­ಯುಕ್ತರದ್ದು. ಶಿಷ್ಟಾಚಾರ­ದಂತೆ ಆಹ್ವಾನ ಪತ್ರಿಕೆಯನ್ನು ಮುದ್ರಿಸ­ಲಾಗಿದೆ. ಜೆಡಿಎಸ್‌ ಸದಸ್ಯರು ನಗರದಲ್ಲಿನ ಅಭಿವೃದ್ಧಿ ಕೆಲಸ­ಗಳನ್ನು ಸಹಿಸದೆ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿ­ದ್ದಾರೆ. ಶಂಕುಸ್ಥಾಪನೆ ಸಮಾರಂಭ ಬಹಿಷ್ಕಾರ ನಿರ್ಧಾರ ಸರಿಯಲ್ಲ. 
 -ಟಿ.ವೆಂಕಟರಮಣಯ್ಯ, ಶಾಸಕರು

ನಗರಸಭಾ ಸದಸ್ಯರಾದ ಪ್ರಕಾಶ್, ವಡ್ಡರಹಳ್ಳಿರವಿ, ಆರ್‌.ಕೆಂಪರಾಜ್‌, ಶಿವಕುಮಾರ್, ಪಿ.ಸಿ. ಲಕ್ಷ್ಮಿನಾರಾಯಣ್, ಸುಶೀಲಾರಾಘವ ಮಾತನಾಡಿ, ಶಾಸಕ ಟಿ. ವೆಂಕಟರಮಣಯ್ಯ  ಅವರು ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಅನುದಾನ ತಂದಿಲ್ಲ. ಸಂಸದರಾದ ಎಂ. ವೀರಪ್ಪಮೊಯಿಲಿ ಹುಡ್ಕೋ ಯೋಜನೆಯಿಂದ ಹಣ ಕೊಡಿಸುವ ಭರವಸೆ ನೀಡಿದರು.

ಸಂಸದರಿಂದ ಯಾವುದೇ ಅನುದಾನ ಬಂದಿಲ್ಲ. ಶಾಸಕರು ಅಭಿವೃದ್ದಿ ಕಾರ್ಯಗಳನ್ನು ಮಾಡುವ ಬದಲು ಅಕ್ರಮ ಖಾತೆಗಳಲ್ಲಿ ಶಾಮೀಲಾಗಿರುವ ಅಧಿಕಾರಿಗಳನ್ನು ರಕ್ಷಿಸುವ ಕಡೆಗೆ ಗಮನ ನೀಡುತ್ತಿದ್ದಾರೆ. ನಗರಸಭಾ ವ್ಯಾಪ್ತಿಯ ಅಭಿವೃದ್ಧಿ ಮತ್ತು ಯಾವುದೇ ಕಾರ್ಯಕ್ರಮಗಳಲ್ಲಿ ನಗರಸಭಾ ಸದಸ್ಯರನ್ನು ನಿರ್ಲಕ್ಷ್ಯ ಮಾಡುತ್ತಾ ಶಾಸಕರು ಮತ್ತು ಪೌರಾಯುಕ್ತರು ನಗರಸಭೆಯನ್ನು ತಮ್ಮ  ಸ್ವಂತ ಆಸ್ತಿಯಂತೆ ಮಾಡಿಕೊಂಡಿದ್ದಾರೆ. ನಗರದಲ್ಲಿನ ಸೋಮೇಶ್ವರ ಬಡಾವಣೆ, ರೋಜೀಪುರ, ಗಂಗಾಧರಪುರ,ಸಂಜಯನಗರದಲ್ಲಿನ ರಾಜಕಾಲುವೆಗಳನ್ನು ಬಲಾಡ್ಯರು ಒತ್ತುವರಿ ಮಾಡಿಕೊಂಡು  ವಾಣಿಜ್ಯ ಸಂಕಿರಣ, ಮನೆಗಳನ್ನು     ನಿರ್ಮಿಸಿಕೊಂಡಿದ್ದಾರೆ. ಇವುಗಳನ್ನು ಈಗಾಗಲೇ ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆ ನಡೆಸಿ ಒತ್ತುವರಿ ಮಾಡಿಕೊಂಡಿರುವ ಕುರಿತು ವರದಿ ನೀಡಿದ್ದಾರೆ. ಇವುಗಳನ್ನು ತೆರವುಮಾಡಿ­ಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT