ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ, ಸಚಿವರ ಪಗಾರ ದುಪ್ಪಟ್ಟು

ನಿವೃತ್ತಿ ವೇತನದಲ್ಲೂ ಏರಿಕೆ: ಚರ್ಚೆ ಇಲ್ಲದೆ ಮಸೂದೆ ಅಂಗೀಕಾರ
Last Updated 30 ಮಾರ್ಚ್ 2015, 20:20 IST
ಅಕ್ಷರ ಗಾತ್ರ

ಬೆಂಗಳೂರು: ಶಾಸಕರು ಮತ್ತು ಸಚಿವರ ವೇತನ, ಭತ್ಯೆ ಹಾಗೂ ನಿವೃತ್ತಿ ವೇತನವನ್ನು ಬಹುತೇಕ ದುಪ್ಪಟ್ಟುಗೊಳಿಸುವ ಎರಡು ತಿದ್ದುಪಡಿ ಮಸೂದೆಗಳಿಗೆ ವಿಧಾನಮಂಡಲ ಯಾವುದೇ ಚರ್ಚೆ ಇಲ್ಲದೆ ಸೋಮವಾರ ಅಂಗೀಕಾರ ನೀಡಿದೆ.

ಈವರೆಗೆ ತಿಂಗಳಿಗೆ ವೇತನ ಮತ್ತು ಭತ್ಯೆಯ ರೂಪದಲ್ಲಿ ₨ 90 ಸಾವಿರ ಪಡೆಯುತ್ತಿದ್ದ ಶಾಸಕರಿಗೆ ಇನ್ನು ಮುಂದೆ ಸುಮಾರು ₨ 1.55 ಲಕ್ಷ ದೊರೆಯಲಿದೆ. ಅದರ ಜೊತೆಯಲ್ಲೇ ಸದನ ಸಮಿತಿಗಳ ಸಭೆಯ ಪ್ರಯಾಣದ ಭತ್ಯೆ, ವಾಸ್ತವ್ಯ ಭತ್ಯೆ ಮತ್ತು ರೈಲು ಹಾಗೂ ವಿಮಾನ ಪ್ರಯಾಣ ಭತ್ಯೆಗಳಲ್ಲೂ ಹೆಚ್ಚಳ ಮಾಡಲಾಗಿದೆ.

ಶಾಸಕರು ಈಗ ಪಡೆಯುತ್ತಿರುವ ಅಂಚೆ ವೆಚ್ಚ ಮತ್ತು ಕಚೇರಿ ಸಹಾಯಕನ ವೇತನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಉಳಿದಂತೆ ಅವರಿಗೆ ನೀಡುವ ಬಹುತೇಕ ಸೌಲಭ್ಯಗಳ ಮೊತ್ತವನ್ನು ಹೆಚ್ಚಿಸಲಾಗಿದೆ.

ವಿಧಾನಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು, ವಿಧಾನ ಪರಿಷತ್‌ ಸಭಾಪತಿ ಮತ್ತು ಉಪ ಸಭಾಪತಿಯವರ ವೇತನ ಹಾಗೂ ಭತ್ಯೆಗಳನ್ನೂ ಬಹುತೇಕ ದ್ವಿಗುಣಗೊಳಿಸಲಾಗಿದೆ. ವಿರೋಧ ಪಕ್ಷದ ನಾಯಕರು, ಸರ್ಕಾರಿ ಮತ್ತು ವಿರೋಧ ಪಕ್ಷದ ಮುಖ್ಯ ಸಚೇತಕರ ವೇತನ, ಭತ್ಯೆಗಳಲ್ಲೂ ಇದೇ ಪ್ರಮಾಣದ ಏರಿಕೆ ಮಾಡುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಗಿದೆ.

ಮಾಜಿ ಶಾಸಕರ ನಿವೃತ್ತಿ ವೇತನ, ಅವರು ಮತ್ತು ಅವರ ಕುಟುಂಬ ಪಿಂಚಣಿದಾರರ ವೈದ್ಯಕೀಯ ಭತ್ಯೆಯನ್ನೂ ಹೆಚ್ಚಳ ಮಾಡಲಾಗಿದೆ.

ದುಪ್ಪಟ್ಟು ಕೊಡುಗೆ: ಸಚಿವರುಗಳ ವೇತನ, ಭತ್ಯೆ, ಮನೆಬಾಡಿಗೆ, ಮನೆ ನಿರ್ವಹಣೆ ವೆಚ್ಚ, ಪೆಟ್ರೋಲ್‌, ರಸ್ತೆ ಪ್ರಯಾಣ ಭತ್ಯೆಯನ್ನು

ಹೆಚ್ಚಿಸಲಾಗಿದೆ.

ಸಚಿವರ ಮನೆ ಬಾಡಿಗೆ ಭತ್ಯೆ ಮತ್ತು ಮನೆ ನಿರ್ವಹಣೆ ಭತ್ಯೆಯನ್ನು ದುಪ್ಪಟ್ಟು ಮಾಡಲಾಗಿದೆ. ಸಚಿವರು ರಾಜ್ಯದೊಳಗೆ ಮತ್ತು ಹೊರ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ನೀಡುವ ಪ್ರಯಾಣ ಭತ್ಯೆಯನ್ನು ಪ್ರತಿ ಕಿ.ಮೀ.ಗೆ ಒಂದೂವರೆ ಪಟ್ಟು ಹೆಚ್ಚಿಸಲಾಗಿದೆ. ರಾಜ್ಯದೊಳಗಿನ ಮತ್ತು ಹೊರ ರಾಜ್ಯದಲ್ಲಿ ವಾಸ್ತವ್ಯ ಹೂಡಿದಾಗ ದೊರೆಯುವ ಭತ್ಯೆಯಲ್ಲೂ ಗಣನೀಯ ಏರಿಕೆಯಾಗಿದೆ.

ಶಾಸಕರು ಸದನ ಸಮಿತಿಗಳ ಸಭೆಗೆ ಹಾಜರಾಗುವಾಗ ನೀಡುವ ಪ್ರಯಾಣ ಭತ್ಯೆ ಮತ್ತು ವಾಸ್ತವ್ಯ ಭತ್ಯೆಯನ್ನೂ ಇದೇ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ.

ವೇತನ ಪಡೆಯದ ಶಾಸಕ
ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರು ಪ್ರಸಕ್ತ ವಿಧಾನಸಭೆಯ ಸದಸ್ಯರಾದ ದಿನದಿಂದಲೂ ವೇತನ ಮತ್ತು ಭತ್ಯೆಗಳನ್ನು ಪಡೆಯುತ್ತಿಲ್ಲ.

ಶಾಸಕರು, ಸಚಿವರ ವೇತನ ಹಾಗೂ ಭತ್ಯೆ ಹೆಚ್ಚಳ ಮಸೂದೆಗಳನ್ನು ವಿಧಾನಸಭೆಯಲ್ಲಿ ಮಂಡಿಸಿದ ವೇಳೆ ಈ ಕುರಿತು ಮಾತನಾಡಲು ಅವರು ಪ್ರಯತ್ನಿಸಿದರು. ಆದರೆ, ಸ್ಪೀಕರ್‌ ಕಾಗೋಡು ತಿಮ್ಮಪ್ಪ ಮಾತಿಗೆ ಅವಕಾಶ ನೀಡಲಿಲ್ಲ.

*ರೂ.44 ಕೋಟಿ
ಶಾಸಕರ ವೇತನ ಮತ್ತು ಭತ್ಯೆ ಹೆಚ್ಚಳದಿಂದ ಆಗುವ ಹೊರೆ

*ರೂ.3.5 ಕೋಟಿ
ಸಚಿವರ ವೇತನ, ಭತ್ಯೆ ಹೆಚ್ಚಳದ  ಹೊರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT