ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಸ್ಥಾನದಿಂದ ಜಯಾ ಅನರ್ಹ

Last Updated 27 ಸೆಪ್ಟೆಂಬರ್ 2014, 19:59 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಮುಖ್ಯಮಂತ್ರಿಯಾಗಿ ಅಧಿಕಾರ-ದಲ್ಲಿ ಇರುವಾಗಲೇ ಜೈಲು ಶಿಕ್ಷೆಗೆ ಗುರಿಯಾದ ರಾಷ್ಟ್ರದ ಮೊದಲ ಮುಖ್ಯಮಂತ್ರಿ ಎಂಬ ಕಪ್ಪುಚುಕ್ಕೆ ಜಯ-ಲಲಿತಾ ಅವರಿಗೆ ಅಂಟಿ-ಕೊಂಡಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯಿದೆ-ಯಡಿ (ಪಿಸಿಎ) ಜೈಲು ಶಿಕ್ಷೆಗೆ ಗುರಿ-ಯಾಗಿರುವ ಜಯಾ ಅವರ ಮುಂದೆ ಈಗಿರುವ ತಕ್ಷಣದ ಮಾರ್ಗೋಪಾಯ-ವೆಂದರೆ  ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದು. ಆನಂತರವಷ್ಟೇ ಅವರು ತೀರ್ಪಿನ ವಿರುದ್ಧ ಮೇಲ್ಮನವಿ ಹಾಕುವ ಬಗ್ಗೆ ಯೋಚಿಸಬಹುದು.

ಜಯಲಲಿತಾ ಅವರು ಜೈಲು ಶಿಕ್ಷೆಗೆ ಗುರಿಯಾದ ರಾಜ್ಯದ ಎರಡನೇ ಜನಪ್ರತಿನಿಧಿಯಾಗಿದ್ದಾರೆ. ಈ ಮುನ್ನ ಡಿಎಂಕೆ ರಾಜ್ಯಸಭಾ ಸದಸ್ಯ ಟಿ.ಎಂ.-ಸೆಲ್ವಗಣಪತಿ ಅವರು ಹಗರಣ-ವೊಂದರಲ್ಲಿ ಶಿಕ್ಷೆಗೆ ಗುರಿಯಾಗಿದ್ದರು. ಈ ಮುಂಚಿನ ಕಾನೂನಿನ ಪ್ರಕಾರ ಶಾಸಕರು ಅಥವಾ ಸಂಸದರು ಅಪರಾಧಿಗಳೆಂದು ತೀರ್ಪು -ಪ್ರಕಟವಾದ ನಂತರ ಅವರಿಗೆ ಮೇಲ್ಮನವಿ ಸಲ್ಲಿಸಲು ಆರು ತಿಂಗಳು ಕಾಲಾವಕಾಶವಿತ್ತು. ಆದರೆ ಸುಪ್ರೀಂ ಕೋರ್ಟ್‌ ಕಳೆದ ವರ್ಷ  ಜನಪ್ರತಿನಿಧಿ ಕಾಯಿದೆ-ಯಲ್ಲಿದ್ದ ಈ ಪರಿಚ್ಛೇದವನ್ನು ರದ್ದುಗೊಳಿಸಿತ್ತು.

ಸಂಸದರು ಅಥವಾ ಶಾಸಕರಾದವರು ಕ್ರಿಮಿನಲ್‌ ಪ್ರಕರಣಗಳಲ್ಲಿ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆಗೆ ಗುರಿಯಾದರೆ ಅವರ ಕ್ಷೇತ್ರ ಸದಸ್ಯತ್ವ  ತಕ್ಷಣವೇ ಅನರ್ಹಗೊಳ್ಳುತ್ತದೆ ಎಂದು ಕೋರ್ಟ್‌ ತೀರ್ಪಿನಲ್ಲಿ ಹೇಳಿತ್ತು. ಜಯಲಲಿತಾ ಅವರು ಎಐಎಡಿ-ಎಂಕೆಯನ್ನು 2011ರಿಂದಲೂ ಯಶಸ್ವಿ-ಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ.

2011ರ ವಿಧಾನಸಭಾ ಚುನಾ-ವಣೆ-ಯಲ್ಲಿ ಗೆದ್ದ ಮೇಲೆ, ಅವರು ಹಿನ್ನಡೆ-ಯನ್ನೇ ಕಂಡಿಲ್ಲ. ಉಪ ಚುನಾ-ವಣೆಗಳು ಸೇರಿದಂತೆ ಹಲವು ಚುನಾ-ವಣೆಗಳಲ್ಲಿ ಪಕ್ಷ ಜಯ ದಾಖಲಿಸು-ತ್ತಲೇ ಬಂದಿದೆ. 2016ರಲ್ಲಿ ನಡೆಯಲಿರುವ ರಾಜ್ಯದ ವಿಧಾನಸಭಾ ಚುನಾವಣೆಯಲ್ಲೂ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವ ಜಯಾ ಅವರ ಉತ್ಸಾಹಕ್ಕೆ ನ್ಯಾಯಾಲಯದ ತೀರ್ಪು ತಡೆಯೊಡ್ಡಿದೆ.-

ಹೊಸ ಸಿ.ಎಂ ಯಾರು?
ತಮಿಳುನಾಡು ಮುಖ್ಯಮಂತ್ರಿ ಜಯ-ಲಲಿತಾ ಅವರು ಜೈಲು ಶಿಕ್ಷೆಗೆ ಗುರಿ-ಯಾಗುತ್ತಿದ್ದಂತೆಯೇ ಅವರ ಸ್ಥಾನಕ್ಕೆ ಯಾರನ್ನು ನೇಮಕ ಮಾಡ-ಬೇಕು ಎಂಬ ಚಿಂತನೆ ಬಿರುಸು ಪಡೆ-ದಿದೆ. ಜಯಾ ಅವರ ಸಂಪುಟ ಸಹೋ-ದ್ಯೋಗಿಗಳಾದ ಹಣಕಾಸು ಸಚಿವ ಒ.ಪನ್ನೀರಸೆಲ್ವಂ, ವಿದ್ಯುತ್‌ ಸಚಿವ ನಾಥಂ ವಿಶ್ವನಾಥನ್‌ , ಸಾರಿಗೆ ಸಚಿವ ವಿ.ಸೆಂಥಿಲ್‌ ಬಾಲಾಜಿ ಹಾಗೂ ರಾಜ್ಯ ಸರ್ಕಾರದ ಸಮಾಲೋಚಕಿ ಹಾಗೂ ಮಾಜಿ ಮುಖ್ಯ ಕಾರ್ಯದರ್ಶಿ ಶೀಲಾ ಬಾಲಕೃಷ್ಣನ್‌ ಹೆಸರುಗಳು ಕೇಳಿಬರುತ್ತಿವೆ.

ಕುಸಿದು ಕುಳಿತ ಜಯಾ
ಬೆಳಿಗ್ಗೆ ನ್ಯಾಯಾಲಯಕ್ಕೆ ಬಂದು ಕಟಕಟೆಯಲ್ಲಿ ನಿಲ್ಲು­ವಾಗ ಜಯಲಲಿತಾ ಅವರು ಎಂದಿನಂತೆಯೇ ಇದ್ದರು. ಆದರೆ, ನ್ಯಾಯಾಧೀಶರು ‘ದೋಷಿ’ ಎಂಬ ತೀರ್ಮಾನ ಪ್ರಕಟಿ­ಸು­ತ್ತಿದ್ದಂತೆ ಕುಸಿದು ಕುಳಿತರು. ‘ಸ್ವಲ್ಪ ಸುಧಾರಿಸಿಕೊಳ್ಳಿ’ ಎಂದು  ಸಲಹೆ ನೀಡಿದ  ನ್ಯಾಯಾಧೀಶರು  ವಿಚಾರಣೆಯನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಿದರು. ಹೊರಬಂದ ಜಯ­ಲಲಿತಾ ಅವರು ವಾಹನದಲ್ಲಿ 15 ನಿಮಿಷ ವಿಶ್ರಾಂತಿ ಪಡೆ­ದರು. 1 ಗಂಟೆಗೆ ಪುನಃ ಕಲಾಪ ಆರಂಭವಾದಾಗ  ನ್ಯಾಯಾ­ಧೀಶರು, ‘ಶಿಕ್ಷೆಯ ಪ್ರಮಾ­ಣ­ವನ್ನು ಮಧ್ಯಾಹ್ನ 3 ಗಂಟೆಗೆ ಪ್ರಕಟಿಸು­ವು­ದಾಗಿ ತಿಳಿಸಿದರು’ ಎಂದು ಮೂಲಗಳು ತಿಳಿಸಿವೆ.

‘ಮಧ್ಯಾಹ್ನ ಮತ್ತೆ ನ್ಯಾಯಾಲಯದ ಕಟಕಟೆಗೆ ಬಂದಾಗ ಜಯಲಲಿತಾ ಅವ­ರಲ್ಲಿ ದುಗುಡ ಹೆಚ್ಚಾಗಿತ್ತು. ಈ ಸಂದರ್ಭದಲ್ಲಿ ಜಯಲಲಿತಾ ಪರ ವಕೀ­ಲರು, ತಮ್ಮ ಕಕ್ಷಿದಾರರು ಜನಪ್ರಿಯ ಮುಖ್ಯಮಂತ್ರಿಗಳಾಗಿ ಜನಕಲ್ಯಾಣಕ್ಕೆ ನೀಡಿ­ರುವ ಕೊಡುಗೆ­ಯನ್ನು ಪರಿಗಣಿಸಬೇಕು ಮತ್ತು ದೈಹಿಕವಾಗಿ ಅವರ ಆರೋಗ್ಯ ಕ್ಷೀಣಿ­ಸಿ­ರು­ವುದರಿಂದ  ಶಿಕ್ಷೆಯ ಪ್ರಮಾಣ ಕಡಿಮೆ ಮಾಡಬೇಕೆಂದು ವಿನಂತಿಸಿದರು.  ಆದರೆ ಇದಕ್ಕೊಪ್ಪದ ಪ್ರಾಸಿಕ್ಯೂಷನ್‌ ಪರ ವಕೀಲರು, ಆರೋಪಿಗಳ ಕೃತ್ಯ ಗುರು­ತ­ರವಾಗಿರುವುದರಿಂದ  ಕಠಿಣ ಶಿಕ್ಷೆಯನ್ನೇ ವಿಧಿಸಬೇಕೆಂದು ಬಲವಾಗಿ ವಾದ ಮಂಡಿಸಿ­ದರು. ಅಂತಿಮವಾಗಿ ಸಂಜೆ 5.20ರ ವೇಳೆಗೆ ಶಿಕ್ಷೆ ಪ್ರಕಟವಾಯಿತು. ಈ ಕ್ಷಣದಲ್ಲಿ ಜಯಾ ಮತ್ತೆ ಕುಸಿದು ಕುಳಿತರು.

ಸುದೀರ್ಘ ಹಿನ್ನೋಟ
*1996: ಜಯಲಲಿತಾ ವಿರುದ್ಧ  ಜನತಾ ಪಕ್ಷದ ಅಂದಿನ ನಾಯಕ ಸುಬ್ರಮಣಿಯನ್‌ ಸ್ವಾಮಿ ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಿಸಿದರು. 1991ರಿಂದ 96ರವರೆಗೆ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅಕ್ರಮವಾಗಿ ₨ 66.65 ಕೋಟಿ ಮೌಲ್ಯದ ಆಸ್ತಿ ಗಳಿಸಿದ್ದಾರೆ ಎಂದು ಸ್ವಾಮಿ ಆರೋಪ ಮಾಡಿದ್ದರು.

*ಡಿಸೆಂಬರ್ 7, 1996: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಎಂ. ಕರುಣಾನಿಧಿ ನೇತೃತ್ವದ ಡಿಎಂಕೆ. ಜಯಲಲಿತಾ ಮತ್ತು ಅವರ ಮೂವರು ಆಪ್ತರ ಬಂಧನ.

*1997: ಜಯಾ ಹಾಗೂ ಮೂವರು ಆಪ್ತರ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಆರಂಭ.

*ಜೂನ್ 4, 1997: ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 120 ‘ಬಿ’ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ 1998ರ 13(2), 13 (1)(ಇ) ಅಡಿ  ಜಯಾ ಹಾಗೂ ಮೂವರು ಆಪ್ತರ ವಿರುದ್ಧ ಆರೋಪಪಟ್ಟಿ.

*ಅಕ್ಟೋಬರ್‌ 1, 1997: ಜಯಲಲಿತಾ ಸಲ್ಲಿಸಿದ್ದ ಮೂರು ಅರ್ಜಿಗಳನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್.

*ಆಗಸ್ಟ್‌, 2000: ಮುಂದುವರಿದ ವಿಚಾರಣೆ, 250 ಸಾಕ್ಷಿಗಳ ವಿಚಾರಣೆ, 10 ಸಾಕ್ಷಿಗಳ ಹೇಳಿಕೆ ದಾಖಲು ಬಾಕಿ.

*ಅಕ್ಟೋಬರ್‌, 2000: ತಮಿಳುನಾಡು ಸಣ್ಣ ಕೈಗಾರಿಕಾ ನಿಗಮ ಹಗರಣದಲ್ಲಿ ಜಯಾ ಮೇಲಿನ ಆರೋಪ ಸಾಬೀತು.

*ಮೇ, 2001: ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆಗೆ ಭಾರಿ ಬಹುಮತ. ಸಣ್ಣ ಕೈಗಾರಿಕಾ ನಿಗಮ ಹಗರಣದಲ್ಲಿ ಶಿಕ್ಷೆಗೆ ಒಳಗಾದ ಜಯಾ ಮತ್ತೆ ಮುಖ್ಯಮಂತ್ರಿಯಾಗುವುದನ್ನು ಪ್ರಶ್ನಿಸಿ  ಸುಪ್ರೀಂ ಕೋರ್ಟ್‌ಗೆ ಅರ್ಜಿ. ನೇಮಕ ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌.

*ಫೆಬ್ರುವರಿ 21, 2002: ಉಪ ಚುನಾವಣೆಯಲ್ಲಿ ಆಂಡಿಪಟ್ಟಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಜಯಲಲಿತಾ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ.

*ಮೂವರು ಸರ್ಕಾರಿ ಅಭಿಯೋಜಕರ ರಾಜೀನಾಮೆ. ಪ್ರತಿಕೂಲ ಹೇಳಿಕೆ ನೀಡಿದ ಸಾಕ್ಷಿಗಳು.

*2003: ಜಯಲಲಿತಾ ಮುಖ್ಯಮಂತ್ರಿಯಾಗಿರುವ ಕಾರಣ ತಮಿಳುನಾಡಿನಲ್ಲಿ ನಿಷ್ಪಕ್ಷಪಾತ ವಿಚಾರಣೆ ಸಾಧ್ಯವಿಲ್ಲ. ಹೀಗಾಗಿ ವಿಚಾರಣೆಯನ್ನು ಕರ್ನಾಟಕದ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ. ಅಂಬಳಗನ್‌.

*ನವೆಂಬರ್‌ 18, 2003: ಜಯಾ ವಿರುದ್ಧದ ಅಕ್ರಮ ಆಸ್ತಿ ಪ್ರಕರಣವನ್ನು ಕರ್ನಾಟಕದ ನ್ಯಾಯಾಲಯಕ್ಕೆ ವರ್ಗಾಯಿಸಿ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ.

*ಫೆಬ್ರುವರಿ 19, 2005: ಮಾಜಿ ಅಡ್ವೊಕೇಟ್‌ ಜನರಲ್‌ ಬಿ.ವಿ. ಆಚಾರ್ಯ ಅವರನ್ನು ಪ್ರಕರಣದ ವಿಶೇಷ ಸರ್ಕಾರಿ ಪ್ರಾಸಿಕ್ಯೂಟರ್‌ (ಎಸ್‌ಪಿಪಿ) ನೇಮಕ ಮಾಡಿದ ಕರ್ನಾಟಕ ಸರ್ಕಾರ.

*ಅಕ್ಟೋಬರ್‌/ನವೆಂಬರ್‌, 2011: ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾದ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿ 1,339 ಪ್ರಶ್ನೆಗಳಿಗೆ ಉತ್ತರಿಸಿದ ಜಯಾ.

*ಆಗಸ್ಟ್, 2012: ರಾಜೀನಾಮೆ ನೀಡಿದ ಎಸ್‌ಪಿಪಿ ಬಿ.ವಿ. ಆಚಾರ್ಯ.

*ಫೆಬ್ರುವರಿ 2, 2013: ಹೊಸ ಎಸ್‌ಪಿಪಿಯಾಗಿ ಭವಾನಿ ಸಿಂಗ್‌ ನೇಮಕ ಮಾಡಿದ ಕರ್ನಾಟಕ ಸರ್ಕಾರ.

*ಆಗಸ್ಟ್‌ 26, 2013: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಗಮನಕ್ಕೂ ತರದೆ ಮತ್ತು ಯಾವ ಕಾರಣ ಇಲ್ಲದೇ ಭವಾನಿ ಸಿಂಗ್ ನೇಮಕ ರದ್ದುಗೊಳಿಸಲು ಅಧಿಸೂಚನೆ ಹೊರಡಿಸಿದ ಸರ್ಕಾರ.

*ಸೆಪ್ಟೆಂಬರ್‌ 30, 2013: ಕರ್ನಾಟಕ ಸರ್ಕಾರದ ಅಧಿಸೂಚನೆ ರದ್ದುಗೊಳಿಸಿದ ಸುಪ್ರೀಂಕೋರ್ಟ್.

*ಡಿಸೆಂಬರ್‌ 12, 2013: ಮತ್ತೆ ವಿಶೇಷ ಕೋರ್ಟ್‌ ಮೊರೆ ಹೋದ ಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ. ಅಂಬಳಗನ್. 1997ರಲ್ಲಿ ಜಯಲಲಿತಾ ಅವರಿಂದ ವಶಪಡಿಸಿಕೊಂಡು ಚೆನ್ನೈ ಆರ್‌ಬಿಐ ಖಜಾನೆಯಲ್ಲಿ ಇಡಲಾಗಿದ್ದ  ಚಿನ್ನಾಭರಣ, ಒಡವೆ ಹಾಗೂ ಇತರ ವಸ್ತುಗಳನ್ನು ನ್ಯಾಯಾಲಯಕ್ಕೆ ಹಾಜರಪಡಿಸಲು ಆದೇಶ.

*ಫೆಬ್ರುವರಿ 28, 2014: ಜಯಾ ಅವರಿಂದ ವಶಪಡಿಸಿಕೊಳ್ಳಲಾದ ಬೆಳ್ಳಿಯ ಆಭರಣಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕೋರಿ ಎಸ್‌ಪಿಪಿ ಸಲ್ಲಿಸಿದ್ದ ಅರ್ಜಿ ವಜಾ. ವಿಚಾರಣೆ ವಿಳಂಬಗೊಳಿಸುವ ಉದ್ದೇಶದಿಂದ ಅರ್ಜಿ, ಎಸ್‌ಪಿಪಿ ಭವಾನಿ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು.

*ಮಾರ್ಚ್‌ 14/15, 2014: ಅನಾರೋಗ್ಯದ ನೆಪವೊಡ್ಡಿ ಅಂತಿಮ ವಿಚಾರಣೆಗೆ ಹಾಜರಾಗದ   ಸಿಂಗ್ ಅವರಿಗೆ ಒಂದು ದಿನದ ವೇತನವನ್ನು ದಂಡ ವಿಧಿಸಿದ ನ್ಯಾಯಾಲಯ.

*ಮಾರ್ಚ್‌ 18, 2014: ದಂಡ ವಿಧಿಸಿದ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ  ಸಿಂಗ್.

*ಮಾರ್ಚ್‌ 21, 2014: ವಿಶೇಷ ನ್ಯಾಯಾಲಯದ ಆದೇಶ ಎತ್ತಿ ಹಿಡಿದ ಹೈಕೋರ್ಟ್, ದಂಡ ವಿಧಿಸಿದ ಕ್ರಮವನ್ನು ಸರಿ ಎಂದು ಹೇಳಿತು.

*ಆಗಸ್ಟ್‌ 28, 2014: ಜಯಾ ವಿರುದ್ಧದ 18 ವರ್ಷ ಹಳೆಯದಾದ ಅಕ್ರಮ ಆಸ್ತಿ ಪ್ರಕರಣ ವಿಚಾರಣೆ ಅಂತಿಮ ಘಟ್ಟಕ್ಕೆ. ಸೆ.20ಕ್ಕೆ ಅಂತಿಮ ಆದೇಶ ಕಾಯ್ದಿರಿಸಿದ ವಿಶೇಷ ನ್ಯಾಯಾಲಯ. ಮುಖ್ಯಮಂತ್ರಿ ಜಯಲಲಿತಾ ಸೇರಿದಂತೆ ಎಲ್ಲ ನಾಲ್ವರು ಆರೋಪಿಗಳು ಅಂದು ನ್ಯಾಯಾಲಯದಲ್ಲಿ ಖುದ್ದು ಹಾಜರಿರಬೇಕು ಎಂದು ಸೂಚನೆ.

*ಸೆ.6, 2014:  ಸೆ.27ರಂದು ಅಂತಿಮ ಆದೇಶ ಪ್ರಕಟಿಸುವುದಾಗಿ ಪ್ರಕಟಣೆ.

*ಸೆ.27, 2014: ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿಯ ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಮುಖ್ಯಮಂತ್ರಿ ಜಯಲಲಿತಾ ಹಾಗೂ ಮೂವರು ಆಪ್ತರ ವಿರುದ್ಧದ  ಆರೋಪ ಸಾಬೀತು. ನಾಲ್ಕು ವರ್ಷ ಜೈಲು ಹಾಗೂ ₨ 100 ಕೋಟಿ ದಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT