ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸನಾಭ್ಯಾಸಿಗಳಿಗೆ ಪರಿಚಯಾತ್ಮಕ ಕೃತಿ

ವಿಮರ್ಶೆ
Last Updated 30 ಏಪ್ರಿಲ್ 2016, 19:36 IST
ಅಕ್ಷರ ಗಾತ್ರ

ಶಾಸನಶಾಸ್ತ್ರ ಪೀಠಿಕೆ
ಲೇ: ಸಿ.ಪಿ.ಕೆ.
ಪ್ರ: ಮಾನಸ ಬುಕ್ ಹೌಸ್, ಐಚ್‌ಐಜಿ–1267, 1ನೇ ಕ್ರಾಸ್, 2ನೇ ಹಂತ, ಶ್ರೀರಾಂಪುರ ಬಡಾವಣೆ, ಮೈಸೂರು.

ಇತ್ತೀಚಿನ ದಿನಗಳಲ್ಲಿ ಪಠ್ಯಪುಸ್ತಕಗಳಲ್ಲಿ ಹಳೆಗನ್ನಡ ಪಠ್ಯಗಳೇ ಕಾಣೆಯಾಗುತ್ತಿವೆ ಎಂಬ ಆಕ್ಷೇಪಣೆಗಳು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಶಾಸನಗಳಿಗೆ ಅಧ್ಯಯನ ಕ್ರಮದಲ್ಲಿ ಅವಕಾಶಗಳು ದೊರೆಯುವುದು ಸುಲಭದ ಮಾತಲ್ಲ.

ಅಕಸ್ಮಾತ್ ಶಾಸನಾಸಕ್ತರು ಪಠ್ಯಕ್ರಮ ಸಿದ್ಧಪಡಿಸುವ ಸಮಿತಿಯಲ್ಲಿದ್ದರೆ, ಆಗ ಕೆಲವು ಪ್ರಮುಖ ಶಾಸನ ಪಠ್ಯಗಳಿಗೆ ಅವಕಾಶ ಸಿಗಬಹುದಾದರೂ ಲಿಪಿಶಾಸ್ತ್ರಕ್ಕೆ ಅವಕಾಶ ದೊರೆಯುವುದು ಕಷ್ಟ. 

ಅದು ಕ್ಷೇತ್ರಕಾರ್ಯವನ್ನು ಆಧರಿಸಿದ ವಿಷಯ. ಅದು ಓದಿ ಕಲಿಯುವ ವಿಷಯವಲ್ಲ ; ಬರೆದು ಕಲಿಯುವ, ಬರೆಸಿ ಕಲಿಸುವ ವಿಷಯ. ಕಲಿಯುವ ಮತ್ತು ಕಲಿಸುವ ಕೆಲಸಕ್ಕೆ ಮೊದಲು ನೋಡುವ ಮತ್ತು ನೋಡಿಸುವ ಕೆಲಸ ಆಗಬೇಕಾದ್ದು ಅನಿವಾರ್ಯ.

ಸಾಹಿತ್ಯವೇ ಕಲಿಕೆಯಿಂದ ದೂರವಾಗುತ್ತಿರುವ ಹೊತ್ತಿನಲ್ಲಿ ಇತಿಹಾಸವನ್ನು ಕಲಿಯುವವರೂ ಕಡಿಮೆಯಾಗುತ್ತಿದ್ದಾರೆ. ಇನ್ನು ಇತಿಹಾಸಕ್ಕೆ ಮೂಲ ಆಕರಗಳನ್ನು ಒದಗಿಸುವ ಶಾಸನಶಾಸ್ತ್ರವನ್ನು ಪ್ರೀತಿಸುವವರ ಸಂಖ್ಯೆ ಎಷ್ಟಿರಬಹುದೆಂದು ಅಂದಾಜು ಮಾಡುವುದೂ ಕಷ್ಟ.

ಅಂತಹ ಸಂದರ್ಭದಲ್ಲಿ ಶಾಸನಶಾಸ್ತ್ರವನ್ನು ಪರಿಚಯಿಸುವ ಕೃತಿಗಳು ಹೆಚ್ಚಾಗಿ ಬೆಳಕು ಕಂಡರೆ ಅದರಿಂದ ಉಪಕಾರ ಹೆಚ್ಚಾಗುತ್ತದೆ. ಅಂತಹ ಒಂದು ಪರಿಚಯಾತ್ಮಕ ಕೃತಿ ಸಿ.ಪಿ.ಕೆ. ಅವರ ‘ಶಾಸನಶಾಸ್ತ್ರ ಪೀಠಿಕೆ’.

ಹಿಂದೆ ಸಿ.ಪಿ.ಕೆ. ಅವರೇ ಜೆ.ಎಫ್. ಫ್ಲೀಟ್ ಅವರ ‘Epigrphy’ ಎಂಬ ದೀರ್ಘಲೇಖನವನ್ನು ‘ಭಾರತೀಯ ಶಾಸನಶಾಸ್ತ್ರ ಪರಿಚಯ’ ಎಂಬ ಹೆಸರಿನಲ್ಲಿ ಅನುವಾದಿಸಿ, ಶಾಸನಾಧ್ಯಯನಕ್ಕೆ  ಉತ್ತಮ ಆಕರಗ್ರಂಥವೊಂದನ್ನು ದೊರಕಿಸಿಕೊಟ್ಟಿದ್ದರು. ಈಗ ಆ ಸಾಲಿಗೆ ಅವರ ಈ ಎರಡನೆಯ ಕೃತಿಯೂ ಸೇರಿದೆ.

ಇದು ಸಿ.ಪಿ.ಕೆ. ಅವರ ಸ್ವತಂತ್ರ ಅಧ್ಯಯನ ಕೃತಿ. ಸ್ಥೂಲವಾಗಿ 16 ವಿಭಾಗ/ ಅಧ್ಯಾಯಗಳಲ್ಲಿ ಈವರೆಗಿನ ಶಾಸನಶಾಸ್ತ್ರಾಧ್ಯಯನದ ಪರಿಚಯ ಮಾಡಿಕೊಡುವುದು ಈ ಪೀಠಿಕೆಯ ಉದ್ದೇಶ ಎನಿಸುತ್ತದೆ.

ಕನ್ನಡದ ಮೊದಲ ಲಭ್ಯ ಶಾಸನ ಎಂದು, ಅದು ದೊರೆತ ಕಾಲಕ್ಕೆ ಪರಿಗಣಿತವಾಗಿದ್ದ ಮಂಗಳೇಶನ ಬಾದಾಮಿಯ ಶಾಸನದ ಸ್ಥಾನವನ್ನು ಹಲ್ಮಿಡಿಯ ಶಾಸನ ಪಡೆದುಕೊಂಡ ಮೇಲೂ, ಈವರೆಗೆ ದೊರೆತಿರುವ ಕನ್ನಡದ ಮೊದಲ ಶಾಸನ ಯಾವುದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿ, ಆ ಚರ್ಚೆಗೆ ಶ್ರವಣಬೆಳಗೊಳದ ಒಂದು ಶಾಸನವಲ್ಲದೆ, ಇತ್ತೀಚೆಗೆ ಬೆಳಕಿಗೆ ಬಂದ ತಾಳಗುಂದದ ಒಂದು ಶಾಸನವೂ ಸೇರಿಕೊಂಡಿದೆ.

ಗಂಗರ ತಾಮ್ರಶಾಸನಗಳೆಲ್ಲವೂ ಕೂಟವಲ್ಲ; ಅವುಗಳಲ್ಲಿ ಪ್ರತಿಗಳು ಎಂದು ಪರಿಗಣಿಸಬಹುದಾದ ಕೆಲವು ತಾಮ್ರಶಾಸನಗಳಲ್ಲೇ ಕನ್ನಡದ ಬಳಕೆಯಾಗಿರುವ ಕಾರಣದಿಂದ ಕನ್ನಡದ ಪ್ರಾಚೀನತೆಯ ಬಗ್ಗೆ ಇನ್ನೂ ಗಹನವೆನಿಸುವ ವಿಚಾರಗಳು ಚರ್ಚೆಗೆ ದಾರಿಮಾಡಿಕೊಡುತ್ತಿರುವ ಸಂದರ್ಭ ಇಂದಿನದು.

ಈ ಮೊದಲು ತಿಳಿದಿದ್ದಂತೆ ಚಂದ್ರವಳ್ಳಿಯ ಮಯೂರವರ್ಮನ ಶಾಸನವು ಪ್ರಾಕೃತ ಭಾಷೆಯದಲ್ಲ; ಅದು ಕರ್ನಾಟಕದಲ್ಲಿ ದೊರೆತಿರುವ ಮೊದಲ ಸಂಸ್ಕೃತ ಶಾಸನ ಎಂಬ ಪರಿಷ್ಕೃತ ಅಭಿಪ್ರಾಯ, ಸನ್ನತಿಯಲ್ಲಿ ದೊರೆತ ಅಶೋಕನ ನಾಲ್ಕು ಪ್ರಮುಖ ಪ್ರಸ್ತರ ಶಾಸನಗಳ ಪ್ರತಿಗಳು,

ಕನ್ನಡದ ಆದಿಕವಿ ಎನಿಸಿಕೊಂಡ ಪಂಪನಿಗೆ ಸಂಬಂಧಿಸಿದಂತೆ ಅವನ ತಮ್ಮ ಜಿನವಲ್ಲಭ ಹಾಕಿಸಿದ ಆಂದ್ರಪ್ರದೇಶದ ಕುರಿಕ್ಯಾಲಂ ಶಾಸನ ಮತ್ತು ಇಂತಹ ಇನ್ನೂ ಹಲವು ವಿಚಾರಗಳು ಬೆಳಕಿಗೆ ಬರುತ್ತಿರುವ ವೇಳೆಯಲ್ಲಿ ಶಾಸನಶಾಸ್ತ್ರದ ಪರಿಚಯಾತ್ಮಕ ಗ್ರಂಥಗಳು ಅಭ್ಯಾಸಿಗಳಿಗೆ ದೊರಕಬೇಕಾದ್ದು ಅವಶ್ಯಕ. ಅಂತಹ ಒಂದು ಪರಿಚಯಾತ್ಮಕ ಗ್ರಂಥ ‘ಶಾಸನಶಾಸ್ತ್ರ ಪೀಠಿಕೆ’.

ಪುರಾತತ್ವ ಶೋಧನೆಯ ಪರಿಚಯದೊಂದಿಗೆ ಆರಂಭವಾಗುವ ಪೀಠಿಕೆಯು ಹಂತಹಂತವಾಗಿ ಭಾರತೀಯ ಪುರಾತತ್ವ ಶೋಧನೆಯಿಂದ ಆರಂಭಿಸಿ ‘ಕರ್ನಾಟಕದಲ್ಲಿ ಶಾಸನಶಾಸ್ತ್ರ’ ಎಂಬ ವಿಚಾರದವರೆಗೆ ಮುಂದುವರಿದಿದೆ.

ಭಾರತೀಯರಿಗೆ ಚಾರಿತ್ರಿಕ ಪ್ರಜ್ಞೆಯಿಲ್ಲ ಎಂಬ ಕ್ಲೀಷೆಯ ಮಾತುಗಳ ಮೂಲಕವೇ ಚರ್ಚೆಯನ್ನು ಆರಂಭಿಸಿ, ಭಾರತದಲ್ಲಿ ಚಾರಿತ್ರಿಕ ಸಾಮಗ್ರಿಗಳಿಗೆ ಕೊರತೆಯಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುವ ಭಾಗವು ಶಾಸನಾಭ್ಯಾಸಿಗಳಿಗೆ ಖುಷಿ ನೀಡುತ್ತದೆ.

ಭಾರತದ ಚಾರಿತ್ರಿಕ ಅಧ್ಯಯನದಲ್ಲಿ ಶಾಸನಗಳ ಪಾತ್ರ ಮುಖ್ಯವಾದುದು. ಅಶೋಕನ ಕಾಲದಿಂದ ಕಳೆದ ಶತಮಾನದ ಆರಂಭದವರೆಗೆ ಅಲ್ಪ ಪ್ರಮಾಣದಲ್ಲಾದರೂ ಶಾಸನಗಳು ದಾಖಲೆಗಳಾಗಿ ಗಮನ ಸೆಳೆಯುತ್ತಿದ್ದವು. ಪ್ರಾಚೀನ ಮತ್ತು ಮಧ್ಯಕಾಲೀನ ಇತಿಹಾಸ ರಚನೆಗೆ ಶಾಸನಗಳು ಇಂದಿಗೂ ಪ್ರಮುಖ ಆಕರಗಳಾಗಿ ಉಳಿದಿವೆ.

ಶಾಸನಗಳಲ್ಲಿರುವ ಗುಣಗಳನ್ನು ಮಾತ್ರ ಗ್ರಹಿಸಿ, ದೋಷಗಳನ್ನು ಮತ್ತು ಉತ್ಪ್ರೇಕ್ಷೆಯ ಭಾಗವನ್ನು ಕೈಬಿಟ್ಟರೆ ಅವು ಇಂದಿಗೂ ಪ್ರಮುಖ ಆಕರಗಳಾಗಿ ಗಮನ ಸೆಳೆಯುತ್ತವೆ. ಶಾಸನದ ಅರ್ಥವ್ಯಾಪ್ತಿ ಮತ್ತು ಅವುಗಳ ಪ್ರಕಾರಗಳು, ಇತ್ಯಾದಿ ವಿಚಾರಗಳು ಶಾಸನ ಬೋಧಕರಿಗೆ ಉಪಯುಕ್ತವಾಗುತ್ತವೆ.

ಯಾವ ವಸ್ತುವಿನ ಮೇಲೆ ಶಾಸನವನ್ನು, ಯಾವ ಲೇಖನ ಸಾಮಗ್ರಿಗಳನ್ನು ಉಪಯೋಗಿಸಿಕೊಂಡು ಬರೆಯಲಾಗುತ್ತಿತ್ತು ಮತ್ತು ಯಾವುದೇ ಮೇಲ್ಮೈನ  ಮೇಲೆ ದಾಖಲಿತವಾಗುವ ಶಾಸನದ ಸಿದ್ಧತೆ ಮತ್ತು ಅದರ ಸಂರಕ್ಷಣೆಗೆ ಕ್ರಮಗಳು, ಶಾಸನಗಳಲ್ಲಿ ಇರಬೇಕಾದ ವಿಷಯಕ್ರಮ ಇತ್ಯಾದಿ ವಿಷಯಗಳ ಪರಿಚಯವನ್ನು ಸಿ.ಪಿ.ಕೆ. ಮಾಡಿಕೊಟ್ಟಿದ್ದಾರೆ.

ಶಾಸನಗಳ ಅಧಿಕೃತತೆಗೆ ಇರುವ ಸೂಚನೆಗಳು ಮತ್ತು ಶಾಸನಗಳಲ್ಲಿ ನಿರೂಪಿತವಾದ ಕಾಲ ಇತ್ಯಾದಿ ಸೂಕ್ಷ್ಮ ಹಾಗೂ ಪ್ರಮುಖ ವಿಷಯಗಳ ಬಗೆಗೂ ಚರ್ಚಿಸಲಾಗಿದೆ. ವಿಶ್ವಸನೀಯ ದಾಖಲೆಗಳ ನಡುವೆ ಸುಳಿಯುವ ಕೂಟ ಶಾಸನಗಳ ವಿಚಾರವಾಗಿಯೂ ಪರಿಚಯ ಮಾಡಿಕೊಡಲಾಗಿದೆ.

ಸಿದ್ಧಾಂತಗಳ ಬಗೆಗೆ ಎಷ್ಟೇ ಹೇಳಿದರೂ ಪ್ರಯೋಗ ಮತ್ತು ಅಭ್ಯಾಸದ ಮೂಲಕವೇ ಅರಿವಿಗೆ ಮತ್ತು ನೆರವಿಗೆ ಬರಬೇಕಾದ ಲಿಪಿಶಾಸ್ತ್ರದ ಬಗೆಗೆ ಮಾರ್ಗದರ್ಶಿಯಾಗಬಲ್ಲ ಮಾತುಗಳು ಈ ಕೃತಿಯಲ್ಲಿವೆ.

ಸಿ.ಪಿ.ಕೆ. ಅವರೇ ಅನುವಾದಿಸಿರುವ ಜೆ.ಎಫ್. ಫ್ಲೀಟರ ‘ಶಾಸನಶಾಸ್ತ್ರ ಪ್ರವೇಶ’ ಕೃತಿಯನ್ನು ನೆನಪಿಗೆ ತರುವ ‘ಶಾಸನಶಾಸ್ತ್ರ ಪೀಠಿಕೆ’ಯು ಹೊಸದಾಗಿ ಶಾಸನ ಅಭ್ಯಾಸಕ್ಕೆ ತೊಡಗುವವರಿಗೆ ಉಪಯುಕ್ತ ಪೀಠಿಕಾ ಕೃತಿ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT