ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸನ ಕಾಲದ ಒಳನೋಟ ಮತ್ತು ಸದ್ಯದ ಸಂಕೀರ್ಣ ಸ್ಥಿತಿ

Last Updated 22 ಜುಲೈ 2014, 19:30 IST
ಅಕ್ಷರ ಗಾತ್ರ

‘ಕಳ್ಳುಬಳ್ಳಿ’ ಅಂಕಣದಲ್ಲಿ  (ಪ್ರ.ವಾ., ಜುಲೈ 22) ‘ಬ್ರಾಹ್ಮಣೀಕರಣದ ಭ್ರಮೆಯೊಡೆ­ಯುವ ‘ಹಳಗನ್ನಡ’ ಶೀರ್ಷಿಕೆಯ ಲೇಖನದಲ್ಲಿ ವಸು ಮಳಲಿ ಅವರು ಪ್ರಸ್ತಾಪಿಸಿ­ರುವ ಕೆಲವು ಸಂಗತಿಗಳನ್ನು ಸಮಕಾಲೀನ ನೆಲೆ­ಗಳಿಗೆ ತಂದು ಚರ್ಚೆಯನ್ನು ಇನ್ನೂ ವಿಸ್ತಾರ­ವಾಗಿ, ಸೂಕ್ಷ್ಮವಾಗಿ ಬೆಳೆಸಬಹುದೆಂಬ ಆಸೆ­ಯಿಂದ ಇನ್ನೊಂದಿಷ್ಟು ನೋಟಗಳನ್ನು ಓದುಗರ ಮುಂದೆ ಮಂಡಿಸ­ಬಯಸುತ್ತೇನೆ.

1) ಎಂ.ಎನ್‌. ಶ್ರೀನಿವಾಸ್‌ ಅವರ ‘ಸಂಸ್ಕೃತೀ­ಕರಣ’ದ ಕಲ್ಪನೆಯನ್ನು ಸಮಾಜಶಾಸ್ತ್ರಜ್ಞರು ಪ್ರಶ್ನಿಸಿ ಕೆಲವು ದಶಕಗಳೇ ಕಳೆದಿವೆ. ಅಲ್ಲದೆ ಶ್ರೀನಿವಾಸ್‌ ಈ ಪರಿಕಲ್ಪನೆಯನ್ನು ಮಂಡಿಸಿದಾಗ ಅವರ ಮನಸ್ಸಿನಲ್ಲಿದ್ದುದು ಕೊಡವ ಸಮಾಜದ ಮತ್ತು ಹಳೆ ಮೈಸೂರಿನ ಮಧ್ಯಮ ಜಾತಿಗಳು ಮಾತ್ರ. ಆ ಕಾಲಕ್ಕೆ ಅದು ಸರಿಯಿತ್ತು. ಏಕೆಂದರೆ ಮಧ್ಯಮ ಜಾತಿಗಳು ಮಾತ್ರ ಸಾಮಾಜಿಕ ಚಲ­ನೆ­ಯಲ್ಲಿ ಏರುಗತಿಯನ್ನು ಮೊದಲ–ಎರಡ­ನೆಯ ತಲೆ­ಮಾರಿನಲ್ಲಿ ಅನುಭವಿಸುತ್ತಿ­ದ್ದವು. ಈಗ ಹಿಂದೂ ಸಮಾಜದ ಹೆಚ್ಚಿನ ಸ್ತರದ ಸಮುದಾ­ಯ­ಗಳು ಸಾಮಾಜಿಕ ಬದಲಾವಣೆಯನ್ನು ಕಂಡಿವೆ, ನಿರ್ದೇಶಿಸುತ್ತಿವೆ. ಅಲ್ಲದೆ ಒಂದು ಸಮುದಾಯದ ಮೊದಲ ಅಥವಾ ಎರಡನೆಯ ಶಿಕ್ಷಿತ ತಲೆಮಾರು ಸಂಸ್ಕೃತೀಕರಣ. ಸಾಮಾಜಿಕ ಬದಲಾವಣೆಯನ್ನು ಎದುರಿಸುವ ಶೈಲಿಗೂ ನಂತರದ ತಲೆಮಾರುಗಳು ಎದುರಿಸುವ ಶೈಲಿಗೂ ತುಂಬಾ ವ್ಯತ್ಯಾಸವಿರುತ್ತದೆ.

ಸೂಕ್ಷ್ಮವಾಗಿ ಗಮನಿಸಿದರೆ ನಂತರದ ತಲೆ­ಮಾರು­ಗಳ ಆಯ್ಕೆ ಹೆಚ್ಚು ಆತ್ಮವಿಶ್ವಾಸ, ಜವಾ­ಬ್ದಾರಿ ಮತ್ತು ಸ್ವಾಭಿಮಾನದಿಂದ ಕೂಡಿರುತ್ತದೆ  ಮತ್ತು ಸಾಕಷ್ಟು ಸ್ವಮಗ್ನವೂ ಆಗಿರುತ್ತದೆ. ಈ ತಲೆಮಾರುಗಳು ಬದಲಾವಣೆಗಳನ್ನು ಎದುರಿ­ಸು­ವಾಗ, ಅನುಭವಿಸುವಾಗ ‘ಸಂಸ್ಕೃತೀಕರಣ’ ‘ಬ್ರಾಹ್ಮ­ಣೀಕರಣ’ದ ಮಾದರಿಯೊಂದೇ ಅದರ ಮುಂದಿರುವುದಿಲ್ಲ.

ಹಿಂದೂ ಧರ್ಮದ ಹೊರಗಿ­ರುವ ಧರ್ಮದ ಮಾದರಿಗಳು, ಪಾಶ್ಚಾತ್ಯೀಕರಣ ಮತ್ತು ಆಧುನೀಕರಣದ ಮಾದರಿಗಳಿಗೂ ಸ್ಪಂದಿಸುತ್ತಾ ಬೇರೆ ಬೇರೆ ಮಾದರಿಗಳಿಂದ ತಮ್ಮ ಬದುಕನ್ನು ಹಸನು ಮಾಡಿಕೊಳ್ಳಲು ಪ್ರಯತ್ನಿಸು­ತ್ತಿರುತ್ತವೆ. ಯಾವುದೇ ಮಾದರಿಯನ್ನು ಇಡಿ­ಯಾಗಿ ತಿರಸ್ಕರಿಸುವುದಿಲ್ಲ ಮತ್ತು ಇಡಿಯಾಗಿ ಒಪ್ಪಿಕೊಳ್ಳುವುದಿಲ್ಲ. ಸಮಕಾಲೀನ ಮತ್ತು ದೈನಿಕ ಬದುಕಿನ ನೆಲೆಗಳಿಂದ ಇದು ಲೌಕಿಕ ಜಾಣ್ಮೆ ತುಂಬಿದ ಆಯ್ಕೆ. ಆದರೆ  ನಾವು ಚರ್ಚಿಸು­ವಾಗ, ಅಧ್ಯ­ಯನ ಮಾಡು­ವಾಗ ಒಬ್ಬ ವ್ಯಕ್ತಿ ಅಥವಾ ಒಂದು ಸಮುದಾಯ ಒಂದು ಮಾದ­ರಿ­­ಯನ್ನು ಇಡಿಯಾಗಿ  ಒಪ್ಪು­ತ್ತದೆ ಇಲ್ಲ ತಿರಸ್ಕರಿ­ಸುತ್ತದೆ ಎಂದು ತಪ್ಪಾಗಿ ಭಾವಿಸಿ ಅತಿ­ರೇಕದ ತೀರ್ಮಾ­ನಗಳಿಗೆ ಬರು­ತ್ತೇವೆ. ಕೊಡವ ಸಮಾ­ಜದ ಉದಾ­ಹರಣೆ­ಯಿಂದಲೇ ಹೇಳುವು­ದಾದರೆ ಇವರನ್ನು ಸಂಸ್ಕೃತೀಕರಣ­ಗೊಳಿ­ಸಿದವರು, ಇಲ್ಲವೇ ಹಿಂದೂ ಧರ್ಮದ ವ್ಯಾಪ್ತಿ­ಯೊಳಗೆ ತಂದವರು ಹಾವೇರಿ­ಯ ವೀರಶೈವ ರಾಜಮನೆತನದವರು.

ಚಿಕವೀರ­ರಾಜೇಂದ್ರನ ಪತನದ ನಂತರ ಈ ಜನಾಂಗವು ಇಸ್ಲಾಂ­ಗಾಗಲೀ, ಕ್ರೈಸ್ತ ಧರ್ಮ­ಕ್ಕಾಗಲೀ ಪರಿ­ವ­ರ್ತ­ನೆಗೊಳ್ಳಲು ನಿರಾಕರಿಸಿತು. ಆದರೆ ಆಂಗ್ಲರು ಶಿಕ್ಷಣ, ಸಾಮಾಜಿಕ ಜೀವನ­ದಲ್ಲಿ ತಂದ ಎಲ್ಲ ಬದಲಾವಣೆಗಳನ್ನು ಮನಸಾರೆ ತನಗೆ ಬೇಕಾ­ದಷ್ಟು ಒಪ್ಪಿಕೊಂಡು ಪ್ರಗತಿಪರ­ವಾಯಿತು. ಉತ್ತರ ಭಾರತದಲ್ಲಿ ಆರ್ಯ ಸಮಾಜದವರು ಕೂಡ ಇದೇ ರೀತಿಯ ಮಾದರಿಯನ್ನೇ ಅನು­ಸ­ರಿ­ಸಿ­ದರು. ಈವತ್ತಿನ ಪರಿಸ್ಥಿತಿ ಇನ್ನೂ ಸಂಕೀರ್ಣ­ವಾ­ಗಿದೆ. ಸಂಸ್ಕೃತೀ­ಕರಣ, ಆಧುನಿಕತೆ, ಪಶ್ಚಿಮದ ಶಿಕ್ಷಣ ವ್ಯವಸ್ಥೆ ಮತ್ತು ಮೌಲ್ಯಗಳನ್ನು ಪ್ರತಿ­ಯೊಂದು ಜಾತಿಯೂ ತನಗೆ ಬೇಕಾದ ಸ್ತರದಲ್ಲಿ ಮಾತ್ರ ಒಳಗೊಳ್ಳಲು ಪ್ರಯತ್ನಿಸುತ್ತದೆ.

ಈ ಸಂಕೀರ್ಣತೆ ಮತ್ತು ವೈವಿಧ್ಯವನ್ನು ನಾವು ಒಪ್ಪದೆ ಹೋದರೆ ಈ ಎಲ್ಲ ಪರಿಕಲ್ಪನೆಗಳು ಏಕಶಿಲೆ­ಯಾ­ಕಾ­ರದವು, ನಮ್ಮ ಪ್ರತಿಕ್ರಿಯೆ ಕೂಡ ಏಕತ್ರದ ಸ್ತರ­ದಲ್ಲಿರುತ್ತದೆ ಎಂಬ ತಪ್ಪು ತೀರ್ಮಾನಕ್ಕೆ ಬರು­ತ್ತೇವೆ. ಈ ನೋಟವು ಬ್ರಾಹ್ಮಣೇತರ ಮತ್ತು ಹಿಂದು­ಳಿದ ಜಾತಿಗಳಿಗೆ ಮಾತ್ರ ಸೀಮಿತವಾದ ವಿದ್ಯಮಾನವಲ್ಲ. ಮುಂದು­ವರಿದ ಸಮು­ದಾಯ-­ದವರು ಕೂಡ ಬೇರೆ ಬೇರೆ ರೀತಿಯ ಪರಿಕಲ್ಪನೆ–ವಿದ್ಯಮಾನ­ಗ­ಳನ್ನು ತಮ್ಮ ಬದುಕಿನಲ್ಲಿ ದೈನಿ­ಕ-­ದಲ್ಲಿ ಎದುರಿಸ­ಲೇ­ಬೇಕಾ­ಗುತ್ತದೆ.

ಒಂದೇ ವ್ಯತ್ಯಾ­­ಸ­­ವೆಂದರೆ ಈ ಸಮು­ದಾಯಗಳು ತಾವು ಈಗಾ­ಗಲೇ ಸಂಸ್ಕೃತೀಕರಣಕ್ಕೆ ಒಳ­ಗಾಗಿಬಿಟ್ಟಿದ್ದೇವೆ ಎಂದು ನಂಬಿಬಿಟ್ಟಿರುವುದ­ರಿಂದ ತಮ್ಮ ಆಯ್ಕೆ­ಯನ್ನು ಆಧುನಿಕತೆ, ಪಾಶ್ಚಾತ್ಯೀ­ಕರಣ, ಜಾಗತೀ­ಕರಣದ ನೆಲೆಗಳೊಳಗೇ ಮಾಡಲು ಪ್ರಯತ್ನಿಸು­ತ್ತವೆ. ಇದೂ ಒಂದು ರೀತಿಯ ತಪ್ಪು ಆಯ್ಕೆಯೇ. ಸಂಸ್ಕೃತೀಕರಣದ ನೆಲೆಗಳನ್ನು ಪ್ರಶ್ನಿಸದೆ ಹೋಗಿ­ದ್ದರೆ ವಿಧವಾ­ವಿವಾಹ, ಮಹಿಳಾ ಶಿಕ್ಷಣ ಮತ್ತು ಸ್ವಾತಂತ್ರ್ಯದ ಪ್ರಶ್ನೆಗಳು ಮಂಚೂಣಿಗೇ ಬರುತ್ತಿ­ರ­ಲಿಲ್ಲ.

2) ಸಮುದಾಯಗಳು ಬದಲಾವಣೆಗಳನ್ನು ಬಯಸುವಾಗ, ಎದುರಿಸುವಾಗ ಮೂಡುವ ಅನು­ಭವಗಳನ್ನು, ಒಳಬದುಕಿನ ವಿವರಗಳನ್ನು ಯಾವ ವಿನ್ಯಾಸದಲ್ಲಿ ಗ್ರಹಿಸಬೇಕು ಎನ್ನುವುದಕ್ಕೆ ಎಂ.ಎನ್‌. ಶ್ರೀನಿವಾಸ್‌ ಮತ್ತು ಶಾಸನದ ವಿವರ­ಗಳು ಮಾತ್ರ ಮಾದರಿಗಳಾಗಬಾರದು. ನಾವು ಸರಿಯಾಗಿ ಪೂರ್ಣವಾಗಿ ಗ್ರಹಿಸದೆ ಹೋದ ಕುವೆಂಪು–ಕಾರಂತರ ಕೆಲವು ಕಾದಂಬರಿಗಳು ಕೂಡ ಮತ್ತೊಂದು ಮಾದರಿಯನ್ನು ಮಂಡಿಸು­ತ್ತವೆ.

ಈ ಮಾದರಿಯ ವಿನ್ಯಾಸವು ಸಂಶೋಧ­ಕರು, ಚರಿತ್ರೆಕಾರರು ಮಂಡಿಸುವ ವಿನ್ಯಾಸಗಳಿ­ಗಿಂತ ಭಿನ್ನವಾಗಿದೆ, ವಿಸ್ತಾರವಾಗಿದೆ. ಕನ್ನಡದ ಸಂದರ್ಭದಲ್ಲಂತೂ ಇವರ ಕೃತಿಗಳು ಈ ಪ್ರಶ್ನೆಗಳನ್ನು ಸಮಾಜಶಾಸ್ತ್ರಜ್ಞರು, ಪ್ರಗತಿ­ಶೀಲರು, ನವ್ಯರು, ಸಮಾಜವಾದಿಗಳು ಎತ್ತುವು­ದ­ಕ್ಕಿಂತ ಬಹುಮುಂಚಿನ ದಶಕಗಳಲ್ಲೇ ಎತ್ತಿ­ಕೊಂಡಿವೆ. ಹಿಂದೂ ಧರ್ಮದ ಶ್ರೇಷ್ಠ ಪ್ರತಿನಿಧಿ­ಗಳೆಂದು ಬ್ರಾಹ್ಮಣರನ್ನು ಮಾತ್ರ ಒಪ್ಪಬೇಕೆ?

ಈ ಧರ್ಮದ ಸಾಂಕೇತಿಕ ಮತ್ತು ವಿಧ್ಯುಕ್ತ ಆಚರಣೆ, ಪೂಜಾ–ಧ್ಯಾನ ಕ್ರಮಗಳನ್ನು ಉಳಿದ ಜಾತಿಗಳ-­ವರು ತಮಗೆ ಬೇಕಾದ ರೀತಿಯಲ್ಲಿ  ಪರಿವರ್ತಿ­ಸಿ­ಕೊಳ್ಳಲು ಹಕ್ಕಿಲ್ಲವೇ? ಪರಂಪರೆಯ ಯಾವ ಆಯಾಮಗಳನ್ನು ಎಷ್ಟು ನವೀಕರಿಸಬೇಕು ಎಂಬ ಹಕ್ಕು ಎಲ್ಲ ಸಮುದಾಯಗಳಿಗೂ ಇಲ್ಲವೇ? ಮತಾಂತರವನ್ನು ಯಾವಾಗಲೂ ಇನ್ನೊಬ್ಬರು ಹೇರಿದ್ದು ಎಂದು ಮಾತ್ರ ಏಕೆ ಭಾವಿಸಬೇಕು? ಇದರಲ್ಲಿ ಸಮುದಾಯಗಳು ವ್ಯಕ್ತಿಯ ಒಪ್ಪಿಗೆ ಮತ್ತು ಸ್ವೀಕಾರದ ಅಂಶ ಕಿಂಚಿತ್ತಾದರೂ ಇರು­ತ್ತ­ದ­ಲ್ಲವೇ–ಇಂತಹ ಪ್ರಶ್ನೆಗಳನ್ನು ಎದುರಿ­ಸುವ ಮುನ್ನೋಟವನ್ನು 1930–40ರ ದಶಕಗಳ ಸುಮಾ­ರಿ­ನಲ್ಲಿ ರಚಿತವಾದ ‘ಕಾನೂರು ಹೆಗ್ಗಡಿತಿ’, ‘ಚೋಮನದುಡಿ’ ಮತ್ತು 1960ರ ದಶಕದಲ್ಲಿ ರಚಿತವಾದ ‘ಮಲೆಗಳಲ್ಲಿ ಮದು­ಮಗಳು’ ಕಾದಂಬರಿಗಳು ತೋರಿಸಿವೆ. ನಮ್ಮ ಸಮಾಜದ ಈಚಿನ ದಶಕಗಳ ಬೆಳವಣಿಗೆಗಳನ್ನು ಗಮನಿಸಿದರೆ ಇಂತಹ ಲೇಖಕರ ವಿನ್ಯಾಸವನ್ನೇ ಇನ್ನೂ ಸೂಕ್ಷ್ಮವಾಗಿ ಗಮನಿಸುವುದರಿಂದ ನಾವು ನಮ್ಮ ಸಮಕಾಲೀನತೆಯ ಸ್ತರಗಳನ್ನು ಹೆಚ್ಚಿನ ವೈವಿಧ್ಯ ಮತ್ತು ಸಂಕೀರ್ಣತೆಯಲ್ಲಿ ಗ್ರಹಿಸ­ಬಹು­ದೆನಿಸುತ್ತದೆ. ಇತಿಹಾಸದ ಮರುಕಟ್ಟುವಿಕೆಯಷ್ಟೇ ಮುಖ್ಯವಾದದ್ದು, ಸಮಕಾಲೀನತೆಯ ವೈವಿಧ್ಯ ಮತ್ತು ವಿನ್ಯಾಸವನ್ನು ಕೂಡ ಗ್ರಹಿಸುವುದು.

3) ಇಂತಹ ವಿದ್ಯಮಾನಗಳನ್ನು ಗ್ರಹಿಸುವಾಗ ನಮ್ಮ ಚಿಂತನಾ ವಿನ್ಯಾಸವು  ವಿಸ್ತಾರವಾದದ್ದ­ಲ್ಲ­ವಾದರೂ ಕೇವಲ ಭಾವುಕ ಇಲ್ಲ ಅಸ್ಮಿತೆಯ ನೆಲೆ­ಗಳಲ್ಲಿ ಮಾತ್ರ ಜರುಗುತ್ತಿದ್ದರೆ ನಾವು ನಮ್ಮ ಕಾಲವು ಎದುರಿಸುತ್ತಿರುವ ಬಹುಮುಖ್ಯ ಸಮಸ್ಯೆ­ಗಳಿಂದ ವಿಮುಖರಾಗುತ್ತೇವೆ. ಈಗಾಗಲೇ ನಮ್ಮ ಸಮಾಜವು ಈ ಅಪಾಯವನ್ನು ಎದುರಿಸುತ್ತಿದೆ. ಶಿಕ್ಷಣ, ಭೂಸುಧಾರಣೆ, ಆರೋಗ್ಯ ಮತ್ತು ಸಾಮಾಜಿಕ ನೆಮ್ಮದಿ, ಸಂಪತ್ತಿನ ಉತ್ಪಾದನೆ ಮತ್ತು ಹಂಚುವಿಕೆಯ ಶೈಲಿಗಳು – ಇಂತಹ ವಿನ್ಯಾಸದ ಚೌಕಟ್ಟಿನಲ್ಲೇ ಸಂಸ್ಕೃತೀಕರಣದ ಪ್ರಶ್ನೆ­ಗಳನ್ನು ಎದುರಿಸಬೇಕು. ಇಲ್ಲದಿದ್ದರೆ ಸಂಸ್ಕೃತೀಕ­ರ­ಣವು ಮೂಡಿಸುವ ಸಮಸ್ಯೆಗಳಿಗೆ ಉತ್ತರವಾಗಿ ಜಾತಿಗೊಬ್ಬ ಜಗದ್ಗುರುವನ್ನೂ, ಇಲ್ಲ ಜನಪ್ರಿಯ ಶೈಲಿಯ ಧರ್ಮದ ಮಾದರಿಗಳಾದ ಮೇಲು­ಸ್ತ­ರದ ಧಾರ್ಮಿಕ–ಆಧ್ಯಾತ್ಮಿಕ ಸಂಘಟನೆಗಳನ್ನು ಪ್ರೋತ್ಸಾಹಿಸುತ್ತಾ, ನಮ್ಮ ಬದುಕನ್ನು ಆಳ­ವಾಗಿ–ನಿರಂತರವಾಗಿ ಪ್ರಭಾವಿಸುವ ಮುಖ್ಯ ಸಾಮಾಜಿಕ–ಆಧ್ಯಾತ್ಮಿಕ–ಆರ್ಥಿಕ ಪ್ರಶ್ನೆಗಳನ್ನು ಬೇರೆಯವರಿಗೆ ಒಪ್ಪಿಸಿ ಬಿಡುತ್ತೇವೆ. ಈ ಕಾರಣ­ಕ್ಕಾ­ಗಿಯೇ ಇಂದು ನಮಗೆ ಎಲ್ಲ ರಾಜಕೀಯ ಪಕ್ಷ­ಗಳು, ಇವರು ನಡೆಸುವ ಸರ್ಕಾರಗಳು, ಸಾಮಾ­ಜಿಕ ಸಂಘಟನೆಗಳು  ಒಂದೇ ರೀತಿಯಲ್ಲಿ ಕಾಣಿ­ಸುತ್ತಿವೆ.

ಷ. ಶೆಟ್ಟರ್‌ ಅಧ್ಯಯನದ ಫಲಿತಗಳು ಸೂಕ್ಷ್ಮ­ವಾದವು, ಮೌಲಿಕವಾದವು. ಇದರ ಚರ್ಚೆ-­ಯನ್ನು ಸಂಶೋಧಕರಿಗೆ, ಸಾಹಿತಿಗಳಿಗೆ, ಇತಿ­ಹಾ­ಸ­ಕಾರರಿಗೆ ಬಿಡೋಣ. ಆ ಚರ್ಚೆಯಿಂದ ಸಿಗುವ ಒಳನೋಟಗಳು ಶಾಸನಗಳು ಪ್ರಸ್ತಾಪಿಸುವ ಕಾಲಕ್ಕಿಂತಲೂ ಹೆಚ್ಚು ಸಂಕೀರ್ಣವಾದ, ವೈವಿಧ್ಯ­ಮಯವಾದ ನಮ್ಮ  ಸದ್ಯವನ್ನು ಗ್ರಹಿಸಲು ನಮ­ಗೆಲ್ಲರಿಗೂ ನೆರವಾಗುತ್ತದೆಂದು ಆಶಿಸ­ಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT