ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸ್ತ್ರೀಯ ಭಾಷೆ ಸ್ಥಾನಕ್ಕಾಗಿ ಉಪವಾಸ

ಸಾಹಿತ್ಯ ಲೋಕದಿಂದ ಕಣ್ಮರೆಯಾದ ಕನ್ನಡದ ಕಟ್ಟಾಳು, ಕಳಚಿಬಿದ್ದ ಸಾಂಸ್ಕೃತಿಕ ನಗರಿಯ ಕೊಂಡಿ
Last Updated 31 ಮೇ 2016, 6:07 IST
ಅಕ್ಷರ ಗಾತ್ರ

ಮೈಸೂರು: ತಮಿಳು ಭಾಷೆಗೆ ಮೊದಲು ಶಾಸ್ತ್ರೀಯ ಸ್ಥಾನಮಾನ ಸಿಕ್ಕ ಮೇಲೆ ಅರ್ಹತೆ ಇರುವ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕೆಂಬ ಹಂಬಲದಿಂದ ಹೋರಾಟಕ್ಕೆ ಇಳಿದವರು ದೇಜಗೌ.

ವಿಶೇಷ ಸೌಲಭ್ಯಗಳನ್ನು ಪಡೆಯುವಲ್ಲಿ ಕನ್ನಡ ಹಿಂದಿರಬಾರದು ಎಂದು ದೇಜಗೌ ಸತ್ಯಾಗ್ರಹ ಎಂಬ ಅಸ್ತ್ರ ಹಿಡಿದು,  ಕೇಂದ್ರ ಸರ್ಕಾರಕ್ಕೆ ಚುರುಕು ಮುಟ್ಟಿಸಿದರು.
ಇದಕ್ಕೆ ಸಂಬಂಧಿಸಿ ಧಾರವಾಡ, ಬೆಂಗಳೂರಲ್ಲಿ ಪ್ರತಿಭಟನೆಗಳು ನಡೆದರೂ ಮೈಸೂರಿನಲ್ಲಿ ದೇಜಗೌ ಸರದಿ ಉಪವಾಸ ಸತ್ಯಾಗ್ರಹ ಮೂಲಕ ಸದ್ದು ಮಾಡಿ ಚಳವಳಿಯ ರೂಪ ಕೊಟ್ಟರು. ಜತೆಗೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಅಲ್ಲದೆ, ಸಭೆ, ಸಮಾರಂಭಗಳಲ್ಲೂ ಒತ್ತಾಯಿಸಿದರು.

ಇದಕ್ಕೆ ಸಂಬಂಧಿಸಿ ಸಮಾನ ಮನಸ್ಕರು ಹಾಗೂ ತಮ್ಮ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ಯಾರು ಬರದಿದ್ದರೂ ಒಬ್ಬನೇ ಹೋರಾಡುವೆ ಎನ್ನುವ ಸಂಕಲ್ಪ ಹೊಂದಿದ್ದರು. ಅವರ ಸಂಕಲ್ಪ ಶಕ್ತಿ ದೊಡ್ಡದು. ಜತೆಗೆ, ಹೋರಾಟದ ಶಕ್ತಿಯೂ ದೊಡ್ಡದು.

ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಮೊದಲ ಸಭೆ ಕರೆದಾಗ ದೇಜಗೌ ಅವರು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕೆಂದು ಸ್ಪಷ್ಟವಾಗಿ ಒತ್ತಾಯಿಸಿದರು. ಇದಕ್ಕೆ ಸಂಬಂಧಿಸಿ ಭಾರತೀಯ ಭಾಷಾ ಸಂಸ್ಥಾನದಲ್ಲಿ ನಡೆದ ಸಭೆಗಳಲ್ಲೂ ಭಾಗವಹಿಸಿದ್ದರು. ನಂತರ ದೆಹಲಿಗೆ ಹೋದ ನಿಯೋಗದಲ್ಲಿ ಪ್ರಮುಖರಾಗಿ ಭಾಗವಹಿಸಿದ್ದರು.

‘ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದ ಮೇಲೆ ಅದರ ಸ್ವರೂಪ ಗಂಭೀರತೆ ಪಡೆಯಿತು. ಆಗ ಕೇಂದ್ರ ಸಚಿವರಾಗಿದ್ದ ಎಂ.ವಿ.ರಾಜಶೇಖರನ್‌ ಅವರು ಬಂದು ದೇಜಗೌ ಅವರನ್ನು ಭೇಟಿಯಾಗಿ ಭರವಸೆ ನೀಡಿ, ಎಳನೀರು ಕೊಟ್ಟ ಮೇಲೆ ಉಪವಾಸ ಸತ್ಯಾಗ್ರಹ ನಿಲ್ಲಿಸಿದರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಕಲ್ಪಿಸುವಲ್ಲಿ ಅವರದು ಮಹತ್ವದ ಪಾತ್ರ’ ಎಂದು ಪ್ರಶಂಸಿಸಿದರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ ನೀಲಗಿರಿ ತಳವಾರ.

ಸಾರ್ವಜನಿಕ ವೀಕ್ಷಣೆ
ಡಾ.ದೇ.ಜವರೇಗೌಡ ಅವರ ಅಂತಿಮ ಸಂಸ್ಕಾರಕ್ಕೆ ಜಯಲಕ್ಷ್ಮಿಪುರಂನ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ.

ನಗರದ ಜಯಲಕ್ಷ್ಮೀಪುರಂನಲ್ಲಿರುವ ನಿವಾಸದಿಂದ ಟ್ರಸ್ಟ್‌ ಆವರಣಕ್ಕೆ ಪಾರ್ಥಿವ ಶರೀರವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯ ಲಾಗುತ್ತದೆ. ಬೆಳಿಗ್ಗೆ 10.30ಕ್ಕೆ ಹೊರಡುವ ಮೆರವಣಿಗೆ ಗೋಕುಲಂ ಮುಖ್ಯರಸ್ತೆ, ಕಾಳಿದಾಸ ರಸ್ತೆಯ ಮೂಲಕ ಟ್ರಸ್ಟ್‌ ಆವರಣ ತಲುಪಲಿದೆ. ಪ್ರಥಮದರ್ಜೆ ಕಾಲೇಜು ಮುಂಭಾಗದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಬಳಿಕ ‘ಪಂಪವನ’ದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ದೇಜಗೌ ಪತ್ನಿ ಸಾವಿತ್ರಮ್ಮ ಅವರ ಅಂತ್ಯಕ್ರಿಯೆ 2006 ಮೇ 30ರಂದು ಇದೇ ಸ್ಥಳದಲ್ಲಿ ನೆರವೇರಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಎಂ.ವೀರಪ್ಪ ಮೊಯಿಲಿ, ಕಾಂಗ್ರೆಸ್‌ ಮುಖಂಡ ಎಸ್‌.ಎಂ.ಕೃಷ್ಣ ಇತರರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT