ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕನೀಗ ಶ್ರೇಷ್ಠ ಕೃಷಿಕ!

ನೆಲದ ನಂಟು, ಸರಣಿ– 25
Last Updated 21 ಜುಲೈ 2014, 19:30 IST
ಅಕ್ಷರ ಗಾತ್ರ

ಇವರು ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದವರು. ಆದರೆ ಈಗ ವೃತ್ತಿ ತೊರೆದು ಕೃಷಿಯನ್ನೇ ಆತುಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರದಿಂದ ಕೃಷಿ ಕ್ಷೇತ್ರಕ್ಕೆ ಬಂದು ಎಲ್ಲರಿಂದಲೂ ಶಹಬ್ಬಾಸ್‌ಗಿರಿ ಪಡೆದುಕೊಳ್ಳುತ್ತಿರುವ ಇವರು ದಾವಣಗೆರೆ ತಾಲ್ಲೂಕಿನ  ಕುರ್ಕಿ ಗ್ರಾಮದ ಪ್ರಭಾಕರ.

ಶಿಕ್ಷಕ ವೃತ್ತಿ ಎಂದರೆ ವರ್ಗಾವಣೆ ಸಾಮಾನ್ಯ. ಹಾಗೆಯೇ ಪ್ರಭಾಕರ್‌ ಅವರನ್ನು ಬಳ್ಳಾರಿಗೆ ವರ್ಗಾವಣೆ ಮಾಡಲಾಗಿತ್ತು. ಅಲ್ಲಿಯ ಬಿರು ಬಿಸಿಲು ಇವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿತು. ಬೇರೆಡೆ ವರ್ಗಾವಣೆ ಮಾಡಿಸಿಕೊಂಡು ಅದೇ ಕ್ಷೇತ್ರದಲ್ಲಿ ಮುಂದುವರಿಯುವ ಅವಕಾಶವೂ ಇತ್ತು. ಆದರೆ ಅವರ ಮನಸ್ಸು ಕೃಷಿಯತ್ತ ಆಕರ್ಷಿತವಾಯಿತು. ತಂದೆ ಬಳಿ ಇರುವ ಜಮೀನಿನಲ್ಲಿ ಕೃಷಿ ಆರಂಭಿಸುವ ಮನಸ್ಸಾಯಿತು. ಅದೇ ವೇಳೆ ವೃತ್ತಿ ತೊರೆದು ಕೃಷಿಯಲ್ಲಿ ತೊಡಗಿಸಿಕೊಂಡರೆ ಮುಂದೇನು ಎಂಬ ಆತಂಕವೂ ಎದುರಾಗಿತ್ತು.

ಆದರೆ ಮನಸ್ಸಿದ್ದರೆ ಮಾರ್ಗ ಎಂದು ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿ ಕೃಷಿಯಲ್ಲಿ ಸಂಪೂರ್ಣ ತೊಡಗಿಕೊಂಡರು. ಈಗ ತಮ್ಮಲ್ಲಿರುವ ಏಳು ಎಕರೆ ಜಮೀನಿನಲ್ಲಿಯೇ ವಿವಿಧ ಪ್ರಯೋಗ ಮಾಡುತ್ತಿದ್ದಾರೆ. ನಾಲ್ಕು ಎಕರೆಯಲ್ಲಿ ಅಡಿಕೆ ತೋಟ ಹಾಗೂ ಮೂರು ಎಕರೆ  ಜಮೀನಲ್ಲಿ ಭತ್ತ ಬೆಳೆಯುತ್ತಿದ್ದಾರೆ.

ಹೆಚ್ಚಿನ ಪ್ರಯೋಗ
ಅಡಿಕೆ ಹಾಗೂ ಭತ್ತವನ್ನಷ್ಟೇ ಬೆಳೆಯದೇ ಕೃಷಿಯಲ್ಲಿ ಇನ್ನೂ ಹಲವು ಚಟುವಟಿಕೆಗಳನ್ನು ಕೈಗೊಳ್ಳುವ ಆಸೆ ಪ್ರಭಾಕರ್‌ ಅವರಿಗಾಗಿತು. ಇದರ ಫಲವಾಗಿಯೇ ಅವರು ಹೈನುಗಾರಿಕೆಗೆ ಮುಂದಾದರು. ಇದರ ಜೊತೆ ಸ್ವತಃ ಎರೆಹುಳು ಗೊಬ್ಬರ ತಯಾರಿಕೆಯಲ್ಲಿ ತೊಡಗಿದರು. ಅಜೋಲಾ ಕೂಡ ಇವರ ಕೈಹಿಡಿಯಿತು.

ನಂತರ ತಮ್ಮ ಮನೆಗೆ ಅಗತ್ಯ ಇರುವಷ್ಟು ತರಕಾರಿಗಳನ್ನು ಬೆಳೆಯಲು ಆರಂಭಿಸಿದರು. ಇದಕ್ಕಾಗಿ ಅವರ ಮನೆ ಅಂಗಳದ ಜಾಗವನ್ನೇ ಆರಿಸಿಕೊಂಡರು. ಇಲ್ಲೀಗ ಬಗೆಬಗೆ ತರಕಾರಿಗಳು ನಳನಳಿಸುತ್ತಿವೆ. ತರಕಾರಿಯೊಂದಿಗೆ ಹಣ್ಣು ಹಂಪಲು ಗಿಡ- ಮರಗಳೂ ಚೆನ್ನಾಗಿ ಫಲ ನೀಡುತ್ತಿವೆ. ಬಾಳೆಗಿಡ, ಪಪ್ಪಾಯಿ, ಸಪೋಟ, ಮಾವು, ಹುಣೆಸೇಮರ, ತೆಂಗಿನಕಾಯಿ ಇವೆಲ್ಲವೂ ಇವರ ಮನೆಯಂಗಳದಲ್ಲಿದೆ. ಮನೆಗೆ ಗೋಬರ್‌ ಗ್ಯಾಸ್ ಅಳವಡಿಸಿಕೊಂಡಿದ್ದಾರೆ, ಸೋಲಾರ್‌ ಅನ್ನೂ ಹಾಕಿಸಿಕೊಂಡಿದ್ದಾರೆ.

ಕುರಿ, ಟಗರು ಸಾಕಣೆಯಿಂದ ಲಾಭ
‘ಕೃಷಿ ನೆಚ್ಚಿಕೊಂಡು ಮಳೆಯನ್ನೇ ಕಾಯುತ್ತಾ ಕುಳಿತರೆ ಪ್ರಯೋಜನ ಇಲ್ಲ’ ಎನ್ನುವುದು ಪ್ರಭಾಕರ್‌ ಅವರ ಮಾತು. ಅದಕ್ಕಾಗಿ ಅವರು ಕೃಷಿ ಜೊತೆ ಉಪಕಸುಬಾಗಿ ಕುರಿ ಮತ್ತು ಟಗರು ಸಾಕಾಣಿಕೆ ಮಾಡುತ್ತಿದ್ದಾರೆ. ಇವುಗಳನ್ನು ಆರು ತಿಂಗಳು ಸಲಹಿ ಮತ್ತೆ ಮಾರಾಟ ಮಾಡುತ್ತಾರೆ. ಇದರಿಂದ ಅಧಿಕ ಲಾಭ ಗಳಿಸುತ್ತಿದ್ದಾರೆ.

‘ಕುರಿಗಳು ಬಲಿಷ್ಠವಾಗಿ ಬೆಳೆಯಬೇಕೆಂದರೆ ಶೇಂಗಾ ಹಿಂಡಿ, ಅಕ್ಕಿ ತೌಂಡು, ಮಿನರಲ್ ಮಿಕ್ಸರ್, ಒಂದು ದ್ವಿದಳ ಧಾನ್ಯ, ಒಂದು ಏಕದಳ ಧಾನ್ಯ ಸೇರಿಸಿ ಕೊಡಬೇಕು. ಇದರ ಜೊತೆಗೆ ಕುರಿಗಳಿಗೆ ಬೇಕಾಗಿರುವ ಕೆಲವು ಮೇವಿನ ಗಿಡಗಳನ್ನೂ ನೀಡಬೇಕು’ ಎನ್ನುವುದು ಇವರ ಅನುಭವದ ಮಾತು. ತಮ್ಮ ಅನುಭವವನ್ನೂ ಕಾರ್ಯರೂಪಕ್ಕೆ ಇಳಿಸಿರುವ ಪ್ರಭಾಕರ್‌, ಹೊಲದ ಬದುವಿನಲ್ಲಿ ಕುರಿಗೆ ಬೇಕಾಗುವಷ್ಟು ಮೇವಿನ ಗಿಡ ಬೆಳೆಸಿದ್ದಾರೆ. ಹೈನುಗಾರಿಕೆಯಿಂದಲೂ ಲಾಭ ಪಡೆದುಕೊಳ್ಳುತ್ತಿದ್ದಾರೆ. ಪ್ರತಿದಿನವೂ ಕೆ.ಎಂ.ಎಫ್.ಗೆ ಹಾಲು ಮಾರಾಟ ಮಾಡುತ್ತಿದ್ದಾರೆ. ಖರ್ಚು ಕಳೆದು 150 ರೂಪಾಯಿ ದಿನಂಪ್ರತಿ ಇವರ ಕೈಸೇರುತ್ತಿದೆ.

‘ಬರೀ 150 ರೂಪಾಯಿಯೇ ಎಂದು ಕೇಳಬೇಡಿ. ಇದೇ ಹಸುವಿನಿಂದ ದೊರೆಯುವ ಸೆಗಣಿ ಹಾಗೂ ಮೂತ್ರ ಕೂಡ ನಮಗೆ ಆದಾಯದ ಮೂಲವಾಗಿದೆ. ಕೃಷಿಗೆ ಇದನ್ನೇ ಗೊಬ್ಬರವಾಗಿ ಬಳಸುತ್ತಿದ್ದೇವೆ. ನಮ್ಮ ಮನೆಗೆ ಬೇಕಾಗಿರುವ ಇಂಧನವೂ ಇದರಿಂದಲೇ ದೊರೆಯುತ್ತದೆ’ ಎನ್ನುವುದು ಪ್ರಭಾಕರ್‌ ಅವರ ಮಾತು. ಗ್ರಾಮಸ್ಥರು ಎಲ್.ಪಿ.ಜಿ. ಗ್ಯಾಸಿಗಾಗಿ ತಿಂಗಳುಗಟ್ಟಲೇ ಕಾಯುತ್ತಾರೆ. ಆದರೆ ಪ್ರಭಾಕರ ಅವರಿಗೆ ಕಾಯುವ ಪ್ರಮೇಯವೇ ಬಂದಿಲ್ಲ.

ಸಾಧನೆಗೆ ಪ್ರಶಸ್ತಿ
ಪ್ರಭಾಕರ ಅವರ ವಿಶೇಷ ಕಾರ್ಯಗಳಿಗಾಗಿ ಕರ್ನಾಟಕ ಕೃಷಿ ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆ ಕೆ.ಜಿ. ಕ್ರಿಯೇಷನ್ ನೀಡುವ ವಾರ್ಷಿಕ ‘ಶ್ರೇಷ್ಠ ಕೃಷಿಕ’ ಪ್ರಶಸ್ತಿ ಇವರಿಗೆ ಲಭಿಸಿದೆ. ‘ನಾನು ಒಂದು ವೇಳೆ ದೈಹಿಕ ಶಿಕ್ಷಕನಾಗಿದ್ದಿದ್ದರೆ ಕೃಷಿಯಲ್ಲಿ ಇಷ್ಟು ಮುಂದುವರಿಯಲು ಸಾಧ್ಯವಾಗುತ್ತಿರಲಿಲ್ಲ. ಕೆಲಸದೊಂದಿಗೆ ಮನೆಯವರ ಜೊತೆ ನೆಮ್ಮದಿಯಿಂದ ಇದ್ದೇನೆ. ಜೊತೆಗೆ ರಾಸಾಯನಿಕ ಕೃಷಿಯಿಂದ ಬೇಸತ್ತಿರುವ ರೈತರಿಗೆ ಸಾವಯವ ಕೃಷಿ ಬಗ್ಗೆ ಮಾಹಿತಿ ನೀಡುವ ಕೆಲಸವನ್ನೂ ಮಾಡುತ್ತಿದ್ದೇನೆ. ಇವೆಲ್ಲವುಗಳಿಂದ ನೆಮ್ಮದಿಯ ಜೀವನ ನನ್ನದಾಗಿದೆ’ ಎನ್ನುತ್ತಾರೆ ಪ್ರಭಾಕರ.
ಹೆಚ್ಚಿನ ಮಾಹಿತಿಗೆ: 88846 17105.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT